Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 16 - ಕನ್ನಡ ಸತ್ಯವೇದವು C.L. Bible (BSI)


ಯೆರೆಮೀಯನ ಜೀವನ ಒಂದು ಸಂಕೇತ

1 ಸರ್ವೇಶ್ವರ ಸ್ವಾಮಿ ನನಗೆ ಈ ಸಂದೇಶವನ್ನು ದಯಪಾಲಿಸಿದರು :

2 “ನೀನು ಮದುವೆಯಾಗಬೇಡ, ಗಂಡು ಅಥವಾ ಹೆಣ್ಣು ಮಕ್ಕಳು ನಿನಗೆ ಈ ಸ್ಥಳದಲ್ಲಿ ಹುಟ್ಟದಿರಲಿ.

3 ಏಕೆಂದರೆ ಇಲ್ಲಿ ಆ ಗಂಡುಹೆಣ್ಣು ಮಕ್ಕಳಿಗೆ, ಅವರನ್ನು ಹೆತ್ತ ತಾಯಿಯರಿಗೆ, ಅವರನ್ನು ಈ ನಾಡಿನಲ್ಲಿ ಪಡೆದ ತಂದೆಯರಿಗೆ ಸಂಭವಿಸಲು ಇರುವುದನ್ನು ಸರ್ವೇಶ್ವರನಾದ ನಾನು ಹೇಳುತ್ತೇನೆ, ಕೇಳು:

4 ಅವರು ಘೋರ ಮರಣಕ್ಕೆ ಗುರಿಯಾಗುವರು. ಅವರಿಗಾಗಿ ಯಾರೂ ದುಃಖಿಸುವುದಿಲ್ಲ. ಅವರನ್ನು ಯಾರೂ ಹೂಣುವುದಿಲ್ಲ. ಅವರು ಗೊಬ್ಬರವಾಗಿ ಭೂಮಿಯ ಮೇಲೆ ಬಿದ್ದಿರುವರು. ಖಡ್ಗದಿಂದ ಹಾಗು ಕ್ಷಾಮದಿಂದ ಅವರು ನಾಶವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಜಂತುಗಳಿಗೂ ಆಹಾರವಾಗುವುವು.”

5 ಸರ್ವೇಶ್ವರ ಮತ್ತೆ ನನಗೆ ಹೀಗೆಂದರು : “ನೀನು ಸಾವು ಜರುಗಿದ ಮನೆಗಳಿಗೆ ಹೋಗಬೇಡ. ಅಲ್ಲಿ ನಡೆಯುವ ಗೋಳಾಟದಲ್ಲಿ ಸೇರಬೇಡ. ಎದೆಬಡಿದುಕೊಂಡು ಸಂತಾಪ ಸೂಚಿಸಬೇಕಾಗಿಲ್ಲ. ಏಕೆಂದರೆ, ನಾನು ದಯಪಾಲಿಸಿದ ಶಾಂತಿಯನ್ನೂ ಪ್ರೀತಿಯನ್ನೂ ಕೃಪೆಯನ್ನೂ ಆ ಜನರಿಂದ ತೆಗೆದುಬಿಟ್ಟಿದ್ದೇನೆ.

6 ಈ ನಾಡಿನಲ್ಲಿ ದೊಡ್ಡವರು ಹಾಗುಚಿಕ್ಕವರು ಸಾಯುವರು. ಅವರನ್ನು ಯಾರು ಹೂಣಿಡುವುದಿಲ್ಲ. ಅವರಿಗಾಗಿ ಯಾರೂ ಗೋಳಾಡುವುದಿಲ್ಲ. ದೇಹವನ್ನು ಹುಣ್ಣಾಗಿಸಿಕೊಳ್ಳುವುದಿಲ್ಲ. ತಲೆ ಬೋಳಿಸಿಕೊಳ್ಳುವುದಿಲ್ಲ.

7 ಸತ್ತವನಿಗಾಗಿ ದುಃಖಪಡುವವರನ್ನು ಸಂತೈಸುವುದಕ್ಕೋಸ್ಕರ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ, ತಾಯಿಯನ್ನಾಗಲಿ ಕಳೆದುಕೊಂಡವರಿಗು ಕೂಡ ಯಾರೂ ಸಾಂತ್ವನದ ಪಾನಪಾತ್ರೆಯನ್ನು ನೀಡುವುದಿಲ್ಲ.

8 “ಔತಣದ ಮನೆಗೂ ಹೋಗಬೇಡ. ಅಲ್ಲಿಯವರೊಡನೆ ಕುಳಿತು, ತಿಂದು, ಕುಡಿಯಬೇಡ,

9 ಏಕೆಂದರೆ ಇಸ್ರಯೇಲಿನ ದೇವರೂ ಸರ್ವಶಕ್ತ ಸರ್ವೇಶ್ವರನೂ ಆದ ನಾನು ಹೇಳುತ್ತೇನೆ, ಕೇಳು : ನಿಮ್ಮ ಕಾಲದಲ್ಲೆ, ನಿಮ್ಮ ಕಣ್ಣೆದುರಿಗೆ, ಸಂತೋಷ ಸಂಭ್ರಮದ ಧ್ವನಿಯನ್ನು ನಿಲ್ಲಿಸಿಬಿಡುವೆನು. ವಧೂವರರ ಸದ್ದೂ ಇಲ್ಲವಾಗುವುದು.

10 “ಇದನ್ನೆಲ್ಲ ನೀನು ಆ ಜನರಿಗೆ ತಿಳಿಸುವಾಗ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಸರ್ವೇಶ್ವರ ವಿಧಿಸಿದ್ದೇಕೆ? ನಾವು ಮಾಡಿದ ಅಪರಾಧವಾದರೂ ಏನು? ನಮ್ಮ ದೇವರಾದ ಸರ್ವೇಶ್ವರನಿಗೆ ವಿರುದ್ಧ ನಾವು ಕಟ್ಟಿಕೊಂಡ ಪಾಪವೇನು?’ ಎಂದು ಕೇಳುವರು.

11 ಆಗ ನೀನು ಅವರಿಗೆ ಹೀಗೆಂದು ಹೇಳಬೇಕು : ಸರ್ವೇಶ್ವರನ ಈ ಮಾತಿಗೆ ಕಿವಿಗೊಡಿ : ‘ನಿಮ್ಮ ಪೂರ್ವಜರು ನನ್ನನ್ನು ತೊರೆದುಬಿಟ್ಟರು. ಅನ್ಯದೇವತೆಗಳನ್ನು ಹಿಂಬಾಲಿಸಿದರು. ಅವುಗಳಿಗೆ ಸೇವೆಸಲ್ಲಿಸಿ ಪೂಜಿಸಿದರು. ನನ್ನನ್ನು ಬಿಟ್ಟುದಲ್ಲದೆ ನನ್ನ ಧರ್ಮವಿಧಿಗಳನ್ನು ಮೀರಿದರು.

12 ನೀವಾದರೊ ನಿಮ್ಮ ಪೂರ್ವಜರಿಗಿಂತ ಹೆಚ್ಚು ಕೇಡನ್ನು ಮಾಡಿದ್ದೀರಿ. ನೀವೆಲ್ಲರು ನನ್ನ ಮಾತನ್ನು ಕೇಳದೆ ದುಷ್ಟ ಹೃದಯವುಳ್ಳ ಹಟಮಾರಿಗಳಂತೆ ನಡೆಯುತ್ತಾ ಬಂದಿದ್ದೀರಿ.

13 ಈ ಕಾರಣಗಳ ನಿಮಿತ್ತ ನೀವಾಗಲಿ ನಿಮ್ಮ ಪೂರ್ವಜರಾಗಲಿ ನೋಡದ ನಾಡಿಗೆ ನಿಮ್ಮನ್ನು ಇಲ್ಲಿಂದ ಎಸೆದುಬಿಡುವೆನು. ಅಲ್ಲಿ ಹಗಲಿರುಳೂ ಅನ್ಯದೇವತೆಗಳಿಗೆ ಸೇವೆಮಾಡುವಿರಿ, ನನ್ನ ದಯೆ ದಾಕ್ಷಿಣ್ಯ ಮಾತ್ರ ನಿಮಗೆ ದೊರಕದು".


ಸೆರೆಯಿಂದ ಹಿಂದಿರುಗುವ ಆಶ್ವಾಸನೆ

14 ಸರ್ವೇಶ್ವರ ಹೀಗೆನ್ನುತ್ತಾರೆ : “ಇಗೋ ಕೇಳು, ಕಾಲಬರಲಿದೆ. ಆಗ ಜನರು, ‘ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವುದನ್ನು ಬಿಟ್ಟುಬಿಡುವರು.

15 ಬದಲಿಗೆ, ‘ಇಸ್ರಯೇಲರನ್ನು ಉತ್ತರ ದೇಶದಿಂದ ಹಾಗು ಅವರನ್ನು ತಾನು ತಳ್ಳಿಬಿಟ್ಟಿದ್ದ ಎಲ್ಲ ಸೀಮೆಗಳಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವರು. ನಾನು ಅವರ ಪೂರ್ವಜರಿಗೆ ದಯಪಾಲಿಸಿದ ನಾಡಿಗೆ ಅವರನ್ನು ಮರಳಿ ಬರಮಾಡುವೆನು.


ಬರಲಿರುವ ದಂಡನೆ

16 ಸರ್ವೇಶ್ವರ ಹೀಗೆನ್ನುತ್ತಾರೆ : “ಇಗೋ, ನಾನು ಬಹುಮಂದಿ ಬೆಸ್ತರನ್ನು ಕಳಿಸುವೆನು, ಅವರು ನನ್ನ ಜನರನ್ನು ಹಿಡಿಯುವರು, ಬಳಿಕ ಬಹುಜನ ಬೇಡರನ್ನು ಕಳಿಸುವೆನು. ಅವರು ಎಲ್ಲ ಬೆಟ್ಟಗುಡ್ಡಗಳಿಂದಲೂ ಬಂಡೆಗಳ ಸಂದುಗೊಂದುಗಳಿಂದಲೂ ನನ್ನ ಜನರನ್ನು ಹೊರಡಿಸಿ ಬೇಟೆಯಾಡುವರು.

17 ಈ ಜನರ ನಡತೆ ನನ್ನ ಮುಖಕ್ಕೆ ಮರೆಯಾಗಿಲ್ಲ, ಎಲ್ಲವು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅವರ ಅಕ್ರಮ ನನಗೆ ಗುಟ್ಟೇನೂ ಅಲ್ಲ, ಎಲ್ಲವು ಬಟ್ಟಬಯಲಾಗಿದೆ.

18 ಮೊತ್ತ ಮೊದಲು ಅವರ ಅಕ್ರಮಕ್ಕೂ ಪಾಪಕ್ಕೂ ಇಮ್ಮಡಿ ಶಿಕ್ಷೆಯನ್ನು ಕೊಡುವೆನು. ಏಕೆಂದರೆ ಹೆಣಗಳಂತಿರುವ ತಮ್ಮ ಹೇಯ ವಿಗ್ರಹಗಳಿಂದ ನನ್ನ ನಾಡನ್ನು ಹೊಲಸುಮಾಡಿದ್ದಾರೆ. ಅಸಹ್ಯವಾದ ವಸ್ತುಗಳಿಂದ ಆ ನನ್ನ ಸ್ವಂತ ನಾಡನ್ನು ತುಂಬಿಸಿಬಿಟ್ಟಿದ್ದಾರೆ.”


ಯೆರೆಮೀಯನ ಭರವಸೆ

19 “ಹೇ ಸರ್ವೇಶ್ವರಾ, ನನ್ನ ಶಕ್ತಿಯೇ, ನನ್ನ ಕೋಟೆಯೇ, ಆಪತ್ತು ಕಾಲದಲ್ಲಿ ನನ್ನ ಆಶ್ರಯವೇ, ಜಗದ ಕಟ್ಟಕಡೆಯಿಂದ ಜನಾಂಗಗಳು ನಿಮ್ಮ ಸಮ್ಮುಖಕ್ಕೆ ಬರುವುವು. ‘ನಮ್ಮ ಪೂರ್ವಜರು ಪಾರಂಪರ್ಯವಾಗಿ ಪಡೆದವುಗಳು ನಿಶ್ಚಯವಾಗಿ ಅಬದ್ಧವಾದವುಗಳು, ಮಾಯರೂಪವಾದವುಗಳು ಹಾಗು ನಿಷ್ಪ್ರಯೋಜನವಾದವುಗಳು.

20 ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೆ? ಕಲ್ಪಿಸಿಕೊಂಡರೆ ಅವು ದೇವರುಗಳೇ ಅಲ್ಲ,’ ಎಂದು ನಿವೇದಿಸುವುವು.”

21 ಸರ್ವೇಶ್ವರ : “ಆದುದರಿಂದ ಇಗೋ, ಇಂದೊಮ್ಮೆ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು. ಚೆನ್ನಾಗಿ ಗ್ರಹಿಸುವಂತೆ ಮಾಡುವೆನು. ನನ್ನ ನಾಮಧೇಯ ಸರ್ವೇಶ್ವರ ಎಂದೇ ಅವರು ಗುರುತು ಹಚ್ಚುವರು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು