ಯೆರೆಮೀಯ 15 - ಕನ್ನಡ ಸತ್ಯವೇದವು C.L. Bible (BSI)ಜುದೇಯದ ಜನರಿಗೆ ಕಠಿಣ ದಂಡನೆ 1 ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದರು : “ಮೋಶೆ ಮತ್ತು ಸಮುವೇಲನು ನನ್ನ ಮುಂದೆ ನಿಂತು ವಿಜ್ಞಾಪಿಸಿದರೂ ನಾನು ಈ ಜನರ ಬಗ್ಗೆ ನನ್ನ ಮನಸ್ಸನ್ನು ಬದಲಾಯಿಸೆನು. ಇವರನ್ನು ನನ್ನ ಸಮ್ಮುಖದಿಂದ ತಳ್ಳಿಬಿಡು; ತೊಲಗಿಹೋಗಲಿ! 2 ‘ನಾವೆಲ್ಲಿಗೆ ಹೋಗಬೇಕು?’ ಎಂದು ಕೇಳಿಯಾರು. ಆಗ ನೀನು ಅವರಿಗೆ : ‘ಇದು ಸರ್ವೇಶ್ವರನ ಸಂದೇಶ: ಮರಣವ್ಯಾಧಿಗೆ ಗೊತ್ತಾದವರು ಮರಣವ್ಯಾಧಿಗೆ ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ ಕ್ಷಾಮಕ್ಕೆ ಗೊತ್ತಾದವರು ಕ್ಷಾಮಕ್ಕೆ ಸೆರೆಗೆ ಗೊತ್ತಾದವರು ಸೆರೆಗೆ ಗುರಿಯಾಗಿ ಸಾಯುವರು’ ಎಂದು ಹೇಳು. 3 “ನಾನು ಅವರಿಗೆ ನಾಲ್ಕು ವಿಧವಾದ ಬಾಧೆಗಳನ್ನು ವಿಧಿಸುವೆನು : ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಯನ್ನು, ನುಂಗಿ ನಾಶಮಾಡುವುದಕ್ಕೆ ಪ್ರಾಣಿಪಕ್ಷಿಗಳನ್ನು ನೇಮಿಸುವೆನು. 4 ಈ ಜನರನ್ನು ಜಗದ ರಾಜ್ಯಗಳೆಲ್ಲವು ಭಯೋತ್ಪಾದಕರೆಂದು ಭಾವಿಸುವಂತೆ ಮಾಡುವೆನು. ಹಿಜ್ಕೀಯನ ಮಗನು ಹಾಗು ಜುದೇಯದ ಅರಸನು ಆದ ಮನಸ್ಸೆಯು ಜೆರುಸಲೇಮಿನಲ್ಲಿ ನಡೆಸಿದ ದುಷ್ಕೃತ್ಯಕ್ಕೆ ಇದು ಪ್ರತೀಕಾರವಾಗಿರುವುದು.” 5 “ಜೆರುಸಲೇಮೆ, ನಿನಗೆ ಕರುಣೆ ತೋರುವವರಾರು? ನಿನ್ನ ಪರಿಸ್ಥಿತಿಯನ್ನು ಕಂಡು ಪ್ರಲಾಪಿಸುವವರಾರು? ತಿರುಗಿ ನೋಡಿ ನಿನ್ನ ಕ್ಷೇಮವನ್ನು ವಿಚಾರಿಸುವವರಾರು? 6 ಸರ್ವೇಶ್ವರನಾದ ನನ್ನ ಈ ಮಾತುಗಳನ್ನು ಕೇಳು : ನೀನು ನನ್ನನ್ನು ಅಲ್ಲಗಳೆದು ನನಗೆ ವಿಮುಖಳಾಗಿರುವೆ. ಆದಕಾರಣ ನಿನ್ನನ್ನು ನಾಶಮಾಡಲು ಕೈಯೆತ್ತಿರುವೆ ನಿನ್ನನ್ನು ಕ್ಷಮಿಸಿ ಕ್ಷಮಿಸಿ ಸಾಕಾಗಿದೆ ನನಗೆ. 7 ನನ್ನ ಜನರನ್ನು ನಾಡಿನ ಉಕ್ಕಡಗಳಲ್ಲಿ ಮೊರದಿಂದ ಗಾಳಿಗೆ ತೂರಿಬಿಟ್ಟೆನು. ಅವರನ್ನು ಪುತ್ರಶೋಕಕ್ಕೆ ಈಡುಮಾಡಿ ನಾಶಪಡಿಸಿದೆನು. ಏಕೆಂದರೆ, ಅವರು ತಮ್ಮ ದುರ್ಮಾರ್ಗದಿಂದ ಹಿಂದಿರುಗದೆ ಹೋದರು. 8 ಅವರ ವಿಧವೆಯರು ನನ್ನ ಭಾಗಕ್ಕೆ ಕಡಲ ಮರಳಿನಂತೆ ಯುವಜನರಿಗೆ ಸಾವು ಬರಮಾಡಿದೆ ನಡುಜೀವನದಲ್ಲೆ. ಅವರ ತಾಯಂದಿರನ್ನು ದುಃಖಕ್ಕೆ ಈಡುಮಾಡಿದೆ ತಟ್ಟನೆ ಅವರನ್ನು ಕಳವಳಕ್ಕೂ ದಿಗಿಲಿಗೂ ಗುರಿಪಡಿಸಿದೆ. 9 ಏಳು ಮಕ್ಕಳನ್ನು ಕಳೆದುಕೊಂಡ ತಾಯಿ ಪ್ರಾಣಬಿಟ್ಟಂತಿದ್ದಾಳೆ ದುಃಖದಿಂದ ಬಳಲಿ ಅವಳ ಪಾಲಿಗೆ ಸೂರ್ಯ ಮುಳುಗಿದ್ದಾನೆ ಹಾಡುಹಗಲಲ್ಲೆ. ಆಶಾಭಂಗಪಟ್ಟಿದ್ದಾಳೆ, ಅವಮಾನಕ್ಕೆ ಈಡಾಗಿದ್ದಾಳೆ. ಖಡ್ಗಕ್ಕೆ ಗುರಿಮಾಡುವೆ ಅವಳ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿಗೆ. ಇದು ಸರ್ವೇಶ್ವರನಾದ ನನ್ನ ನುಡಿ.” ಯೆರೆಮೀಯನ ಶೋಕ 10 “ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ. 11 ಸರ್ವೇಶ್ವರಾ, ನಾನು ನಿಮಗೆ ಶ್ರೇಷ್ಠವಾದ ಸೇವೆಸಲ್ಲಿಸದೆ ಹೋಗಿದ್ದರೆ, ನನ್ನ ಶತ್ರುಗಳು ಕಷ್ಟಸಂಕಟಗಳಲ್ಲಿ ಸಿಕ್ಕಿಬಿದ್ದ ಕಾಲದಲ್ಲಿ ಅವರ ಪರವಾಗಿ ನಿನಗೆ ಮೊರೆಯಿಡದೆ ಇದ್ದಿದ್ದರೆ ನನಗೆ ಶಾಪ ತಗುಲಲಿ! 12 ಕಬ್ಬಿಣವನ್ನು ಅದೂ ಉತ್ತರದಿಂದ ಬಂದ ಕಬ್ಬಿಣವನ್ನು ಹಾಗು ಕಂಚನ್ನು ಬಗ್ಗಿಸಲು ಯಾರಿಂದಾದೀತು?” 13 ಸರ್ವೇಶ್ವರ : “ನಾಡಿನಾದ್ಯಂತ ನನ್ನ ಜನರು ಮಾಡಿದ ಎಲ್ಲ ಪಾಪಗಳ ನಿಮಿತ್ತ ಅವರ ಸೊತ್ತು ಸಂಪತ್ತನ್ನು ಪುಕ್ಕಟೆಯಾಗಿ ಕೊಳ್ಳೆಗಾರರ ಪಾಲಾಗಿಸುವೆನು. 14 ಅಪರಿಚಿತ ನಾಡಿಗೆ ಅವರನ್ನು ಸಾಗಿಸುವೆನು. ಅಲ್ಲಿ ಶತ್ರುಗಳಿಗೇ ಊಳಿಗದವರನ್ನಾಗಿಸುವೆನು. ಏಕೆಂದರೆ ನನ್ನ ಕೋಪಾಗ್ನಿ ಉರಿಯುತ್ತಿದೆ. ಅದು ನಿಮ್ಮನ್ನು ಸುಟ್ಟುಹಾಕುವುದು.” 15 ಅದಕ್ಕೆ ನಾನು : “ಸರ್ವೇಶ್ವರಾ, ನೀವು ಎಲ್ಲವನ್ನು ಬಲ್ಲವರು. ನನ್ನನ್ನು ನೆನಪಿಗೆ ತಂದುಕೊಂಡು ನೆರವುನೀಡಿ. ನನಗಾಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸಿರಿ. ಅವರಿಗೆ ಹೆಚ್ಚು ತಾಳ್ಮೆತೋರಿ ನನ್ನನ್ನು ನಿರ್ಮೂಲಮಾಡಬೇಡಿ. ನಿಮ್ಮ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆ ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿ. 16 ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ? 17 ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ. 18 ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?” 19 ಅದಕ್ಕೆ ಸರ್ವೇಶ್ವರ : “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ. 20 ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನ ನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. 21 ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India