Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 13 - ಕನ್ನಡ ಸತ್ಯವೇದವು C.L. Bible (BSI)


ನಡುಕಟ್ಟಿನ ಸಂಕೇತ

1 ಸರ್ವೇಶ್ವರ ಸ್ವಾಮಿ ನನಗೆ : “ನೀನು ಹೋಗಿ ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆಕೊಟ್ಟರು.

2 ನಾನು ಅವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.

3-4 ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಿಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂದಿನೊಳಗೆ ಬಚ್ಚಿಡು,” ಎಂಬುದಾಗಿ ಸರ್ವೇಶ್ವರ ಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು.

5 ಅವರ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.

6 ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.

7 ಆಗ ನಾನು ಯೂಫ್ರೆಟಿಸ್ ನದಿಗೆ ಹೋಗಿ ಹುಡುಕಿ ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.

8 ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಕ್ಯವೇನೆಂದರೆ :

9 “ಇದು ಸರ್ವೇಶ್ವರನಾದ ನನ್ನ ನುಡಿ - ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು.

10 ಈ ದುಷ್ಟಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬರುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು.

11 ಇಸ್ರಯೇಲ್ ವಂಶವೆಲ್ಲವು ಹಾಗು ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕ್ಟಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನಗೆ ಕಿವಿಗೊಡದೆಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.”


ಹೆಂಡಕುಡಿಕೆಗಳ ಸಂಕೇತ

12 “ಯೆರೆಮೀಯನೇ, ನೀನು ಅವರಿಗೆ ಹೀಗೆಂದು ಸಾರು : ಇಸ್ರಯೇಲಿನ ದೇವರಾದ ಸರ್ವೇಶ್ವರ ಸ್ವಾಮಿಯ ಸಂದೇಶವನ್ನು ಕೇಳಿ - ‘ಪ್ರತಿಯೊಂದು ಕುಡಿಕೆಯು ದ್ರಾಕ್ಷಾರಸದಿಂದ ತುಂಬಿರುವುದು.’ ಆಗ ಅವರು ನಿನಗೆ - ‘ಪ್ರತಿಯೊಂದು ಕುಡಿಕೆ ದ್ರಾಕ್ಷಾರಸದಿಂದ ತುಂಬಿರುವುದು ಎಂಬುದು ನಮಗೆ ಗೊತ್ತಿಲ್ಲವೆ?’ ಎಂದು ಹೇಳುವರು.

13 ಆಗ ನೀನು ಅವರಿಗೆ - ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಕೇಳಿ : ದಾವೀದನ ಸಿಂಹಾಸನವನ್ನೇರಿದ ಅರಸರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಜೆರುಸಲೇಮಿನ ಎಲ್ಲ ನಿವಾಸಿಗಳನ್ನೂ, ಅಂತು ನಾಡಿನ ಜನರೆಲ್ಲರನ್ನೂ ಅಮಲಿನಿಂದ ಮತ್ತರಾಗುವಂತೆ ಮಾಡುವೆನು.

14 ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ಹಾಗು ನಾಶಮಾಡದೆ ಬಿಡೆನು,’ ಇದು ಸರ್ವೇಶ್ವರನಾದ ನನ್ನ ನುಡಿ.”


ಗಡಿಪಾರಿನ ಒಂದು ದೃಶ್ಯ

15 ಜನರೇ, ಕಿವಿಗೊಡಿ, ಹೆಮ್ಮೆಪಡಬೇಡಿ, ಸರ್ವೇಶ್ವರನೇ ನಿಮಗೆ ಕೊಡುವ ಆದೇಶ ಇದು :

16 ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೇ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.

17 ನೀವು ಕಿವಿಗೊಡದಿದ್ದರೆ ನಿಮ್ಮ ಗರ್ವದ ನಿಮಿತ್ತ ನನ್ನ ಮನ ಗೋಳಾಡುವುದು ಗುಟ್ಟಾಗಿ. ನೀವು ಸೆರೆಯಾಗಿ ಹೋಗುವುದರಿಂದ ಅಳುವೆನು ಸರ್ವೇಶ್ವರನ ಮುಂದೆ ಬಹಳವಾಗಿ. ನನ್ನ ಕಣ್ಣುಗಳಿಂದ ಕಂಬನಿ ಹರಿವುದು ಧಾರಾಕಾರವಾಗಿ.

18 ಸರ್ವೇಶ್ವರ ನನಗೆ ಹೀಗೆಂದರು : “ರಾಜನಿಗೂ ರಾಜಮಾತೆಗೂ ಈ ವರ್ತಮಾನವನ್ನು ತಿಳಿಸು - ‘ನೀವು ಇಳಿದುಬಂದು ನೆಲದಲ್ಲಿ ಕುಳಿತುಕೊಳ್ಳಿ. ನಿಮ್ಮ ಚೆಲುವಾದ ಕಿರೀಟ ಬಿದ್ದುಹೋಗಿದೆ ತಲೆಯಿಂದ.

19 ದಕ್ಷಿಣ ನಾಡಿನ ನಗರಗಳು ಮುತ್ತಿಗೆಗೆ ತುತ್ತಾಗಿವೆ. ಅವುಗಳನ್ನು ಬಿಡಿಸಲು ಯಾರೂ ಇಲ್ಲ. ಜುದೇಯವೆಲ್ಲ ಸೆರೆಹೋಗಿದೆ; ಸಂಪೂರ್ಣವಾಗಿ ಸೆರೆಯಾಗಿದೆ’.”

20 “ಜೆರುಸಲೇಮ್, ಕಣ್ಣೆತ್ತಿ ನೋಡು, ಉತ್ತರದಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ಅಂದವಾದ ಆ ನಿನ್ನ ಹಿಂಡು ಎಲ್ಲಿ?

21 ನಿನ್ನೊಡನೆ ಗೆಳೆಯರಂತೆ ಬಾಳಲು ನೀನೇ ಪಳಗಿಸಿದವರನ್ನು ನಿನಗೆ ಒಡೆಯರನ್ನಾಗಿ ನಾನು ನೇಮಿಸುವಾಗ ಏನು ಹೇಳುವೆ? ಹೆರುವವಳಿಗೆ ಬರುವಂಥ ವೇದನೆ ಆಗ ನಿನಗೆ ಬರದೆ ಇರುವುದೆ?

22 ಇವು ನನಗೇಕೆ ಸಂಭವಿಸಿದವು ಎಂದು ಮನದೊಳಗೇ ನೀನು ಅಂದುಕೊಳ್ಳುವೆ. ನೀನು ಮಾಡಿದುದು ಮಹಾಪಾಪ ! ಆದ್ದರಿಂದ ನಿನ್ನ ಉಡುಗೆಯನ್ನೇ ಕೀಳಲಾಗುವುದು. ನೀನು ಅತ್ಯಾಚಾರಕ್ಕೆ ಈಡಾಗುವೆ.

23 ಎಥಿಯೋಪಿಯದವನು ತನ್ನ ಚರ್ಮದ ಬಣ್ಣವನ್ನು ಮಾರ್ಪಡಿಸಬಲ್ಲನೆ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸೀತೆ? ಅಂತೆಯೇ ದುಷ್ಟತನದಲ್ಲಿ ಅಷ್ಟಾಗಿ ನುರಿತ ನೀನು ಶಿಷ್ಟತನದಲ್ಲಿ ನಡೆಯಲಾರೆ.

24 ಆದಕಾರಣ ಬಿರುಗಾಳಿ ಬಡಿದುಕೊಂಡುಹೋಗುವ ಒಣಹುಲ್ಲೋ ಎಂಬಂತೆ ಸರ್ವೇಶ್ವರನಾದ ನಾನು ನಿನ್ನನ್ನು ಚದರಿಸಿಬಿಡುವೆನು.

25 ನೀನು ನನ್ನನ್ನು ಮರೆತುಬಿಟ್ಟು ಸುಳ್ಳನ್ನು ನಂಬಿದ್ದರಿಂದ ಇದೇ ನಿನಗೆ ಒದಗಲಿರುವ ಗತಿ. ಇದೇ ನಾನು ನಿನಗೆ ಅಳೆದುಕೊಡುವ ಪ್ರತೀಕಾರ.

26 ನಿನ್ನ ಉಡುಗೆಯನ್ನು ನಿನ್ನ ಕಣ್ಮುಂದೆಯೇ ಕೀಳಿಸುವೆನು. ನೀನು ಅತ್ಯಾಚಾರಕ್ಕೆ ಈಡಾಗುವೆ.

27 ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಕಾಮುಕತನವನ್ನು, ಕೀಳಾದ ನಿನ್ನ ಸೂಳೆಗಾರಿಕೆಯನ್ನು, ಗುಡ್ಡೆ, ಕಣಿವೆಗಳಲ್ಲಿ ನೀನು ನಡೆಸಿದ ಅಸಹ್ಯಕಾರ್ಯಗಳನ್ನು ನೋಡಿದ್ದೇನೆ. ಜೆರುಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲಬೇಕು?”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು