ಯೆರೆಮೀಯ 12 - ಕನ್ನಡ ಸತ್ಯವೇದವು C.L. Bible (BSI)ಯೆರೆಮೀಯನು ಹಾಕಿದ ಪ್ರಶ್ನೆ 1 ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ. ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ : ದುರುಳರ ಬಾಳು ಬೆಳಗುತ್ತಿರುವುದು ಏಕೆ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ? 2 ಅವರನ್ನು ನಾಟಿಮಾಡಿದವರು ನೀವು ಬೇರೂರಿ ಬೆಳೆದು ಹಣ್ಣುಬಿಡುತ್ತಿದ್ದಾರೆ ಅವರು. ನೀವು ಅವರ ಅಧರಕ್ಕೆ ಹತ್ತಿರ, ಹೃದಯಕ್ಕೆ ದೂರ. 3 ಸರ್ವೇಶ್ವರಾ, ನನ್ನ ಪರಿಚಯ ನಿಮಗಿದೆ ನಿಮ್ಮ ನೋಟ ನನ್ನ ಮೇಲಿದೆ. ನನ್ನ ಹೃದಯ ನಿಮ್ಮೊಂದಿಗಿದೆ, ಇದರ ಪರೀಕ್ಷೆ ನಿಮ್ಮಿಂದಾಗಿದೆ. ಅವರನ್ನೋ, ಕುರಿಗಳೋ ಎಂಬಂತೆ ಕೊಲೆಗೆ ಕರೆದೊಯ್ಯಿರಿ ವಧ್ಯದಿವಸದವರೆಗೂ ಅವರನ್ನು ವಿಂಗಡಿಸಿಡಿ. 4 ಇನ್ನೆಷ್ಟರವರೆಗೆ ನಾಡು ದುಃಖಿಸುತ್ತಿರಬೇಕು? ಅದರ ಎಲ್ಲೆಎಲ್ಲೆಗಳಲ್ಲಿ ಹುಲ್ಲು ಸೊಪ್ಪು ಒಣಗಿರಬೇಕು? ನಾಡಜನರ ನೀಚತನದ ನಿಮಿತ್ತ ಮಾಯವಾಗಿವೆ ಪ್ರಾಣಪಕ್ಷಿಗಳು ಕೂಡ. ‘ನಮ್ಮ ನಡತೆಯನ್ನು ಗಮನಿಸರು ದೇವರು’ ಎಂದುಕೊಳ್ಳುತ್ತಿರುವರು ಆ ಜನರು. 5 (ಆಗ ಸರ್ವೇಶ್ವರ ನನಗೆ) : “ಕಾಲಾಳುಗಳ ಸಂಗಡ ಓಡಲು ಆಯಾಸಗೊಂಡೆಯಾದರೆ ಕುದುರೆಗಳೊಂದಿಗೆ ಓಡಿ ಹೇಗೆ ಹೋರಾಡುವೆ? ಪ್ರಶಾಂತ ಪ್ರದೇಶದಲ್ಲಿ ನಿರ್ಭಯನಾಗಿ ನಿಲ್ಲಲಾರೆಯಾದರೆ ಜೋರ್ಡಾನಿನ ದಟ್ಟ ಅಡವಿಯಲ್ಲಿ ಏನು ಮಾಡಬಲ್ಲೆ? 6 ನಿನ್ನ ಸೋದರರೇ, ನಿನ್ನ ತೌರುಮನೆಯವರೇ ನಿನಗೆ ದ್ರೋಹವೆಸಗಿದ್ದಾರೆ. ಇವರೇ ನಿನ್ನ ಬೆನ್ನಟ್ಟಿಬಂದು ಧಿಕ್ಕಾರ ಕೂಗಿದ್ದಾರೆ. ಇಂತಿರಲು ಇವರು ಸವಿನುಡಿದರೂ ನಂಬಲೆಬೇಡ.” ಸ್ವಜನರ ಪರಿಸ್ಥಿತಿಗಾಗಿ ಸರ್ವೇಶ್ವರನ ಶೋಕ 7 “ನಾನು ನನ್ನ ಮನೆಯನ್ನೇ ತೊರೆದಿದ್ದೇನೆ ನನ್ನ ಸ್ವಂತ ಸೊತ್ತನ್ನೇ ನಿರಾಕರಿಸಿದ್ದೇನೆ ನನಗೆ ಪ್ರಾಣಪ್ರಿಯರಾದ ಜನರನ್ನು ಅವರ ಶತ್ರುಗಳ ಕೈಗೊಪ್ಪಿಸಿದ್ದೇನೆ. 8 ನನ್ನ ಸೊತ್ತಾದ ಜನತೆ ನನ್ನ ಪಾಲಿಗೆ ಅರಣ್ಯದ ಸಿಂಹದಂತೆ ನನಗೆದುರಾಗಿ ಅದು ಗರ್ಜಿಸಿದೆ, ಎಂದೇ ಅದನ್ನು ಹಗೆಮಾಡಿರುವೆ. 9 ನನ್ನ ಸೊತ್ತಾದ ಜನತೆ ನನ್ನ ದೃಷ್ಟಿಗೆ ಚಿತ್ರವರ್ಣದ ಪಕ್ಷಿಯಂತೆ ಅದರ ಸುತ್ತ ರಣಹದ್ದುಗಳ ಕೂಟ ಸೇರಿದೆ ಕಾಡುಮೃಗಗಳನ್ನೆಲ್ಲ ಕರೆದುತನ್ನಿ ಅದನ್ನು ತಿಂದುಬಿಡಲಿಕ್ಕೆ. 10 ಬಹುಮಂದಿ ಕುರಿಗಾಹಿಗಳು ಬಂದು ಹಾಳುಮಾಡಿದ್ದಾರೆ ನನ್ನ ದ್ರಾಕ್ಷಾತೋಟವನ್ನು. ತುಳಿದುಹಾಕಿದ್ದಾರೆ ನನ್ನಾ ಸೊತ್ತನ್ನು ಕಾಡನ್ನಾಗಿಸಿದ್ದಾರೆ ಆ ನನ್ನ ಪ್ರಿಯ ಆಸ್ತಿಯನ್ನು. 11 ಹೌದು, ಹಾಳುಮಾಡಿದ್ದಾರೆ ಪಾಳುಬಿದ್ದು ಅದು ನನಗೆ ಗೋಳಿಡುತ್ತಿದೆ ಯಾವನೂ ಗಮನಕ್ಕೆ ತಂದುಕೊಳ್ಳದೆ ನಾಡೆಲ್ಲ ಬಿಕೋ ಎನ್ನುತ್ತಿದೆ. 12 ನಾಡಿನ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಕೊಳ್ಳೆಗಾರರು ಕಾಡುಗುಡ್ಡೆಗಳ ಮೇಲೆಲ್ಲ ಕಂಡುಬಂದಿದ್ದಾರೆ. ಕಬಳಿಸಿಬಿಡುವುದು ನನ್ನ ಖಡ್ಗ ಯಾರಿಗು ನೆಮ್ಮದಿಯಿಲ್ಲದ ಹಾಗೆ. 13 ಜನರು ಗೋದಿಯನ್ನು ಬಿತ್ತಿದರು ಆದರೆ ಮುಳ್ಳುಗಿಡವನ್ನು ಕೊಯ್ದರು ! ಕ್ಷೇಮ ಕೆಡುವಷ್ಟು ಪ್ರಯಾಸಪಟ್ಟರು ಆದರೆ ಯಾವ ಲಾಭವೂ ಗಿಟ್ಟದೆಹೋಯಿತು. ತಮ್ಮ ಬೆಳೆಯ ವಿಷಯವಾಗಿ ಹೇಸಬೇಕಾಯಿತು ನನ್ನ ಕೋಪಾಗ್ನಿಯೆ ಇದಕ್ಕೆ ಕಾರಣವಾಯಿತು.” ಅಕ್ಕಪಕ್ಕ ನಾಡುಗಳಿಗೆ ಕೊಟ್ಟ ಎಚ್ಚರಿಕೆ 14 ಸರ್ವೇಶ್ವರ ಸ್ವಜನರಾದ ಇಸ್ರಯೇಲರಿಗೆ ದಯಪಾಲಿಸಿದ ಸೊತ್ತಿಗೆ ಕೈಹಾಕುವ ಕೆಟ್ಟ ನೆರೆಯವರಿಗೆ ಕೊಟ್ಟ ಎಚ್ಚರಿಕೆ : “ಈ ನಾಡಿನವರನ್ನು ಅವರವರ ನಾಡಿನಿಂದಲೇ ಸಸಿಯಂತೆ ಕಿತ್ತುಬಿಡುವೆನು. (ಅವರ ಮಧ್ಯೆಯಿಂದ ಕಿತ್ತುಬಿಡುವೆನು ಯೆಹೂದ ವಂಶವನ್ನು). 15 ಆದರೆ ಅವರನ್ನು ಕಿತ್ತುಹಾಕಿದ ಮೇಲೆ ಮತ್ತೆ ಅವರಿಗೆ ಕನಿಕರಿಸುವೆನು. ಪ್ರತಿಯೊಬ್ಬನನ್ನು ಅವನವನ ಆಸ್ತಿಪಾಸ್ತಿಗೆ ಅವನವನ ನಾಡಿಗೆ ಮರಳಿ ಬರಮಾಡುವೆನು. 16 ನನ್ನ ಜನರಿಗೆ ಬಾಳ್‍ದೇವತೆಯ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ಮೊದಲು ಕಲಿಸಿಕೊಟ್ಟವರು ಇವರೇ. ಈಗ ನನ್ನ ಜನರ ಮಾರ್ಗವನ್ನು ಅವಲಂಬಿಸಿ ನನ್ನ ಹೆಸರೆತ್ತಿ, “ಸರ್ವೇಶ್ವರನ ಜೀವದಾಣೆ” ಎಂದು ಪ್ರಮಾಣ ಮಾಡುವುದನ್ನು ಕಲಿತರೆ ನನ್ನ ಜನರ ನಡುವೆ ನೆಲೆಗೊಂಡು ವೃದ್ಧಿಯಾಗುವರು. 17 ಆದರೆ ಯಾವ ಜನಾಂಗ ಕೇಳುವುದಿಲ್ಲವೋ ಅದನ್ನು ನಾನು ಕಿತ್ತುಹಾಕುವೆನು. ಹೌದು, ಬೇರುಸಹಿತ ಕಿತ್ತುಹಾಕಿ ನಾಶಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India