ಯೆರೆಮೀಯ 11 - ಕನ್ನಡ ಸತ್ಯವೇದವು C.L. Bible (BSI)ಯೆರೆಮೀಯ ಮತ್ತು ಒಪ್ಪಂದ 1 ಸರ್ವೇಶ್ವರ ಸ್ವಾಮಿ ಯೆರೆಮೀಯನಾದ ನನಗೆ ದಯಪಾಲಿಸಿದ ವಾಕ್ಯ ಇದು : 2 “ಒಡಂಬಡಿಕೆಯ ಈ ವಚನಗಳನ್ನು ಕೇಳಿ ಯೆಹೂದ್ಯರಿಗೂ ಜೆರುಸಲೇಮಿನ ನಿವಾಸಿಗಳಿಗೂ ಸಾರು. 3-4 ನೀನು ಅವರಿಗೆ ಹೇಳಬೇಕಾದುದು - ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಈಜಿಪ್ಟ್ ದೇಶದಿಂದ ನಿಮ್ಮ ಪೂರ್ವಜರನ್ನು ನಾನು ಬರಮಾಡಿದಾಗ ಅವರಿಗೆ ‘ನೀವು ನನ್ನ ಮಾತನ್ನು ಕೇಳಿ ನಾನು ನಿಮಗೆ ಆಜ್ಞಾಪಿಸಿರುವ ವಿಧಿಗಳನ್ನೆಲ್ಲಾ ಕೈಗೊಂಡರೆ ನೀವು ನನ್ನ ಪ್ರಜೆಯಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು. 5 ಹಾಲೂ ಜೇನೂ ಹರಿಯುವ ನಾಡನ್ನು, ಅಂದರೆ ಇಂದು ನೀವಿರುವ ನಾಡನ್ನು, ಕೊಡುವುದಾಗಿ ನಿಮ್ಮ ಮೂಲಪಿತೃಗಳಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು’ ಎಂದು ಹೇಳಿದ್ದೆ. ಈ ಒಡಂಬಡಿಕೆಯ ವಚನಗಳಿಗೆ ಕಿವಿಗೊಡದವನು ಶಾಪಗ್ರಸ್ತನು. ಇದು ಇಸ್ರಯೇಲಿನ ದೇವರಾದ ಸರ್ವೇಶ್ವರ ಹೇಳುವ ಮಾತು.” ಆಗ ನಾನು, “ತಮ್ಮ ಅಪ್ಪಣೆಯಂತಾಗಲಿ, ಸರ್ವೇಶ್ವರಾ,” ಎಂದು ಉತ್ತರಕೊಟ್ಟೆ. 6 ಸರ್ವೇಶ್ವರ ನನಗೆ : “ಜುದೇಯದ ನಗರಗಳಲ್ಲೂ ಜೆರುಸಲೇಮಿನ ಹಾದಿಬೀದಿಗಳಲ್ಲೂ ಈ ಸಮಾಚಾರವನ್ನು ಹರಡು - ಈ ಒಡಂಬಡಿಕೆಯ ವಚನಗಳನ್ನು ಕೇಳಿ ಅದರಂತೆ ನಡೆದುಕೊಳ್ಳಿರಿ. 7 ನಿಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನದಿಂದ ಇಂದಿನವರೆಗೂ ನಾನು ಅವರಿಗೆ ನನ್ನ ಮಾತನ್ನು ಕೇಳಿರೆಂದು ತಡಮಾಡದೆ ಖಂಡಿತವಾಗಿ ಆಜ್ಞಾಪಿಸುತ್ತಾ ಬಂದಿದ್ದೇನೆ. 8 ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಪ್ರತಿಯೊಬ್ಬನು ತನ್ನ ದುಷ್ಟ ಹೃದಯದ ನಿಮಿತ್ತ ಹಟಮಾರಿಯಂತೆ ನಡೆದುಕೊಂಡನು. ಆದಕಾರಣ, ಕೈಗೊಳ್ಳಬೇಕೆಂದು ನಾನು ಆಜ್ಞಾಪಿಸಿದ್ದರೂ ಅವರು ಕೈಗೊಳ್ಳದೆಹೋದ ಆ ಒಡಂಬಡಿಕೆಯಲ್ಲೆ ಸೂಚಿಸಲಾಗಿರುವ ಶಾಪಗಳನ್ನೆಲ್ಲ ಅವರ ಮೇಲೆ ಬರಮಾಡಿದೆ.” 9 ಮತ್ತೆ ಸರ್ವೇಶ್ವರ ನನಗೆ : “ಜುದೇಯದ ಹಾಗು ಜೆರುಸಲೇಮಿನ ನಿವಾಸಿಗಳಲ್ಲಿ ಒಳಸಂಚು ಕಂಡುಬಂದಿದೆ. 10 ನನ್ನ ಮಾತನ್ನು ಕೇಳದೆಹೋದ ತಮ್ಮ ಮೂಲಪಿತೃಗಳ ದುಷ್ಕೃತ್ಯಗಳ ಕಡೆ ಈ ಜನರು ತಿರುಗಿಕೊಂಡಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸುತ್ತಿದ್ದಾರೆ. ಅವುಗಳನ್ನು ಪೂಜಿಸುತ್ತಿದ್ದಾರೆ. ನಾನು ಅವರ ಪೂರ್ವಜರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ಮೀರಿದ್ದಾರೆ. 11 ಆದಕಾರಣ ಸರ್ವೇಶ್ವರನಾದ ನಾನು ಹೇಳುವುದೇನೆಂದರೆ : ಇಗೋ, ತಪ್ಪಿಸಿಕೊಳ್ಳಲಾಗದ ಕೇಡನ್ನು ಅವರ ಮೇಲೆ ಬರಮಾಡುವೆನು. ಇವರು ನನಗೆ ಮೊರೆಯಿಟ್ಟರೂ ನಾನೂ ಕಿವಿಗೊಡೆನು. 12 ಆಗ ಜುದೇಯದ ನಗರದವರೂ ಜೆರುಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಧೂಪಾರತಿಯೆತ್ತಿದರೋ ಅವುಗಳನ್ನು ಮರೆಹೊಕ್ಕು ಕೂಗಿಕೊಳ್ಳುವರು. ಆದರೆ ಅಂಥ ಕೇಡಿನ ಕಾಲದಲ್ಲಿ ಆ ದೇವತೆಗಳಿಂದ ಅವರಿಗೆ ಯಾವ ರಕ್ಷಣೆಯೂ ದೊರಕದು. 13 ಎಲೈ ಯೆಹೂದ ಜನರೇ, ನಿಮಗೆ ಎಷ್ಟು ನಗರಗಳಿವೆಯೋ ಅಷ್ಟೂ ದೇವರುಗಳಿದ್ದಾರೆ. ಜೆರುಸಲೇಮಿನಲ್ಲಿ ಹಾದಿಬೀದಿಗಳು ಎಷ್ಟಿವೆಯೋ ಅಷ್ಟೂ ಬಲಿಪೀಠಗಳಿವೆ, ಆ ತುಚ್ಛ ದೇವತೆ ಬಾಳನಿಗೆ ಧೂಪಾರತಿಯೆತ್ತಲು. 14 ಆದುದರಿಂದ ಯೆರೆಮೀಯನೇ, ಈ ಜನರ ಪರವಾಗಿ ಬೇಡಿಕೊಳ್ಳಬೇಡ. ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಲೂಬೇಡ. ಅವರಿಗೆ ಕೇಡು ಬಂದಾಗ ನನ್ನನ್ನು ಗೋಗರೆದರೂ ನಾನು ಕೇಳುವುದಿಲ್ಲ. 15 “ನನಗೆ ಆಪ್ತವಾದ ಜನತೆಯು, ನನಗೆ ಅಸಹ್ಯಕಾರ್ಯಗಳನ್ನು ಮಾಡಿದ್ದೇಕೆ? ನನ್ನ ಆಲಯದಲ್ಲಿ ಅದಕ್ಕಿರುವ ಹಕ್ಕಾದರೂ ಏನು? ವ್ರತಗಳ ಮೂಲಕ, ಪಶುಬಲಿ ಮಾಂಸದ ಮೂಲಕ ಅದು ಬರಲಿರುವ ದಂಡನೆಯನ್ನು ತಡೆಗಟ್ಟಬಲ್ಲದೆ? 16 ಸರ್ವೇಶ್ವರನಾದ ನಾನು ಅದಕ್ಕೆ ‘ಸುಂದರ ಫಲದಿಂದ ಕೂಡಿದ ಚೆಲುವಾದ ಹಚ್ಚನೆಯ ಓಲಿವ್ ಮರ’ ಎಂದು ಹೆಸರಿಟ್ಟೆ. ಆದರೆ ಅದೇ ಮರಕ್ಕೆ ಬೆಂಕಿಯಿಟ್ಟು ಧಗಧಗನೆ ಉರಿಯುವಂತೆ ಮಾಡುವೆನು. ಅದರ ರೆಂಬೆಗಳು ಸುಟ್ಟುಹೋಗುವುವು. 17 “ಸರ್ವಶಕ್ತ ಸರ್ವೇಶ್ವರನಾದ ನಾನೇ ಈ ಇಸ್ರಯೇಲನ್ನೂ ಜುದೇಯವನ್ನೂ ನೆಟ್ಟಿ ಬೆಳೆಸಿದೆ. ಆದರೆ ಈಗ ‘ನಿನಗೆ ಕೇಡು,’ ಎಂದು ಶಪಿಸುತ್ತಿದ್ದೇನೆ. ಏಕೆಂದರೆ ಬಾಳನಿಗೆ ಧೂಪಾರತಿಯೆತ್ತಿ, ನನ್ನನ್ನು ಕೆಣಕಿ, ತಮಗೇ ಕೆಡುಕನ್ನು ಮಾಡಿಕೊಂಡಿದ್ದಾರೆ. ಯೆರೆಮೀಯನ ಕೊಲೆಗೆ ಸಂಚು 18 ಸರ್ವೇಶ್ವರ ಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು. 19 ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. “ಮರವನ್ನು ಫಲಸಹಿತ ನಾಶಪಡಿಸೋಣ, ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ,” ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ನನಗೆ ಅದು ತಿಳಿದಿರಲಿಲ್ಲ. 20 ಆಗ ನಾನು, “ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತೀಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ,” ಎಂದೆನು. 21 ಹೀಗಿರಲು, “ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಬೇಡ, ಮಾಡಿದರೆ ನಮ್ಮ ಕೈಯಿಂದಲೆ ನೀನು ಸಾಯುವೆ,” ಎಂದು ಅನಾತೋತಿನವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಿದ್ದರು. 22 ಅವರ ವಿಷಯವಾಗಿ ಸರ್ವೇಶ್ವರ, “ಇಗೋ ಅವರನ್ನು ನಾನು ದಂಡಿಸಿಯೇ ತೀರುವೆನು. ಅವರ ಯುವಕರು ಕತ್ತಿಗೆ ತುತ್ತಾಗುವರು. ಅವರ ಗಂಡುಹೆಣ್ಣು ಮಕ್ಕಳು ಕ್ಷಾಮದಿಂದ ಸಾಯುವರು. 23 ದಂಡನೆಯ ಕಾಲವನ್ನು ಗೊತ್ತುಮಾಡಿರುವೆನು. ಅದು ಬಂದಾಗ ಅವರಲ್ಲಿ ಯಾರೂ ಉಳಿಯರು. ಇದು ನನ್ನ ತೀರ್ಮಾನ,” ಎಂದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India