ಯೆರೆಮೀಯ 10 - ಕನ್ನಡ ಸತ್ಯವೇದವು C.L. Bible (BSI)ನಿಜವಾದ ಆರಾಧನೆ 1 ಇಸ್ರಯೇಲ್ ವಂಶದವರೇ, ಸರ್ವೇಶ್ವರ ಸ್ವಾಮಿ ನಿಮಗೆ ನುಡಿಯುವ ಮಾತನ್ನು ಕೇಳಿರಿ; ಅವರು ಹೇಳುವುದು ಇದು : 2 “ಅನ್ಯಜನಾಂಗಗಳ ಆಚರಣೆಯನ್ನು ಅನುಸರಿಸಬೇಡಿ ಅವರು ಹೆದರುವ ಆಕಾಶದ ಉತ್ಪಾತಗಳಿಗೆ ನೀವು ಹೆದರಬೇಡಿ. 3 ಆ ಜನಾಂಗಗಳ ಧಾರ್ಮಿಕ ಪದ್ಧತಿಗಳು ಶೂನ್ಯ. ಅರಣ್ಯದ ಮರಗಳನ್ನು ಅವರು ಕತ್ತರಿಸುತ್ತಾರೆ ಬಡಗಿಯ ಕೈಯಿಂದ, ಅವನ ಉಳಿಯಿಂದ, ಅದನ್ನು ರೂಪಿಸುತ್ತಾರೆ. 4 ಅದನ್ನು ಅಲಂಕರಿಸುತ್ತಾರೆ ಬೆಳ್ಳಿಬಂಗಾರಗಳಿಂದ ಅದು ಅಲುಗದ ಹಾಗೆ ಭದ್ರಪಡಿಸುತ್ತಾರೆ ಮೊಳೆಸುತ್ತಿಗೆಯಿಂದ 5 ಸೌತೆ ತೋಟದ ಬೆದರುಗಂಬದಂತಿರುವ ಈ ಬೊಂಬೆಗಳು ಮಾತನಾಡಲಾರವು. ಅವನ್ನು ಹೊತ್ತುಕೊಂಡು ಹೋಗಬೇಕು, ಅವು ನಡೆಯಲಾರವು. ಅವುಗಳಿಗೆ ನೀವು ಅಂಜಬೇಕಾಗಿಲ್ಲ, ಅವು ಕೇಡುಮಾಡಲಾರವು; ಮೇಲುಮಾಡಲಿಕ್ಕೂ ಸಾಮರ್ಥ್ಯವಿಲ್ಲದಿರುವುವು.” 6 ಹೇ ಸರ್ವೇಶ್ವರಾ, ನಿಮಗೆ ಸಮಾನನು ಇಲ್ಲ, ನೀವು ಮಹೋತ್ತಮರು ಸಾಮರ್ಥ್ಯದಿಂದ ಕೂಡಿರುವ ನಿಮ್ಮ ನಾಮವೂ ಮಹತ್ತರವಾದುದು. 7 ಜನಾಂಗಗಳ ಒಡೆಯಾ, ಅರಸರೇ, ನಿಮಗೆ ಅಂಜದೆ ಇರುವವರಾರು? ಹೌದು, ನೀವು ಭಯಭಕ್ತಿಗೆ ಪಾತ್ರರು ರಾಷ್ಟ್ರಗಳ ಜ್ಞಾನಿಗಳಲ್ಲೂ ರಾಜಪರಂಪರೆಯಲ್ಲೂ ಯಾವನೂ ಇಲ್ಲ ನಿಮಗೆ ಸಮಾನನು. 8 ಕೇವಲ ಪಶುಪ್ರಾಯರು, ಮಂದಮತಿಗಳು, ಅವರೆಲ್ಲರು ಬೊಂಬೆ ಪೂಜೆಯಿಂದ ಬರುವ ಜ್ಞಾನ ಮರದಂತೆ ಮೊದ್ದು. 9 ಆ ಬೊಂಬೆಗಳ ಭೂಷಣಕ್ಕಾಗಿ ಸಾಗಿಬರುತ್ತವೆ ತಾರ್ಷೀಷಿನಿಂದ ಬೆಳ್ಳೀತಗಡುಗಳು, ಊಫಜಿನಿಂದ ಚಿನ್ನ. ಅವು ಕೆತ್ತನೆಗಾರನ, ಎರಕದವನ ಕೈಕೆಲಸಗಳು ಅವುಗಳ ಉಡುಪು ನೀಲಧೂಮ್ರ ವರ್ಣದ ವಸ್ತ್ರಗಳು. ಇವೆಲ್ಲವು ಕೇವಲ ಕಲಾಕುಶಲರ ಕೌಶಲ್ಯಗಳು. 10 ಹೇ ಸರ್ವೇಶ್ವರಾ, ನೀವಾದರೋ ಸತ್ಯದೇವರು, ಜೀವಸ್ವರೂಪ ದೇವರು, ಶಾಶ್ವತ ರಾಜರು ನಿಮ್ಮ ಕೋಪಕ್ಕೆ ನಡುಗುತ್ತದೆ ಭೂಲೋಕ ನಿಮ್ಮ ರೋಷವನ್ನು ತಾಳಲಾರದು ಜನಾಂಗ. 11 “ಭೂಮ್ಯಾಕಾಶಗಳನ್ನು ಸೃಷ್ಟಿಸದ ದೇವರುಗಳು ಭೂಮಿಯ ಮೇಲಿಂದಲೂ ಆಕಾಶದ ಕೆಳಗಿನಿಂದಲೂ ಅಳಿದುಹೋಗುವುವು” ಎಂದು ನೀವು ಆ ಜನಾಂಗಗಳಿಗೆ ತಿಳಿಸಿರಿ. ದೇವರಿಗೊಂದು ಸ್ತುತಿಗೀತೆ 12 ಸರ್ವೇಶ್ವರ ಭೂಮಿಯನ್ನು ನಿರ್ಮಿಸಿದ್ದಾರೆ ಶಕ್ತಿಯಿಂದ ಲೋಕವನ್ನು ಸ್ಥಾಪಿಸಿದ್ದಾರೆ ಜ್ಞಾನದಿಂದ ಆಕಾಶಮಂಡಲವನ್ನು ಹರಡಿದ್ದಾರೆ ವಿವೇಕದಿಂದ. 13 ಆಕಾಶದಲ್ಲಿ ನೀರು ಭೋರ್ಗರೆಯುವಂತೆ ಭುವಿಯ ಕಟ್ಟಕಡೆಯಿಂದ ಮೋಡಗಳು ಏರುವಂತೆ ಮಳೆಗಾಗಿ ಮಿಂಚು ಹೊಳೆಯುವಂತೆ ತಮ್ಮ ಭಂಡಾರದಿಂದ ಗಾಳಿ ಬೀಸುವಂತೆ - ಮಾಡುತ್ತದೆ ಸರ್ವೇಶ್ವರನಾ ಗರ್ಜನೆ. 14 ಇದರ ಮುಂದೆ ತಿಳುವಳಿಕೆಯಿಲ್ಲದ ಪಶುಪ್ರಾಯರು ಜನರೆಲ್ಲರು. ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು ಪ್ರತಿಯೊಬ್ಬ ಅಕ್ಕಸಾಲಿಗನು. ಅವನು ಎರಕ ಹೊಯ್ದ ವಿಗ್ರಹಗಳು ಟೊಳ್ಳು, ಶ್ವಾಸವಿಲ್ಲದವುಗಳು. 15 ಅವು ವ್ಯರ್ಥವಾದುವುಗಳು, ಹಾಸ್ಯಾಸ್ಪದವಾದುವುಗಳು ದಂಡನೆಯ ಕಾಲದಲ್ಲಿ ಅಳಿದುಹೋಗುವಂಥವುಗಳು. 16 ಹಾಗಲ್ಲ ಯಕೋಬ್ಯರಿಗೆ ಸ್ವಂತವಾದ ದೇವರು ಅವರು ಸಮಸ್ತವನ್ನು ಸೃಷ್ಟಿಸಿದವರು. ಇಸ್ರಯೇಲ್ ಗೋತ್ರ ಅವರಿಗೆ ಸ್ವಾಸ್ತ್ಯ. ‘ಸೇನಾಧೀಶ್ವರ ಸರ್ವೇಶ್ವರ’ ಅವರ ನಾಮಧೇಯ. ಬರಲಿರುವ ಗಡೀಪಾರು 17 ಮುತ್ತಿಗೆಗೆ ತುತ್ತಾದ ಜನತೆಯೇ, ಗಂಟು ಕಟ್ಟಿಕೊಂಡು ನಾಡುಬಿಟ್ಟು ನಡೆ. 18 ಏಕೆಂದರೆ ಸರ್ವೇಶ್ವರ ನುಡಿವ ಮಾತಿದು : “ಇಗೋ, ಈ ಸಾರಿ ಈ ನಾಡಿನ ನಿವಾಸಿಗಳನ್ನು ಕವಣೆಯ ಕಲ್ಲಂತೆ ಎಸೆದುಬಿಡುವೆನು; ಬುದ್ಧಿಬರಲೆಂದು ಅವರನ್ನು ಬಾಧಿಸುವೆನು.” 19 ಜೆರುಸಲೇಮಿನ ಗೋಳು : “ಅಯ್ಯೋ ನಾನು ಗಾಯಗೊಂಡೆ ನನಗೆ ಬಿದ್ದ ಪೆಟ್ಟು ಗಡಸು. ತಗಲಿದೆ ವ್ಯಾಧಿ, ಸಹಿಸಲೇಬೇಕಾದ ಕಾಯಿಲೆ. 20 ನನ್ನ ಗುಡಾರ ಹಾಳಾಗಿದೆ, ಹಗ್ಗಗಳು ಕಿತ್ತುಹೋಗಿವೆ. ಮಕ್ಕಳು ನನ್ನನ್ನು ಬಿಟ್ಟು ಕಾಣದೆಹೋಗಿದ್ದಾರೆ ಗುಡಾರ ಹಾಕಲು, ಪರದೆ ಬಿಗಿಯಲು, ಯಾರೂ ಇಲ್ಲವಾಗಿದ್ದಾರೆ.” ಯೆರೆಮೀಯನ ಪ್ರಾರ್ಥನೆ 21 ನಮ್ಮ ಪಾಲಕರು ಪಶುಪ್ರಾಯರು ಸರ್ವೇಶ್ವರನ ಕಡೆಗೆ ಕಣ್ಣೆತ್ತದೆಹೋದರು. ಆ ಕಾರಣ ಅವರ ಕಾರ್ಯ ಸಾರ್ಥಕವಾಗಲಿಲ್ಲ ಚದರಿಹೋದವು ಅವರ ಹಿಂಡುಗಳೆಲ್ಲ. 22 ಇದೋ ಸುದ್ದಿ, ಕೇಳಿಬರುತ್ತಿದೆ ಸುದ್ದಿ ! ದೊಡ್ಡ ಕೋಲಾಹಲವೆದ್ದಿದೆ ಉತ್ತರ ನಾಡಿನಲ್ಲಿ : ‘ಅದನ್ನು ನರಿಗಳ ಬೀಡಾಗಿಸಿರಿ ಜುದೇಯದ ನಗರಗಳನ್ನು ನಾಶಮಾಡಿ.’ 23 ಸರ್ವೇಶ್ವರಾ, ಮಾನವನ ಗುರಿಸಾಧನೆ ಅವನ ಸ್ವಾಧೀನದಲ್ಲಿಲ್ಲ. ಸರಿದಿಸೆಯಲ್ಲಿ ಅವನು ಹೆಜ್ಜೆಯಿಡಲಾರನೆಂದು ನಿಮಗೆ ಗೊತ್ತಿದೆಯಲ್ಲಾ. 24 ಹೇ ಸರ್ವೇಶ್ವರಾ, ನಮ್ಮನ್ನು ದಂಡಿಸಿ ಸುಧಾರಿಸಿ ಆದರೆ ಮಿತಿಮೀರಬೇಡ, ಕೋಪದಿಂದ ದಂಡಿಸಬೇಡಿ. ಇಲ್ಲವಾದರೆ ನಾವು ನಶಿಸಿ ನಾಶವಾದೇವು ! 25 ಸರ್ವೇಶ್ವರಾ, ನಿಮ್ಮನ್ನು ಅರಿತುಕೊಳ್ಳದವರ ಮೇಲೆ ನಿಮ್ಮ ನಾಮವನ್ನು ಉಚ್ಚರಿಸದವರ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿದುಬಿಡಿ. ಅವರು ಯಕೋಬ್ಯರನ್ನು ಕಬಳಿಸಿದ್ದಾರೆ ಹೌದು, ಪೂರ್ತಿಯಾಗಿ ಕಬಳಿಸಿಬಿಟ್ಟಿದ್ದಾರೆ ಅವರ ನಿವಾಸಗಳನ್ನು ನಾಶಮಾಡಿದ್ದಾರೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India