Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 1 - ಕನ್ನಡ ಸತ್ಯವೇದವು C.L. Bible (BSI)


ಪ್ರವಾದಿ ಯೆರೆಮೀಯನ ಗ್ರಂಥ ಪರಿಚಯ

1 ಇವು ಯೆರೆಮೀಯನ ಪ್ರವಚನಗಳು. ಈತ ಬೆನ್ಯಮೀನ್ ಪ್ರಾಂತ್ಯಕ್ಕೆ ಸೇರಿದ ಅನಾತೋತ್ ಊರಿನ ಯಾಜಕ ವರ್ಗದವನು. ಇವನ ತಂದೆ ಹಿಲ್ಕೀಯನು.

2 ಜುದೇಯದ ಅರಸನೂ ಅಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರುಷದಲ್ಲಿ ಸರ್ವೇಶ್ವರ ಸ್ವಾಮಿಯ ವಾಣಿ ಇವನಿಗೆ ಕೇಳಿಬಂತು.

3 ಅಲ್ಲದೆ, ಜುದೇಯದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಜುದೇಯದ ಅರಸನೂ ಯೋಷೀಯನ ಮಗನೂ ಆದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರುಷದ ಐದನೆಯ ತಿಂಗಳಿನಲ್ಲಿ ಜೆರುಸಲೇಮಿನ ಜನರು ಸೆರೆಹೋಗುವ ತನಕ ಸರ್ವೇಶ್ವರ ಸ್ವಾಮಿಯ ವಾಣಿ ಇವನಿಗೆ ಕೇಳಿಬರುತ್ತಿತ್ತು.


ಯೆರೆಮೀಯನಿಗೆ ಪ್ರವಾದಿ ಪಟ್ಟ

4 ಸರ್ವೇಶ್ವರ ಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು :

5 “ನಿನ್ನನ್ನು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೇ; ನೀನು ಉದರದಿಂದ ಹೊರಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೇ; ನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆ.”

6 ಅದಕ್ಕೆ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನಾನು ಮಾತುಬಲ್ಲವನಲ್ಲ, ಇನ್ನೂ ತರುಣ,” ಎಂದು ಬಿನ್ನವಿಸಿದೆ.

7 ಆಗ ಸರ್ವೇಶ್ವರ ನನಗೆ, “ನಾನೊಬ್ಬ ತರುಣ ಎನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳಿಸುತ್ತೇನೋ, ಅವರೆಲ್ಲರ ಬಳಿಗೆ ನೀನು ಹೋಗಲೇಬೇಕು; ನಾನು ಆಜ್ಞಾಪಿಸುವುದನ್ನೆಲ್ಲ ನುಡಿಯಲೇ ಬೇಕು.

8 ಅವರಿಗೆ ಅಂಜಬೇಡ; ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗೆ ಇರುತ್ತೇನೆ; ಇದು ಸರ್ವೇಶ್ವರನಾದ ನನ್ನ ಮಾತು,” ಎಂದು ಹೇಳಿದರು.

9 ಬಳಿಕ ಸ್ವಾಮಿ ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ;

10 ರಾಷ್ಟ್ರಗಳ ಮೇಲೂ ರಾಜ್ಯಗಳ ಮೇಲೂ ಅಧಿಕಾರವುಳ್ಳವನನ್ನಾಗಿ ನಾನು ನಿನ್ನನ್ನು ಈ ದಿನ ನೇಮಿಸಿದ್ದೇನೆ. ಇದರಿಂದಾಗಿ ಕಿತ್ತುಹಾಕುವ ಹಾಗು ಕೆಡುವುವ, ನಾಶಪಡಿಸುವ ಹಾಗು ನೆಲಸಮಮಾಡುವ, ಕಟ್ಟುವ ಹಾಗು ನೆಡುವ ಕಾರ್ಯ ನಿನ್ನದು,” ಎಂದರು


ಎರಡು ದರ್ಶನಗಳು

11 ಇದಲ್ಲದೆ ಸರ್ವೇಶ್ವರ ಸ್ವಾಮಿ, “ಎಲೈ ಯೆರೆಮೀಯನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. ಅದಕ್ಕೆ ನಾನು, ಚಚ್ಚರ ಮರದ ರೆಂಬೆಯನ್ನು ನೋಡುತ್ತಿದ್ದೇನೆ,” ಎಂದೆ.

12 ಆಗ ಸ್ವಾಮಿ ನನಗೆ, “ಸರಿಯಾಗಿ ನೋಡಿದೆ; ನನ್ನ ಮಾತನ್ನು ನೆರವೇರಿಸುವುದಕ್ಕೆ ಎಚ್ಚರಗೊಂಡಿದ್ದೇನೆಂದು ತಿಳಿದುಕೊ” ಎಂಬುದಾಗಿ ಹೇಳಿದರು.

13 ಮತ್ತೆ ಸರ್ವೇಶ್ವರ ನನಗೆ, “ಇನ್ನೂ ಏನು ನೋಡುತ್ತಿರುವೆ?” ಎಂದರು. ಅದಕ್ಕೆ ನಾನು, “ಉರಿಯುತ್ತಿರುವ ಬೆಂಕಿಯಿಂದ ಉಕ್ಕುವ ಹಂಡೆಯೊಂದನ್ನು ನೋಡುತ್ತಿದ್ದೇನೆ. ಅದರ ಬಾಯಿ ಉತ್ತರದಿಂದ ಇತ್ತ ಬಾಗಿಕೊಂಡಿದೆ,” ಎಂದೆ.

14 ಅದಕ್ಕೆ ಸ್ವಾಮಿ ನನಗೆ ಹೀಗೆಂದರು : “ಈ ನಾಡಿನ ನಿವಾಸಿಗಳೆಲ್ಲರ ಮೇಲೆ ಉತ್ತರದಿಂದ ಕೇಡು ಉಕ್ಕಿಬರುವುದು.

15 ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು.

16 ನನ್ನ ಸ್ವಜನರು ನನ್ನನ್ನೆ ತೊರೆದುಬಿಟ್ಟು, ಅನ್ಯದೇವತೆಗಳಿಗೆ ಬಲಿಯರ್ಪಿಸಿ, ತಮ್ಮ ಕೈಯಿಂದ ನಿರ್ಮಿಸಿದ ಮೂರ್ತಿಗಳಿಗೆ ಆರಾಧನೆ ಮಾಡುತ್ತಿದ್ದಾರೆ; ಇಂಥ ಅಧರ್ಮಕ್ಕೆಲ್ಲ ನಾನು ಅವರಿಗೆ ವಿಧಿಸುವ ದಂಡನೆಗಳನ್ನು ತಿಳಿಸುವೆನು, ಕೇಳು :

17 ನೀನು ಎದ್ದು ನಡುಕಟ್ಟಿಕೊ, ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ; ಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನು.

18 ನಾನು ಹೇಳುವುದನ್ನು ಗಮನದಿಂದ ಕೇಳು - ಈ ದಿನ ನಿನ್ನನ್ನು ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಜನಸಾಮಾನ್ಯರು, ಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆ; ಕೋಟೆಕೊತ್ತಲಗಳಿಂದ ಸುಸಜ್ಜಿತ ನಗರವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆ.

19 ನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರು; ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ನುಡಿ".

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು