Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 9 - ಕನ್ನಡ ಸತ್ಯವೇದವು C.L. Bible (BSI)


ಆರೋನನು ಅರ್ಪಿಸಿದ ಪ್ರಥಮ ಬಲಿ

1 ಎಂಟನೆಯ ದಿನ ಮೋಶೆ ಆರೋನನನ್ನೂ ಅವನ ಮಕ್ಕಳನ್ನೂ ಹಾಗು ಇಸ್ರಯೇಲರ ಹಿರಿಯರನ್ನೂ ಕರೆಸಿದನು.

2 ಆರೋನನಿಗೆ, “ನೀನು ಪರಿಹಾರಕ ಬಲಿದಾನಕ್ಕಾಗಿ ಕಳಂಕರಹಿತವಾದ ಹೋರಿಕರುವನ್ನು ಮತ್ತು ದಹನಬಲಿಗಾಗಿ ಕಳಂಕರಹಿತವಾದ ಟಗರನ್ನು ತೆಗೆದುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ನಿನಗೋಸ್ಕರ ಸಮರ್ಪಿಸು.

3 ಮತ್ತು ನೀನು ಇಸ್ರಯೇಲರ ಸಂಗಡ ಮಾತಾಡಿ ಅವರಿಗೆ, ‘ಈ ದಿನ ಸರ್ವೇಶ್ವರ ಸ್ವಾಮಿ ಪ್ರತ್ಯಕ್ಷರಾಗುತ್ತಾರೆ. ಆದುದರಿಂದ ನೀವು ಅವರ ಸನ್ನಿಧಿಯಲ್ಲಿ ಸಮರ್ಪಿಸಲು ದೋಷಪರಿಹಾರಕ್ಕಾಗಿ ಒಂದು ಹೋತವನ್ನು, ದಹನಬಲಿಗಾಗಿ ಒಂದು ವರ್ಷದ ಕಳಂಕರಹಿತವಾದ ಒಂದು ಕರು ಹಾಗು ಒಂದು ಕುರಿಯನ್ನು,

4 ಶಾಂತಿಸಮಾಧಾನ ಬಲಿಗಾಗಿ ಒಂದು ಹೋರಿ ಹಾಗು ಒಂದು ಟಗರನ್ನು ಮತ್ತು ನೈವೇದ್ಯಕ್ಕಾಗಿ ಎಣ್ಣೆ ಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಬರಬೇಕೆಂದು ಆಜ್ಞಾಪಿಸು,” ಎಂದನು.

5 ಮೋಶೆಯ ಆಜ್ಞಾನುಸಾರ ಅವರು ಕಾಣಿಕೆಗಳನ್ನೆಲ್ಲ ದೇವದರ್ಶನದ ಗುಡಾರದ ಬಳಿಗೆ ತಂದರು. ಇಸ್ರಯೇಲ್ ಸಮಾಜದವರೆಲ್ಲರು ಹತ್ತಿರಕ್ಕೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ನಿಂತರು.

6 ಮೋಶೆ ಅವರಿಗೆ, “ನೀವು ಇವುಗಳನ್ನೆಲ್ಲ ಮಾಡಬೇಕೆಂದು ಸರ್ವೇಶ್ವರ ಸ್ವಾಮಿಯೇ ಆಜ್ಞಾಪಿಸಿದ್ದಾರೆ; ಅದರಂತೆ ನೀವು ನಡೆದುಕೊಂಡರೆ ಸರ್ವೇಶ್ವರನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವುದು,” ಎಂದು ಹೇಳಿದನು.

7 ಅನಂತರ ಮೋಶೆ ಆರೋನನಿಗೆ, “ಬಲಿಪೀಠದ ಹತ್ತಿರಕ್ಕೆ ಬಂದು ನೀನು ಮಾಡಬೇಕಾದ ದೋಷಪರಿಹಾರಕ ಬಲಿಯನ್ನು ಮತ್ತು ದಹನಬಲಿಯನ್ನು ಸಮರ್ಪಿಸಿ ನಿನ್ನ ಹಾಗು ಜನರ ದೋಷವನ್ನು ಪರಿಹರಿಸು. ಜನರು ತಂದದ್ದನ್ನು ಸಮರ್ಪಿಸಿ ಸರ್ವೇಶ್ವರನ ಆಜ್ಞೆಯಂತೆ ಅವರ ದೋಷವನ್ನು ಪರಿಹರಿಸು,” ಎಂದು ಹೇಳಿದನು.

8 ಅಂತೆಯೇ ಆರೋನನು ಬಲಿಪೀಠದ ಹತ್ತಿರಕ್ಕೆ ಹೋಗಿ ತನಗಾಗಿ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ವಧಿಸಿದನು.

9 ಆರೋನನ ಮಕ್ಕಳು ಆ ಬಲಿಪ್ರಾಣಿಯ ರಕ್ತವನ್ನು ಅವನಿಗೆ ಒಪ್ಪಿಸಿದಾಗ ಅವನು ಅದರಲ್ಲಿ ತನ್ನ ಬೆರಳನ್ನು ಅದ್ದಿ, ಬಲಿಪೀಠದ ಕೊಂಬುಗಳಗೆ ಹಚ್ಚಿ, ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಹೊಯ್ದನು.

10 ದೋಷಪರಿಹಾರಕ ಬಲಿಪ್ರಾಣಿಯ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಾಳಿಜದ ಹತ್ತಿರವಿರುವ ಕೊಬ್ಬನ್ನು, ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ, ಬಲಿಪೀಠದ ಮೇಲೆ ಹೋಮಮಾಡಿದನು.

11 ಅದರ ಮಾಂಸವನ್ನೂ ಚರ್ಮವನ್ನೂಪಾಳೆಯದ ಹೊರಗೆ ಬೆಂಕಿಯಲ್ಲಿ ಸುಡಿಸಿಬಿಟ್ಟನು.

12 ತರುವಾಯ ದಹನಬಲಿಯ ಪ್ರಾಣಿಯನ್ನು ವಧಿಸಿಬಿಟ್ಟನು. ಆರೋನನ ಮಕ್ಕಳು ಅದರ ರಕ್ತವನ್ನು ತಂದು ಅವನಿಗೆ ಒಪ್ಪಿಸಿದರು. ಅವನು ಅದನ್ನು ಬಲಿಪೀಠದ ಸುತ್ತಲು ಚಿಮುಕಿಸಿದನು.

13 ಅವರು ಆ ಪ್ರಾಣಿಯ ಮಾಂಸಖಂಡಗಳನ್ನೂ ತಲೆಯನ್ನೂ ಒಂದೊಂದಾಗಿ ಒಪ್ಪಿಸಿದಾಗ ಅವನು ಅವುಗಳನ್ನು ಬಲಿಪೀಠದ ಮೇಲೆ ಹೋಮಮಾಡಿದನು.

14 ಅದರ ಕರುಳುಗಳನ್ನೂ, ಕಾಲುಗಳನ್ನೂ ತೊಳೆಯಿಸಿ, ಬಲಿಪೀಠದಲ್ಲಿ ದಹನ ಬಲಿದ್ರವ್ಯದ ಮೇಲಿಟ್ಟು ಹೋಮಮಾಡಿದನು.

15 ಅದಾದ ಮೇಲೆ ಜನರು ಸಮರ್ಪಿಸಿದ ಪ್ರಾಣಿಗಳನ್ನು ಆರೋನನು ತರಿಸಿ ಅವುಗಳಲ್ಲಿ ದೋಷಪರಿಹಾರಕವಾದ ಹೋತವನ್ನು ಮೊದಲನೆಯ ಬಲಿಪ್ರಾಣಿಯಾಗಿ ವಧಿಸಿ ಜನರ ದೋಷಪರಿಹಾರಾರ್ಥವಾಗಿ ಸಮರ್ಪಿಸಿದನು.

16 ಅಂತೆಯೆ ದಹನಬಲಿಪ್ರಾಣಿಯನ್ನೂ ವಿಧಿಬದ್ಧವಾಗಿ ಸಮರ್ಪಿಸಿದನು.

17 ಜನರು ತಂದ ನೈವೇದ್ಯ ದ್ರವ್ಯಗಳಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಬೆಳಿಗ್ಗೆಯ ದಹನಬಲಿಯ ಜೊತೆಗೆ ಅದನ್ನು ಪೀಠದ ಮೇಲೆ ಹೋಮಮಾಡಿದನು.

18 ಅನಂತರ ಜನರ ಪರವಾಗಿ ಶಾಂತಿಸಮಾಧಾನದ ಬಲಿದಾನಕ್ಕಾಗಿ ನೇಮಕವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಮಕ್ಕಳು ಅವುಗಳ ರಕ್ತವನ್ನು ಒಪ್ಪಿಸಿದಾಗ, ಅವನು ಅದನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು.

19 ಅವರು ಆ ಹೋರಿಯ ಕೊಬ್ಬನ್ನು, ಟಗರಿನ ಬಾಲದ ಕೊಬ್ಬನ್ನು, ಕರುಳ ಸುತ್ತಲಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಹಾಗು ಕಾಳಿಜದ ಹತ್ತಿರವಿರುವ ಕೊಬ್ಬನ್ನು

20 ಎದೆಯ ಭಾಗಗಳ ಮೇಲೆ ಇಟ್ಟು ಒಪ್ಪಿಸಿದನು. ಆರೋನನು ಆ ಕೊಬ್ಬನ್ನು ಬಲಿಪೀಠದ ಮೇಲೆ ಹೋಮಮಾಡಿದನು.

21 ಮೋಶೆಯ ಆಜ್ಞಾನುಸಾರ ಅವನು ಅವುಗಳ ಎದೆಯ ಭಾಗಗಳನ್ನೂ ಬಲತೊಡೆಗಳನ್ನೂ ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿದನು.

22 ಆರೋನನು ಆ ದೋಷಪರಿಹಾರಕ ಬಲಿಯನ್ನೂ ದಹನಬಲಿಯನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆಮೇಲೆ ಬಲಿಪೀಠದಿಂದ ಇಳಿದು ಬಂದನು.

23 ತರುವಾಯ ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅಲ್ಲಿಂದ ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಸರ್ವೇಶ್ವರನ ಮಹಿಮೆ ಜನರಿಗೆ ಪ್ರತ್ಯಕ್ಷವಾಯಿತು.

24 ಸರ್ವೇಶ್ವರನ ಸನ್ನಿಧಿಯಿಂದ ಅಗ್ನಿ ಹೊರಟು ಬಲಿಪೀಠದ ಮೇಲಿದ್ದ ದಹನಬಲಿದ್ರವ್ಯವನ್ನೂ, ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರು ಅದನ್ನು ಕಂಡು ಜಯ ಜಯಕಾರ ಮಾಡಿದರು; ಅಡ್ಡಬಿದ್ದು ನಮಸ್ಕರಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು