Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 3 - ಕನ್ನಡ ಸತ್ಯವೇದವು C.L. Bible (BSI)


ಶಾಂತಿ ಸಮಾಧಾನಕ್ಕಾಗಿ ಬಲಿದಾನ

1 “ಯಾರಾದರು ಶಾಂತಿಸಮಾಧಾನಕ್ಕಾಗಿ ಬಲಿದಾನ ಮಾಡಬೇಕಾದರೆ ಅಂಥವನು ಸಮರ್ಪಿಸುವ ಪ್ರಾಣಿ ದನಕರುವಾಗಿದ್ದಲ್ಲಿ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ, ಕಳಂಕರಹಿತವಾಗಿರಬೇಕು.

2 ಅವನು ಆ ಪ್ರಾಣಿಯನ್ನು ಸರ್ವೇಶ್ವರನ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈಯಿಡಬೇಕು; ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.

3-4 ಆ ಬಲಿಪ್ರಾಣಿಯ ಈ ಭಾಗಗಳನ್ನು, ಕರುಳ ಸುತ್ತಲಿನ ಕೊಬ್ಬನ್ನೂ, ಮೂತ್ರಪಿಂಡಗಳನ್ನೂ ಮತ್ತು ಅವುಗಳ ಮೇಲಿನ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗವನ್ನೂ ತೆಗೆದು ಸರ್ವೇಶ್ವರನಿಗೆ ಹೋಮಮಾಡಬೇಕು.

5 ಆರೋನನ ವಂಶಜರಾದ ಯಾಜಕರು ಅದನ್ನು ಬಲಿಪೀಠದಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ದಹನಬಲಿಪದಾರ್ಥಗಳೊಡನೆ ಹೋಮಮಾಡಬೇಕು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧ ಬಲಿಯಾಗಿರುವುದು.

6 “ಶಾಂತಿಸಮಾಧಾನಕ್ಕಾಗಿ ಸರ್ವೇಶ್ವರನಿಗೆ ಸಮರ್ಪಿಸುವ ಬಲಿಪ್ರಾಣಿ ಕುರಿ ಅಥವಾ ಆಡು ಆಗಿದ್ದರೆ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ, ಕಳಂಕರಹಿತವಾಗಿರಬೇಕು.

7 “ಅದು ಕುರಿಯಾಗಿದ್ದರೆ ತಂದವನು ಅದನ್ನು ಸರ್ವೇಶ್ವರನ ಸನ್ನಿಧಿಗೆ ತೆಗೆದುಕೊಂಡು ಬಂದು ಅದರ ತಲೆಯ ಮೇಲೆ ಕೈಯಿಟ್ಟು

8 ದೇವದರ್ಶನದ ಗುಡಾರದ ಎದುರಿಗೆ ಅದನ್ನು ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಬೇಕು.

9 ಶಾಂತಿಸಮಾಧಾನಕ್ಕಾಗಿ ಅರ್ಪಿಸುವ ಆ ಬಲಿ ಪ್ರಾಣಿಯ ಕೊಬ್ಬನ್ನು ಸರ್ವೇಶ್ವರನಿಗೆ ಹೋಮವಾಗಿ ಸಮರ್ಪಿಸಬೇಕು.

10 ಹೇಗೆಂದರೆ, ಬಾಲದ ಕೊಬ್ಬನ್ನೆಲ್ಲಾ ಬೆನ್ನೆಲುಬಿನ ಬಳಿಯಿಂದ ತೆಗೆದುಬಿಟ್ಟು ಅದನ್ನೂ ಕರುಳ ಸುತ್ತಲಿನ ಕೊಬ್ಬನ್ನೂ, ಮೂತ್ರಪಿಂಡಗಳನ್ನೂ ಅವುಗಳ ಮೇಲಿನ ಕೊಬ್ಬನ್ನೂ ಮತ್ತು ಕಾಳಿಜದ ಉತ್ತಮ ಭಾಗವನ್ನೂ

11 ಯಾಜಕನು ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ಸರ್ವೇಶ್ವರನಿಗೆ ದಹನಬಲಿಯ ಆಹಾರವಾಗುವುದು.

12 ಸಮರ್ಪಿಸುವಂಥದ್ದು ಆಡಾಗಿದ್ದರೆ ಅರ್ಪಿಸುವವನು ಅದನ್ನು ಸರ್ವೇಶ್ವರನ ಸನ್ನಿಧಿಗೆ ತೆಗೆದುಕೊಂಡು ಬರಬೇಕು.

13 ಅದರ ತಲೆಯ ಮೇಲೆ ಕೈಯಿಟ್ಟು ದೇವದರ್ಶನದ ಗುಡಾರದ ಎದುರಿಗೆ ವಧಿಸಬೇಕು. ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಬೇಕು.

14 ಅದರ ಕರುಳ ಸುತ್ತಲಿನ ಕೊಬ್ಬನ್ನೂ, ಮೂತ್ರಪಿಂಡಗಳನ್ನೂ

15 ಮತ್ತು ಅವುಗಳ ಮೇಲಿನ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗವನ್ನೂ ಸರ್ವೇಶ್ವರನಿಗೆ ಅಗ್ನಿಯ ಮೂಲಕ ಸಮರ್ಪಿಸಬೇಕು.

16 ಯಾಜಕನು ಅದನ್ನು ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ಸುಗಂಧಹೋಮ ರೂಪವಾಗಿ ಸರ್ವೇಶ್ವರನಿಗೆ ಆಹಾರವಾಗಿರುವುದು. ಬಲಿಪ್ರಾಣಿಗಳ ಕೊಬ್ಬೆಲ್ಲವು ಸರ್ವೇಶ್ವರನದು.

17 ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನಕೂಡದೆಂಬುದು ನಿಮಗೂ ನಿಮ್ಮ ಸಂತತಿಯವರಿಗೂ ನೀವು ವಾಸಿಸುವ ಎಲ್ಲ ಸ್ಥಳಗಳಲ್ಲಿಯೂ ಶಾಶ್ವತ ನಿಯಮವಾಗಿದೆ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು