ಯಾಜಕಕಾಂಡ 12 - ಕನ್ನಡ ಸತ್ಯವೇದವು C.L. Bible (BSI)ಬಾಣಂತಿಯರ ಶುದ್ಧೀಕರಣ 1 ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ಹೇಳಿದರು: 2 “ನೀನು ಇಸ್ರಯೇಲರಿಗೆ ಇಂತೆಂದು ಆಜ್ಞಾಪಿಸು - ‘ಒಬ್ಬ ಮಹಿಳೆ ಗಂಡುಮಗುವನ್ನು ಹೆತ್ತರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುತ್ತಾಳೋ ಹಾಗೆಯೇ ಏಳು ದಿನಗಳ ತನಕ ಅಶುದ್ಧಳಾಗಿರಬೇಕು. 3 ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸಬೇಕು. 4 ಆಮೇಲೆ ಆಕೆ ಪೂರ್ಣಶುದ್ಧಳಾಗಲು ಮೂವತ್ತುಮೂರು ದಿನಗಳವರೆಗೆ ಕಾದಿರಬೇಕು. ಅದು ಮುಗಿಯುವ ತನಕ ಆಕೆ ದೇವರ ವಸ್ತುಗಳನ್ನು ಮುಟ್ಟಕೂಡದು, ದೇವಸ್ಥಾನಕ್ಕೆ ಬರಕೂಡದು. 5 ಹೆಣ್ಣುಮಗುವನ್ನು ಹೆತ್ತರೆ, ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುತ್ತಾಳೋ ಹಾಗೆಯೇ ಎರಡು ವಾರಗಳು ಅಶುದ್ಧಳಾಗಿರಬೇಕು; ಮತ್ತು ಪೂರ್ಣಶುದ್ಧಳಾಗಲು ಅರವತ್ತಾರು ದಿನಗಳು ಕಾದಿರಬೇಕು. 6 ಗಂಡುಮಗುವನ್ನು ಹೆತ್ತರೂ ಹೆಣ್ಣುಮಗುವನ್ನು ಹೆತ್ತರೂ ಆಕೆಯ ಶುದ್ಧೀಕರಣ ದಿನಗಳು ಮುಗಿದಾಗ ಆಕೆ ದಹನಬಲಿಗಾಗಿ ಒಂದು ವರ್ಷದ ಕುರಿಯನ್ನು, ದೋಷಪರಿಹಾರಕ್ಕಾಗಿ ಒಂದು ಮರಿ ಪಾರಿವಾಳವನ್ನು, ಇಲ್ಲವೆ ಬೆಳವಕ್ಕಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಒಪ್ಪಿಸಬೇಕು. 7 ಯಾಜಕನು ಅವುಗಳನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಸಮರ್ಪಿಸಿ ಅವಳ ಪರವಾಗಿ ದೋಷಪರಿಹಾರ ಮಾಡಿದಾಗ ಅವಳಿಗೆ ರಕ್ತಸ್ರಾವದಿಂದ ಆದ ಅಪರಿಶುದ್ಧತೆ ನಿವಾರಣೆಯಾಗಿ ಶುದ್ಧಳಾಗುವಳು. ಗಂಡು ಮಗು ಹೆತ್ತಾಗಲು, ಹೆಣ್ಣು ಮಗು ಹೆತ್ತಾಗಲು ಅನುಸರಿಸಬೇಕಾದ ವಿಧಿ ಒಂದೇ. 8 ಬಡತನದ ನಿಮಿತ್ತ ಕುರಿಯನ್ನು ಕೊಡುವುದಕ್ಕೆ ಆಗದಿದ್ದರೆ ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿಪಾರಿವಾಳಗಳನ್ನಾಗಲಿ ತಂದು ದಹನಬಲಿಗಾಗಿ ಒಂದನ್ನು, ದೋಷಪರಿಹಾರಕ್ಕಾಗಿ ಒಂದನ್ನು ಸಮರ್ಪಿಸಬೇಕು. ಯಾಜಕನು ಅವಳ ಪರವಾಗಿ ದೋಷಪರಿಹಾರವನ್ನು ಮಾಡಿದಾಗ ಆಕೆ ಶುದ್ಧಳಾಗುವಳು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India