Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 5 - ಕನ್ನಡ ಸತ್ಯವೇದವು C.L. Bible (BSI)


ಕಾರ್ಮಿಕರ ಕೂಗು-ಮಾಲಿಕರ ಸೋಗು

1 ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ.

2 ನಿಮ್ಮ ಐಶ್ವರ್ಯ ನಾಶವಾಗಿದೆ. ನಿಮ್ಮ ಬೆಲೆಬಾಳುವ ಬಟ್ಟೆಗಳಿಗೆ ನುಸಿಹತ್ತಿದೆ.

3 ನಿಮ್ಮ ಬೆಳ್ಳಿಬಂಗಾರಕ್ಕೆ ತುಕ್ಕುಹಿಡಿದಿದೆ. ಆ ತುಕ್ಕೇ ನಿಮಗೆ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ಬೆಂಕಿಯಂತೆ ದಹಿಸಿಬಿಡುತ್ತದೆ. ಅಂತ್ಯಕಾಲಕ್ಕಾಗಿ ನೀವು ಬೆಂಕಿಯನ್ನೇ ಶೇಖರಿಸಿಟ್ಟುಕೊಂಡಿದ್ದೀರಿ.

4 ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ.

5 ಲೋಕದಲ್ಲಿ ನೀವು ಸುಖಭೋಗಿಗಳಾಗಿ ವಿಲಾಸ ಜೀವನ ನಡೆಸಿದ್ದೀರಿ. ವಧೆಯ ದಿನಕ್ಕಾಗಿ ಪಶುಗಳಂತೆ ನಿಮ್ಮನ್ನೇ ಕೊಬ್ಬಿಸಿಕೊಂಡಿದ್ದೀರಿ.

6 ನಿಮ್ಮನ್ನು ವಿರೋಧಿಸಿದ ಸಜ್ಜನನನ್ನು ಖಂಡಿಸಿ ಕೊಲೆಮಾಡಿಸಿದ್ದೀರಿ.


ಸಹನೆ ಶರಣರ ಭೂಷಣ

7 ಆದ್ದರಿಂದ ಸಹೋದರರೇ, ಪ್ರಭು ಪುನರಾಗಮಿಸುವವರೆಗೆ ತಾಳ್ಮೆಯಿಂದ ಇರಿ. ರೈತನನ್ನು ಗಮನಿಸಿರಿ: ತನ್ನ ಹೊಲದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸುವ ಅವನು ಮುಂಗಾರು ಹಿಂಗಾರು ಮಳೆಗಾಗಿ ತಾಳ್ಮೆಯಿಂದ ಕಾದಿರುತ್ತಾನೆ.

8 ಹಾಗೆಯೇ, ನೀವೂ ಸಹ ತಾಳ್ಮೆಯಿಂದಿರಿ, ದೃಢಚಿತ್ತರಾಗಿರಿ. ಪ್ರಭುವಿನ ಪುನರಾಗಮನ ಸನ್ನಿಹಿತವಾಗಿದೆ.

9 ಸಹೋದರರೇ, ದಂಡನಾತೀರ್ಪಿಗೆ ಗುರಿ ಆಗದಂತೆ ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿ. ಇಗೋ, ನ್ಯಾಯಾಧೀಶನು ಬಾಗಿಲ ಬಳಿಯಲ್ಲೇ ನಿಂತಿದ್ದಾನೆ.

10 ಸಹೋದರರೇ, ಸಂಕಷ್ಟಗಳನ್ನು ತಾಳ್ಮೆಯಿಂದ ಸಹಿಸಿದ್ದಕ್ಕೆ ನಿದರ್ಶನ ಬೇಕೇ? ಪ್ರಭುವಿನ ಹೆಸರಿನಲ್ಲಿ ಬೋಧಿಸಿದ ಪ್ರವಾದಿಗಳನ್ನು ಸ್ಮರಿಸಿಕೊಳ್ಳಿ.

11 ತಾಳಿದವನು ಬಾಳಿಯಾನು ಎಂದು ಹೇಳುತ್ತೇವಲ್ಲವೇ? ಯೋಬನ ತಾಳ್ಮೆಯನ್ನು ಕುರಿತು ನೀವು ಕೇಳಿದ್ದೀರಿ. ಅಂತ್ಯದಲ್ಲಿ ಆತನಿಗೆ ಸರ್ವೇಶ್ವರ ದಯಪಾಲಿಸಿದ್ದನ್ನು ಬಲ್ಲಿರಿ. ದೇವರ ದಯೆ ಅನಂತ, ಅವರ ಅನುಕಂಪ ಅಪಾರ.


ಪ್ರಾರ್ಥನೆಯೇ ಪರಮೌಷಧ

12 ಮುಖ್ಯವಾಗಿ ಸಹೋದರರೇ, ಆಣೆಯಿಡಬೇಡಿ. ಪರಲೋಕದ ಮೇಲಾಗಲಿ, ಭೂಲೋಕದ ಮೇಲಾಗಲಿ, ಇನ್ನಾವುದರ ಮೇಲಾಗಲಿ ನೀವು ಆಣೆಯಿಡಬಾರದು. ಹೌದಾದರೆ ಹೌದು, ಇಲ್ಲವಾದರೆ ಇಲ್ಲ ಎನ್ನಿ. ಆಗ ನೀವು ದಂಡನಾತೀರ್ಪಿಗೆ ಗುರಿಯಾಗುವುದಿಲ್ಲ.

13 ನಿಮ್ಮಲ್ಲಿ ಯಾರಾದರೂ ಸಂಕಟದಲ್ಲಿದ್ದರೆ ಅಂಥವನು ದೇವರಲ್ಲಿ ಪ್ರಾರ್ಥಿಸಲಿ. ಸಂತೋಷದಲ್ಲಿದ್ದರೆ ದೇವರಿಗೆ ಸ್ತುತಿಗಾನ ಹಾಡಲಿ.

14 ನಿಮ್ಮಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ, ಅವನು ಸಭಾಪಾಲಕರನ್ನು ಕರೆಸಲಿ. ಅವರು ಅವನಿಗಾಗಿ ದೇವರನ್ನು ಪ್ರಾರ್ಥಿಸಿ ಪ್ರಭುವಿನ ಹೆಸರಿನಲ್ಲಿ ಅವನನ್ನು ಅಭ್ಯಂಗಿಸಲಿ.

15 ಆಗ ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ. ಹಾಸಿಗೆ ಹಿಡಿದ ರೋಗಿಯನ್ನು ಪ್ರಭು ಎಬ್ಬಿಸುತ್ತಾರೆ; ಅವನು ಪಾಪಮಾಡಿದವನಾಗಿದ್ದರೆ ಕ್ಷಮೆಯನ್ನು ಪಡೆಯುತ್ತಾನೆ.

16 ಆದ್ದರಿಂದ ಒಬ್ಬರಿಗೊಬ್ಬರು ಪಾಪಗಳನ್ನು ಒಪ್ಪಿಕೊಳ್ಳಿರಿ. ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ಆಗ ನೀವು ಸ್ವಸ್ಥರಾಗುತ್ತೀರಿ. ಸತ್ಪುರುಷನ ಪ್ರಾರ್ಥನೆ ಶಕ್ತಿಯುತವಾದುದು ಹಾಗೂ ಫಲದಾಯಕವಾದುದು.

17 ಎಲೀಯನು ನಮ್ಮಂಥ ಸಾಧಾರಣ ಮನುಷ್ಯ. ಆದರೂ ಅವನು ಮಳೆ ಬಾರದಿರಲೆಂದು ಭಕ್ತಿಯಿಂದ ಪ್ರಾರ್ಥಿಸಿದ್ದರಿಂದ ಮೂರು ವರ್ಷ ಆರು ತಿಂಗಳವರೆಗೂ ಮಳೆ ಬೀಳಲಿಲ್ಲ.

18 ಅನಂತರ, ಅವನು ಮತ್ತೆ ಮಳೆಗಾಗಿ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿಯಿತು. ಭೂಮಿ ಫಲಿಸಿತು.

19 ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯದ ಮಾರ್ಗವನ್ನು ಬಿಟ್ಟು ತಪ್ಪಿಹೋದಾಗ ಇನ್ನೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ,

20 ಇದನ್ನು ನೆನಪಿಗೆ ತಂದುಕೊಳ್ಳಿರಿ: ಪಾಪಿಯನ್ನು ದುರ್ಮಾರ್ಗದಿಂದ ಮರಳಿ ಸನ್ಮಾರ್ಗಕ್ಕೆ ತಂದವನು ತನ್ನ ಆತ್ಮವನ್ನು ನಿತ್ಯ ಮರಣದಿಂದ ತಪ್ಪಿಸಿ ತನ್ನ ಲೆಕ್ಕವಿಲ್ಲದ ಪಾಪಗಳಿಗೆ ಕ್ಷಮೆಯನ್ನು ಪಡೆಯುತ್ತಾನೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು