Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 4 - ಕನ್ನಡ ಸತ್ಯವೇದವು C.L. Bible (BSI)


ಲೋಕದೊಡನೆ ಗೆಳೆತನ ದೇವರೊಡನೆ ಹಗೆತನ

1 ನಿಮ್ಮಲ್ಲಿ ಕಲಹ ಕಾದಾಟಗಳು ಉಂಟಾಗುವುದು ಹೇಗೆ? ನಿಮ್ಮ ಇಂದ್ರಿಯಗಳಲ್ಲಿ ಗೊಂದಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೇ?

2 ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ.

3 ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ.

4 ವಿಶ್ವಾಸದಲ್ಲಿ ವ್ಯಭಿಚಾರಿಗಳಂತೆ ಬಾಳುವವರೇ, ಲೋಕದೊಡನೆ ಗೆಳೆತನವೆಂದರೆ ದೇವರೊಡನೆ ಹಗೆತನವೆಂಬುದು ನಿಮಗೆ ತಿಳಿಯದೇ? ಲೋಕದೊಡನೆ ಗೆಳೆತನವನ್ನು ಬಯಸುವವನು ದೇವರೊಡನೆ ಹಗೆತನವನ್ನು ಬೆಳೆಸುತ್ತಾನೆ.

5 “ದೇವರು ನಮ್ಮಲ್ಲಿ ಇರುವ ಆತ್ಮವನ್ನು ಅತ್ಯಾಸಕ್ತಿಯಿಂದ ಅಪೇಕ್ಷಿಸುತ್ತಾರೆ,” ಎಂಬ ಪವಿತ್ರಗ್ರಂಥದ ವಾಕ್ಯವು ಹುರುಳಿಲ್ಲದ್ದೆಂದು ಭಾವಿಸುವಿರಾ?

6 ದೇವರು ನಮಗೆ ದಯಪಾಲಿಸುವ ವರಪ್ರಸಾದ ಅತ್ಯಧಿಕವಾದುದು. ಎಂತಲೇ, “ದೇವರು ಗರ್ವಿಷ್ಠರನ್ನು ವಿರೋಧಿಸುತ್ತಾರೆ. ದೀನದಲಿತರಿಗೆ ಕೃಪಾವರವನ್ನು ಅನುಗ್ರಹಿಸುತ್ತಾರೆ,” ಎಂದು ಲಿಖಿತವಾಗಿದೆ.

7 ಆದ್ದರಿಂದ ದೇವರಿಗೆ ಶರಣರಾಗಿ ಬಾಳಿ, ಸೈತಾನನನ್ನು ಎದುರಿಸಿ ನಿಲ್ಲಿ. ಅವನು ನಿಮ್ಮಿಂದ ಪಲಾಯನಗೈಯುವನು.

8 ದೇವರ ಸಮೀಪಕ್ಕೆ ಬನ್ನಿ, ಆಗ ಅವರು ನಿಮ್ಮ ಸಮೀಪಕ್ಕೆ ಬರುವರು. ಪಾಪಾತ್ಮರೇ, ನಿಮ್ಮ ಕೈ ಶುದ್ಧವಾಗಿರಲಿ. ಎರಡು ಮನಸ್ಸಿನವರೇ, ನಿಮ್ಮ ಹೃದಯ ನಿರ್ಮಲವಾಗಿರಲಿ.

9 ನಿಮ್ಮ ಹೀನಸ್ಥಿತಿಗಾಗಿ ವ್ಯಥೆಪಡಿರಿ. ಕಣ್ಣೀರಿಟ್ಟು ಗೋಳಾಡಿರಿ. ನಗುವುದನ್ನು ಬಿಟ್ಟು ದುಃಖಿಸಿರಿ; ಸಂತೋಷವನ್ನು ಬಿಟ್ಟು ಶೋಕಿಸಿರಿ.

10 ಪ್ರಭುವಿನ ಮುಂದೆ ನಮ್ರರಾಗಿರಿ. ಆಗ ಅವರು ನಿಮ್ಮನ್ನು ಉದ್ಧರಿಸುವರು.

11 ಸಹೋದರರೇ, ಒಬ್ಬರನ್ನೊಬ್ಬರು ನಿಂದಿಸಬೇಡಿ. ಯಾರಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ಖಂಡಿಸಿದರೆ, ಅಂಥವನು ಧರ್ಮಶಾಸ್ತ್ರವನ್ನೇ ನಿಂದಿಸಿ ಖಂಡಿಸುತ್ತಾನೆ. ನೀನು ಧರ್ಮಶಾಸ್ತ್ರವನ್ನುಖಂಡಿಸಿದರೆ, ನ್ಯಾಯಾಧಿಪತಿ ಎನಿಸಿಕೊಳ್ಳುವೆಯೇ ಹೊರತು ನೀನು ಅದನ್ನು ಅನುಸರಿಸಿ ನಡೆಯುವವನಾಗುವುದಿಲ್ಲ.

12 ನ್ಯಾಯವಿಧಿಗಳನ್ನು ಕೊಟ್ಟವರೂ ನ್ಯಾಯಾಧಿಪತಿಯೂ ಒಬ್ಬರೇ; ಅವರೇ ಉದ್ಧಾರಮಾಡುವುದಕ್ಕೂ ವಿನಾಶಗೊಳಿಸುವುದಕ್ಕೂ ಶಕ್ತರು. ಹೀಗಿರುವಲ್ಲಿ, ನಿನ್ನ ನೆರೆಯವನಿಗೆ ತೀರ್ಪುಕೊಡಲು ನೀನು ಯಾರು?


ಕೊಚ್ಚಿಕೊಳ್ಳುವವನಿಗೆ ಎಚ್ಚರಿಕೆ!

13 “ಇಂಥಿಂಥ ದಿನ ಇಂಥಿಂಥ ಪಟ್ಟಣಕ್ಕೆ ಹೋಗೋಣ, ಅಲ್ಲಿ ಒಂದು ವರ್ಷ ಇದ್ದು ವ್ಯಾಪಾರ ಮಾಡೋಣ; ಅತಿಯಾಗಿ ಲಾಭ ಸಂಪಾದಿಸೋಣ,” ಎಂದೆಲ್ಲಾ ಆಲೋಚಿಸುವವರೇ, ಈಗ ಕೇಳಿ: ನೀವು ಇಷ್ಟೆಲ್ಲಾ ಆಲೋಚಿಸಿದರೂ ನಾಳೆ ಏನಾಗುವುದೋ ನಿಮಗೇ ತಿಳಿಯದು.

14 ನಿಮ್ಮ ಜೀವಮಾನ ಎಷ್ಟುಮಾತ್ರದ್ದು? ಈಗ ಕಾಣಿಸಿಕೊಂಡು ಆಮೇಲೆ ಕಾಣದೆಹೋಗುವ ಹೊಗೆಯಂತೆ ಅದು.

15 ಆದ್ದರಿಂದ ನೀವು ಅಂಥ ಮಾತನ್ನು ಬಿಟ್ಟು, “ಪ್ರಭುವಿನ ಚಿತ್ತವಿದ್ದರೆ ನಾವು ಬದುಕಿರುತ್ತೇವೆ, ಇಂಥಿಂಥದ್ದನ್ನು ಮಾಡುತ್ತೇವೆ,” ಎಂದು ನೀವು ಹೇಳುವುದೇ ಸರಿ.

16 ಆದರೆ ನೀವು ಅಹಂಭಾವದಿಂದ ಕೊಚ್ಚಿಕೊಳ್ಳುತ್ತೀರಿ. ಹಾಗೆ ಕೊಚ್ಚಿಕೊಳ್ಳುವುದು ಸರಿಯಲ್ಲ.

17 ಒಬ್ಬನು ಒಳ್ಳೆಯದನ್ನು ಮಾಡಬೇಕೆಂದು ತಿಳಿದಿದ್ದೂ ಅದನ್ನು ಮಾಡದಿದ್ದರೆ ಅದು ಅವನಿಗೆ ಪಾಪವಾಗಿರುತ್ತದೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು