Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 3 - ಕನ್ನಡ ಸತ್ಯವೇದವು C.L. Bible (BSI)


ನೀಚಬುದ್ಧಿಯ ನಾಲಿಗೆ

1 ಸಹೋದರರೇ, ಎಲ್ಲರೂ ಬೋಧಕರಾಗಲು ಆತುರಪಡಬೇಡಿ. ಬೋಧಕರಾದ ನಾವು ಇತರರಿಗಿಂತಲೂ ತೀವ್ರವಾದ ನ್ಯಾಯವಿಚಾರಣೆಗೆ ಗುರಿಯಾಗುತ್ತೇವೆ.

2 ನಾವೆಲ್ಲರೂ ಎಷ್ಟೋ ವಿಷಯಗಳಲ್ಲಿ ತಪ್ಪುಮಾಡುವುದುಂಟು. ತನ್ನ ಮಾತಿನಲ್ಲಿ ತಪ್ಪುಮಾಡದೆ ಪೂರ್ತಿಯಾಗಿ ತನ್ನನ್ನೇ ಸ್ವಾಧೀನದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ ಸಿದ್ಧಪುರುಷನೇ ಹೌದು.

3 ಕುದುರೆಗಳನ್ನು ಗಮನಿಸಿರಿ, ಅವುಗಳ ಬಾಯಿಗೆ ಹಾಕುವ ಚಿಕ್ಕ ಕಡಿವಾಣದಿಂದ ನಮಗೆ ಇಷ್ಟಬಂದ ಕಡೆಗೆ ಅವುಗಳನ್ನು ನಡೆಸುತ್ತೇವೆ.

4 ಅಂತೆಯೇ, ಹಡಗು ಎಷ್ಟೇ ದೊಡ್ಡದಿರಲಿ, ಎಂತಹ ಬಿರುಗಾಳಿಯ ಬಡಿತಕ್ಕೇ ಸಿಕ್ಕಿರಲಿ, ಕೇವಲ ಒಂದು ಚಿಕ್ಕ ಚುಕ್ಕಾಣಿಯಿಂದ ನಾವಿಕನು ತನಗೆ ಇಷ್ಟಬಂದ ಕಡೆಗೆ ಅದನ್ನು ತಿರುಗಿಸುತ್ತಾನೆ.

5 ನಾಲಿಗೆಯೂ ಹಾಗೆಯೇ. ಅದು ಶರೀರದ ಸಣ್ಣ ಅಂಗವಾಗಿದ್ದರೂ ಬಡಾಯಿ ಕೊಚ್ಚುವುದು ಬಹಳ. ಒಂದು ಸಣ್ಣ ಕಿಡಿಯು ದೊಡ್ಡ ಕಾಡನ್ನೇ ಸುಡಬಲ್ಲದು.

6 ನಾಲಿಗೆಯು ಆ ಬೆಂಕಿಯ ಕಿಡಿಯಂತೆ. ಅದು ಅಧರ್ಮಲೋಕದ ಪ್ರತೀಕ. ಅಂಗಾಂಗಗಳ ನಡುವೆ ಇದ್ದು ಇಡೀ ಶರೀರವನ್ನು ಮಲಿನಗೊಳಿಸುತ್ತದೆ. ನರಕಾಗ್ನಿಯಿಂದ ಹೊತ್ತಿಕೊಂಡು ಅದು ಬಾಳಿನ ಚಕ್ರಕ್ಕೆ ಬೆಂಕಿಯನ್ನು ಹಚ್ಚುತ್ತದೆ.

7 ಸಕಲ ಜಾತಿಯ ಪ್ರಾಣಿಪಕ್ಷಿಗಳನ್ನೂ ಹರಿದಾಡುವ ಜಂತುಗಳನ್ನೂ ಜಲಜೀವಿಗಳನ್ನೂ ಮಾನವ ಪಳಗಿಸಬಲ್ಲನು; ಪಳಗಿಸಿಯೂ ಇದ್ದಾನೆ.

8 ಆದರೆ ನಾಲಿಗೆಯನ್ನಾದರೋ ಹತೋಟಿಗೆ ತರಲು ಯಾರಿಗೂ ಸಾಧ್ಯವಿಲ್ಲ. ಅದು ಸತತ ಕೇಡನ್ನುಂಟುಮಾಡುವ ಕಿಡಿ; ಮೃತ್ಯುಮಾರಕ ವಿಷಕೊಂಡಿ.

9 ಪ್ರಭುವನ್ನೂ ಪರಮ ಪಿತನನ್ನೂ ಸ್ತುತಿಸುವುದು ಅದೇ ನಾಲಿಗೆಯೇ; ದೇವಸ್ವರೂಪದಲ್ಲಿ ಸೃಷ್ಟಿಸಲಾದ ಮಾನವನನ್ನು ಶಪಿಸುವುದೂ ಅದೇ ನಾಲಿಗೆಯೇ.

10 ಸ್ತುತಿ ಶಾಪಗಳೆರಡೂ ಒಂದೇ ಬಾಯಿಂದ ಹೊರಡುತ್ತವೆ. ಪ್ರಿಯ ಸಹೋದರರೇ, ಇದು ತರವಲ್ಲ.

11 ಒಂದೇ ಬುಗ್ಗೆಯಿಂದ ಸಿಹಿ ನೀರು, ಸೌಳು ನೀರು - ಎರಡೂ ಬರುವುದುಂಟೇ?

12 ಅಂಜೂರದ ಮರ ಓಲಿವ್ ಹಣ್ಣನ್ನು ಕೊಡುವುದುಂಟೇ? ದ್ರಾಕ್ಷಿಯ ಬಳ್ಳಿಯಲ್ಲಿ ಅಂಜೂರ ಸಿಕ್ಕೀತೇ? ಎಂದಿಗೂ ಇಲ್ಲ. ಅಂತೆಯೇ ಸೌಳು ನೀರಿನ ಒರತೆಯಿಂದ ಸಿಹಿ ನೀರು ಬರುವುದಿಲ್ಲ.


ಜ್ಞಾನದ ಗುಣ ನಡತೆಯಲ್ಲಿ

13 ನಿಮ್ಮಲ್ಲಿ ಯಾರಾದರೂ ಜ್ಞಾನಿಯೂ ವಿವೇಕಿಯೂ ಆದವನು ಇದ್ದಾನೋ? ಅಂಥವನು ಜ್ಞಾನದ ಲಕ್ಷಣವಾಗಿರುವ ವಿನಯಶೀಲತೆಯನ್ನು ತನ್ನ ನಡೆನುಡಿಯಲ್ಲಿ ತೋರ್ಪಡಿಸಲಿ.

14 ನಿಮ್ಮ ಹೃದಯದಲ್ಲಿ ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ತುಂಬಿರುವಾಗ ಜ್ಞಾನಿಗಳೆಂದು ಕೊಚ್ಚಿಕೊಳ್ಳಬೇಡಿ; ಸತ್ಯಕ್ಕೆ ವಿರುದ್ಧವಾಗಿ ಸುಳ್ಳಾಡಬೇಡಿ.

15 ಅಂಥ ಜ್ಞಾನ ದೇವರಿಂದ ಬಂದ ಜ್ಞಾನವಲ್ಲ; ಅದು ಪ್ರಾಪಂಚಿಕವಾದುದು, ಪ್ರಾಕೃತವಾದುದು, ಪೈಶಾಚಿಕವಾದುದು.

16 ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾವಿಧವಾದ ಅಕ್ರಮಗಳೂ ದುಶ್ಚಟಗಳು ಇರುತ್ತವೆ.

17 ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನ ಉಳ್ಳದ್ದು. ಸಹನೆ ಸಂಯಮವುಳ್ಳದ್ದು, ನ್ಯಾಯಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ.

18 ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು