Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 2 - ಕನ್ನಡ ಸತ್ಯವೇದವು C.L. Bible (BSI)


ದಯೆಯೇ ಧರ್ಮದ ಮುಕುಟ

1 ನನ್ನ ಸಹೋದರರೇ, ಮಹಿಮಾನ್ವಿತ ಪ್ರಭು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟಿರುವ ನೀವು ಪಕ್ಷಪಾತ ಮಾಡಲೇಬಾರದು.

2 ಉದಾಹರಣೆಗೆ: ಇಬ್ಬರು ನಿಮ್ಮ ಪ್ರಾರ್ಥನಾಲಯಕ್ಕೆ ಬಂದರೆಂದು ಇಟ್ಟುಕೊಳ್ಳಿ. ಅವರಲ್ಲಿ ಒಬ್ಬನು ಚಿನ್ನದುಂಗುರವನ್ನು ತೊಟ್ಟು, ಸೊಗಸಾದ ಉಡುಪನ್ನು ಧರಿಸಿದವನು. ಮತ್ತೊಬ್ಬನು ಹರಕುಬಟ್ಟೆಯನ್ನು ಉಟ್ಟ ಬಡವನು.

3 ಆಗ, ನೀವು ಸೊಗಸಾದ ಉಡುಪನ್ನು ಧರಿಸಿದವನಿಗೆ ಗೌರವದಿಂದ, “ಬನ್ನಿ ಸ್ವಾಮೀ ಬನ್ನಿ, ದಯವಿಟ್ಟು ಈ ಪೀಠವನ್ನು ಅಲಂಕರಿಸಿ,” ಎನ್ನುತ್ತೀರಿ. ಬಡವನಿಗೆ, “ನೀನು ಅಲ್ಲಿಯೇ ನಿಂತುಕೋ, ಇಲ್ಲವೇ ಕೆಳಗೆ, ನನ್ನ ಕಾಲ ಬಳಿ ಕುಳಿತುಕೋ,” ಎನ್ನಿತ್ತೀರಿ. ಹೀಗಿರಲು,

4 ನೀವು ನಿಮ್ಮಲ್ಲೇ ಭೇದಭಾವ ಮಾಡುತ್ತೀರಿ; ಅಲ್ಲದೆ ನೀವು ಮಾಡುವ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.

5 ನನ್ನ ಪ್ರಿಯ ಸಹೋದರರೇ, ಪ್ರಪಂಚದ ದೃಷ್ಟಿಗೆ ಬಡವರಾಗಿ ಕಾಣುವವರನ್ನು ವಿಶ್ವಾಸದಲ್ಲಿ ಸಿರಿವಂತರನ್ನಾಗಿಸಲು ದೇವರು ಆರಿಸಿಕೊಳ್ಳಲಿಲ್ಲವೇ? ತಮ್ಮನ್ನು‍ ಪ್ರೀತಿಸುವವರು ಸ್ವರ್ಗಸಾಮ್ರಾಜ್ಯಕ್ಕೆ ಬಾಧ್ಯಸ್ಥರೆಂದು ದೇವರೇ ವಾಗ್ದಾನ ಮಾಡಿಲ್ಲವೇ?

6 ಹೀಗಿದ್ದರೂ ನೀವು ಬಡವನನ್ನು ಅವಮಾನಕ್ಕೆ ಈಡುಮಾಡಿದಿರಿ. ನಿಮ್ಮನ್ನು ತುಳಿದು ಹಿಂಸಿಸುವವರು ಮತ್ತು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುವವರು ಸಿರಿವಂತರೇ ಅಲ್ಲವೇ?

7 ನೀವು ಯಾರಿಗೆ ಶರಣರಾಗಿದ್ದೀರೋ ಅವರ ಶ್ರೇಷ್ಠ ನಾಮವನ್ನು ದೂಷಿಸುವವರೂ ಸಿರಿವಂತರೇ ಅಲ್ಲವೇ?

8 ‘ನಿನ್ನನ್ನು ನೀನು ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನು ಪ್ರೀತಿಸು’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ಕೈಗೊಂಡು ನಡೆಯುತ್ತಿದ್ದರೆ ಅದು ಒಳ್ಳೆಯದು.

9 ಅದನ್ನು ಬಿಟ್ಟು ಪಕ್ಷಪಾತ ಮಾಡಿದರೆ ನೀವು ಪಾಪಮಾಡುತ್ತೀರಿ ಮತ್ತು ಧರ್ಮಶಾಸ್ತ್ರ ನಿಮ್ಮನ್ನು ಅಪರಾಧಿಗಳೆಂದು ನಿರ್ಣಯಿಸುತ್ತದೆ.

10 ಒಬ್ಬನು ಇಡೀ ಧರ್ಮಶಾಸ್ತ್ರವನ್ನೇ ಕೈಗೊಂಡು ಒಂದೇ ಒಂದು ನಿಯಮವನ್ನು ಮೀರಿ ನಡೆದರೂ ಅವನು ಇಡೀ ಧರ್ಮಶಾಸ್ತ್ರವನ್ನೇ ಮೀರಿ ನಡೆದಂತಾಗುತ್ತದೆ.

11 ಏಕೆಂದರೆ, ‘ವ್ಯಭಿಚಾರ ಮಾಡಬೇಡ’ ಎಂದು ಹೇಳಿದ ದೇವರೇ, ‘ಕೊಲ್ಲಬೇಡ’ ಎಂದೂ ಹೇಳಿದ್ದಾರೆ. ನೀನು ವ್ಯಭಿಚಾರ ಮಾಡದಿದ್ದರೂ ಕೊಲೆ ಮಾಡುವವನಾದರೆ ಧರ್ಮಶಾಸ್ತ್ರವನ್ನೇ ಮೀರಿದಂತಾಗುತ್ತದೆ.

12 ವಿಮೋಚನೆಯನ್ನೀಯುವ ಧರ್ಮಶಾಸ್ತ್ರದ ನ್ಯಾಯತೀರ್ಪಿಗೆ ಗುರಿಯಾಗುವಿರಿ ಎಂದು ತಿಳಿದು ನೀವು ನಡೆಯಲ್ಲೂ ನುಡಿಯಲ್ಲೂ ಯೋಗ್ಯರಾಗಿ ಬಾಳಿ.

13 ದಯೆತೋರದವನಿಗೆ, ದಯೆದಾಕ್ಷಿಣ್ಯವಿಲ್ಲದ ನ್ಯಾಯತೀರ್ಪು ಕಾದಿರುತ್ತದೆ. ನ್ಯಾಯಕ್ಕೂ ಮಿಗಿಲಾಗಿ ವಿಜೃಂಭಿಸುವುದು ದಯೆಯೇ.


ಸತ್ಕಾರ್ಯಗಳಿಲ್ಲದ ವಿಶ್ವಾಸ ಸತ್ತವಿಶ್ವಾಸ

14 ಸಹೋದರರೇ, ಒಬ್ಬನು ತನಗೆ ವಿಶ್ವಾಸ ಇದೆಯೆಂದು ಕೊಚ್ಚಿಕೊಂಡು ಅದನ್ನು ಕಾರ್ಯತಃ ವ್ಯಕ್ತಪಡಿಸದಿದ್ದರೆ ಅದರಿಂದ ಪ್ರಯೋಜನ ಏನು? ಅಂಥ ವಿಶ್ವಾಸ ಅವನನ್ನು ಉದ್ಧಾರಮಾಡಬಲ್ಲುದೇ?

15-16 ಒಂದು ವೇಳೆ ಒಬ್ಬ ಸಹೋದರನಾಗಲಿ, ಸಹೋದರಿಯಾಗಲಿ ದಿನನಿತ್ಯ ಊಟಬಟ್ಟೆಗಿಲ್ಲದೆ ಇರುವಾಗ, ನಿಮ್ಮಲ್ಲಿ ಯಾರಾದರು ಅವರಿಗೆ ಅಗತ್ಯವಾದುದನ್ನು ನೀಡದೆ, “ಹೋಗು, ಸುಖವಾಗಿ ಬಾಳು, ಚಳಿ ಕಾಯಿಸಿಕೊ, ಹೊಟ್ಟೆ ತುಂಬಾ ತಿನ್ನು,” ಎಂದು ಬರೀ ಬಾಯಿಮಾತಿನಲ್ಲಿ ಉಪಚರಿಸಿದರೆ ಅದರಿಂದಾದ ಪ್ರಯೋಜನವೇನು?

17 ಸತ್ಕ್ರಿಯೆಗಳಿಲ್ಲದ ವಿಶ್ವಾಸ ಸತ್ತವಿಶ್ವಾಸವೇ ಸರಿ.

18 ಒಬ್ಬನು, “ನಿನ್ನಲ್ಲಿ ವಿಶ್ವಾಸವಿದೆ, ನನ್ನಲ್ಲಿ ಸತ್ಕ್ರಿಯೆಗಳಿವೆ,” ಎನ್ನಬಹುದು. ಅಂಥವನಿಗೆ, “ಸತ್ಕ್ರಿಯೆಗಳಿಲ್ಲದ ನಿನ್ನ ವಿಶ್ವಾಸವನ್ನು ನನಗೆ ತೋರಿಸು; ನನ್ನ ಸತ್ಕಾರ್ಯಗಳ ಮೂಲಕ ನನ್ನ ವಿಶ್ವಾಸವನ್ನು ನಿನಗೆ ವ್ಯಕ್ತಪಡಿಸುತ್ತೇನೆ,” ಎಂದು ಉತ್ತರಿಸಬಹುದು.

19 ದೇವರು ಒಬ್ಬರೇ ಎಂದು ನೀವು ನಂಬುತ್ತೀರಿ. ಈ ನಂಬಿಕೆ ಒಳ್ಳೆಯದೇ. ಆದರೆ ದೆವ್ವಗಳೂ ನಂಬುತ್ತವೆ; ಹೆದರಿ ನಡುಗುತ್ತವೆ.

20 ಮತಿಹೀನನೇ, ಸತ್ಕ್ರಿಯೆಗಳಿಲ್ಲದ ವಿಶ್ವಾಸ ಗೊಡ್ಡು ವಿಶ್ವಾಸ ಎಂಬುದಕ್ಕೆ ದೃಷ್ಟಾಂತ ಬೇಕೇ?

21 ನಮ್ಮ ಪಿತಾಮಹ ಅಬ್ರಹಾಮನು ದೇವರೊಂದಿಗೆ ಸತ್ಸಂಬಂಧವನ್ನು ಪಡೆದುದ್ದಾದರೂ ಹೇಗೆ? ತನ್ನ ಮಗ ಇಸಾಕನನ್ನು ದೇವರಿಗೆ ಬಲಿಯಾಗಿ ಸಮರ್ಪಿಸಿದ ಸತ್ಕ್ರಿಯೆಯಿಂದಲ್ಲವೇ? ವಿಶ್ವಾಸವು ಸತ್ಕ್ರಿಯೆಗಳಿಂದ ಸಚೇತನಗೊಂಡಿತು.

22 ಆತನ ಸತ್ಕ್ರಿಯೆಗಳಿಂದಲೇ ವಿಶ್ವಾಸವು ಸಿದ್ಧಿಗೆ ಬಂದಿತು ಎಂಬುದನ್ನು ನಾವು ನೋಡುತ್ತೇವೆ.

23 ಆದುದರಿಂದಲೇ, “ಅಬ್ರಹಾಮನು ದೇವರಲ್ಲಿ ವಿಶ್ವಾಸ ಇಟ್ಟನು. ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ಮಾತು ನೆರವೇರಿತು. ಅಬ್ರಹಾಮನು ದೇವರ ಮಿತ್ರನೆನಿಸಿಕೊಂಡನು.

24 ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುವುದು ವಿಶ್ವಾಸದಿಂದ ಮಾತ್ರವಲ್ಲ, ವಿಶ್ವಾಸವು ಸತ್ಕ್ರಿಯೆಗಳೊಡನೆ ಬೆರೆತಾಗ ಮಾತ್ರ ಎಂಬುದು ನಿಮಗೆ ತಿಳಿದಿರಲಿ.

25 ಇದೇ ರೀತಿಯಾಗಿ ರಹಾಬಳೆಂಬ ಜಾರಿಣಿ ಗೂಢಚಾರರನ್ನು ತನ್ನ ಮನೆಗೆ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಸಾಗಕಳುಹಿಸಿದಳು. ಈ ಸತ್ಕ್ರಿಯೆಯಿಂದಲೇ ದೇವರೊಡನೆ ನೀತಿಯುತ ಸಂಬಂಧವನ್ನು ಪಡೆದಳು.

26 ಆತ್ಮವಿಲ್ಲದ ದೇಹವು ಸತ್ತದ್ದು; ಸತ್ಕ್ರಿಯೆಗಳಿಲ್ಲದ ವಿಶ್ವಾಸವೂ ಸತ್ತದ್ದೇ ಸರಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು