ಮೀಕ 7 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲಿನ ಕೊರಗು 1 ಅಯ್ಯೋ, ನನ್ನ ಗತಿ ಏನೆಂದು ಹೇಳಲಿ? ಬೇಸಿಗೆಯಲ್ಲಿ ಬೆಳೆಯನ್ನು ಕೊಯ್ಯಲು ಬಂದವನಂತೆ ಇದ್ದೇನೆ. ಹಕ್ಕಲನ್ನು ಆಯ್ದ ಮೇಲೆ ದ್ರಾಕ್ಷಿಹಣ್ಣನ್ನು ಕೊಯ್ಯಲು ಬಂದವನಂತೆ ಇದ್ದೇನೆ. ತಿನ್ನುವುದಕ್ಕೆ ಒಂದು ಗೊಂಚಲು ಸಹ ಉಳಿದಿಲ್ಲ. ನನಗೆ ಇಷ್ಟವಾದ ದೋರೆ ಅಂಜೂರ ಕೂಡ ಸಿಕ್ಕುತ್ತಿಲ್ಲ. 2 ನಾಡಿನಲ್ಲಿ ದೈವಭಕ್ತರೆಲ್ಲರು ನಾಶವಾದರು; ಸಜ್ಜನರಾರೂ ಉಳಿದಿಲ್ಲ. ಇರುವವರು ಬಲೆಯೊಡ್ಡಿ ಒಬ್ಬರನ್ನೊಬ್ಬರು ಬೇಟೆಯಾಡುತ್ತಾರೆ. ರಕ್ತಪಾತಕ್ಕಾಗಿ ಹೊಂಚುಹಾಕುತ್ತಾರೆ. 3 ದುಷ್ಕೃತ್ಯಗಳನ್ನು ಮಾಡುವುದರಲ್ಲಿ ಅವರದು ನುರಿತ ಕೈ. ಅಧಿಕಾರಿಗಳು ಮತ್ತು ನ್ಯಾಯಾಧಿಪತಿಗಳು ಲಂಚಕ್ಕಾಗಿ ಕೈಯೊಡ್ಡುತ್ತಾರೆ. ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ಅಂತರಂಗದ ದುರಾಸೆಯನ್ನು ವ್ಯಕ್ತಪಡಿಸುತ್ತಾರೆ. ಎಲ್ಲರು ಒಟ್ಟಿಗೆ ಸೇರಿ ಒಳಸಂಚುಮಾಡುತ್ತಾರೆ. 4 ಅವರಲ್ಲಿ ಅತ್ಯುತ್ತಮನಾದವನೂ ಮುಳ್ಳಿನ ಪೊದೆಗೆ ಸಮಾನ. ಸತ್ಯವಂತನೂ ಮುಳ್ಳುಬೇಲಿಗಿಂತ ಕಡೆ. ಜನರ ದಂಡನೆಯ ದಿನ ಸಮೀಪಿಸಿದೆ. ಅವರ ಕಾವಲುಗಾರರಾದ ಪ್ರವಾದಿಗಳು ಮುಂತಿಳಿಸಿದ ಕಾಲ ಬಂದಿದೆ. ಜನರೆಲ್ಲರು ದಿಗ್ಭ್ರಾಂತರಾಗುವರು. 5 ನೆರೆಯವನನ್ನು ನಂಬಬೇಡ, ಆಪ್ತನಲ್ಲಿ ಭರವಸೆ ಇಡಬೇಡ. ನಿನ್ನೊಡನೆ ಮಲಗುವ ಮಡದಿಯೊಂದಿಗೂ ಬಾಯಿಬಿಡಬೇಡ. 6 ಮಗನು ತಂದೆಯನ್ನು ತುಚ್ಛೀಕರಿಸುವನು; ಮಗಳು ತಾಯಿಗೆ ಎದುರಾಗಿರುವಳು; ಸೊಸೆ ಅತ್ತೆಯೊಂದಿಗೆ ಜಗಳವಾಡುವಳು. ಹೀಗೆ ಮನುಷ್ಯನಿಗೆ ತನ್ನ ಮನೆಯವರೇ ವೈರಿಗಳಾಗುವರು. 7 ನಾನಾದರೋ ಸರ್ವೇಶ್ವರನ ಕಡೆಗೆ ಕಣ್ಣೆತ್ತಿ ನೋಡುವೆನು. ನನ್ನ ಉದ್ಧಾರಕ ದೇವರನ್ನು ನಿರೀಕ್ಷಿಸಿಕೊಂಡಿರುವೆನು. ನನ್ನ ದೇವರು ನನಗೆ ಕಿವಿಗೊಡುವರು. ಸರ್ವೇಶ್ವರನಿಂದ ಜೀವೋದ್ಧಾರ 8 ನನ್ನ ಶತ್ರುಗಳೇ, ನನ್ನನ್ನು ನೋಡಿ ಹಿಗ್ಗಬೇಡಿ. ನಾನು ಬಿದ್ದುಹೋದರೂ, ಎದ್ದೇಳುವೆನು; ಕತ್ತಲೆಯಲ್ಲಿ ಕುಳಿತಿದ್ದರೂ ಸರ್ವೇಶ್ವರ ನನಗೆ ಬೆಳಕಾಗುವರು. 9 ಆ ಸ್ವಾಮಿಗೆ ವಿರುದ್ಧ ನಾನು ಪಾಪಮಾಡಿದ್ದರಿಂದ ಅವರ ಕೋಪವನ್ನು ನಾನು ಸಹಿಸಿಕೊಳ್ಳಬೇಕಾಗುತ್ತದೆ. ಅವರು ನನ್ನ ಪರವಾಗಿ ವಾದಿಸಿ ನನಗಾದ ಅನ್ಯಾಯವನ್ನು ನೀಗಿಸುವರು; ನನ್ನನ್ನು ಕತ್ತಲೆಯಿಂದ ಬೆಳಕಿಗೆ ತರುವರು. ಅವರಿಂದ ಬರುವ ರಕ್ಷಣಾನೀತಿಯನ್ನು ಆಗ ಸವಿಯುವೆನು. 10 ಇದನ್ನು ನನ್ನ ಶತ್ರುಗಳು ನೋಡುವರು. “ನಿನ್ನ ದೇವರಾದ ಸರ್ವೇಶ್ವರನೆಲ್ಲಿ?” ಎಂದು ನನ್ನನ್ನು ಜರೆದವರೇ ನಾಚಿಕೆಪಡುವರು. ಇದನ್ನು ನಾನು ಕಣ್ಣಾರೆ ಕಾಣುವೆನು. ಆ ಶತ್ರುಗಳಾದರೋ ಬೀದಿಯ ಕಸದಂತೆ ದಾರಿಹೋಕರ ತುಳಿತಕ್ಕೆ ಈಡಾಗುವರು. 11 ಜೆರುಸಲೇಮಿನ ನಿವಾಸಿಗಳೇ, ನಿಮ್ಮ ಕೋಟೆಯ ಗೋಡೆಗಳನ್ನು ಮರಳಿ ಎಬ್ಬಿಸುವ ದಿನ ಬರುವುದು. ಅಂದು ನಿಮ್ಮ ಗಡಿಯ ವಿಸ್ತರಣೆ ಆಗುವುದು. 12 ಅಂದು ಜನರು ಅಸ್ಸೀರಿಯದಿಂದಲೂ ಈಜಿಪ್ಟಿನಿಂದಲೂ ನಿಮ್ಮ ಬಳಿಗೆ ಬಂದು ಸೇರುವರು. ಸಮುದ್ರದಿಂದ ಸಮುದ್ರದವರೆಗೂ ಪರ್ವತದಿಂದ ಪರ್ವತದವರೆಗೂ ಈಜಿಪ್ಟಿನಿಂದ ಯೂಫ್ರೆಟಿಸ್ ನದಿಯವರೆಗೂ ಚದರಿಹೋಗಿರುವ ಜನರೆಲ್ಲರು ನಿನ್ನೆಡೆಗೆ ಬರುವರು. 13 ಆದರೆ ನಾಡು ಅದರ ನಿವಾಸಿಗಳ ನಿಮಿತ್ತ ಹಾಗೂ ಅವರ ದುಷ್ಕೃತ್ಯಗಳ ಪರಿಣಾಮವಾಗಿ, ಮರಳುಗಾಡಾಗಿ ಮಾರ್ಪಡುವುದು. ಇಸ್ರಯೇಲರ ಮೇಲೆ ದೇವರ ಕರುಣೆ 14 ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. 15 ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. 16 ಅನ್ಯರಾಷ್ಟ್ರಗಳು ಇವನ್ನು ನೋಡಿ ಅವುಗಳ ಮುಂದೆ ತಮ್ಮ ಶಕ್ತಿಸಾಮರ್ಥ್ಯ ಏನೂ ಇಲ್ಲವೆಂದು ನಾಚಿಕೆಪಟ್ಟು ಬಾಯಮೇಲೆ ಕೈಯಿಟ್ಟುಕೊಳ್ಳುವರು; ಅವರ ಕಿವಿ ಕಿವುಡಾಗುವುದು. 17 ನೆಲದ ಮೇಲೆ ಹರಿದಾಡುವ ಹಾವುಹಲ್ಲಿಗಳಂತೆ ಅವರು ಮಣ್ಣು ಮುಕ್ಕುವರು; ಗಡಗಡನೆ ನಡುಗುತ್ತಾ ಬಿಲದಿಂದ ಈಚೆ ಬರುವರು. ಸರ್ವೇಶ್ವರ ಎಂಬ ನಮ್ಮ ದೇವರಾದ ನಿಮ್ಮ ಕಡೆಗೆ ಭಯಭಕ್ತಿಯಿಂದ ತಿರುಗಿಕೊಳ್ಳುವರು. 18 ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. 19 ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. 20 ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India