ಮೀಕ 5 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲರನ್ನು ರಕ್ಷಿಸುವ ರಾಜ 1 ಸಿಯೋನ್ ನಗರಿಯೇ, ನಿನ್ನ ಸೇನಾವ್ಯೂಹಗಳನ್ನು ಒಟ್ಟುಗೂಡಿಸು. ಇಗೋ, ಶತ್ರುಗಳು ನಮಗೆ ಮುತ್ತಿಗೆಹಾಕಿದ್ದಾರೆ. ಅವರು ಇಸ್ರಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು! 2 ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು. 3 ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು. 4 ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು. ಬಿಡುಗಡೆ - ದಂಡನೆ 5 ಆತನೇ ನಮಗೆ ಶಾಂತಿದಾತನು, ಅಸ್ಸೀರಿಯದವರು ನಮ್ಮ ಮೇಲೆ ದಾಳಿಮಾಡಿ ಆಕ್ರಮಣ ಮಾಡುವಾಗ, ಅವರಿಗೆ ವಿರುದ್ಧ ಏಳುಮಂದಿ ಪಾಲಕರನ್ನು ಹಾಗೂ ಎಂಟುಮಂದಿ ಪುರುಷೋತ್ತಮರನ್ನು ನೇಮಿಸುವೆನು. 6 ಅಸ್ಸೀರಿಯದವರು ಇವರ ಶಸ್ತ್ರಾಸ್ತ್ರಗಳಿಗೆ ತುತ್ತಾಗುವರು. ನಿಮ್ರೋದ್ ಸೀಮೆಯ ಪ್ರವೇಶದ್ವಾರಗಳು ಧ್ವಂಸವಾಗುವುವು. ಅಸ್ಸೀರಿಯದವರು ನಮ್ಮ ನಾಡಿಗೆ ನುಗ್ಗಿ ನಮ್ಮ ಕೋಟೆಯನ್ನು ಆಕ್ರಮಿಸುವಾಗ, ಆ ಶಾಂತಿದಾತನು ನಮ್ಮನ್ನು ರಕ್ಷಿಸುವನು. 7 ಸರ್ವೇಶ್ವರಸ್ವಾಮಿಯ ಕೃಪೆಯಿಂದ ಇಬ್ಬನಿಯೂ ತುಂತುರುಮಳೆಯೂ ಮಾನವನ ನೆರವನ್ನು ನಿರೀಕ್ಷಿಸದೆ, ಹುಲ್ಲನ್ನು ಸಮೃದ್ಧಿಗೊಳಿಸುತ್ತವೆ. ಅಂತೆಯೇ ಯಕೋಬನ ಅಳಿದುಳಿದ ವಂಶದವರು ಹಲವಾರು ಜನಾಂಗಗಳ ಮಧ್ಯೆ ನೆಲಸಿ, ಅವರ ಅಭ್ಯುದಯಕ್ಕೆ ಕಾರಣರಾಗುವರು. 8 ಸಿಂಹವು ತಿರುಗಾಡುತ್ತಾ ಕಾಡುಮೃಗಗಳನ್ನು ಕಬಳಿಸುತ್ತದೆ. ಪ್ರಾಯದ ಸಿಂಹವು ಓಡಾಡುತ್ತಾ ಸುರಕ್ಷಣೆಯಿಲ್ಲದ ಕುರಿಮಂದೆಗಳನ್ನು ಸೀಳಿಹಾಕುತ್ತದೆ. ಅಂತೆಯೇ ಯಕೋಬನ ಅಳಿದುಳಿದ ಜನರು ದೇಶವಿದೇಶಗಳ ಹಲವಾರು ರಾಷ್ಟ್ರಗಳ ನಡುವೆ ನಾಶಕರವಾಗಿರುವರು. 9 ಯಕೋಬ ವಂಶಜರೇ, ನಿಮ್ಮ ಎದುರಾಳಿಗಳ ಮೇಲೆ ನಿಮಗೆ ಜಯ ಲಭಿಸಲಿ. ನಿಮ್ಮ ಶತ್ರುಗಳೆಲ್ಲಾ ನಿರ್ಮೂಲವಾಗಲಿ. 10 ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಂದು ಕುದುರೆಗಳನ್ನು ಕಡಿದುಬಿಡುವೆನು. ನಿಮ್ಮ ರಥಗಳನ್ನು ಧ್ವಂಸಮಾಡುವೆನು. 11 ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು; ನಿಮ್ಮ ಕೋಟೆಕೊತ್ತಲಗಳನ್ನು ಕೆಡವಿಬಿಡುವೆನು. 12 ನಿನ್ನ ನುರಿತ ಮಂತ್ರತಂತ್ರಗಳನ್ನು ನಿಲ್ಲಿಸಿಬಿಡುವೆನು. ನಿನ್ನ ಮಂತ್ರವಾದಿಗಳನ್ನು ನಿರ್ಮೂಲಮಾಡುವೆನು. 13 ನೀನು ಕೆತ್ತಿದ ವಿಗ್ರಹಗಳನ್ನು ಒಡೆದುಹಾಕಿ, ನೀನು ನಿಲ್ಲಿಸಿದ ಕಲ್ಲುಕಂಬಗಳನ್ನು ಉರುಳಿಸಿಬಿಡುವೆನು. ನಿನ್ನ ಕೈಗೆಲಸವಾದ ವಿಗ್ರಹಗಳನ್ನು ನೀನು ಪೂಜಿಸದಂತೆ ಮಾಡುವೆನು. 14 ನಿನ್ನ ಆಶೇರಾ ದೇವತೆಯ ವಿಗ್ರಹಗಳನ್ನು ಕಿತ್ತೊಗೆದು, ನಿನ್ನ ಪಟ್ಟಣಗಳನ್ನು ನೆಲಸಮ ಮಾಡುವೆನು. 15 ನನ್ನ ಮಾತನ್ನು ಕೇಳದ ರಾಷ್ಟ್ರಗಳಿಗೆ ಉಗ್ರಕೋಪದಿಂದ ಮುಯ್ಯಿತೀರಿಸುವೆನು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India