Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮೀಕ 4 - ಕನ್ನಡ ಸತ್ಯವೇದವು C.L. Bible (BSI)


ಶಾಂತಿಯುತ ರಾಜ್ಯ
( ಯೆಶಾ. 2:1-4 )

1 ಕಾಲಾಂತ್ಯದೊಳು ಸರ್ವೇಶ್ವರನ ದೇವಾಲಯವಿರುವ ಪರ್ವತ ಬೆಳೆದು ನೆಲೆಗೊಳ್ಳುವುದು ಸರ್ವ ಪರ್ವತಗಳಿಗಿಂತ ಉನ್ನತೋನ್ನತ ಹರಿದು ಬರುವುವಾಗ ಜನಾಂಗಗಳು ಪ್ರವಾಹದಂತೆ ಅದರತ್ತ.

2 ಈ ಪರಿ ಬಂದ ಹಲವು ನಾಡಿಗರು ಪೇಳ್ವರು ಜನರಿಗೆ; ಬನ್ನಿ, ಹೋಗೋಣ, ಸರ್ವೇಶ್ವರನ ಪರ್ವತಕೆ ಯಕೋಬ್ಯರಾ ದೇವರ ಮಂದಿರಕೆ. ಬೋಧಿಸುವನಾತ ತನ್ನ ಮಾರ್ಗವನು ನಮಗೆ ನಡೆಯುವೆವು ನಾವು ಆತನ ದಾರಿಗನುಗುಣವಾಗ್ಗೆ. ಬರುವುದು ಧರ್ಮೋಪದೇಶ ಸಿಯೋನಿಂದ ಸರ್ವೇಶ್ವರನಾ ವಾಕ್ಯ ಜೆರುಸಲೇಮಿನಿಂದ.

3 ಬಗೆಹರಿಸುವನಾತ ಹಲವು ರಾಷ್ಟ್ರಗಳಾ ವ್ಯಾಜ್ಯವನು ತೀರಿಸುವನು ಪ್ರಬಲ ಜನಾಂಗಗಳಿಗೆ ನ್ಯಾಯವನು. ಹಾಕುವರವರು ಕುಲುಮೆಗೆ ತಮ್ಮ ಕತ್ತಿಗಳನು ಮಾರ್ಪಡಿಸುವರು ಅವುಗಳನ್ನು ಗುಳಗಳನ್ನಾಗಿ ಭರ್ಜಿಗಳನ್ನೂ ಕುಡುಗೋಲುಗಳನ್ನಾಗಿ.

4 ನಿಲ್ಲದು ರಾಷ್ಟ್ರಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ ಅವಶ್ಯವಿರದವಕ್ಕೆ ಯುದ್ಧವಿದ್ಯೆಯ ಕಲಿಕೆ. ಕೂರುವರು ಪ್ರತಿಯೋರ್ವರು ತಂತಮ್ಮ ದ್ರಾಕ್ಷಾಲತೆಗಳಡಿಯಲೆ ಕೂರುವರವರು ತಂತಮ್ಮ ಅಂಜೂರ ಗಿಡಗಳ ನೆರಳಲೆ ಈ ಪರಿ ನುಡಿದಿಹನು ಸೇನಾಧೀಶ್ವರನಾದ ಸರ್ವೇಶ್ವರನೆ.

5 ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ನಾಮಸ್ಮರಣೆಮಾಡಿ, ಅದರಂತೆ ನಡೆದುಕೊಳ್ಳುತ್ತಾರೆ. ನಾವಾದರೋ ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ನಾಮವನ್ನು ಸ್ಮರಿಸಿ ಅದಕ್ಕನುಗುಣವಾಗಿ ಸದಾಕಾಲವೂ ನಡೆದುಕೊಳ್ಳುವೆವು.


ಸಿಯೋನಿನ ಪುನರ್‍ಸ್ಥಾಪನೆ

6 ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನಗಳಲ್ಲಿ ನಾನು ಅಂಗಹೀನರಾದವರನ್ನು ಒಟ್ಟುಗೂಡಿಸುವೆನು. ಹೊರದೂಡಲಾದವರನ್ನು ಮತ್ತು ಸಂಕಟಕ್ಕೆ ಈಡಾದವರನ್ನು‍ ಒಂದಾಗಿ ಸೇರಿಸುವೆನು.

7 ಅಂಗಹೀನ ಜನರನ್ನು ಉದ್ಧರಿಸಿ ಕಾಪಾಡುವೆನು. ಹೊರದೂಡಲಾದ ಪ್ರಜೆಯನ್ನು ಪ್ರಬಲ ರಾಷ್ಟ್ರವನ್ನಾಗಿ ಮಾಡುವೆನು. ಸರ್ವೇಶ್ವರ ಸಿಯೋನ್ ಪರ್ವತದಲ್ಲಿ ಇಂದಿನಿಂದ ಎಂದೆಂದಿಗೂ ಅವರಿಗೆ ಅರಸರಾಗಿರುವರು.”

8 ಜೆರುಸಲೇಮೇ, ಮಂದೆಗೆ ರಕ್ಷೆಕೊಡುವ ಗೋಪುರವೇ, ಸಿಯೋನ್ ಕುವರಿಯ ಸುಭದ್ರಕೋಟೆಯೇ, ಹಿಂದಿನ ಆಡಳಿತ ನಿನಗೆ ಮರಳಿ ಲಭಿಸುವುದು. ಪ್ರಾಚೀನ ರಾಜ್ಯಾಧಿಕಾರ ಪುನಃ ನಿನಗೆ ದೊರಕುವುದು.

9 ನೀನೀಗ ರೋದಿಸುವುದೇಕೆ? ಪ್ರಸವವೇದನೆ ಪಡುವವಳಂತೆ ನರಳುವುದೇಕೆ? ನಿನಗೆ ರಾಜನಿಲ್ಲವೇ? ನಿನ್ನ ಸಲಹೆಗಾರ ಸತ್ತುಹೋದನೇ?

10 ಸಿಯೋನ್ ಕುವರಿಯೇ, ಪ್ರಸವವೇದನೆಯಿಂದ ನರಳಾಡು; ಪಟ್ಟಣವನ್ನು ಬಿಟ್ಟು, ಬಯಲಿನಲ್ಲಿ ವಾಸಮಾಡು. ಬಾಬಿಲೋನಿಗೆ ತೆರಳು. ಅಲ್ಲೇ ನಿನಗೆ ಉದ್ಧಾರವಾಗುವುದು. ಅಲ್ಲೇ ನಿನ್ನ ಶತ್ರುಗಳಿಂದ ಸರ್ವೇಶ್ವರ ಬಿಡುಗಡೆ ಮಾಡುವರು.

11 ಹಲವು ರಾಷ್ಟ್ರಗಳು ನಿನಗೆ ವಿರುದ್ಧ ಕೂಡಿಬಂದು: “ಜೆರುಸಲೇಮನ್ನು ಹೊಲಸುಮಾಡೋಣ, ‘ಸಿಯೋನಿನ ನಾಶವನ್ನು ಕಣ್ಣಾರೆ ನೋಡೋಣ’ ಎನ್ನುತ್ತಿವೆ.

12 ಆದರೆ ಸರ್ವೇಶ್ವರಸ್ವಾಮಿಯ ಆಲೋಚನೆಗಳನ್ನು ಅವರು ಅರಿತುಕೊಂಡಿಲ್ಲ. ಆ ಸ್ವಾಮಿಯ ಉದ್ದೇಶವನ್ನು ಅವರು ಗ್ರಹಿಸಿಕೊಂಡಿಲ್ಲ; ಕಣಕ್ಕೆ ಹಾಕಿದ ಕಂತೆಗಳಂತೆ ಅವರನ್ನು ಸ್ವಾಮಿ ಸೇರಿಸಿದ್ದಾರೆ ಎಂಬುದನ್ನು ಅವರು ಅರ್ಥೈಸಿಕೊಂಡಿಲ್ಲ.”

13 ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನ್ ನಗರಿಯೇ, ಎದ್ದು ಒಕ್ಕಣೆಮಾಡು. ಇದಕ್ಕಾಗಿ ನಿನ್ನ ಕೊಂಬನ್ನು ಕಬ್ಬಿಣವಾಗಿಸುವೆನು. ನಿನ್ನ ಗೊರಸನ್ನು ಕಂಚನ್ನಾಗಿ ಮಾಡುವೆನು. ಅನೇಕ ರಾಷ್ಟ್ರಗಳನ್ನು ನೀನು ತುಳಿದು ಧ್ವಂಸಮಾಡುವೆ. ಅವುಗಳನ್ನು ಕೊಳ್ಳೆಹೊಡೆದು ತಂದ ಸ್ವತ್ತನ್ನು ಸರ್ವೇಶ್ವರಸ್ವಾಮಿಗೆ ಮೀಸಲಾಗಿಡುವೆ. ಅವುಗಳಿಂದ ಬಂದ ಆಸ್ತಿಯನ್ನು ಲೋಕದೊಡೆಯನಿಗೆ ಪ್ರತ್ಯೇಕಿಸಿಡುವೆ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು