ಮೀಕ 3 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲಿನ ಮುಖಂಡರ ಖಂಡನೆ 1 ಆಗ ನಾನು ಇಂತೆಂದೆನು: “ಯಕೋಬ ವಂಶದ ಮುಖಂಡರೇ, ಇಸ್ರಯೇಲ್ ವಂಶದ ಅಧಿಪತಿಗಳೇ, ಕಿವಿಗೊಟ್ಟು ಕೇಳಿರಿ. ನ್ಯಾಯನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೆ? 2 ಆದರೂ ನೀವು ಒಳಿತನ್ನು ದ್ವೇಷಿಸುತ್ತೀರಿ. ಕೆಟ್ಟದ್ದನ್ನು ಬಯಸುತ್ತೀರಿ. ನನ್ನ ಜನರ ಚರ್ಮವನ್ನು ಜೀವಸಹಿತ ಸುಲಿಯುತ್ತೀರಿ. ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ತಿನ್ನುತ್ತೀರಿ. 3 ನನ್ನ ಪ್ರಜೆಯ ಮೈ ಚರ್ಮವನ್ನು ಸುಲಿಯುವುದಲ್ಲದೆ ಅವರ ಎಲುಬುಗಳನ್ನು ಮುರಿದುಹಾಕುತ್ತೀರಿ. ಹಂಡೆಯಲ್ಲಿನ ತುಂಡುಗಳಂತೆ, ಆವಿಗೆಯಲ್ಲಿನ ಮಾಂಸದ ಚೂರುಗಳಂತೆ ನನ್ನ ಪ್ರಜೆಯನ್ನು ಚೂರುಚೂರಾಗಿ ಕತ್ತರಿಸಿಹಾಕಿದ್ದೀರಿ. 4 ಇಷ್ಟೆಲ್ಲಾ ಮಾಡಿದಂಥ ನೀವು ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತೀರಿ. ಆದರೆ ಅವರು ನಿಮಗೆ ಉತ್ತರಕೊಡುವುದಿಲ್ಲ. ಬದಲಿಗೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನಿಮಗೆ ವಿಮುಖರಾಗುವರು.” 5 ಜನರನ್ನು ಸನ್ಮಾರ್ಗದಿಂದ ದುರ್ಮಾರ್ಗಕ್ಕೆ ಎಳೆಯುವ ಪ್ರವಾದಿಗಳಿಗೆ ತಿನ್ನಲು ಏನಾದರೂ ಕೊಟ್ಟರೆ “ಶಾಂತಿ” ಎನ್ನುತ್ತಾರೆ. ಆದರೆ ತಿನ್ನಲು ಯಾರಾದರೂ ಕೊಡದಿದ್ದರೆ ಯುದ್ಧದ ಬೆದರಿಕೆ ಹಾಕುತ್ತಾರೆ. 6 ಅಂಥ ಪ್ರವಾದಿಗಳಿಗೆ ಸರ್ವೇಶ್ವರ: “ಅಂಧಕಾರ ನಿಮ್ಮನ್ನು ಆವರಿಸುವುದು. ದಿವ್ಯದರ್ಶನ ನಿಮಗೆ ದೊರಕದು. ನಿಮಗೆ ಕತ್ತಲು ಕವಿದಂತಾಗಿ ಕಣಿಹೇಳಲು ಸಾಧ್ಯವಾಗದು. ಸೂರ್ಯ ನಿಮ್ಮ ಪಾಲಿಗೆ ಮುಳುಗಿದಂತೆಯೇ, ಹಗಲು ನಿಮಗೆ ಕಾರ್ಗತ್ತಲೆಯಂತೆಯೆ.” 7 ಹೀಗಾಗಿ ದಿವ್ಯದರ್ಶಿಗಳಿಗೆ ಅವಮಾನವಾಗುವುದು. ಕಣಿ ಹೇಳುವವರಿಗೆ ನಾಚಿಕೆಯಾಗುವುದು. ಅವರೆಲ್ಲರೂ ಬಟ್ಟೆಯಿಂದ ಬಾಯಿ ಮುಚ್ಚಿಕೊಳ್ಳಬೇಕಾಗುವುದು. ಕಾರಣ, ಅವರಿಗೆ ದೇವರಿಂದ ಯಾವ ಪ್ರತ್ಯುತ್ತರವೂ ಬರದು. 8 ನಾನಾದರೋ ಸರ್ವೇಶ್ವರಸ್ವಾಮಿಯ ಆತ್ಮಪ್ರೇರಣೆಯಿಂದ, ಅವರ ಬಲಪರಾಕ್ರಮದಿಂದ, ನ್ಯಾಯನೀತಿಯಿಂದ ತುಂಬಿದವನು. ಯಕೋಬ ವಂಶಕ್ಕೆ ಅದರ ದ್ರೋಹವನ್ನು, ಇಸ್ರಯೇಲ್ ವಂಶಕ್ಕೆ ಅದರ ಪಾಪವನ್ನು ಪ್ರಕಟಿಸಲು ಸಮರ್ಥನು. 9 ನ್ಯಾಯಕ್ಕೆ ಹೇಸಿ, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಕೋಬ ವಂಶದ ಮುಖಂಡರೆ, ಇಸ್ರಯೇಲ್ ವಂಶದ ಅಧಿಪತಿಗಳೇ, ಗಮನಿಸಿರಿ. 10 ಸಿಯೋನನ್ನು ನರಹತ್ಯೆಯಿಂದ, ಜೆರುಸಲೇಮನ್ನು ಅನ್ಯಾಯದಿಂದ ಕಟ್ಟುತ್ತಿರುವ ನೀವು ಕಿವಿಗೊಟ್ಟು ಕೇಳಿರಿ. 11 ನಿಮ್ಮ ಮುಖಂಡರು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ. ನಿಮ್ಮ ಯಾಜಕರು ಸಂಬಳಕ್ಕಾಗಿ ಉಪದೇಶಮಾಡುತ್ತಾರೆ. ಆದರೂ ಸರ್ವೆಶ್ವರಸ್ವಾಮಿಯ ಮೇಲೆ ಭಾರಹಾಕಿದವರಂತೆ, “ಸ್ವಾಮಿ ನಮ್ಮೊಡನೆ ಇಲ್ಲವೆ? ನಮಗೆ ಕೇಡು ಸಂಭವಿಸುವುದಾದರೂ ಹೇಗೆ?” ಎಂದುಕೊಳ್ಳುತ್ತಾರೆ. 12 ಆದುದರಿಂದ ನಿಮ್ಮ ದೆಸೆಯಿಂದಲೇ ಸಿಯೋನ್ ಪಟ್ಟಣವನ್ನು ಹೊಲದಂತೆ ಉಳಲಾಗುವುದು. ಜೆರುಸಲೇಮ್ ನಗರ ಹಾಳುದಿಬ್ಬವಾಗುವುದು. ದೇವಾಲಯದ ಪರ್ವತ ಕಾಡುಗುಡ್ಡದಂತಾಗುವುದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India