Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮೀಕ 2 - ಕನ್ನಡ ಸತ್ಯವೇದವು C.L. Bible (BSI)


ಬಡವರನ್ನು ಗೋಳಿಡಿಸುವವರ ದುರ್ಗತಿ

1 ತಮ್ಮ ಹಾಸಿಗೆಯಲ್ಲೇ ಕುತಂತ್ರವನ್ನು ಕಲ್ಪಿಸಿಕೊಂಡು ಕೇಡನ್ನು ಬಗೆಯುವವರಿಗೆ ಧಿಕ್ಕಾರ! ಬೆಳಗಾದದ್ದೇ ಅವರು ಕುತಂತ್ರವನ್ನು ಕಾರ್ಯಗತ ಮಾಡುತ್ತಾರೆ. ಆ ಸಾಮರ್ಥ್ಯ ಅವರ ಕೈಯಲ್ಲಿದೆ.

2 ಇತರರ ಹೊಲಗದ್ದೆಗಳನ್ನು ದುರಾಸೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಅಂತೆಯೇ ಮನೆಗಳನ್ನು ಅಪಹರಿಸುತ್ತಾರೆ. ಈ ರೀತಿಯಲ್ಲಿ ಮನೆಯನ್ನೂ ಮಾಲೀಕನನ್ನೂ ಸ್ವತ್ತನ್ನೂ ಹಕ್ಕುದಾರನನ್ನೂ ತುಳಿದುಬಿಡುತ್ತಾರೆ.

3 ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಈ ಪೀಳಿಗೆಯ ಮೇಲೆ ನಾನೇ ವಿನಾಶವನ್ನು ಬರಮಾಡುತ್ತೇನೆ. ಆ ಕೇಡಿನಿಂದ ನೀವು ತಲೆತಪ್ಪಿಸಿಕೊಳ್ಳಲಾರಿರಿ. ತಲೆಯೆತ್ತಿ ನಡೆಯಲು ನಿಮಗೆ ಸಾಧ್ಯವಾಗದು. ಕಾಲವು ಅಷ್ಟು ಹದಗೆಟ್ಟಿರುವುದು.

4 ಆ ದಿನದಲ್ಲಿ ಜನರು ನಿಮ್ಮ ಬಗ್ಗೆ ಪರಿಹಾಸ್ಯಮಾಡಿ, ಲಾವಣಿ ಕಟ್ಟುವರು. “ಅಯ್ಯೋ, ಸಂಪೂರ್ಣವಾಗಿ ಸೂರೆಹೋದೆವಲ್ಲಾ. ಸ್ವಾಮಿ ನಮ್ಮ ಜನರ ಸ್ವತ್ತನ್ನು ಪರಾಧೀನ ಮಾಡಿಬಿಟ್ಟಿರಲ್ಲಾ. ಅಕಟಾ, ನಮ್ಮ ಹೊಲಗದ್ದೆಗಳನ್ನು ಕಸಿದುಕೊಂಡು ದೇವದ್ರೋಹಿಗಳಿಗೆ ಹಂಚಿಕೊಟ್ಟರಲ್ಲಾ!” ಎಂದು ರೋದಿಸುವರು.

5 ಹೀಗಿರಲು ನೂಲೆಳೆದು ಭೂಮಿಯನ್ನು ಹಂಚಿಕೊಡಲು ಸ್ವಾಮಿಯ ಸಭೆಯಲ್ಲಿ ಯಾರೂ ಇರುವುದಿಲ್ಲ.

6 ಆಗ ಆ ಕೆಡುಕರು, “ಪ್ರವಾದನೆ ಮಾಡಬೇಡ. ಇಂಥ ವಿಷಯಗಳಲ್ಲಿ ಪ್ರವಾದನೆಯ ಮಾತೆತ್ತಕೂಡದು. ಆ ವಿನಾಶ ನಮಗೆ ತಟ್ಟುವುದಿಲ್ಲ.

7 ಯಕೋಬ ವಂಶವು ಶಾಪಗ್ರಸ್ತವಾಗಲು ಸಾಧ್ಯವೆ? ಸರ್ವೇಶ್ವರ ತಾಳ್ಮೆಗೆಡುವುದುಂಟೆ? ಇಂಥ ಕೃತ್ಯಗಳನ್ನು ಅವರು ಮಾಡಿಯಾರೆ? ಸನ್ಮಾರ್ಗದಲ್ಲಿ ನಡೆಯುವವರಿಗೆ ಸ್ವಾಮಿಯ ವಾಕ್ಯ ಒಳಿತನ್ನುಂಟುಮಾಡುವುದಿಲ್ಲವೆ?” ಎನ್ನುವರು.

8 ಅದಕ್ಕೆ ಸರ್ವೇಶ್ವರ: “ಇತ್ತೀಚೆಗೆ ನನ್ನ ಜನರಿಗೆ ನೀವೇ ಶತ್ರುಗಳು. ಜಗಳಮಾಡಲು ಒಪ್ಪದೆ, ಸಮಾಧಾನದಿಂದ ತಿರುಗಾಡುವರ ಮೇಲಂಗಿಯನ್ನು ಕಸಿದುಕೊಳ್ಳುತ್ತೀರಿ.

9 ನನ್ನ ಜನಾಂಗಕ್ಕೆ ಸೇರಿದ ಮಹಿಳೆಯರನ್ನು ಪ್ರಿಯವಾದ ಅವರ ಗೃಹಗಳಿಂದ ಹೊರದಬ್ಬುತ್ತೀರಿ. ಅವರ ಹಸುಳೆಗಳಿಗೆ ನನ್ನ ಆಶೀರ್ವಾದ ಇನ್ನೆಂದಿಗೂ ಲಭಿಸದಂತೆ ಮಾಡುತ್ತೀರಿ.

10 ಎದ್ದು ತೊಲಗಿರಿ! ಇದು ನಿಮ್ಮ ನೆಮ್ಮದಿಯ ನೆಲೆಯಲ್ಲ. ನಿಮಗೆ ನಾಶವನ್ನು, ವಿಪರೀತ ನಾಶವನ್ನು ಉಂಟುಮಾಡುವ ಹೊಲಸು ಈ ನಾಡಿಗೆ ಅಂಟಿಕೊಂಡಿದೆ.

11 “ಗಾಳಿಮಾತಿನಿಂದ ಮೋಸಮಾಡುವಂಥ ಸುಳ್ಳುಗಾರನೊಬ್ಬನು: ‘ದ್ರಾಕ್ಷಾರಸ, ಮದ್ಯಪಾನಗಳ ಕುರಿತು ಪ್ರವಾದನೆ ಮಾಡುತ್ತೇನೆ, ಎಂದು ಹೇಳಿದರೆ ಅಂಥವನೇ ಈ ಜನರಿಗೆ ಸರಿಯಾದ ಪ್ರವಾದಿ ಎನಿಸಿಕೊಳ್ಳುವನು.

12 “ಯಕೋಬ ವಂಶಜರೇ, ನಾನು ನಿಮ್ಮನ್ನೆಲ್ಲಾ ಖಂಡಿತವಾಗಿ ಒಟ್ಟುಗೂಡಿಸುವೆನು. ಇಸ್ರಯೇಲಿನ ಅಳಿದುಳಿದ ಜನರನ್ನು ಸೇರಿಸಿಯೇ ಸೇರಿಸುವೆನು. ಹಟ್ಟಿಯಲ್ಲಿರುವ ಕುರಿಗಳಂತೆ ಅವರನ್ನು ಒಟ್ಟಿಗೆ ಸೇರಿಸುವೆನು. ಹುಲ್ಲುಗಾವಲಿನಲ್ಲಿರುವ ಕುರಿಮಂದೆಯಂತೆ ಒಂದುಗೂಡಿಸುವೆನು,” ಎನ್ನುತ್ತಾರೆ.

13 ಬಾಗಿಲನ್ನು ಒಡೆದು ತೆರೆಯುವಂಥವನು ಜನರ ಮುಂದಾಳಾಗಿ ಹೊರಡುವನು; ಅವರೂ ಬಾಗಿಲನ್ನು ಒಡೆದು ನುಗ್ಗುವರು; ಅವರ ಅರಸನು ಮುಂದಾಳಾಗಿ ಹೋಗುವನು. ಸರ್ವೇಶ್ವರಸ್ವಾಮಿಯೇ ಅವರ ಮುಂದಾಳತ್ವವನ್ನು ವಹಿಸುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು