ಮೀಕ 1 - ಕನ್ನಡ ಸತ್ಯವೇದವು C.L. Bible (BSI)1 ಯೋಥಾಮ, ಆಹಾಜ, ಹಿಜ್ಕೀಯ ಇವರು ಜುದೇಯದ ಅರಸರು. ಇವರ ಕಾಲದಲ್ಲಿ ಮೋರೆಷೆತ್ ಊರಿನವನಾದ ಮೀಕನಿಗೆ ಒಂದು ದೈವದರ್ಶನವಾಯಿತು. ಅದು ಸಮಾರ್ಯ ಮತ್ತು ಜೆರುಸಲೇಮನ್ನು ಕುರಿತದ್ದಾಗಿತ್ತು. ಜೆರುಸಲೇಮ್ ಬಗ್ಗೆ ಶೋಕ 2 ಕೇಳಿರಿ ಸರ್ವಜನಾಂಗಗಳೇ ಕಿವಿಗೊಡಿ ಬುವಿಯ ಸರ್ವನಿವಾಸಿಗಳೇ. 3 ಸಾಕ್ಷಿ ನುಡಿದಿಹನು ನಿಮ್ಮ ವಿರುದ್ಧ ಸರ್ವೇಶ್ವರ ಪವಿತ್ರಾಲಯದಿಂದ ಇಳಿದುಬರುತಿಹನಿದೋ ಸ್ವಾಮಿ ತನ್ನ ಆಸ್ಥಾನದಿಂದ ಜಗದ ಉನ್ನತ ಪ್ರದೇಶಗಳಲ್ಲಿ ಸಂಚರಿಸಲಿಹನಾತ. 4 ಬೆಂಕಿಗೆ ಕರಗುವ ಮೇಣದಂತೆ ಇಳಿಜಾರು ಪ್ರದೇಶದ ನೀರು ನೆಲವನ್ನು ಕೊರೆವಂತೆ ಕರಗಿಹೋಗುವುವು ಆತನ ಪಾದದಡಿ ಪರ್ವತಗಳು; ಸೀಳಿಹೋಗುವುವು ಕೊಲ್ಲಿಗಳು. 5 ಇದಕ್ಕೆಲ್ಲಾ ಕಾರಣ ಯಕೋಬನ ದ್ರೋಹ. ಇಸ್ರಯೇಲ್ ಮನೆತನದ ಪಾಪ. ಯಕೋಬನ ದ್ರೋಹಕ್ಕೆ ಕಾರಣ ಯಾವುದು? ಸಮಾರ್ಯ ಅಲ್ಲವೆ? ಜುದೇಯದ ವಿಗ್ರಹಾರಾಧನೆಯ ಸ್ಥಳ ಯಾವುದು? ಜೆರುಸಲೇಮ್ ಅಲ್ಲವೆ? 6 ಆದಕಾರಣ, “ನಾನು ಸಮಾರ್ಯವನ್ನು ಧೂಳಿನ ರಾಶಿಯನ್ನಾಗಿಯೂ ದ್ರಾಕ್ಷಾತೋಟಕ್ಕೆ ಒಳ್ಳೆಯ ಬಯಲನ್ನಾಗಿಯೂ ಮಾಡುವೆನು. ಕಲ್ಲುಹೆಂಟೆಗಳನ್ನು ಕಣಿವೆಗೆ ಸುರಿದುಬಿಡುವೆನು. ಅದರ ತಳಪಾಯವೇ ತೆರೆದು ಕಾಣುವಂತೆ ಮಾಡುವೆನು. 7 ಅದರಲ್ಲಿನ ಎರಕದ ಪ್ರತಿಮೆಗಳನ್ನು ಪುಡಿಪುಡಿ ಮಾಡುವೆನು. ಅದರ ಸಂಪಾದನೆಯೆಲ್ಲ ಅಗ್ನಿಗೆ ಆಹುತಿಯಾಗುವುದು. ಅದರ ವಿಗ್ರಹಗಳನ್ನೆಲ್ಲ ಹಾಳುಮಾಡುವೆನು. ಅವು ಸೂಳೆತನದಿಂದ ಸಂಪಾದನೆಯಾದುವು, ಸೂಳೆತನದ ಸಂಪಾದನೆಯಾಗಿಯೇ ಪರರ ಪಾಲಾಗುವುದು,” ಎಂದು ಸರ್ವೇಶ್ವರ ಹೇಳುತ್ತಾರೆ. 8 ಆಗ ಮೀಕನು: “ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು; ಬೆತ್ತಲೆಯಾಗಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವೆನು; ಗುಳ್ಳೆನರಿಗಳಂತೆ ಊಳಿಡುವೆನು, ಗೂಬೆಯಂತೆ ಘೂಂಕರಿಸುವೆನು. 9 ಸಮಾರ್ಯಕ್ಕೆ ಬಿದ್ದ ಪೆಟ್ಟು ಗಡುಸಾದುದು. ಅದು ಜುದೇಯಕ್ಕೂ ತಾಕಿದೆ. ಅದು ನನ್ನ ಊರಾದ ಜೆರುಸಲೇಮಿನ ಪುರದ್ವಾರವನ್ನು ಮುಟ್ಟಿದೆ,” ಎಂದನು. ಜೆರುಸಲೇಮಿಗೆ ಶತ್ರುವಿನ ಮುತ್ತಿಗೆ 10 ಈ ವಿಷಯವನ್ನು ಗಾತ್ ಊರಿನವರಿಗೆ ತಿಳಿಸಬೇಡಿ; ಅಳಲೂಬೇಡಿ. ಬೇತ್ಲೆಯಪ್ರದಲ್ಲಿ, ಧೂಳಿನಲ್ಲಿ ಬಿದ್ದು ಹೊರಳಾಡಿ. 11 ಶಾಫೀರಿನವರೇ, ಬೆತ್ತಲೆಯಾಗಿ ಲಜ್ಜೆಗೆಟ್ಟು ತೊಲಗಿರಿ. ಚಾನಾನಿನವರಿಗೆ ಹೊರಬರಲು ಧೈರ್ಯವಿಲ್ಲ. ಬೇತೇಲಿನವರ ಗೋಳಾಟ ಕೇಳಿಬಂದಾಗ, ಅಲ್ಲಿ ನಿಮಗೆ ಆಶ್ರಯವಿಲ್ಲವೆಂದು ಗೊತ್ತಾಗುವುದು. 12 ಮಾರೋತಿನ ನಿವಾಸಿಗಳು ತಮ್ಮ ಸಂಕಟ ಪರಿಹಾರವಾಗುವುದೋ ಇಲ್ಲವೋ ಎಂದು ವೇದನೆಪಡುತ್ತಾರೆ: ಏಕೆಂದರೆ ಸ್ವಾಮಿಯಿಂದ ಬಂದ ವಿಪತ್ತು ಜೆರುಸಲೇಮಿನ ಪುರದ್ವಾರವನ್ನು ಮುಟ್ಟಿದೆ. 13 ಲಾಕೀಷಿನ ನಿವಾಸಿಗಳೇ, ನಿಮ್ಮ ಕುದುರೆಗಳನ್ನು ರಥಕ್ಕೆ ಹೂಡಿರಿ. ನಿಮ್ಮ ಊರೇ ಸಿಯೋನ್ ನಗರದ ಪಾಪಕ್ಕೆ ಮೂಲ ಕಾರಣ. ಹೌದು, ಇಸ್ರಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಕಾಣಿಸಿಕೊಂಡವು. 14 ಆದಕಾರಣ ನೀವು ಮೋರೆತಷತ್‍ಗಾತ್ ಪಟ್ಟಣ ನಿವಾಸಿಗಳಿಗೆ ಕಪ್ಪಕಾಣಿಕೆಯಿತ್ತು ಬೀಳ್ಕೊಡಬೇಕಾಗುವುದು. ಇಸ್ರಯೇಲಿನ ಅರಸರಿಗೆ ಅಕ್ಜೀಬಿನ ಮನೆತನದವರಿಂದ ವಂಚನೆಯಾಗುವುದು. 15 ಮಾರೇಷದವರೇ, ಆಕ್ರಮಣಕಾರನೊಬ್ಬನನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಯೇಲಿನ ವೈಭವವು ಅದುಲ್ಲಾಮಿನ ಪಾಲಾಗುವುದು. 16 ಜುದೇಯದ ನಿವಾಸಿಗಳೇ, ನಿಮ್ಮ ಮಕ್ಕಳು ಅಗಲಿ ಸೆರೆಹೋಗಿದ್ದಾರೆ. ನಿಮ್ಮ ಮುದ್ದು ಮಕ್ಕಳಿಗಾಗಿ ತಲೆಬೋಳಿಸಿಕೊಳ್ಳಿ, ಮುಂಡನ ಮಾಡಿಸಿಕೊಳ್ಳಿ. ನಿಮ್ಮ ಬೋಳುತಲೆಯು ರಣಹದ್ದಿನಂತೆ ನುಣ್ಣಗಿರಲಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India