ಮಾರ್ಕ 8 - ಕನ್ನಡ ಸತ್ಯವೇದವು C.L. Bible (BSI)ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನಕ್ಕೆ ತೃಪ್ತಿ ( ಮತ್ತಾ. 15:32-39 ) 1 ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. 2 ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, “ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ. 3 ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು. 4 ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಮರುನುಡಿದರು. 5 ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು, “ಏಳು ಇವೆ,” ಎಂದರು. 6 ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು. 7 ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವಸ್ತುತಿ ಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. 8 ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದುವು. 9 ಊಟಮಾಡಿದವರ ಸಂಖ್ಯೆ ನಾಲ್ಕು ಸಾವಿರ. 10 ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು. ಪವಾಡಗಳನ್ನು ಕೋರಿದ ಫರಿಸಾಯರು ( ಮತ್ತಾ. 12:38-39 ; 16:1-4 ; ಲೂಕ. 11:29-32 ) 11 ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ: “ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿತೋರಿಸು,” ಎಂದು ಕೇಳಿದರು. 12 ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ,” ಎಂದರು. 13 ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟುಹೋದರು. ದುರ್ಬೋಧಕರಿಂದ ದೂರವಿರಿ ( ಮತ್ತಾ. 16:5-12 ; ಲೂಕ. 12:1 ) 14 ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. 15 ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು. 16 ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು. 17 ಆ ಚರ್ಚೆಯನ್ನು ಯೇಸು ಗಮನಿಸಿ, “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? 18 ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? 19 ನಾನು ಐದು ರೊಟ್ಟಿಗಳಿಂದ ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು. 20 “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆ ತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು. 21 ಆಗ ಯೇಸು, “ಇಷ್ಟಾದರೂ, ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು. ಬೆತ್ಸಾಯಿದದ ಕುರುಡನಿಗೆ ದೃಷ್ಟಿದಾನ 22 ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು. 23 ಯೇಸು ಕುರುಡನ ಕೈಹಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತಿದೆಯೇ?’ ಎಂದು ಕೇಳಿದರು. 24 ಆಗ ಅವನು ಕಣ್ಣೆತ್ತಿ ನೋಡಿ, “ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಆದರೂ ಅವರು ನಡೆದಾಡುತ್ತಿದ್ದಾರೆ,” ಎಂದನು. 25 ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸಿತು. 26 ಅನಂತರ ಯೇಸು, “ನೀನು ಊರೊಳಗೆ ಹೋಗುವುದೇ ಬೇಡ,” ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು. ಪೇತ್ರನ ವಿಶ್ವಾಸ ಪ್ರಕಟಣೆ ( ಮತ್ತಾ. 16:13-20 ; ಲೂಕ. 9:18-21 ) 27 ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಿದರು. 28 ಅದಕ್ಕೆ ಶಿಷ್ಯರು, “ಕೆಲವರು ತಮ್ಮನ್ನು ‘ಸ್ನಾನಿಕ ಯೊವಾನ್ನ’ ಎನ್ನುತ್ತಾರೆ, ಇನ್ನು ಕೆಲವರು ‘ಎಲೀಯನು,’ ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ' ” ಎಂದರು. 29 ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ” ಎಂದು ಉತ್ತರವಿತ್ತನು. 30 ಆಗ ಯೇಸು, “ಈ ವಿಷಯವನ್ನು ಯಾರಿಗೂ ತಿಳಿಸಬೇಡಿ,” ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. ಯೇಸುವಿನ ಮರಣ ಮತ್ತು ಪುನರುತ್ಥಾನದ ಪ್ರಕಟಣೆ ( ಮತ್ತಾ. 16:21-28 ; ಲೂಕ. 9:22-27 ) 31 ಈ ಘಟನೆಯ ಬಳಿಕ ಯೇಸುಸ್ವಾಮಿ, “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ಥಾನ ಹೊಂದುವನು,” ಎಂದು ತಮ್ಮ ಶಿಷ್ಯರಿಗೆ ಮುಚ್ಚುಮರೆಯಿಲ್ಲದೆ ಬೋಧಿಸಲಾರಂಭಿಸಿದರು. 32 ಇದನ್ನು ಕೇಳಲಾಗದೇ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, “ತಾವು ಹೀಗೆಲ್ಲಾ ಹೇಳಬಾರದು,” ಎಂದು ಪ್ರತಿಭಟಿಸಿದನು. 33 ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ, ಪೇತ್ರನನ್ನು ಗದರಿಸುತ್ತಾ, “ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದರು. ಸಾವಿನಿಂದ ಜೀವಕ್ಕೆ ( ಮತ್ತಾ. 16:24-28 ; ಲೂಕ. 9:23-27 ) 34 ಅನಂತರ ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನರ ಗುಂಪನ್ನೂ ಒಟ್ಟಾಗಿ ತಮ್ಮ ಬಳಿಗೆ ಕರೆದು, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ; 35 ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. 36 ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದು, ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಬರುವ ಲಾಭವಾದರೂ ಏನು? 37 ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? 38 ದೈವನಿಷ್ಠೆಯಿಲ್ಲದ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ ನನ್ನ ಮಾತುಗಳನ್ನೂ ಕುರಿತು ನಾಚಿಕೆಪಡುತ್ತಾರೋ, ಅಂಥವರನ್ನು ಕುರಿತು ನರಪುತ್ರನು ಸಹ ತನ್ನ ಪಿತನ ಪ್ರಭಾವದೊಡನೆ ದೇವದೂತರ ಪರಿವಾರ ಸಮೇತನಾಗಿ ಬರುವಾಗ, ನಾಚಿಕೆಪಡುವನು,” ಎಂದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India