ಮಾರ್ಕ 7 - ಕನ್ನಡ ಸತ್ಯವೇದವು C.L. Bible (BSI)ಮಾನವ ಸಂಪ್ರದಾಯಕ್ಕಿಂತ ದೈವಾಜ್ಞೆ ಶ್ರೇಷ್ಠ ( ಮತ್ತಾ. 15:1-10 ) 1 ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು. 2 ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು. 3 ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ. 4 ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದವು. 5 ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, “ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?" ಎಂದು ಯೇಸುವನ್ನು ಕೇಳಿದರು. 6-7 ಅದಕ್ಕೆ ಯೇಸು, “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ: ‘ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’ 8 “ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ. 9 ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ! 10 ‘ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲೀ ತಾಯಿಯನ್ನಾಗಲೀ ದೂಷಿಸುವವನಿಗೆ ಮರಣದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ. 11 ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ‘ನನ್ನಿಂದ ನಿಮಗೆ ಸಲ್ಲತಕ್ಕದ್ದು “ಕೊರ್ಬಾನ್” (ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು, 12 ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ. 13 “ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು. ಅಂತರಂಗ ಶುದ್ಧಿ ( ಮತ್ತಾ. 15:10-20 ) 14 ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು, 15 “ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. 16 ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)” ಎಂದರು. 17 ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. 18 ಅದಕ್ಕೆ ಅವರು, “ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ? 19 ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.) 20 ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. 21 ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, 22 ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ. 23 ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,” ಎಂದರು. ಅನ್ಯಸ್ತ್ರೀಯ ಅನನ್ಯ ವಿಶ್ವಾಸ ( ಮತ್ತಾ. 15:21-28 ) 24 ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪಟ್ಟಣಗಳ ಸಮೀಪವಿದ್ದ ಪ್ರದೇಶಕ್ಕೆ ಹೋಗಿ ಒಂದು ಮನೆಯಲ್ಲಿ ಇಳಿದುಕೊಂಡರು. ತಾವು ಜನರ ಕಣ್ಣಿಗೆ ಬೀಳಬಾರದೆಂಬುದು ಅವರ ಇಚ್ಛೆಯಾಗಿದ್ದರೂ ಅದು ಸಾಧ್ಯವಾಗಲಿಲ್ಲ. 25 ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆ ಒಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು 26 ಆಕೆಯ ಚಿಕ್ಕಮಗಳಿಗೆ ದೆವ್ವ ಹಿಡಿದಿತ್ತು. ತನ್ನ ಮಗಳಿಂದ ಪಿಶಾಚಿಯನ್ನು ಹೊರಗಟ್ಟಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು. 27 ಆದರೆ ಯೇಸು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಪಡೆಯಲಿ, ಮಕ್ಕಳ ಆಹಾರವನ್ನು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು. 28 ಅದಕ್ಕೆ ಆಕೆ, “ಅದು ನಿಜ ಸ್ವಾಮೀ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ?” ಎಂದಳು. 29 ಆಕೆಯ ಮಾತುಗಳನ್ನು ಕೇಳಿ ಯೇಸು, “ಚೆನ್ನಾಗಿ ಹೇಳಿದೆ, ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟು ತೊಲಗಿದೆ,” ಎಂದರು. 30 ಆಕೆ ಮನೆಗೆ ಹೋದಾಗ, ಮಗಳು ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನು ಕಂಡಳು. ದೆವ್ವ ಅವಳನ್ನು ಬಿಟ್ಟುಹೋಗಿತ್ತು. ಕಿವುಡರು ಕೇಳಲಿ, ಮೂಕರು ಮಾತನಾಡಲಿ! 31 ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು. 32 ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು. 33 ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು. 34 ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿನೋಡಿ, ದೀರ್ಘವಾಗಿ ಉಸಿರೆಳೆದು, ‘ಎಪ್ಫಥಾ’ ಎಂದರೆ ‘ತೆರೆಯಲಿ’ ಎಂದರು. 35 ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು. 36 ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರಮಾಡಿದರು. 37 ಎಲ್ಲರೂ ಆಶ್ಚರ್ಯಭರಿತರಾಗಿ, “ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!” ಎಂದುಕೊಳ್ಳುತ್ತಿದ್ದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India