Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮಲಾಕಿ 2 - ಕನ್ನಡ ಸತ್ಯವೇದವು C.L. Bible (BSI)

1 ಸೇನಾಧೀಶ್ವರ ಸರ್ವೇಶ್ವರ ಯಾಜಕರಿಗೆ ಹೀಗೆ ಹೇಳುತ್ತಾರೆ: “ನಿಮಗೆ ನಾನು ನೀಡುವ ಆಜ್ಞೆಯಿದು:

2 ನನ್ನ ನಾಮಕ್ಕೆ ಮಹಿಮೆ ಸಲ್ಲಿಸಬೇಕು. ಇದನ್ನು ನೀವು ಮನದಟ್ಟು ಮಾಡಿಕೊಳ್ಳಬೇಕು. ನನ್ನ ಈ ಮಾತಿಗೆ ಕಿವಿಗೊಡದಿದ್ದರೆ ನಿಮಗೆ ಶಾಪವನ್ನು ತರುವೆನು. ನಿಮ್ಮ ವರಮಾನಗಳನ್ನೆಲ್ಲ ಶಾಪವಾಗಿ ಮಾರ್ಪಡಿಸುವೆನು; ಈಗಾಗಲೇ ಮಾರ್ಪಡಿಸಿರುವೆನು. ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಂಡಿಲ್ಲ.

3 ಆದ್ದರಿಂದ ಇದನ್ನು ಗಮನವಿಟ್ಟು ಕೇಳಿ: ನಿಮ್ಮ ಸಂತಾನವನ್ನು ಖಂಡಿಸುವೆನು. ನಿಮ್ಮ ಮುಖಕ್ಕೆ ಸಗಣಿ ಬಳಿಯುವೆನು. ನಿಮ್ಮ ಯಜ್ಞಪಶುಗಳ ಸಗಣಿಯನ್ನೇ ಎರಚುವೆನು. ನೀವು ಆ ಸಗಣಿ ತಿಪ್ಪೆಯ ಪಾಲಾಗುವಿರಿ.

4 ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆ ಊರ್ಜಿತವಾಗಬೇಕೆಂದೇ ಈ ಅಪ್ಪಣೆಯನ್ನು ನಿಮಗೆ ಕೊಟ್ಟಿದ್ದೇನೆಂದು ಆಗ ನಿಮಗೆ ಗೊತ್ತಾಗುವುದು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

5 “ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆ ಜೀವದಾತ ಹಾಗು ಬದುಕಿನಲ್ಲಿ ಶಾಂತಿ ತರುವಂಥ ಒಡಂಬಡಿಕೆ. ಅವರು ಭಯಭಕ್ತಿಯಿಂದ ಬಾಳಲೆಂದೇ ನಾನು ಅದನ್ನು ಅವರಿಗೆ ವಿಧಿಸಿದ್ದು. ಅಂತೆಯೇ ಹಿಂದೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನಡೆದುಕೊಂಡರು; ನನ್ನ ನಾಮಕ್ಕೆ ಅಂಜಿ ಬಾಳಿದರು.

6 ಸತ್ಯಬೋಧೆ ಅವರ ಬಾಯಲ್ಲಿ ನೆಲೆಸಿತ್ತು. ಅವರ ತುಟಿಗಳಿಂದ ಅಪರಾಧವಾದುದೇನೂ ಹೊರಬರಲಿಲ್ಲ. ಶಾಂತಿಯಿಂದ, ಸದ್ಧರ್ಮದಿಂದ ಅವರು ನನ್ನೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡರು. ಹಲವರನ್ನು ಪಾಪಕ್ಕೆ ವಿಮುಖರಾಗಿಸಿದರು.

7 ಯಾಜಕನ ತುಟಿಗಳು ದೈವಜ್ಞಾನದ ದ್ವಾರಗಳು. ಅವನ ಬಾಯಿಂದ ಜನರು ಧರ್ಮೋಪದೇಶವನ್ನು ಕೇಳಬೇಕು. ಅವನು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ದೂತನು.”

8 “ಈಗಲಾದರೋ ಯಾಜಕರೇ, ನೀವು ದಾರಿ ತಪ್ಪಿದ್ದೀರಿ. ನಿಮ್ಮ ಉಪದೇಶದಿಂದ ಅನೇಕರು ಮುಗ್ಗರಿಸಿಬೀಳುವಂತೆ ಮಾಡಿದ್ದೀರಿ. ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ.” ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿಯಿದು.

9 “ನೀವು ನನ್ನ ಮಾರ್ಗವನ್ನು ಅನುಸರಿಸಲಿಲ್ಲ. ಧರ್ಮಶಾಸ್ತ್ರವನ್ನು ಬೋಧಿಸುವಾಗ ಪಕ್ಷಪಾತಮಾಡಿದ್ದೀರಿ. ಆದ್ದರಿಂದ ಎಲ್ಲ ಜನರು ನಿಮ್ಮನ್ನು ಹೀಯಾಳಿಸಿ ಕೀಳಾಗಿ ಕಾಣುವಂತೆ ಮಾಡುವೆನು.


ಅವಿಧೇಯ ಗೃಹಸ್ಥರಿಗೆ ಶಾಪ

10 ನಮ್ಮೆಲ್ಲರಿಗೂ ತಂದೆ ಒಬ್ಬರೇ ಅಲ್ಲವೇ? ನಮ್ಮೆಲ್ಲರನ್ನು ಸೃಷ್ಟಿಸಿದ ದೇವರು ಒಬ್ಬರೇ ಅಲ್ಲವೇ? ಹೀಗಿರಲು ನಾವು ಒಬ್ಬರಿಗೊಬ್ಬರು ದ್ರೋಹ ಮಾಡುವುದೇಕೆ? ದೇವರು ನಮ್ಮ ಪೂರ್ವಜರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ನಾವು ಉಲ್ಲಂಘಿಸುವುದೇಕೆ?

11 ಜುದೇಯದ ಜನರು ದ್ರೋಹಮಾಡಿದ್ದಾರೆ. ಇಸ್ರಯೇಲಿನಲ್ಲಿಯೂ ಜೆರುಸಲೇಮಿನಲ್ಲಿಯೂ ದುರಾಚಾರ ನಡೆಯುತ್ತಿದೆ. ಯೆಹೂದ್ಯರು ಅನ್ಯದೇವತೆಯನ್ನು ಆರಾಧಿಸುವ ಮಹಿಳೆಯರನ್ನು ಮದುವೆಯಾಗಿ, ಸರ್ವೇಶ್ವರಸ್ವಾಮಿಗೆ ಪ್ರಿಯವಾದ ದೇವಾಲಯವನ್ನು ಹೊಲೆಗೆಡಿಸಿದ್ದಾರೆ.

12 ಇಂಥ ಕೃತ್ಯವನ್ನು ಎಸಗುವವನು ಎಂಥ ಕುಟುಂಬಕ್ಕಾದರೂ ಸೇರಿರಲಿ - ಅಂಥವನನ್ನು ಸೇನಾಧೀಶ್ವರ ಸರ್ವೇಶ್ವರ ಯಕೋಬನ ಕುಲದಿಂದ ಹೊರಗೆ ಹಾಕುವರು.

13 ನೀವು ಇನ್ನೊಂದು ಕೆಲಸವನ್ನು ಮಾಡುತ್ತೀರಿ: ‘ಸರ್ವೇಶ್ವರ ನಮ್ಮ ಕಾಣಿಕೆಗಳನ್ನು ಲಕ್ಷಿಸುವುದಿಲ್ಲ. ನಮ್ಮ ಕೈಯಿಂದ ಅವುಗಳನ್ನು ಪ್ರಸನ್ನತೆಯಿಂದ ಸ್ವೀಕರಿಸುವುದಿಲ್ಲ’ ಎಂದುಕೊಂಡು ನರಳುತ್ತಾ ಗೋಳಾಡುತ್ತಾ ಕಣ್ಣೀರಿನಿಂದ ಬಲಿಪೀಠವನ್ನೇ ಮುಳುಗಿಸಿಬಿಡುತ್ತೀರಿ.

14 ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ಕಾರಣ ಇದೇ: ನಿನಗೂ ನಿನ್ನ ಹೆಂಡತಿಗೂ ಯೌವನದಲ್ಲಿ ಆದ ವಿವಾಹದ ಒಪ್ಪಂದಕ್ಕೆ ಸರ್ವೇಶ್ವರಸ್ವಾಮಿಯೇ ಸಾಕ್ಷಿ. ಆದರೂ ನಿನ್ನ ಅರ್ಧಾಂಗಿ ಹಾಗು ನ್ಯಾಯವಾದ ಧರ್ಮಪತ್ನಿ ಆದ ಆಕೆಗೆ ದ್ರೋಹಮಾಡಿರುವೆ.

15 ದೇವರು ನಿನ್ನ ಮತ್ತು ಆಕೆಯ ತನುಮನಗಳನ್ನು ಒಂದಾಗಿ ಮಾಡಲಿಲ್ಲವೆ? ಅವರ ಉದ್ದೇಶವಾದರೂ ಏನಾಗಿತ್ತು? ದೇವರ ಮಕ್ಕಳಾಗಿ ಬಾಳುವ ಸಂತಾನಪ್ರಾಪ್ತಿಯೇ ಅವರ ಉದ್ದೇಶವಾಗಿತ್ತು. ಆದಕಾರಣ ಯೌವ್ವನದಲ್ಲಿ ಮಡದಿಗೆ ದ್ರೋಹವೆಸಗದಂತೆ, ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.

16 ಇಸ್ರಯೇಲಿನ ದೇವರಾದ ಸರ್ವೇಶ್ವರ ಹೀಗೆ ಹೇಳುತ್ತಾರೆ: “ವಿವಾಹ ವಿಚ್ಛೇದನವನ್ನು ದ್ವೇಷಿಸುತ್ತೇನೆ. ತನ್ನ ಮಡದಿಗೆ ನಂಬಿಕೆದ್ರೋಹವನ್ನೆಸಗುವವನನ್ನು ಹಾಗು ದೌರ್ಜನ್ಯ ತೋರುವವನನ್ನು ಹಗೆಮಾಡುತ್ತೇನೆ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ಆದಕಾರಣ ಮನಃಪೂರ್ವಕವಾಗಿ ಎಚ್ಚರಿಕೆಯಿಂದಿರಿ ನಿಮ್ಮ ಮಡದಿಗೆ ದ್ರೋಹವೆಸಗದಿರಿ.


ನ್ಯಾಯತೀರ್ಪಿನ ದಿನ ಸನ್ನಿಹಿತ

17 “ನೀವು ನಿಮ್ಮ ಮಾತುಗಳಿಂದ ಪ್ರಭುವನ್ನು ಬೇಸರಗೊಳಿಸಿದ್ದೀರಿ. ‘ಯಾವ ವಿಷಯದಲ್ಲಿ ಅವರನ್ನು ಬೇಸರಗೊಳಿಸಿದ್ದೇವೆ?’ ಎನ್ನುತ್ತೀರೋ? ‘ಕೆಡುಕರೆಲ್ಲರೂ ದೇವರ ದೃಷ್ಟಿಯಲ್ಲಿ ಒಳ್ಳೆಯವರು. ಅವರೇ ಆತನಿಗೆ ಬೇಕಾದವರು’ ಎಂದು ಹೇಳುವುದರಿಂದ: ‘ನ್ಯಾಯ ತೀರಿಸುವ ದೇವರೆಲ್ಲಿ?’ ಎಂದು ಕೇಳುವುದರಿಂದ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು