ಮಲಾಕಿ 1 - ಕನ್ನಡ ಸತ್ಯವೇದವು C.L. Bible (BSI)1 ಮಲಾಕಿಯನ ಮುಖಾಂತರ ಇಸ್ರಯೇಲ್ ಜನರಿಗೆ ಸರ್ವೇಶ್ವರ ನೀಡಿದ ದೈವೋಕ್ತಿ: ಇಸ್ರಯೇಲಿನ ಮೇಲೆ ಪ್ರೀತಿ 2 “ನಿಮ್ಮ ಮೇಲೆ ನನಗೆ ಪ್ರೀತಿ ಇದೆ” ಎನ್ನುತ್ತಾರೆ ಸರ್ವೇಶ್ವರ. ನೀವಾದರೋ, “ಯಾವ ವಿಷಯದಲ್ಲಿ ನಮಗೆ ಪ್ರೀತಿ ತೋರಿಸಿದ್ದೀರಿ?” ಎಂದು ಕೇಳುತ್ತೀರಿ. ಅದಕ್ಕೆ ಅವರು, “ಏಸಾವನು ಯಕೋಬನ ಅಣ್ಣನಲ್ಲವೇ? ಆದರೂ ನಾನು ಯಕೋಬನನ್ನು ಪ್ರೀತಿಸಿದೆ; 3 ಏಸಾವನನ್ನು ದ್ವೇಷಿಸಿದೆ; ಅಲ್ಲದೆ ಏಸಾವನಿಗೆ ಸೇರಿದ ಮಲೆನಾಡುಗಳನ್ನು ಹಾಳುಮಾಡಿ, ಅವನ ಪಿತ್ರಾರ್ಜಿತ ರಾಜ್ಯವನ್ನು ನಾಯಿನರಿಗಳ ಬೀಡಾಗಿಸಿದೆ,” ಎಂದು ಉತ್ತರಿಸುತ್ತಾರೆ. 4 ಏಸಾವನ ವಂಶದವರಾದ ಎದೋಮ್ಯರು, “ನಮ್ಮ ನಾಡು ಹಾಳಾಯಿತು; ಆದರೆ ಹಾಳುಬಿದ್ದದ್ದನ್ನು ಮರಳಿ ಕಟ್ಟುವೆವು,” ಎನ್ನಬಹುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರ ಕೊಡುವ ಉತ್ತರ ಇದು: “ಅವರು ಕಟ್ಟಲಿ; ನಾನು ಅವುಗಳನ್ನು ಕೆಡವಿಹಾಕುವೆ. ‘ಅವರು ಕೇಡಿಗರು. ಸರ್ವೇಶ್ವರಸ್ವಾಮಿಯ ಕೋಪಕ್ಕೆ ಗುರಿಯಾದವರು’ ಎಂದು ಜನರೇ ಆಡಿಕೊಳ್ಳುವರು.” 5 ಇಸ್ರಯೇಲಿನ ಜನರಾದ ನೀವು ಇದನ್ನು ಕಣ್ಣಾರೆ ಕಂಡು, “ಸರ್ವೇಶ್ವರ ಇಸ್ರಯೇಲಿನ ಹೊರಗೂ ಮಹಾಮಹಿಮೆಯುಳ್ಳವರು!” ಎಂದು ಹೇಳಿಕೊಳ್ಳುವಿರಿ. ಅಯೋಗ್ಯ ಯಾಜಕರಿಗೆ ಶಾಪ 6 “ನನ್ನ ನಾಮವನ್ನು ಅವಮಾನಗೊಳಿಸುವ ಯಾಜಕರೇ, ಮಗನು ತಂದೆಯನ್ನು, ದಾಸನು ದಣಿಯನ್ನು ಸನ್ಮಾನಿಸುವುದು ಸಹಜ. ನಾನು ತಂದೆಯಾಗಿದ್ದರೂ ನೀವು ನನಗೆ ಸಲ್ಲಿಸುವ ಸನ್ಮಾನವೆಲ್ಲಿ? ನಾನು ದಣಿಯಾಗಿದ್ದರೂ ನೀವು ನನಗೆ ತೋರಿಸುವ ಭಯಭಕ್ತಿ ಎಲ್ಲಿ?” ಎಂದು ಸೇನಾಧೀಶ್ವರ ಸರ್ವೇಶ್ವರ ನಿಮ್ಮನ್ನೇ ಕೇಳುತ್ತಾರೆ. ಆದರೆ, ನೀವು: “ಯಾವ ವಿಷಯದಲ್ಲಿ ನಿಮ್ಮ ನಾಮವನ್ನು ಅವಮಾನಗೊಳಿಸಿದ್ದೇವೆ?” ಎಂದು ಕೇಳುತ್ತೀರಿ. 7 “ನನ್ನ ಬಲಿಪೀಠದ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸಿ ನನ್ನನ್ನು ಅವಮಾನಗೊಳಿಸಿದ್ದೀರಿ;” “ಯಾವ ವಿಷಯದಲ್ಲಿ ನಿಮಗೆ ಅಗೌರವ ತಂದಿದ್ದೇವೆ ಎನ್ನುತ್ತೀರೋ? ‘ಸರ್ವೇಶ್ವರಸ್ವಾಮಿಯ ವೇದಿಕೆಗೆ ಘನತೆ ಏನಿದೆ?’ ಎಂದು ಹೇಳಿಕೊಳ್ಳುವುದರಲ್ಲಿದೆ ಆ ಅಗೌರವ. 8 ಕುರುಡಾದ ಪಶುಗಳನ್ನು ಬಲಿಯರ್ಪಿಸುವುದು ತಪ್ಪಲ್ಲವೆ? ಊನವಾದ ರೋಗದ ಪಶುಗಳನ್ನು ಅರ್ಪಿಸುವುದು ದೋಷವಲ್ಲವೇ? ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ಇಂಥದ್ದನ್ನು ನಿಮ್ಮ ರಾಜಪಾಲನಿಗೆ ಕಾಣಿಕೆಯಾಗಿ ಕೊಟ್ಟರೆ ಅವನು ನಿಮ್ಮನ್ನು ಮೆಚ್ಚುವನೋ ಅಥವಾ ನಿಮ್ಮ ಕೋರಿಕೆಯನ್ನು ನೆರವೇರಿಸುವನೋ?’ 9 ಆದುದರಿಂದ ಯಾಜಕರೇ, ದೇವರ ದಯೆ ನಿಮಗೆ ದೊರಕುವಂತೆ ಅವರನ್ನು ಒಲಿಸಿಕೊಳ್ಳಿರಿ. ಇಂಥ ಕಾಣಿಕೆ ನಿಮ್ಮ ಕೈಯಲ್ಲಿದ್ದರೆ ಯಾರಿಗಾದರು ದೇವರು ನಿಮ್ಮ ಕೋರಿಕೆಯನ್ನು ಈಡೇರಿಸುವುದುಂಟೋ? ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ: 10 “ನನ್ನ ಬಲಿಪೀಠದ ಮೇಲೆ ಯಾರೂ ಜ್ಯೋತಿಯನ್ನು ವ್ಯರ್ಥವಾಗಿ ಬೆಳಗಿಸದಂತೆ ಮಹಾದೇವಾಲಯದ ಬಾಗಿಲನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೆಯದು. ನಾನು ನಿಮ್ಮನ್ನು ಮೆಚ್ಚಿಕೊಂಡಿಲ್ಲ. ನಿಮ್ಮ ಕೈಯಿಂದ ಕಾಣಿಕೆಗಳನ್ನು ನಾನು ಸ್ವೀಕರಿಸುವುದಿಲ್ಲ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. 11 “ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಸರ್ವರಾಷ್ಟ್ರಗಳಲ್ಲಿ ನನ್ನ ನಾಮಕ್ಕೆ ಮಹಿಮೆ ಸಲ್ಲುವುದು. ಎಲ್ಲೆಲ್ಲಿಯೂ ನನಗೆ ಧೂಪಾರತಿಯನ್ನೂ ಕಾಣಿಕೆಗಳನ್ನೂ ಜನರು ಅರ್ಪಿಸುವರು. ಹೌದು, ಸರ್ವರಾಷ್ಟ್ರಗಳಲ್ಲಿಯೂ ನನ್ನ ನಾಮಕ್ಕೆ ಮಹಿಮೆ ಸಲ್ಲುವುದು,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. 12 ನೀವಾದರೋ, ‘ಸರ್ವೇಶ್ವರಸ್ವಾಮಿಯ ಪೀಠ ಅಶುದ್ಧ; ಅದರ ಮೇಲಿನ ಆಹಾರಪದಾರ್ಥಗಳು ಅಸಹ್ಯ’ ಎಂದು ಹೇಳಿ ನನ್ನ ನಾಮಕ್ಕೆ ಅಪಕೀರ್ತಿ ತರುತ್ತೀರಿ. 13 ಅಯ್ಯೋ, ಎಷ್ಟು ಬೇಸರವಾದುದು ಈ ಸೇವೆ’ ಎಂದುಕೊಂಡು ನೀವು ಅದನ್ನು ತಾತ್ಸಾರಮಾಡುತ್ತೀರಿ. “ಕಳವಿನ ಪಶುವನ್ನು, ರೋಗ ಹಿಡಿದ, ಊನವಾದ ಪ್ರಾಣಿಯನ್ನು ಅರ್ಪಿಸುತ್ತೀರಿ. ಇಂಥ ಕಾಣಿಕೆಯನ್ನು ನಿಮ್ಮ ಕೈಗಳಿಂದ ನಾನು ಸ್ವೀಕರಿಸಲೋ?’ ಎಂದು ಕೇಳುತ್ತಾರೆ ಸೇನಾಧೀಶ್ವರ ಸರ್ವೇಶ್ವರ. 14 “ತನ್ನ ಹಿಂಡಿನಲ್ಲಿರುವ ಗಂಡು ಪಶುವನ್ನು ಕೊಡುವುದಾಗಿ ಹರಕೆ ಹೊತ್ತು, ಬದಲಿಗೆ ಕಳಂಕವಾದ ಪಶುವನ್ನು ಸರ್ವೇಶ್ವರಸ್ವಾಮಿಗೆ ಬಲಿದಾನಮಾಡುವವನು ಮೋಸಗಾರ, ಅವನು ಶಾಪಗ್ರಸ್ತ. ನಾನೋ ರಾಜಾಧಿರಾಜ. ನನ್ನ ನಾಮಕ್ಕೆ ಅನ್ಯರಾಷ್ಟ್ರಗಳೂ ಭಯಪಡುತ್ತವೆ,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India