Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 3 - ಕನ್ನಡ ಸತ್ಯವೇದವು C.L. Bible (BSI)


ಸ್ನಾನಿಕ ಯೊವಾನ್ನನ ಬೋಧನೆ
( ಮಾರ್ಕ. 1:1-8 ; ಲೂಕ. 3:1-18 ; ಯೊವಾ. 1:19-28 )

1 ಆ ಕಾಲದಲ್ಲಿ ಸ್ನಾನಿಕ ಯೊವಾನ್ನನು ಜುದೇಯ ಪ್ರಾಂತ್ಯದ ಬೆಂಗಾಡಿಗೆ ಹೋಗಿ ಬೋಧನೆಮಾಡಲು ಪ್ರಾರಂಭಿಸಿದನು.

2 “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯವು ಸಮೀಪಿಸಿತು,” ಎಂದು ಸಾರಿ ಹೇಳುತ್ತಾ ಬಂದನು.

3 “ಸರ್ವೇಶ್ವರನಿಗೆ ಮಾರ್ಗವನ್ನು ನೇರಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ, ಎಂದು ಬೆಂಗಾಡಿನಲ್ಲೊಬ್ಬನು ಘೋಷಿಸುತ್ತಿದ್ದಾನೆ,” ಎಂದಾಗ ಪ್ರವಾದಿ ಯೆಶಾಯನು ಸೂಚಿಸಿದ ವ್ಯಕ್ತಿ ಈತನೇ.

4 ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು - ಇವೇ ಈತನ ಉಡುಗೆ. ಮಿಡತೆ ಮತ್ತು ಕಾಡುಜೇನು ಇವೇ ಈತನ ಆಹಾರ.

5 ಜನರು ಜೆರುಸಲೇಮಿನಿಂದಲೂ ಇಡೀ ಜುದೇಯ ಪ್ರಾಂತ್ಯದಿಂದಲೂ ಜೋರ್ಡನ್ ನದಿಯ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಈತನ ಬಳಿಗೆ ಬರುತ್ತಿದ್ದರು;

6 ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಈತನಿಂದ ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು.

7 ಫರಿಸಾಯರಲ್ಲೂ ಸದ್ದುಕಾಯರಲ್ಲೂ ಅನೇಕರು ತನ್ನಿಂದ ಸ್ನಾನದೀಕ್ಷೆ ಪಡೆಯಲು ಬರುವುದನ್ನು ಯೊವಾನ್ನನು ನೋಡಿದನು. ಅವರನ್ನು ಉದ್ದೇಶಿಸಿ, “ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು?

8 ನೀವು ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ.

9 ‘ಅಬ್ರಹಾಮನೇ ನಮ್ಮ ಪಿತಾಮಹ’ ಎಂದು ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತವಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ.

10 ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.

11 ಹೃದಯ ಪರಿವರ್ತನೆಯ ಗುರುತಾಗಿ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನ್ನ ನಂತರ ಬರುವ ಒಬ್ಬರು ನಿಮಗೆ ಪವಿತ್ರಾತ್ಮ ಹಾಗೂ ಅಗ್ನಿಯಿಂದ ದೀಕ್ಷಾಸ್ನಾನ ಕೊಡುವರು. ಅವರು ನನಗಿಂತಲೂ ಶಕ್ತರು. ಅವರ ಪಾದರಕ್ಷೆಗಳನ್ನು ಹೊರಲು ಸಹ ನಾನು ಅರ್ಹನಲ್ಲ.

12 ಅವರ ಕೈಯಲ್ಲಿ ಮೊರವಿದೆ; ತಮ್ಮ ಕಣದಲ್ಲಿಯ ರಾಶಿಯನ್ನು ತೂರುವರು. ಗಟ್ಟಿಕಾಳನ್ನು ಮಾತ್ರ ಕಣಜದಲ್ಲಿ ತುಂಬುವರು; ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಎಚ್ಚರಿಸಿದನು.


ಸ್ವಾಮಿಗೂ ಸ್ನಾನದೀಕ್ಷೆಯೇ?
( ಮಾರ್ಕ. 1:9-11 ; 3:21-22 )

13 ಯೊವಾನ್ನನಿಂದ ಸ್ನಾನದೀಕ್ಷೆ ಪಡೆಯಲು ಯೇಸುಸ್ವಾಮಿ ಗಲಿಲೇಯದಿಂದ ಹೊರಟು ಜೋರ್ಡನ್ ನದಿಯ ಬಳಿಗೆ ಬಂದರು. ಯೊವಾನ್ನನು ಅವರನ್ನು ತಡೆಯಲೆತ್ನಿಸಿದನು.

14 “ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ ನೀವು ನನ್ನ ಬಳಿಗೆ ಬರುವುದೇ?’ಎಂದನು.

15 ಆದರೆ ಯೇಸು, “ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು,” ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು.

16 ಯೇಸು ದೀಕ್ಷಾಸ್ನಾನ ಪಡೆದು ನೀರಿನಿಂದ ಮೇಲಕ್ಕೆ ಬಂದದ್ದೇ ಆಕಾಶವು ಫಕ್ಕನೆ ತೆರೆಯಿತು. ದೇವರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿದುಬಂದು ನೆಲಸುವುದನ್ನು ಕಂಡರು.

17 ಆಗ ಆಕಾಶದಿಂದ, “ಇವನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂಬ ದೈವವಾಣಿ ಕೇಳಿಸಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು