ಮತ್ತಾಯ 28 - ಕನ್ನಡ ಸತ್ಯವೇದವು C.L. Bible (BSI)ಪುನರುತ್ಥಾನದ ಪ್ರಥಮ ಸಾಕ್ಷಿಗಳು ( ಮಾರ್ಕ. 16:1-10 ; ಲೂಕ. 24:1-12 ; ಯೊವಾ. 20:1-10 ) 1 ‘ಸಬ್ಬತ್’ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು. 2 ಇದ್ದಕ್ಕಿದ್ದಂತೆ ಭೂಮಿ ಗಡಗಡನೆ ನಡುಗಿತು. ಆಗ ದೇವದೂತನು ಸ್ವರ್ಗದಿಂದ ಇಳಿದುಬಂದನು. ಸಮಾಧಿಯ ಕಲ್ಲನ್ನು ಹಿಂದಕ್ಕೆ ಉರುಳಿಸಿ ಅದರ ಮೇಲೆ ಕುಳಿತುಕೊಂಡನು. 3 ಆತನ ರೂಪ ಮಿಂಚಿನಂತೆ ಹೊಳೆಯುತ್ತಿತ್ತು; ಉಡುಪು ಹಿಮದಂತೆ ಬೆಳ್ಳಗಿತ್ತು. 4 ಕಾವಲಿನವರು ಆತನನ್ನು ಕಂಡು ಭಯದಿಂದ ನಡುಗುತ್ತಾ ಸತ್ತಂತಾದರು. 5 ಆಗ ದೂತನು ಆ ಮಹಿಳೆಯರಿಗೆ, “ಹೆದರಬೇಡಿ, ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆ. ಅವರು ಇಲ್ಲಿಲ್ಲ; 6 ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ, ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ. 7 ಈಗ ಬೇಗನೆ ಹೋಗಿ, ಅವರ ಶಿಷ್ಯರಿಗೆ, ‘ಸತ್ತಿದ್ದವರು ಪುನರುತ್ಥಾನ ಹೊಂದಿದ್ದಾರೆ; ಅವರು ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು; ಅಲ್ಲೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ,” ಎಂದನು. ಮಹಿಳೆಯರಿಗೆ ಮೊದಲ ದರ್ಶನ ( ಮಾರ್ಕ. 16:9-11 ; ಲೂಕ. 24:10-11 ; ಯೊವಾ. 20:14-18 ) 8 ಅದರಂತೆಯೇ ಆ ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು. 9 ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು. 10 ಆಗ ಯೇಸು ಅವರಿಗೆ, “ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ,” ಎಂದು ಹೇಳಿದರು. ಯೆಹೂದ್ಯರ ಅಪಪ್ರಚಾರ 11 ಇತ್ತ ಆ ಮಹಿಳೆಯರು ಹೋಗುತ್ತಿದ್ದಂತೆ, ಅತ್ತ ಕಾವಲುಗಾರರಲ್ಲಿ ಕೆಲವರು ನಗರಕ್ಕೆ ಬಂದು ನಡೆದ ಸಂಗತಿಯನ್ನೆಲ್ಲಾ ಮುಖ್ಯಯಾಜಕರಿಗೆ ವರದಿಮಾಡಿದರು. 12 ಇವರು ಪ್ರಮುಖರೊಂದಿಗೆ ಸಭೆಸೇರಿ ಒಂದು ಸಂಚುಹೂಡಿದರು. ಸೈನಿಕರಿಗೆ ಭಾರಿ ಲಂಚಕೊಟ್ಟು, 13 “ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬಂದು, ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದುಕೊಂಡು ಹೋದರೆಂದು ಜನರಿಗೆ ಹೇಳಿರಿ; 14 ಈ ಸುದ್ದಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮಾಧಾನಪಡಿಸುತ್ತೇವೆ; ನಿಮಗೇನೂ ಆಗದಂತೆ ನೋಡಿಕೊಳ್ಳುತ್ತೇವೆ,’ ಎಂದು ಹೇಳಿದರು. 15 ಸೈನಿಕರು ಲಂಚವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟಂತೆಯೇ ಮಾಡಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇಂದಿನವರೆಗೂ ಪ್ರಚಲಿತವಾಗಿದೆ. ಕೊನೆಯ ದರ್ಶನ ಹಾಗೂ ಆದೇಶ ( ಮಾರ್ಕ. 16:14-18 ; ಲೂಕ. 24:36-49 ; ಯೊವಾ. 20:19-23 ) 16 ಹನ್ನೊಂದುಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು. 17 ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು. 18 ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. 19 ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ. 20 ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India