Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 27 - ಕನ್ನಡ ಸತ್ಯವೇದವು C.L. Bible (BSI)


ರಾಜ್ಯಪಾಲನ ಮುಂದೆ ಯೇಸು
( ಮಾರ್ಕ. 15:1 ; ಲೂಕ. 23:1 ; ಯೊವಾ. 18:28-32 )

1 ಬೆಳಗಾಯಿತು. ಎಲ್ಲ ಮುಖ್ಯಯಾಜಕರೂ ಜನರ ಪ್ರಮುಖರೂ ಸೇರಿ ಯೇಸುವನ್ನು ಕೊಲ್ಲಿಸುವುದಕ್ಕೆ ಸಮಾಲೋಚನೆಮಾಡಿದರು.

2 ಅಂತೆಯೇ ಯೇಸುವಿಗೆ ಬೇಡಿ ಹಾಕಿಸಿ, ಅವರನ್ನು ರಾಜ್ಯಪಾಲ ಪಿಲಾತನ ಬಳಿಗೆ ಕರೆದೊಯ್ದು ಅವನ ವಶಕ್ಕೆ ಒಪ್ಪಿಸಿದರು.


ಯೂದನ ದುರ್ಮರಣ
( ಪ್ರೇ. ಕಾ. 1:18-19 )

3 ಯೇಸುಸ್ವಾಮಿ ದಂಡನೆಗೆ ಗುರಿಯಾದರೆಂಬುದನ್ನು ಕಂಡು, ಗುರುದ್ರೋಹಿ ಯೂದನು ಪರಿತಾಪಗೊಂಡನು. ಆ ಮೂವತ್ತು ಬೆಳ್ಳಿನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಪ್ರಮುಖರ ಬಳಿಗೆ ಮರಳಿ ತಂದನು.

4 “ನಾನು ನಿರ್ದೋಷಿಯನ್ನು ಹಿಡಿದುಕೊಟ್ಟು ಪಾಪಕಟ್ಟಿಕೊಂಡೆ,” ಎಂದು ಹೇಳಿದನು. ಅದಕ್ಕೆ ಅವರು, ಅದರಿಂದ ನಮಗೇನು? ಅದನ್ನು ನೀನೇ ನೋಡಿಕೋ,’ ಎಂದುಬಿಟ್ಟರು.

5 ಆಗ ಅವನು ಆ ಹಣವನ್ನು ದೇವಾಲಯದಲ್ಲೇ ಎಸೆದು, ಹೊರಟುಹೋಗಿ ನೇಣುಹಾಕಿಕೊಂಡು ಸತ್ತನು.

6 ಮುಖ್ಯಯಾಜಕರು ಆ ಹಣವನ್ನು ತೆಗೆದುಕೊಂಡು, “ಇದು ರಕ್ತದ ಕ್ರಯ. ಇದನ್ನು ಕಾಣಿಕೆ ಕೋಶದಲ್ಲಿ ಹಾಕುವುದು ಸರಿಯಲ್ಲ,” ಎಂದುಕೊಂಡರು.

7 ಕಡೆಗೆ ಒಂದು ನಿರ್ಧಾರಕ್ಕೆ ಬಂದರು. ಪರದೇಶಿಗಳನ್ನು ಹೂಳುವುದಕ್ಕೋಸ್ಕರ ‘ಕುಂಬಾರನ ಹೊಲ’ವನ್ನು ಆ ಹಣಕೊಟ್ಟು ಕೊಂಡುಕೊಂಡರು.

8 ಈ ಕಾರಣದಿಂದಲೇ ಅದನ್ನು ‘ನೆತ್ತರ ನೆಲ’ ಎಂದು ಇಂದಿಗೂ ಕರೆಯಲಾಗುತ್ತಿದೆ. ಹೀಗೆ,

9-10 “ಮೂವತ್ತು ಬೆಳ್ಳಿ ನಾಣ್ಯಗಳನ್ನೆತ್ತಿ ಸರ್ವೇಶ್ವರಸ್ವಾಮಿ ನನಗಿತ್ತ ಆದೇಶದಂತೆ ‘ಕುಂಬಾರನ ಹೊಲ’ ಕೊಳ್ಳಲು ಅದನ್ನು ತೆತ್ತರು. ಅಮೂಲ್ಯ ವ್ಯಕ್ತಿಗೆ ಕಟ್ಟಿದ ಬೆಲೆಯದು, ಇಸ್ರಯೇಲ ಜನರು ಒಪ್ಪಿದ ಮೊತ್ತವದು,” ಎಂದು ವಚನಿಸಿದ ಪ್ರವಾದಿ ಯೆರೆಮೀಯನ ಮಾತುಗಳು ಈಡೇರಿದವು.


ಪಿಲಾತನಿಂದ ವಿಚಾರಣೆ
( ಮಾರ್ಕ. 15:2-5 ; ಲೂಕ. 23:3-5 ; ಯೊವಾ. 18:33-38 )

11 ಯೇಸುಸ್ವಾಮಿಯನ್ನು ರಾಜ್ಯಪಾಲನ ಮುಂದೆ ನಿಲ್ಲಿಸಿದರು. “ನೀನು ಯೆಹೂದ್ಯರ ಅರಸನೋ?” ಎಂದು ರಾಜ್ಯಪಾಲ ಪ್ರಶ್ನಿಸಿದನು. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಮರುನುಡಿದರು.

12 ಆದರೆ ಮುಖ್ಯಯಾಜಕರೂ ಊರಪ್ರಮುಖರೂ ಮಾಡಿದ ಆಪಾದನೆಗಳಿಗೆ ಅವರು ಏನೂ ಉತ್ತರಕೊಡಲಿಲ್ಲ.

13 ಆಗ ಪಿಲಾತನು, “ಇವರು ನಿನಗೆ ವಿರುದ್ಧ ಇಷ್ಟೆಲ್ಲಾ ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೆ?” ಎಂದನು.

14 ಯೇಸು ಯಾವುದಕ್ಕೂ ಉತ್ತರಕೊಡಲಿಲ್ಲ. ಇದರಿಂದ ರಾಜ್ಯಪಾಲನಿಗೆ ಅತ್ಯಾಶ್ಚರ್ಯವಾಯಿತು.


ಯೇಸುಕ್ರಿಸ್ತನೋ? ಯೇಸು ಬರಬ್ಬನೋ?
( ಮಾರ್ಕ. 15:6-15 ; ಲೂಕ. 23:13-25 ; ಯೊವಾ. 18:39—19:16 )

15 ಪ್ರತಿ ಪಾಸ್ಕ ಹಬ್ಬದ ಸಂದರ್ಭದಲ್ಲಿ ಜನರು ಬಯಸುವ ಒಬ್ಬ ಕೈದಿಯನ್ನು ಬಿಡುಗಡೆಮಾಡುವುದು ರಾಜ್ಯಪಾಲನ ಪದ್ಧತಿಯಾಗಿತ್ತು.

16 ಆಗ ಬರಬ್ಬನೆಂಬ ಕುಪ್ರಸಿದ್ಧ ಕೈದಿಯೊಬ್ಬನು ಸೆರೆಯಲ್ಲಿದ್ದನು.

17 ಹೀಗಿರಲಾಗಿ, ಪಿಲಾತನು ಅಲ್ಲಿ ಕೂಡಿದ್ದ ಜನರನ್ನು ಉದ್ದೇಶಿಸಿ, “ನಾನು ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನೋ?’ ಎಂದು ಕೇಳಿದನು.

18 ಆ ಜನರು ಅಸೂಯೆಯಿಂದಲೇ ಯೇಸುವನ್ನು ಹಿಡಿದೊಪ್ಪಿಸಿದ್ದಾರೆಂದು ಅವನಿಗೆ ಅರಿವಾಗಿತ್ತು.

19 ಅದೂ ಅಲ್ಲದೆ, ಪಿಲಾತನು ನ್ಯಾಯಪೀಠದಲ್ಲಿ ಕುಳಿತಿರುವಾಗ, “ನೀವು ಆ ಸತ್ಪುರುಷನ ತಂಟೆಗೆ ಹೋಗಬೇಡಿ; ಆತನ ದೆಸೆಯಿಂದ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ,” ಎಂದು ಅವನ ಪತ್ನಿ ಹೇಳಿಕಳುಹಿಸಿದಳು.

20 ಇತ್ತ, ಬರಬ್ಬನನ್ನು ಬಿಡುಗಡೆಮಾಡಿ ಯೇಸುವನ್ನು ಕೊಲ್ಲಬೇಕೆಂದು ಕೇಳಿಕೊಳ್ಳುವಂತೆ ಮುಖ್ಯಯಾಜಕರು ಮತ್ತು ಪ್ರಮುಖರು ಜನರನ್ನು ಪ್ರಚೋದಿಸಿದರು.

21 ರಾಜ್ಯಪಾಲನು ಪುನಃ ಜನರ ಗುಂಪನ್ನು ನೋಡಿ, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಲಿ?” ಎಂದು ಕೇಳಿದನು. ಅದಕ್ಕೆ ಅವರು “ಬರಬ್ಬನನ್ನೇ” ಎಂದು ಉತ್ತರಕೊಟ್ಟರು.

22 “ಹಾಗಾದರೆ, ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನು ಏನುಮಾಡಲಿ?” ಎಂದು ಪಿಲಾತನು ಮರುಪ್ರಶ್ನೆ ಹಾಕಿದನು. ಅವರೆಲ್ಲರು, “ಅವನನ್ನು ಶಿಲುಬೆಗೇರಿಸಿ,” ಎಂದು ಉತ್ತರಿಸಿದರು.

23 “ಏಕೆ? ಇವನೇನು ಕೇಡುಮಾಡಿದ್ದಾನೆ?” ಎಂದು ಪಿಲಾತನು ಕೇಳಲು, “ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಅವರು ಇನ್ನೂ ಹೆಚ್ಚಾಗಿ ಆರ್ಭಟಿಸಿದರು.


ಕೈ ತೊಳೆದುಕೊಂಡರೆ ಕರ್ತವ್ಯ ನೀಗೀತೆ?

24 ಪಿಲಾತನು ತನ್ನ ಪ್ರಯತ್ನದಿಂದ ಏನೂ ಫಲಿಸುತ್ತಿಲ್ಲವೆಂದೂ ಅದಕ್ಕೆ ಬದಲಾಗಿ ದಂಗೆ ಏಳುವ ಸೂಚನೆಯಿದೆಯೆಂದೂ ಮನಗಂಡನು. ಆದುದರಿಂದ ನೀರನ್ನು ತರಿಸಿ, “ಈ ನಿರಪರಾಧಿಯ ರಕ್ತಪಾತಕ್ಕೆ ಹೊಣೆ ನಾನಲ್ಲ; ಅದಕ್ಕೆ ನೀವೇ ಹೊಣೆಗಾರರು,” ಎಂದು ಹೇಳಿ ಜನರೆದುರಿಗೆ ಕೈ ತೊಳೆದುಕೊಂಡನು.

25 ಅದಕ್ಕೆ ಜನರೆಲ್ಲರೂ, “ಅವನ ರಕ್ತ ನಮ್ಮ ಮೇಲೂ ನಮ್ಮ ಮಕ್ಕಳ ಮೇಲೂ ಇರಲಿ,” ಎಂದು ಕೂಗಿಕೊಂಡರು.

26 ಬಳಿಕ ಪಿಲಾತನು ಅವರ ಇಷ್ಟದಂತೆಯೇ ಬರಬ್ಬನನ್ನು ಬಿಟ್ಟುಕೊಟ್ಟನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೇರಿಸಲು ಒಪ್ಪಿಸಿಬಿಟ್ಟನು.


ಸೈನಿಕರ ಕುಚೋದ್ಯ
( ಮಾರ್ಕ. 15:16-20 ; ಯೊವಾ. 19:2-3 )

27 ರಾಜ್ಯಪಾಲನ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಅವರ ಸೈನ್ಯಪಡೆಯೆಲ್ಲವು ಸ್ವಾಮಿಯನ್ನು ಸುತ್ತುಗಟ್ಟಿತು.

28 ಸೈನಿಕರು ಅವರ ಉಡುಪನ್ನು ಸುಲಿದು, ಕಡುಗೆಂಪು ಮೇಲಂಗಿಯೊಂದನ್ನು ಅವರಿಗೆ ಹೊದಿಸಿದರು.

29 ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ಕೈಗೆ ಒಂದು ಕೋಲನ್ನು ಕೊಟ್ಟರು. ಆಮೇಲೆ ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನಿಗೆ ಜಯವಾಗಲಿ!” ಎಂದು ಹೇಳಿ ಪರಿಹಾಸ್ಯಮಾಡಿದರು.

30 ಅವರ ಮೇಲೆ ಉಗುಳಿದರು. ಆ ಕೋಲನ್ನು ಕಿತ್ತುಕೊಂಡು ತಲೆಯಮೇಲೆ ಹೊಡೆದರು.

31 ಹೀಗೆ ಪರಿಹಾಸ್ಯಮಾಡಿ ಆದಮೇಲೆ, ಹೊದಿಸಿದ್ದ ಮೇಲಂಗಿಯನ್ನು ತೆಗೆದುಹಾಕಿ, ಅವರ ಉಡುಪನ್ನೇ ಪುನಃ ತೊಡಿಸಿದರು. ಬಳಿಕ ಅವರನ್ನು ಶಿಲುಬೆಗೇರಿಸಲು ಕರೆದೊಯ್ದರು.


ಗೊಲ್ಗೊಥಕ್ಕೆ ಯಾತ್ರೆ
( ಮಾರ್ಕ. 15:31-32 ; ಲೂಕ. 23:26-43 ; ಯೊವಾ. 19:17-27 )

32 ಸೈನಿಕರು ಯೇಸುಸ್ವಾಮಿಯನ್ನು ಕರೆದುಕೊಂಡು ಊರಹೊರಗೆ ಹೋಗುತ್ತಿದ್ದಾಗ ಸಿರೇನ್ ಪಟ್ಟಣದ ಸಿಮೋನ್ ಎಂಬಾತನನ್ನು ಕಂಡರು. ಯೇಸುವಿನ ಶಿಲುಬೆಯನ್ನು ಹೊತ್ತುಬರುವಂತೆ ಅವನನ್ನು ಬಲವಂತಮಾಡಿದರು.

33 ಅವರೆಲ್ಲರು ಗೊಲ್ಗೊಥ ಎಂಬ ಸ್ಥಳಕ್ಕೆ ಬಂದು ಸೇರಿದರು. (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ).

34 ಅಲ್ಲಿ ಕಹಿಬೆರೆಸಿದ ದ್ರಾಕ್ಷಾರಸವನ್ನು ಯೇಸುವಿಗೆ ಕುಡಿಯಲು ಕೊಟ್ಟರು. ಅವರು ಅದನ್ನು ರುಚಿನೋಡಿ ಕುಡಿಯಲು ಇಚ್ಛಿಸಲಿಲ್ಲ.

35 ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಅವರ ಉಡುಪಿಗಾಗಿ ಸೈನಿಕರು ಚೀಟುಹಾಕಿ ತಮ್ಮತಮ್ಮೊಳಗೇ ಹಂಚಿಕೊಂಡರು.

36 ಅನಂತರ ಅಲ್ಲೇ ಕುಳಿತು ಕಾವಲುಕಾಯುತ್ತಾ ಇದ್ದರು.

37 “ಈತ ಯೇಸು, ಯೆಹೂದ್ಯರ ಅರಸ” ಎಂದು ಬರೆದಿದ್ದ ದೋಷಾರೋಪಣೆಯ ಫಲಕವನ್ನು ಅವರ ಶಿರಸ್ಸಿನ ಮೇಲ್ಭಾಗದಲ್ಲಿ ಇಟ್ಟರು.

38 ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು.

39 ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ

40 “ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಈಗ ನಿನ್ನನ್ನು ನೀನೇ ರಕ್ಷಿಸಿಕೋ; ನೀನು ದೇವರ ಪುತ್ರನಾದರೆ ಶಿಲುಬೆಯಿಂದ ಇಳಿದು ಬಾ,” ಎಂದು ಮೂದಲಿಸಿದರು.

41 ಅಂತೆಯೇ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಪ್ರಮುಖರು,

42 “ಇವನು ಇತರರನ್ನು ರಕ್ಷಿಸಿದ; ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; ಇಸ್ರಯೇಲಿನ ಅರಸನಂತೆ! ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ಇವನನ್ನು ನಂಬುತ್ತೇವೆ.

43 ದೇವರಲ್ಲಿ ಭರವಸೆಯಿಟ್ಟಿದ್ದ; ತಾನು ‘ದೇವರ ಪುತ್ರ’ ಎಂದು ಹೇಳಿಕೊಳ್ಳುತ್ತಿದ್ದ; ದೇವರಿಗೆ ಇಷ್ಟವಾದವನು ಇವನಾಗಿದ್ದರೆ ದೇವರೇ ಬಂದು ಇವನನ್ನು ಬಿಡುಗಡೆಮಾಡಲಿ,” ಎಂದು ಅಪಹಾಸ್ಯಮಾಡುತ್ತಿದ್ದರು.

44 ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಕೂಡ ಅದೇ ರೀತಿ ಅಣಕಿಸಿದರು.


“ನಿಶ್ಚಯವಾಗಿ ಇವರು ದೇವರ ಕುಮಾರ!”
( ಮಾರ್ಕ. 15:33-41 ; ಲೂಕ. 23:44-49 ; ಯೊವಾ. 19:28-30 )

45 ಆಗ ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.

46 ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸುಸ್ವಾಮಿ, “ಏಲೀ, ಏಲೀ, ಲಮಾ ಸಬಕ್ತಾನಿ?” ಅಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು.

47 ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.

48 ಕೂಡಲೇ ಅವರಲೊಬ್ಬನು ಓಡಿಹೋಗಿ ಸ್ಪಂಜನ್ನು ತೆಗೆದುಕೊಂಡು ಬಂದು, ಅದನ್ನು ಹುಳಿರಸದಲ್ಲಿ ತೋಯಿಸಿ, ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಟ್ಟನು.

49 ಮಿಕ್ಕವರು, “ತಾಳು, ಇವನನ್ನು ರಕ್ಷಿಸಲು ಎಲೀಯನು ಬರುವನೋ, ನೋಡೋಣ,” ಎಂದರು.

50 ಯೇಸುಸ್ವಾಮಿ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಅಸುನೀಗಿದರು.

51 ಆಗ ಇಗೋ, ಮಹಾದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೆ ಇಬ್ಭಾಗವಾಗಿ ಸೀಳಿಹೋಯಿತು; ಭೂಮಿ ನಡುಗಿತು,

52 ಬಂಡೆಗಳು ಸಿಡಿದವು; ಸಮಾಧಿಗಳು ತೆರೆದುಕೊಂಡವು. ನಿಧನಹೊಂದಿದ್ದ ಅನೇಕ ಭಕ್ತರ ದೇಹಗಳು ಜೀವಂತವಾಗಿ ಎದ್ದವು.

53 ಹೀಗೆ ಎದ್ದವರು ಸಮಾಧಿಗಳಿಂದ ಹೊರಗೆಬಂದು, ಯೇಸು ಪುನರುತ್ಥಾನ ಹೊಂದಿದ ಬಳಿಕ ಪವಿತ್ರನಗರಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.

54 ಶತಾಧಿಪತಿ ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ನಡೆದುದೆಲ್ಲವನ್ನೂ ಕಂಡು ಭಯಭ್ರಾಂತರಾದರು. “ಸತ್ಯವಾಗಿಯೂ ಈತ ದೇವರ ಪುತ್ರನೇ ಸರಿ,” ಎಂದರು.

55 ಯೇಸುವನ್ನು ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಹಾಗೂ ಅವರ ಸೇವೆಮಾಡಿದ ಮಹಿಳೆಯರೂ ಅಲ್ಲಿದ್ದರು. ಅವರು ಇದೆಲ್ಲವನ್ನು ದೂರದಿಂದ ನೋಡುತ್ತಾ ಇದ್ದರು.

56 ಅವರಲ್ಲಿ ಮಗ್ದಲದ ಮರಿಯಳು, ಯಕೋಬ ಹಾಗೂ ಜೋಸೆಫನ ತಾಯಿ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿ ಇದ್ದರು.


ಸ್ವಾಮಿಯ ಸಮಾಧಿ
( ಮಾರ್ಕ. 15:42-47 ; ಲೂಕ. 23:50-56 ; ಯೊವಾ. 19:38-42 )

57 ಸಂಜೆಯಾಯಿತು. ಅರಿಮತಾಯ ಊರಿನ ಜೋಸೆಫ್ ಎಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಈತನು ಸಹ ಯೇಸುವಿನ ಶಿಷ್ಯನಾಗಿದ್ದನು.

58 ಈತ ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಬೇಡಿದನು. ಪಿಲಾತನು ಅದನ್ನು ಅವನಿಗೆ ಕೊಡುವಂತೆ ಅಪ್ಪಣೆಮಾಡಿದನು.

59 ಜೋಸೆಫ್ ಅದನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿ ವಸ್ತ್ರದಿಂದ ಸುತ್ತಿದನು.

60 ತನಗೆಂದು ಬಂಡೆಯಲ್ಲಿ ಕೊರೆಯಲಾಗಿದ್ದ ಹೊಸ ಸಮಾಧಿಯಲ್ಲಿ ಅದನ್ನು ಇರಿಸಿದನು. ಆ ಸಮಾಧಿಯ ದ್ವಾರಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು.

61 ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಅಲ್ಲೇ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು.


ಸಾವಿಗೆ ಸಮಾಧಿಯ ಸಾಕ್ಷಿ

62 ಮಾರನೆಯ ದಿನ, ಅಂದರೆ, ‘ಸಿದ್ಧತೆಯ ದಿನ’ ಕಳೆದ ಮೇಲೆ, ಮುಖ್ಯಯಾಜಕರು ಮತ್ತು ಫರಿಸಾಯರು ಕೂಡಿ ಪಿಲಾತನ ಬಳಿಗೆ ಬಂದರು.

63 “ಸ್ವಾಮೀ, ಆ ಮೋಸಗಾರ ಬದುಕಿದ್ದಾಗ, ‘ಮೂರು ದಿನಗಳಾದ ಮೇಲೆ ನಾನು ಪುನರ್ಜೀವಂತನಾಗಿ ಏಳುವೆನು,’ ಎಂದು ಹೇಳಿದ್ದು ನಮಗೆ ಜ್ಞಾಪಕದಲ್ಲಿದೆ.

64 ಆದ್ದರಿಂದ ಮೂರನೆಯ ದಿನದ ತನಕ ಅವನ ಸಮಾಧಿಗೆ ಭದ್ರವಾದ ಕಾವಲಿರಿಸಲು ಅಪ್ಪಣೆಯಾಗಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಅವನನ್ನು ಕದ್ದುಕೊಂಡುಹೋಗಿ, ಸತ್ತವನು ಬದುಕಿಬಂದಿದ್ದಾನೆ ಎಂದು ಜನರಿಗೆ ಹೇಳಬಹುದು; ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡುಮೋಸವಾದೀತು,” ಎಂದು ಕೇಳಿಕೊಂಡರು.

65 ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲವೆ? ಹೋಗಿ ನಿಮಗೆ ಬೇಕಾದಂತೆ ಭದ್ರಪಡಿಸಿಕೊಳ್ಳಿ,” ಎಂದನು.

66 ಅವರು ಹೋಗಿ, ಸಮಾಧಿಯ ಕಲ್ಲಿಗೆ ಮುದ್ರೆಹಾಕಿ, ಕಾವಲಿರಿಸಿ, ಸಮಾಧಿಯನ್ನು ಸುಭದ್ರಪಡಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು