Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 26 - ಕನ್ನಡ ಸತ್ಯವೇದವು C.L. Bible (BSI)


ಯೇಸುವಿನ ಕೊಲೆಗೆ ಒಳಸಂಚು
( ಮಾರ್ಕ. 14:1-2 ; ಲೂಕ. 22:1-2 ; ಯೊವಾ. 11:45-53 )

1 ಇದನ್ನೆಲ್ಲಾ ಬೋಧಿಸಿ ಆದಮೇಲೆ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ,

2 “ನಿಮಗೆ ಗೊತ್ತಿರುವ ಹಾಗೆ ಪಾಸ್ಕಹಬ್ಬಕ್ಕೆ ಇನ್ನು ಎರಡು ದಿನಗಳಿವೆ. ಆಗ ನರಪುತ್ರನನ್ನು ಶಿಲುಬೆಗೇರಿಸಲು ಹಿಡಿದೊಪ್ಪಿಸುವರು,” ಎಂದರು.

3 ಇತ್ತ ಮುಖ್ಯಯಾಜಕರು ಮತ್ತು ಪ್ರಜಾಪ್ರಮುಖರು ‘ಕಾಯಫ’ ಎಂಬ ಪ್ರಧಾನ ಯಾಜಕನ ಭವನದಲ್ಲಿ ಒಟ್ಟುಗೂಡಿದರು.

4 ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲಿಸುವುದಕ್ಕೆ ಸಮಾಲೋಚಿಸಿಕೊಂಡರು.

5 ಆದರೆ,, ‘ಹಬ್ಬದ ಸಂದರ್ಭದಲ್ಲಿ ನಾವು ಈ ಕಾರ್ಯವನ್ನು ಮಾಡಬಾರದು. ಏಕೆಂದರೆ ಜನರು ದಂಗೆಯೆದ್ದಾರು,’ ಎಂದೂ ಮಾತಾಡಿಕೊಂಡರು.


ಬೆಥಾನಿಯದಲ್ಲಿ ಅಭ್ಯಂಜನ
( ಮಾರ್ಕ. 14:3-9 ; ಯೊವಾ. 12:1-8 )

6 ಅಂದು ಯೇಸು ಬೆಥಾನಿಯದಲ್ಲಿ ಕುಷ್ಠರೋಗಿ ಸಿಮೋನನ ಮನೆಯಲ್ಲಿದ್ದರು.

7 ಆಗ ಮಹಿಳೆಯೊಬ್ಬಳು ಅಮೃತಶಿಲೆಯ ಭರಣಿಯ ತುಂಬ ಅತ್ಯಮೂಲ್ಯವಾದ ಸುಗಂಧತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಊಟಕ್ಕೆ ಕುಳಿತಿದ್ದ ಯೇಸುವಿನ ತಲೆಯ ಮೇಲೆ ಆ ತೈಲವನ್ನು ಸುರಿದಳು.

8 ಇದನ್ನು ಕಂಡ ಶಿಷ್ಯರು ಸಿಟ್ಟಿಗೆದ್ದರು. “ಏಕೆ ಇಷ್ಟೊಂದು ವ್ಯರ್ಥ?

9 ಈ ತೈಲವನ್ನು ಅಧಿಕ ಬೆಲೆಗೆ ಮಾರಿ, ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲಾ,” ಎಂದರು.

10 ಇದನ್ನು ಅರಿತುಕೊಂಡ ಯೇಸು ಶಿಷ್ಯರಿಗೆ, “ಈ ಮಹಿಳೆಗೇಕೆ ಕಿರುಕುಳ ಕೊಡುತ್ತೀರಿ? ಈಕೆ ನನಗೊಂದು ಸತ್ಕಾರ್ಯವನ್ನೇ ಮಾಡಿದ್ದಾಳೆ.

11 ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ.

12 ಈಕೆ ಈ ತೈಲವನ್ನು ನನ್ನ ದೇಹದ ಮೇಲೆ ಸುರಿದು ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ.

13 ಜಗತ್ತಿನಾದ್ಯಂತ, ಎಲ್ಲೆಲ್ಲಿ ಶುಭಸಂದೇಶ ಪ್ರಕಟವಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು. ಇದು ನಿಶ್ಚಯ,” ಎಂದರು.


ಯೂದನ ಗುರುದ್ರೋಹ
( ಮಾರ್ಕ. 14:10-11 ; ಲೂಕ. 22:3-6 )

14 ಇದಾದ ಮೇಲೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯಯಾಜಕರ ಬಳಿಗೆ ಹೋದನು.

15 “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ನಿಗದಿಮಾಡಿಕೊಟ್ಟರು.

16 ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು.


ಪಾಸ್ಕ ಮಹೋತ್ಸವಕ್ಕೆ ಸಿದ್ಧತೆ
( ಮಾರ್ಕ. 14:12-21 ; ಲೂಕ. 22:7-13 , 21-23 ; ಯೊವಾ. 13:21-30 )

17 ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು.

18 ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ. ‘ನನ್ನ ಕಾಲ ಸಮೀಪಿಸಿತು. ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು.

19 ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕಭೋಜನವನ್ನು ತಯಾರಿಸಿದರು.

20 ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡುಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು.

21 ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು.

22 ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾಮೀ, ನಾನೋ? ನಾನೋ?” ಎಂದು ಕೇಳತೊಡಗಿದರು.

23 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ.

24 ನರಪುತ್ರನೇನೋ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು.

25 ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.


ಪ್ರಭುವಿನ ಪವಿತ್ರ ಭೋಜನ
( ಮಾರ್ಕ. 14:22-26 ; ಲೂಕ. 22:14-20 ; ೧ ಕೊರಿಂಥ. 11:23-25 )

26 ಅವರೆಲ್ಲರೂ ಊಟಮಾಡುತ್ತಿರುವಾಗ ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ,” ಎಂದರು.

27 ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಡುತ್ತಾ ಇಂತೆಂದರು: “ಇದರಲ್ಲಿ ಇರುವುದನ್ನು ಎಲ್ಲರೂ ಪಾನಮಾಡಿ;

28 ಇದು ನನ್ನ ರಕ್ತ, ಸಮಸ್ತ ಜನರ ಪಾಪಕ್ಷಮೆಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ.

29 ನಾನು ನನ್ನ ಪಿತನ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸ ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.


ವಿಶ್ವಾಸದ್ರೋಹದ ಮುನ್ಸೂಚನೆ
( ಮಾರ್ಕ. 14:27-31 ; ಲೂಕ. 22:31-34 ; ಯೊವಾ. 13:36-38 )

30 ಬಳಿಕ ಅವರೆಲ್ಲರು ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು.

31 ಆಗ ಯೇಸು ತಮ್ಮ ಶಿಷ್ಯರಿಗೆ, “ ‘ಕುರಿಗಾಹಿಯನ್ನು ಕೊಲ್ಲುವೆನು ಕುರಿಗಳು ಚದರುವುವು,’ ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಅದರಂತೆಯೇ ನೀವೆಲ್ಲರೂ ಇದೇ ರಾತ್ರಿ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ.

32 ನಾನಾದರೋ ಪುನರುತ್ಥಾನಹೊಂದಿ ನಿಮಗಿಂತ ಮುಂದಾಗಿ ಗಲಿಲೇಯಕ್ಕೆ ಹೋಗುವೆನು,” ಎಂದರು.

33 ಇದನ್ನು ಕೇಳಿದ ಪೇತ್ರನು, “ಎಲ್ಲರು ತಮ್ಮಲ್ಲಿ ವಿಶ್ವಾಸಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಎಂದಿಗೂ ಹಾಗೆ ಮಾಡುವುದಿಲ್ಲ,” ಎಂದು ಸಾರಿ ಹೇಳಿದನು.

34 ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ನೀನು ಮೂರು ಬಾರಿ ನನ್ನನ್ನು ನಿರಾಕರಿಸುವೆ; ಇದು ಖಂಡಿತ,” ಎಂದರು.

35 ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ಸರಿಯೆ, ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ನುಡಿದನು. ಅದರಂತೆಯೇ ಉಳಿದ ಶಿಷ್ಯರೂ ದನಿಗೂಡಿಸಿದರು.


ಗೆತ್ಸೆಮನೆ ತೋಪಿನಲ್ಲಿ ಪ್ರಾರ್ಥನೆ
( ಮಾರ್ಕ. 14:32-42 ; ಲೂಕ. 22:39-46 )

36 ಅನಂತರ ಯೇಸುಸ್ವಾಮಿ ಅವರೊಡನೆ ಗೆತ್ಸೆಮನೆ ಎಂಬ ತೋಪಿಗೆ ಬಂದರು. ಅಲ್ಲಿ ಶಿಷ್ಯರಿಗೆ, “ನಾನು ಅತ್ತ ಹೋಗಿ ಪ್ರಾರ್ಥನೆಮಾಡಿ ಬರುವವರೆಗೂ ನೀವು ಇಲ್ಲೇ ಕುಳಿತಿರಿ,” ಎಂದರು.

37 ಬಳಿಕ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ತಮ್ಮೊಂದಿಗೆ ಕರೆದುಕೊಂಡು ಮುಂದಕ್ಕೆಹೋದರು. ಅಲ್ಲಿ ಸ್ವಾಮಿ ಚಿಂತಾಕ್ರಾಂತರಾದರು, ದುಃಖಭರಿತರಾದರು.

38 “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು.

39 ಅನಂತರ ಅವರು ಅಲ್ಲಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ನೆಲದ ಮೇಲೆ ಅಧೋಮುಖವಾಗಿ ಬಿದ್ದು ಪ್ರಾರ್ಥನೆಮಾಡಿದರು. “ನನ್ನ ಪಿತನೇ, ಸಾಧ್ಯವಾದರೆ ಈ ಕಷ್ಟದ ಕೊಡವು ನನ್ನಿಂದ ದೂರವಾಗಲಿ, ಆದರೂ ನನ್ನ ಚಿತ್ತದಂತೆ ಅಲ್ಲ, ನಿಮ್ಮ ಚಿತ್ತದಂತೆಯೇ ಆಗಲಿ,” ಎಂದರು.

40 ಅನಂತರ ಆ ಮೂವರು ಶಿಷ್ಯರ ಬಳಿಗೆ ಬಂದು, ಅವರು ನಿದ್ರಿಸುತ್ತಿರುವುದನ್ನು ಕಂಡರು. ಪೇತ್ರನನ್ನು ಉದ್ದೇಶಿಸಿ, “ಏನಿದು, ಒಂದು ಗಂಟೆಯಾದರೂ ನನ್ನೊಡನೆ ಎಚ್ಚರವಾಗಿರಲು ನಿಮ್ಮಿಂದ ಆಗದೇ ಹೋಯಿತೇ?

41 ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥನೆಮಾಡಿರಿ. ಆತ್ಮಕ್ಕೇನೊ ಆಸಕ್ತಿ ಇದೆ, ಆದರೆ ದೇಹಕ್ಕೆ ಶಕ್ತಿಸಾಲದು,” ಎಂದರು.

42 ಎರಡನೆಯ ಬಾರಿ ಹಿಂದಕ್ಕೆ ಹೋಗಿ ಇಂತೆಂದು ಪ್ರಾರ್ಥನೆಮಾಡಿದರು: “ನನ್ನ ಪಿತನೇ, ನಾನು ಸೇವಿಸದ ಹೊರತು ಈ ಕಷ್ಟದ ಕೊಡ ನನ್ನಿಂದ ತೊಲಗದಾದರೆ ಅದು ನಿಮ್ಮ ಚಿತ್ತದಂತೆಯೇ ಆಗಲಿ,”

43 ಯೇಸು ಮರಳಿ ಆ ಶಿಷ್ಯರ ಬಳಿಗೆ ಬಂದಾಗ ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು. ಅವರ ಕಣ್ಣುಗಳು ಭಾರವಾಗಿ ಇದ್ದವು.

44 ಪುನಃ ಅವರನ್ನು ಬಿಟ್ಟು ಹಿಂದಿರುಗಿ ಮೂರನೆಯ ಬಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು.

45 ಅದಾದ ಬಳಿಕ ಶಿಷ್ಯರನ್ನು ಸಮೀಪಿಸಿ, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಾ ಇರುವಿರೋ? ಸಾಕು, ಸಮಯ ಸಮೀಪಿಸಿಬಿಟ್ಟಿತು. ನರಪುತ್ರನು ದುರ್ಜನರ ಕೈವಶವಾಗಲಿದ್ದಾನೆ.

46 ಎದ್ದೇಳಿ, ಹೋಗೋಣ. ನನಗೆ ದ್ರೋಹ ಬಗೆಯುವವನು ಹತ್ತಿರವೇ ಇದ್ದಾನೆ, ನೋಡಿ,” ಎಂದರು.


ಮುದ್ದಿಟ್ಟ ಮಹಾದ್ರೋಹಿ
( ಮಾರ್ಕ. 14:43-50 ; ಲೂಕ. 22:47-53 ; ಯೊವಾ. 18:2-12 )

47 ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ, ಹನ್ನೆರಡುಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದಿದ್ದ ಒಂದು ದೊಡ್ಡ ಗುಂಪು ಅವನೊಂದಿಗೆ ಇತ್ತು. ಮುಖ್ಯಯಾಜಕರೂ ಜನರ ಪ್ರಮುಖರೂ ಅವರನ್ನು ಕಳುಹಿಸಿದ್ದರು.

48 ‘ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಆ ವ್ಯಕ್ತಿ. ಆತನನ್ನು ಹಿಡಿದುಕೊಳ್ಳಿ,’ ಎಂದು ಆ ಗುರುದ್ರೋಹಿ ಅವರಿಗೆ ಮೊದಲೇ ಸೂಚನೆಕೊಟ್ಟಿದ್ದನು.

49 ಅದರಂತೆಯೇ ಅವನು ಯೇಸುಸ್ವಾಮಿಯ ಸಮೀಪಕ್ಕೆ ನೇರವಾಗಿ ಬಂದು, “ಗುರುವೇ, ನಮಸ್ಕಾರ,” ಎಂದು ಹೇಳುತ್ತಾ ಅವರಿಗೆ ಮುದ್ದಿಟ್ಟನು.

50 ಯೇಸು ಅವನಿಗೆ, “ಮಿತ್ರಾ, ನೀನು ಮಾಡಬಂದ ಕಾರ್ಯವನ್ನು ಮಾಡಿಮುಗಿಸು,” ಎಂದರು. ಆಗ ಆ ಜನರು ಹತ್ತಿರಕ್ಕೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.

51 ಕೂಡಲೆ ಯೇಸುವಿನ ಸಂಗಡ ಇದ್ದ ಒಬ್ಬನು ತನ್ನ ಖಡ್ಗವನ್ನು ಹಿರಿದು, ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.

52 ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಖಡ್ಗ ಎತ್ತಿದವರೆಲ್ಲರೂ ಖಡ್ಗದಿಂದಲೇ ಹತರಾಗುವರು.

53 ನಾನು ನನ್ನ ಪಿತನನ್ನು ಕೇಳಿಕೊಂಡರೆ ಅವರು ತಕ್ಷಣವೇ ಹನ್ನೆರಡು ದಳಗಳಿಗಿಂತಲೂ ಹೆಚ್ಚು ದೇವದೂತರನ್ನು ಕಳಿಸುವುದಿಲ್ಲವೆಂದುಕೊಂಡೆಯಾ?

54 ಆದರೆ, ಈ ಪ್ರಕಾರವೇ ಆಗಬೇಕು ಎನ್ನುವ ಪವಿತ್ರಗ್ರಂಥದ ವಾಕ್ಯ ನೆರವೇರುವುದಾದರೂ ಹೇಗೆ?” ಎಂದರು.

55 ಅದೇ ಸಂದರ್ಭದಲ್ಲಿ ಯೇಸುಸ್ವಾಮಿ ಜನರ ಗುಂಪನ್ನು ಉದ್ದೇಶಿಸಿ, “ದರೋಡೆಗಾರನನ್ನು ಹಿಡಿಯುವುದಕ್ಕೋ ಎಂಬಂತೆ ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸಲು ಬರಬೇಕಾಗಿತ್ತೆ? ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ಕುಳಿತು ಬೋಧನೆಮಾಡುತ್ತಾ ಇದ್ದೆ. ಆಗ ನೀವು ನನ್ನನ್ನು ಬಂಧಿಸಲಿಲ್ಲ.

56 ಆದರೆ ಪವಿತ್ರಗ್ರಂಥದ ಪ್ರವಾದನೆಗಳು ಈಡೇರಲೆಂದೇ ಇದೆಲ್ಲಾ ಜರುಗಿದೆ,” ಎಂದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನಮಾಡಿದರು.


ಯೆಹೂದ್ಯ ನ್ಯಾಯಸ್ಥಾನದ ಮುಂದೆ ಯೇಸು
( ಮಾರ್ಕ. 14:53-65 ; ಲೂಕ. 22:54-71 ; ಯೊವಾ. 18:13-24 )

57 ಬಳಿಕ ಯೇಸುಸ್ವಾಮಿಯನ್ನು ಬಂಧಿಸಿದ್ದವರು ಅವರನ್ನು ಪ್ರಧಾನಯಾಜಕ ಕಾಯಫನ ಬಳಿಗೆ ಕರೆದೊಯ್ದರು.

58 ಅಲ್ಲಿ ಧರ್ಮಶಾಸ್ತ್ರಿಗಳೂ ಪ್ರಮುಖರೂ ಸಭೆಸೇರಿದ್ದರು. ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನಯಾಜಕನ ಭವನದವರೆಗೂ ಬಂದು, ಹೊರಾಂಗಣವನ್ನು ಹೊಕ್ಕು ಪಹರೆಯವರ ಜೊತೆ ಕುಳಿತುಕೊಂಡನು. ಇದೆಲ್ಲ ಹೇಗೆ ಕೊನೆಗೊಳ್ಳುವುದೆಂದು ನೋಡಬೇಕೆಂಬ ಉದ್ದೇಶ ಅವನದಾಗಿತ್ತು.

59 ಇತ್ತ ಮುಖ್ಯಯಾಜಕರೂ ಉಚ್ಛನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಸುಳ್ಳುಸಾಕ್ಷಿಯನ್ನು ಹುಡುಕುತ್ತಿದ್ದರು.

60 ಹಲವಾರು ಸುಳ್ಳುಸಾಕ್ಷಿಗಳು ಮುಂದೆ ಬಂದರು. ಆದರೂ ಸರಿಯಾದ ಒಂದು ಸಾಕ್ಷ್ಯವೂ ಅವರಿಗೆ ದೊರಕಲಿಲ್ಲ. ಕಡೆಗೆ ಇಬ್ಬರು ಮುಂದೆ ಬಂದು,

61 “ ‘ಮಹಾದೇವಾಲಯವನ್ನು ಕೆಡವಿಬಿಟ್ಟು ಅದನ್ನು ಮೂರು ದಿನಗಳಲ್ಲಿ ಮರಳಿ ಕಟ್ಟುವ ಶಕ್ತಿ ನನಗಿದೆ,’ ಎಂದು ಇವನು ಹೇಳಿದ್ದಾನೆ,” ಎಂದರು.

62 ಆಗ ಪ್ರಧಾನಯಾಜಕರು ಎದ್ದುನಿಂತು ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರ ಏನು?” ಎಂದು ಪ್ರಶ್ನಿಸಿದರು.

63 ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ.

64 ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ; ಮಾತ್ರವಲ್ಲ, ನಾನು ಹೇಳುವುದನ್ನು ಕೇಳಿ; ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ಇನ್ನು ಮುಂದಕ್ಕೆ ಕಾಣುವಿರಿ,” ಎಂದರು.

65 ಇದನ್ನು ಕೇಳಿದ್ದೇ ಪ್ರಧಾನಯಾಜಕನು ತನ್ನ ಉಡುಪನ್ನು ಕೋಪದಿಂದ ಹರಿದುಕೊಂಡನು. “ಇವನು ದೇವದೂಷಣೆ ಆಡಿದ್ದಾನೆ. ಇನ್ನು ನಮಗೆ ಸಾಕ್ಷಿಗಳು ಏತಕ್ಕೆ?

66 ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ. ಈಗ ನಿಮ್ಮ ತೀರ್ಮಾನ ಏನು?” ಎಂದು ಕೇಳಿದನು. ಅವರು, “ಇವನಿಗೆ ಮರಣದಂಡನೆ ಆಗಬೇಕು,” ಎಂದು ಉತ್ತರಕೊಟ್ಟರು.

67 ಬಳಿಕ ಅವರು ಯೇಸುಸ್ವಾಮಿಯ ಮುಖದ ಮೇಲೆ ಉಗುಳಿದರು; ಅವರನ್ನು ಗುದ್ದಿದರು.

68 ಕೆಲವರು ಅವರ ಕೆನ್ನೆಗೆ ಹೊಡೆದು, “ಎಲೈ ಕ್ರಿಸ್ತಾ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದಿಸಿ ಹೇಳು,” ಎಂದರು.


ಪೇತ್ರನ ವಿಶ್ವಾಸದ ಪತನ ಮತ್ತು ಪಶ್ಚಾತ್ತಾಪ
( ಮಾರ್ಕ. 14:66-72 ; ಲೂಕ. 22:56-62 ; ಯೊವಾ. 18:15-27 )

69 ಇತ್ತ ಪೇತ್ರನು ಹೊರಾಂಗಣದಲ್ಲಿ ಕುಳಿತು ಇದ್ದನು. ದಾಸಿಯೊಬ್ಬಳು ಆತನ ಬಳಿಗೆ ಬಂದು, “ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು,” ಎಂದಳು.

70 “ನೀನು ಹೇಳುವುದು ಏನೆಂದು ನನಗೆ ತಿಳಿಯದು,” ಎಂದು ಪೇತ್ರನು ಎಲ್ಲರ ಮುಂದೆ ನಿರಾಕರಿಸಿದನು.

71 ಆತ ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿ ಬಂದಾಗ ಇನ್ನೊಬ್ಬ ದಾಸಿ ಆತನನ್ನು ಕಂಡು, “ಈತ ನಜರೇತಿನ ಯೇಸುವಿನೊಂದಿಗೆ ಇದ್ದವನೇ,” ಎಂದು ಅಲ್ಲಿದ್ದವರಿಗೆ ತಿಳಿಸಿದಳು.

72 ಪೇತ್ರನು, “ಆ ಮನುಷ್ಯ ಯಾರೋ ನಾನರಿಯೆ,” ಎಂದು ಆಣೆಯಿಟ್ಟು ಇನೊಮ್ಮೆ ನಿರಾಕರಿಸಿದನು.

73 ಸ್ವಲ್ಪಹೊತ್ತಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನ ಹತ್ತಿರಕ್ಕೆ ಬಂದು, “ಖಂಡಿತವಾಗಿ ನೀನೂ ಅವರಲ್ಲಿ ಒಬ್ಬನು. ನೀನು ಮಾತನಾಡುವ ರೀತಿಯೇ ನಿನ್ನನ್ನು ತೋರಿಸಿಕೊಡುತ್ತದೆ,” ಎಂದು ಹೇಳಿದರು.

74 ಆಗ ಪೇತ್ರನು ತನ್ನನ್ನೇ ಶಪಿಸಿಕೊಳ್ಳಲಾರಂಭಿಸಿ, “ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು,” ಎಂದು ಆಣೆಯಿಟ್ಟು ಹೇಳಿದನು.

75 ಆ ಕ್ಷಣವೇ ಕೋಳಿಕೂಗಿತು. “ಕೋಳಿಕೂಗುವ ಮೊದಲೇ, ‘ಆತನನ್ನು ನಾನರಿಯೆ’ಎಂದು ನನ್ನನ್ನು ಮೂರುಬಾರಿ ನಿರಾಕರಿಸುವೆ,” ಎಂದ ಸ್ವಾಮಿಯ ನುಡಿ ಪೇತ್ರನ ನೆನಪಿಗೆ ಬಂದಿತು. ಆತನು ಅಲ್ಲಿಂದ ಹೊರಗೆ ಹೋಗಿ, ಬಹಳವಾಗಿ ವ್ಯಥೆಪಟ್ಟು ಅತ್ತನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು