Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 24 - ಕನ್ನಡ ಸತ್ಯವೇದವು C.L. Bible (BSI)


ನೆಲಸಮವಾಗಲಿರುವ ಮಹಾದೇವಾಲಯ
( ಮಾರ್ಕ. 13:1-2 ; ಲೂಕ. 21:5-6 )

1 ಯೇಸುಸ್ವಾಮಿ ಮಹಾದೇವಾಲಯವನ್ನು ಬಿಟ್ಟುಹೋಗುತ್ತಿದ್ದರು. ಅದರ ಕಟ್ಟಡಗಳತ್ತ ಅವರ ಗಮನ ಸೆಳೆಯಲು ಶಿಷ್ಯರು ಅವರ ಬಳಿಗೆ ಬಂದರು.

2 ಆಗ ಯೇಸು, “ಇವುಗಳನ್ನೆಲ್ಲಾ ನೀವು ನೋಡುತ್ತಾ ಇದ್ದೀರಲ್ಲವೆ? ನಾನು ನಿಮಗೆ ಹೇಳುತ್ತೇನೆ ಕೇಳಿ: ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವರು,” ಎಂದರು.


ಕಾಲಾಂತ್ಯದ ಮುನ್ನ ಕಷ್ಟಸಂಕಟಗಳು
( ಮಾರ್ಕ. 13:3-13 ; ಲೂಕ. 21:7-19 )

3 ಬಳಿಕ ಯೇಸುಸ್ವಾಮಿ ಓಲಿವ್ ಗುಡ್ಡದ ಮೇಲೆ ಕುಳಿತರು. ಶಿಷ್ಯರು ಅವರ ಬಳಿಗೆ ಬಂದು, “ಇದೆಲ್ಲಾ ಸಂಭವಿಸುವುದು ಯಾವಾಗ? ನಿಮ್ಮ ಪುನರಾಗಮನದ ಹಾಗೂ ಕಾಲಾಂತ್ಯದ ಪೂರ್ವಸೂಚನೆ ಏನು? ನಮಗೆ ತಿಳಿಸಿ,” ಎಂದು ಪ್ರತ್ಯೇಕವಾಗಿ ಕೇಳಿಕೊಂಡರು.

4 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ.

5 ಅನೇಕರು ‘ನಾನೇ ಕ್ರಿಸ್ತ, ನಾನೇ ಕ್ರಿಸ್ತ,’ ಎನ್ನುತ್ತಾ ನನ್ನ ಹೆಸರನ್ನೇ ಹೇಳಿಕೊಂಡು ಬರುವರು. ಮಾತ್ರವಲ್ಲ, ಎಷ್ಟೋ ಜನರನ್ನು ತಪ್ಪುದಾರಿಗೆಳೆಯುವರು.

6 ಇದೂ ಅಲ್ಲದೆ, ನೀವು ರಣಕಹಳೆಗಳನ್ನೂ ಸಮರಗಳ ಸುದ್ದಿಯನ್ನೂ ಕೇಳುವಿರಿ. ಆಗ ಕಳವಳಪಡದಂತೆ ಎಚ್ಚರಿಕೆಯಿಂದಿರಿ. ಇವೆಲ್ಲವು ಸಂಭವಿಸಲೇಬೇಕು. ಆದರೆ ಇದಿನ್ನೂ ಕಾಲಾಂತ್ಯವಲ್ಲ.

7 ಜನಾಂಗಕ್ಕೆ ವಿರುದ್ಧ ಜನಾಂಗವೂ ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರವೂ ಯುದ್ಧಕ್ಕಿಳಿಯುವುವು. ಅಲ್ಲಲ್ಲಿ ಕ್ಷಾಮಡಾಮರಗಳೂ ಭೂಕಂಪಗಳೂ ಸಂಭವಿಸುವುವು.

8 ಇವೆಲ್ಲವೂ ಪ್ರಸವ ವೇದನೆಯ ಪ್ರಾರಂಭ ಮಾತ್ರ.

9 “ಬಳಿಕ ಜನರು ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು. ನೀವು ನನ್ನವರು, ಆದುದರಿಂದಲೇ ಜನಾಂಗಗಳೆಲ್ಲ ನಿಮ್ಮನ್ನು ದ್ವೇಷಿಸುವುವು.

10 ಆ ದಿನಗಳಲ್ಲಿ ಬಹುಮಂದಿ ವಿಶ್ವಾಸಭ್ರಷ್ಟರಾಗುವರು, ಒಬ್ಬರಿಗೊಬ್ಬರು ದ್ರೋಹ ಬಗೆಯುವರು. ಒಬ್ಬರನ್ನೊಬ್ಬರು ದ್ವೇಷಿಸುವರು.

11 ಅನೇಕ ಸುಳ್ಳುಪ್ರವಾದಿಗಳು ತಲೆಯೆತ್ತಿಕೊಂಡು ಎಷ್ಟೋಮಂದಿಯನ್ನು ವಂಚಿಸುವರು.

12 ಭ್ರಷ್ಟಾಚಾರವು ಬೆಳೆದು ಬಹುಜನರ ಪ್ರೀತಿ ಉಡುಗಿಹೋಗುವುದು.

13 ಆದರೆ ಕೊನೆಯವರೆಗೂ ಸ್ಥಿರವಾಗಿರುವವರು ಜೀವೋದ್ಧಾರವನ್ನು ಹೊಂದುವರು.

14 ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸರ್ವಜನಾಂಗಗಳಿಗೂ ಸಾಕ್ಷಿಯಾಗಿ ಜಗತ್ತಿನಲ್ಲೆಲ್ಲಾ ಪ್ರಬೋಧಿಸಲಾಗುವುದು. ಅಂತ್ಯವು ಬರುವುದು ಅನಂತರವೇ.


ಭಯಾನಕ ಭವಿಷ್ಯ
( ಮಾರ್ಕ. 13:14-23 ; ಲೂಕ. 21:20-24 )

15 “ಪ್ರವಾದಿ ದಾನಿಯೇಲನು ಸೂಚಿಸಿರುವ ‘ವಿನಾಶಕರ ವಿಕಟ ಮೂರ್ತಿ’ ಪವಿತ್ರಸ್ಥಾನದಲ್ಲಿ ನಿಂತಿರುವುದನ್ನು ನೀವು ಕಾಣುವಿರಿ.

16 (ಇದನ್ನು ಓದುವವನು ಅರ್ಥಮಾಡಿಕೊಳ್ಳಲಿ). ಆಗ ಜುದೇಯದಲ್ಲಿರುವ ಜನರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ.

17 ಮಾಳಿಗೆಯ ಮೇಲಿರುವವನು ಇಳಿದು ಮನೆಯಿಂದ ಏನನ್ನೂ ತೆಗೆದುಕೊಳ್ಳದೆ ಓಡಿಹೋಗಲಿ.

18 ಹೊಲಗದ್ದೆಯಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂದಿರುಗದಿರಲಿ.

19 ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಹಾಗೂ ಹಾಲೂಡಿಸುವ ತಾಯಂದಿರ ಗೋಳೇನು!

20 ಈ ನಿಮ್ಮ ಪಲಾಯನ ಚಳಿಗಾಲದಲ್ಲಾಗಲಿ, ಸಬ್ಬತ್ ದಿನದಲ್ಲಾಗಲಿ ಸಂಭವಿಸದಂತೆ ಪ್ರಾರ್ಥನೆಮಾಡಿರಿ.

21 ಏಕೆಂದರೆ ಆಗ ಬರಲಿರುವ ಸಂಕಷ್ಟಗಳು ಸೃಷ್ಟಿಯ ಆದಿಯಿಂದ ಇಂದಿನವರೆಗೂ ಇರಲಿಲ್ಲ; ಇನ್ನು ಮುಂದಕ್ಕೂ ಇರುವುದಿಲ್ಲ.

22 ಆ ದಿನಗಳ ಅವಧಿಯನ್ನು ಕಡಿಮೆಮಾಡದೆ ಇದ್ದಲ್ಲಿ ಯಾವ ಮಾನವನೂ ಉಳಿಯುವಂತಿಲ್ಲ. ಆದರೆ ದೇವರು ಆರಿಸಿಕೊಂಡವರ ಪ್ರಯುಕ್ತ ಆ ದಿನಗಳನ್ನು ಕಡಿಮೆಮಾಡಲಾಗುವುದು.


ಹುಸಿ ಉದ್ಧಾರಕರು

23 “ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತ ಇಲ್ಲಿದ್ದಾನೆ, ಅಗೋ, ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿ.

24 ಏಕೆಂದರೆ ಕಪಟ ಉದ್ಧಾರಕರೂ ವಂಚಕ ಪ್ರವಾದಿಗಳೂ ತಲೆಯೆತ್ತಿಕೊಳ್ಳುವರು. ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನೂ ಮೋಸಗೊಳಿಸುವಂತಹ ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ಮಾಡಿತೋರಿಸುವರು.

25 ಎಚ್ಚರಿಕೆ! ನಾನು ನಿಮಗೆ ಮುಂಚಿತವಾಗಿಯೇ ಇದನ್ನು ತಿಳಿಸುತ್ತಾ ಇದ್ದೇನೆ.

26 ಆದ್ದರಿಂದ ಯಾರಾದರು, ‘ಅಗೋ ಕ್ರಿಸ್ತ ಅಡವಿಯಲ್ಲಿದ್ದಾನೆ,’ ಎಂದರೆ ಅಲ್ಲಿಗೆ ಹೋಗಬೇಡಿ. ‘ಇಗೋ, ಇಲ್ಲೇ ಒಳಗೆ ಅವಿತುಕೊಂಡಿದ್ದಾನೆ,’ ಎಂದರೂ ಅದನ್ನು ನಂಬಬೇಡಿ.

27 ಏಕೆಂದರೆ ಪೂರ್ವದಿಂದ ಮಿನುಗಿ ಪಶ್ಚಿಮದವರೆಗೂ ಹೊಳೆಯುವ ಮಿಂಚಿನಂತೆ ಇರುವುದು ನರಪುತ್ರನ ಆಗಮನ.

28 ಹೆಣವಿದ್ದೆಡೆ ರಣಹದ್ದುಗಳು ಬಂದು ಸೇರುತ್ತವೆ.


ನರಪುತ್ರನ ಪುನರಾಗಮನದ ಕುರುಹು
( ಮಾರ್ಕ. 13:24-27 ; ಲೂಕ. 21:25-28 )

29 “ಆ ದಿನಗಳ ಸಂಕಷ್ಟಗಳು ಮುಗಿದ ಕೂಡಲೇ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಕಳಚಿ ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.

30 ಆಗ ನರಪುತ್ರನ ಚಿಹ್ನೆ ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಪೃಥ್ವಿಯ ಪ್ರಜೆಗಳೆಲ್ಲಾ ಅತ್ತು ಪ್ರಲಾಪಿಸುವರು. ನರಪುತ್ರನು ಶಕ್ತಿಸಾಮರ್ಥ್ಯದಿಂದಲೂ ಮಹಾಮಹಿಮೆಯಿಂದಲೂ ಮೇಘಾರೂಢನಾಗಿ ಆಗಮಿಸುವುದನ್ನು ಅವರು ಕಾಣುವರು.

31 ತುತೂರಿಯ ಘೋಷಣೆಯೊಂದಿಗೆ ಆತನು ತನ್ನ ದೂತರನ್ನು ನಾಲ್ಕು ದಿಕ್ಕುಗಳಿಗೂ ಕಳುಹಿಸುವನು. ಅವರು ಹೋಗಿ ಆತನಿಂದ ಆಯ್ಕೆಯಾದ ಜನರನ್ನು ವಿಶ್ವದ ಅಷ್ಟದಿಕ್ಕುಗಳಿಂದ ಒಟ್ಟುಗೂಡಿಸುವರು.


ಅಂಜೂರದ ಮರದಿಂದ ಮುಂಜಾಗರೂಕತೆಯ ಪಾಠ
( ಮಾರ್ಕ. 13:28-31 ; ಲೂಕ. 21:29-33 )

32 “ಅಂಜೂರದ ಮರದಿಂದ ಒಂದು ಪಾಠ ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ತಿಳಿದುಕೊಳ್ಳುತ್ತೀರಿ.

33 ಅಂತೆಯೇ ಇದೆಲ್ಲವನ್ನು ನೋಡುವಾಗ ನರಪುತ್ರನು ಸಮೀಪಿಸಿಬಿಟ್ಟಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ.

34 ಇದೆಲ್ಲವೂ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿಹೋಗದೆಂದು ನಿಮಗೆ ಒತ್ತಿ ಹೇಳುತ್ತೇನೆ.

35 ಭೂಮ್ಯಾಕಾಶಗಳು ಗತಿಸಿಹೋಗುವುವು; ಆದರೆ ನನ್ನ ಮಾತುಗಳು ಶಾಶ್ವತವಾಗಿ ನಿಲ್ಲುವುವು.


ಸದಾ ಸನ್ನದ್ಧರಾಗಿರಿ
( ಮಾರ್ಕ. 13:32-37 ; ಲೂಕ. 17:26-30 , 34-36 )

36 “ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುವುದೆಂದು ದೇವರೇ ಹೊರತು ಮತ್ತಾರೂ ಅರಿಯರು. ಸ್ವರ್ಗದ ದೂತರೇ ಆಗಲಿ, ಪುತ್ರನೇ ಆಗಲಿ ಅದನ್ನು ಅರಿಯರು.

37 ನೋವನ ಕಾಲದಲ್ಲಿ ಆದಂತೆಯೇ ನರಪುತ್ರನು ಬರುವಾಗಲೂ ಆಗುವುದು.

38 ಜಲಪ್ರಳಯಕ್ಕೆ ಹಿಂದಿನ ದಿನಗಳಲ್ಲಿ ನೋವನು ನಾವೆಯನ್ನು ಹತ್ತುವ ದಿನದವರೆಗೆ ಜನರು ತಿನ್ನುತ್ತಲೇ ಇದ್ದರು; ಕುಡಿಯುತ್ತಲೇ ಇದ್ದರು; ಮದುವೆ ಮಾಡಿಕೊಳ್ಳುವುದರಲ್ಲೂ ಮಾಡಿಕೊಡುವುದರಲ್ಲೂ ನಿರತರಾಗಿದ್ದರು.

39 ಜಲಪ್ರಳಯ ಬಂದು ಅವರನ್ನು ಕೊಚ್ಚಿಕೊಂಡು ಹೋಗುವ ತನಕ ಅದರ ಅರಿವೇ ಅವರಿಗಿರಲಿಲ್ಲ. ನರಪುತ್ರನು ಆಗಮಿಸುವಾಗಲೂ ಹಾಗೆಯೇ ನಡೆಯುವುದು.

40 ಆಗ ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು. ಇನ್ನೊಬ್ಬನನ್ನು ಬಿಡಲಾಗುವುದು.

41 ಒಂದೇ ಕಲ್ಲಿನಲ್ಲಿ ಬೀಸುತ್ತ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.

42 ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.

43 ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?

44 ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು.


ಮೆಚ್ಚತಕ್ಕ ಮೇಸ್ತ್ರಿ
( ಲೂಕ. 12:41-48 )

45 “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು.

46 ಯಜಮಾನನು ಮನೆಗೆ ಹಿಂದಿರುಗಿಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.

47 ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ.

48 ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,

49 ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದುಕುಡಿಯಲಾರಂಭಿಸಿದರೆ,

50 ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.

51 ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು