Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 22 - ಕನ್ನಡ ಸತ್ಯವೇದವು C.L. Bible (BSI)


ಆಹ್ವಾನಿತರೆಲ್ಲರೂ ಅರ್ಹರಲ್ಲ
( ಲೂಕ. 14:15-24 )

1 ಯೇಸುಸ್ವಾಮಿ ಮತ್ತೆ ಅವರೊಡನೆ ಸಾಮತಿಗಳಲ್ಲೇ ಮಾತನಾಡಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ;

2 ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ.

3 ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ.

4 ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿಕಳುಹಿಸಿದ.

5 ಆದರೂ ಆಹ್ವಾನಿತರು ಅಲಕ್ಷ್ಯಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟುಹೋದ.

6 ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದುಹಾಕಿದರು.

7 ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ.

8 ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು.

9 ನೀವು ಹೆದ್ದಾರಿಗಳಿಗೆ ಹೋಗಿ ಕಂಡಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ.

10 ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು.

11 “ಆಮೇಲೆ ರಾಜನು ಅತಿಥಿಗಳನ್ನು ನೋಡಲುಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ.

12 ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ.

13 ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ.

14 “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ.


ರಾಜ್ಯಭಕ್ತಿ ದೈವಭಕ್ತಿಗೆ ವಿರುದ್ಧವಲ್ಲ
( ಮಾರ್ಕ. 12:13-17 ; ಲೂಕ. 20:20-26 )

15 ಅನಂತರ ಫರಿಸಾಯರು ಒಟ್ಟುಗೂಡಿ ಯೇಸುವನ್ನು ಹೇಗೆ ಮಾತಿನಲ್ಲಿ ಸಿಕ್ಕಿಸುವುದೆಂದು ಸಮಾಲೋಚನೆ ಮಾಡಿಕೊಂಡರು.

16 ತಮ್ಮ ಶಿಷ್ಯರನ್ನು ಹೆರೋದನ ಪಕ್ಷದ ಕೆಲವರ ಸಮೇತ ಸ್ವಾಮಿಯ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು; ಎಂದೇ, ಸ್ಥಾನಮಾನಗಳಿಗೆ ಮಣಿಯದವರು. ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತಿದೆ.

17 ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆಕೊಡುವುದು ಧರ್ಮಸಮ್ಮತವೋ ಅಲ್ಲವೋ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುವಿರಾ?” ಎಂದು ಕೇಳಿದರು.

18 ಯೇಸು ಅವರ ಕುತಂತ್ರವನ್ನು ಅರಿತುಕೊಂಡು, “ಕಪಟಿಗಳೇ, ನನ್ನನ್ನೇಕೆ ಪರೀಕ್ಷಿಸುತ್ತೀರಿ?

19 ತೆರಿಗೆಗೆಂದು ಕೊಡಬೇಕಾದ ನಾಣ್ಯವನ್ನು ತೋರಿಸಿ,” ಎಂದರು. ಅವರೊಂದು ನಾಣ್ಯವನ್ನು ತಂದುಕೊಟ್ಟರು.

20 ಆಗ ಯೇಸು, “ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು.

21 ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು. “ಹಾಗಾದರೆ, ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಯೇಸು ಉತ್ತರಕೊಟ್ಟರು.

22 ಈ ಮಾತುಗಳನ್ನು ಕೇಳಿ ಅವರೆಲ್ಲರು ಬೆರಗಾದರು; ಯೇಸುವನ್ನು ಬಿಟ್ಟು ಅಲ್ಲಿಂದ ಹೊರಟೇಹೋದರು.


ಸತ್ತಮೇಲೆ ಸಂಸಾರಸುಖವುಂಟೇ?
( ಮಾರ್ಕ. 12:18-27 ; ಲೂಕ. 20:27-40 )

23 ಅದೇ ದಿನ ‘ಸದ್ದುಕಾಯರು’ ಯೇಸುಸ್ವಾಮಿಯ ಬಳಿಗೆ ಬಂದರು. ಸತ್ತಮೇಲೆ ಪುನರುತ್ಥಾನ ಇಲ್ಲ ಎಂಬುದು ಅವರ ಅಭಿಮತ.

24 ಅವರು ಸ್ವಾಮಿಯನ್ನು ಹೀಗೆಂದು ಪ್ರಶ್ನಿಸಿದರು: “ಬೋಧಕರೇ, ಮಕ್ಕಳಿಲ್ಲದೆ ಒಬ್ಬನು ಸತ್ತುಹೋದರೆ ಅವನ ಹೆಂಡತಿಯನ್ನು ತಮ್ಮನು ಮದುವೆಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,” ಎಂದು ಮೋಶೆ ಹೇಳಿದ್ದಾನಷ್ಟೆ.

25 ಒಮ್ಮೆ ನಮ್ಮಲ್ಲಿ ಏಳುಮಂದಿ ಅಣ್ಣತಮ್ಮಂದಿರು ಇದ್ದರು. ಅವರಲ್ಲಿ ಮೊದಲನೆಯವನು ಮದುವೆಯಾದ, ಸಂತಾನವಿಲ್ಲದೆ ಸತ್ತುಹೋದ. ಈ ಕಾರಣ ತನ್ನ ಹೆಂಡತಿಯನ್ನು ತಮ್ಮನಿಗೆ ಬಿಟ್ಟುಹೋದ.

26 ಅದರಂತೆಯೇ ಎರಡನೆಯವ, ಮೂರನೆಯವ, ಹೀಗೆ ಏಳನೆಯವನವರೆಗೂ ಸಂಭವಿಸಿತು.

27 ಅವರೆಲ್ಲರೂ ತೀರಿಹೋದ ಮೇಲೆ ಆ ಹೆಂಗಸೂ ಸತ್ತುಹೋದಳು.

28 ಹೀಗಿರುವಲ್ಲಿ, ಪುನರುತ್ಥಾನದ ದಿನ ಆಕೆ ಆ ಏಳುಮಂದಿ ಅಣ್ಣತಮ್ಮಂದಿರಲ್ಲಿ ಯಾರಿಗೆ ಮಡದಿಯಾಗುವಳು? ಅವರೆಲ್ಲರೂ ಆಕೆಯನ್ನು ಮದುವೆಯಾಗಿದ್ದರಲ್ಲವೇ?” ಎಂದರು.

29 ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಿಮ್ಮ ಅಭಿಪ್ರಾಯ ತಪ್ಪು. ಪವಿತ್ರಗ್ರಂಥವನ್ನಾಗಲಿ, ದೇವರ ಶಕ್ತಿಯನ್ನಾಗಲಿ ನೀವು ಅರ್ಥಮಾಡಿಕೊಂಡಿಲ್ಲ.

30 ಪುನರುತ್ಥಾನ ಹೊಂದಿದ ಮೇಲೆ ಜನರು ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಸ್ವರ್ಗದ ದೇವದೂತರಂತೆ ಅವರು ಇರುತ್ತಾರೆ.

31 ಇದಲ್ಲದೆ, ಸತ್ತವರು ಪುನರುತ್ಥಾನ ಹೊಂದುವ ವಿಷಯದಲ್ಲಿ ಹೇಳುವುದಾದರೆ,

32 ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು ಆಗಿದ್ದೇನೆ,’ ಎಂದು ದೇವರೇ ನಿಮಗೆ ಹೇಳಿರುವುದನ್ನು ನೀವು ಓದಿಲ್ಲವೆ? ಹೀಗಿರುವಾಗ ಅವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ,” ಎಂದರು.

33 ಇದನ್ನು ಕೇಳಿದ ಜನರ ಗುಂಪು ಯೇಸುವಿನ ಬೋಧನೆಯನ್ನು ಕುರಿತು ಅತ್ಯಾಶ್ಚರ್ಯಪಟ್ಟಿತು.


ಪ್ರಮುಖ ಕಟ್ಟಳೆ
( ಮಾರ್ಕ. 12:28-34 ; ಲೂಕ. 10:25-28 )

34 ಯೇಸುಸ್ವಾಮಿ ‘ಸದ್ದುಕಾಯ’ರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು.

35 ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು:

36 “ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?”

37 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’

38 ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ.

39 ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.’

40 ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು.


ಯೇಸು ದಾವೀದನ ಕುಲಪುತ್ರರಾದರೂ ಆತನಿಗೆ ಪ್ರಭು
( ಮಾರ್ಕ. 12:35-37 ; ಲೂಕ. 20:41-44 )

41 ಕೂಡಿಬಂದಿದ್ದ ಫರಿಸಾಯರಿಗೆ ಯೇಸು ಈ ಪ್ರಶ್ನೆ ಹಾಕಿದರು:

42 “ಅಭಿಷಿಕ್ತನಾದ ಲೋಕೋದ್ಧಾರಕನ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಆತ ಯಾರ ಮಗ?” ಅದಕ್ಕವರು, “ದಾವೀದನ ಪುತ್ರ” ಎಂದು ಉತ್ತರಿಸಿದರು.

43 ಆಗ ಯೇಸು, “ಹಾಗಾದರೆ, ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಆತನನ್ನು ‘ಪ್ರಭು’ ಎಂದು ಕರೆದಿದ್ದಾನಲ್ಲಾ. ಅದು ಹೇಗೆ?

44 ‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವ ತನಕ ನನ್ನ ಬಲಗಡೆ ಆಸೀನನಾಗಿರು ಎಂದು ನನ್ನ ‘ಪ್ರಭು’ವಿಗೆ ಸರ್ವೇಶ್ವರ ಹೇಳಿರುವರು.’ ಎಂದಿದ್ದಾನಲ್ಲವೆ?

45 “ಇಲ್ಲಿ ದಾವೀದನೇ ಆತನನ್ನು ‘ನನ್ನ ಪ್ರಭು’ ಎಂದು ಕರೆದಿರುವಾಗ ಆತ ದಾವೀದನಿಗೆ ಪುತ್ರನಾಗಿರುವುದು ಹೇಗೆ?” ಎಂದು ಕೇಳಿದರು.

46 ಇದಕ್ಕೆ ಉತ್ತರವಾಗಿ ಒಂದು ಮಾತು ಹೇಳಲೂ ಫರಿಸಾಯರಿಂದ ಆಗಲಿಲ್ಲ. ಅದು ಮಾತ್ರವಲ್ಲ, ಅಂದಿನಿಂದ ಯೇಸುವನ್ನು ಪ್ರಶ್ನಿಸಲು ಯಾರೂ ಧೈರ್ಯಗೊಳ್ಳಲಿಲ್ಲ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು