Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 21 - ಕನ್ನಡ ಸತ್ಯವೇದವು C.L. Bible (BSI)


ನಮ್ರ ಅರಸನ ಸಂಭ್ರಮ ಪ್ರವೇಶ
( ಮಾರ್ಕ. 11:1-11 ; ಲೂಕ. 19:28-40 ; ಯೊವಾ. 12:12-19 )

1 ಯೇಸುಸ್ವಾಮಿ ಮತ್ತು ಅವರ ಜೊತೆಯಲ್ಲಿದ್ದವರು ಜೆರುಸಲೇಮನ್ನು ಸಮೀಪಿಸಿದರು. ಓಲಿವ್ ಗುಡ್ಡದ ಬಳಿಯಿರುವ ಬೆತ್ಫಗೆ ಎಂಬ ಊರನ್ನು ಸೇರಿದರು.

2 ಅಲ್ಲಿ ಯೇಸು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗೆ ಇರುವ ಆ ಹಳ್ಳಿಗೆ ಹೋಗಿರಿ. ಅಲ್ಲಿ ಕಟ್ಟಿಹಾಕಿರುವ ಒಂದು ಹೇಸರಗತ್ತೆಯನ್ನೂ ಅದರ ಮರಿಯನ್ನೂ ಕಾಣುವಿರಿ. ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತನ್ನಿರಿ.

3 ಯಾವನಾದರೂ ನಿಮ್ಮನ್ನು ಏನಾದರೂ ಕೇಳಿದರೆ, ‘ಇವು ಪ್ರಭುವಿಗೆ ಬೇಕಾಗಿವೆ’ ಎನ್ನಿ. ಅವನು ತಕ್ಷಣ ಕಳುಹಿಸಿಕೊಡುವನು,” ಎಂದು ಹೇಳಿಕಳುಹಿಸಿದರು.

4-5 ‘ಸಿಯೋನ್ ನಗರಿಗೆ ಹೇಳು: ನಿನ್ನರಸ ಬರುತಿಹನು ದೀನನವ ಹೇಸರಗತ್ತೆಯೇರಿ ಕುಳಿತಿಹನು ಮರಿಹೇಸರಗತ್ತೆಯನೇರಿ ಸಾಗಿಬರುತಿಹನು,’ ಎಂದು ಪ್ರವಾದಿಯೊಬ್ಬನ ವಚನ ನೆರವೇರುವಂತೆ ಇದೆಲ್ಲ ನಡೆಯಿತು.

6 ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಮಾಡಿದಂತೆಯೇ ಹೇಸರಗತ್ತೆಯನ್ನೂ ಮರಿಯನ್ನೂ ಅಟ್ಟಿಕೊಂಡು ಬಂದರು.

7 ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಸಿದರು. ಯೇಸು ಹತ್ತಿ ಕುಳಿತುಕೊಂಡರು.

8 ಜನಸಮೂಹದಲ್ಲಿ ಅನೇಕರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ಮರದೆಲೆಗಳನ್ನು ಕೊಯ್ದು ದಾರಿಯಲ್ಲಿ ಹರಡಿದರು.

9 ಯೇಸುವಿನ ಹಿಂದೆಯೂ ಮುಂದೆಯೂ ಗುಂಪುಗುಂಪಾಗಿ ಹೋಗುತ್ತಿದ್ದ ಜನರು : “ದಾವೀದ ಕುಲಪುತ್ರನಿಗೆ ಜಯವಾಗಲಿ! ಸರ್ವೇಶ್ವರನ ನಾಮದಲಿ ಬರುವವನಿಗೆ ಮಂಗಳವಾಗಲಿ! ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ!” ಎಂದು ಹರ್ಷೋದ್ಗಾರ ಮಾಡುತ್ತಿದ್ದರು.

10 ಹೀಗೆ ಯೇಸು ಜೆರುಸಲೇಮನ್ನು ಪ್ರವೇಶಿಸಿದಾಗ ನಗರಕ್ಕೆ ನಗರವೇ ಕಲಕಲಗೊಂಡಿತು. ಜನರು “ಯಾರಿವರು?” ಎಂದು ವಿಚಾರಿಸಲಾರಂಭಿಸಿದರು.

11 “ಇವರು ಗಲಿಲೇಯಕ್ಕೆ ಸೇರಿದ ನಜರೇತಿನ ಪ್ರವಾದಿ-ಯೇಸು,” ಎಂದು ಮಾರ್ದನಿಸಿತು ಜನರ ಗುಂಪು.


ದೇವರ ಮಂದಿರ ಪ್ರಾರ್ಥನೆಗೆ ಆಗರ
( ಮಾರ್ಕ. 11:15-19 ; ಲೂಕ. 19:45-48 ; ಯೊವಾ. 2:13-22 )

12 ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋದರು. ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದರು. ನಾಣ್ಯ ವಿನಿಮಯ ಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು. ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು.

13 ಅವರನ್ನು ಉದ್ದೇಶಿಸಿ, “ ‘ಪ್ರಾರ್ಥನಾಲಯವೀ ನನ್ನ ಆಲಯ’ ಎಂದು ಪವಿತ್ರ ಗ್ರಂಥದಲ್ಲೇ ಲಿಖಿತವಾಗಿದೆ. ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿಸುತ್ತಿದ್ದೀರಿ,” ಎಂದು ಎಚ್ಚರಿಸಿದರು.

14 ದೇವಾಲಯದಲ್ಲಿ ತಮ್ಮ ಬಳಿಗೆ ಬಂದ ಕುರುಡರನ್ನೂ ಕುಂಟರನ್ನೂ ಯೇಸು ಸ್ವಸ್ಥಪಡಿಸಿದರು.

15 ಅವರು ಮಾಡಿದ ಅತಿಶಯ ಕಾರ್ಯಗಳನ್ನು ಮುಖ್ಯಯಾಜಕರು ಹಾಗೂ ಧರ್ಮಶಾಸ್ತ್ರಿಗಳು ನೋಡಿದರು. ದೇವಾಲಯದಲ್ಲಿ ಮಕ್ಕಳು, ‘ದಾವೀದಕುಲಪುತ್ರನಿಗೆ ಜಯವಾಗಲಿ’ ಎಂದು ಘೋಷಿಸುವುದನ್ನು ಕೇಳಿದರು.

16 “ಮಕ್ಕಳು ಹೇಳುವುದು ನಿನಗೆ ಕೇಳಿಸುತ್ತಿದೆಯೋ?” ಎಂದು ಕೋಪಾವೇಶದಿಂದ ಯೇಸುವನ್ನು ಪ್ರಶ್ನಿಸಿದರು. “ಹೌದು, ಕೇಳಿಸುತ್ತದೆ; ‘ಬಾಲಬಾಲೆಯರ ಬಾಯಿಂದಲೂ ಮೊಲೆಗೂಸುಗಳ ನಾಲಿಗೆಯಿಂದಲೂ ನಿಮಗೆ ಸರ್ವಸ್ತುತಿ ಸಲ್ಲುವಂತೆ ಮಾಡಿದ್ದೀರಿ’ ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಎಂದೂ ಓದಿಲ್ಲವೆ?” ಎಂದು ಉತ್ತರಿಸಿದರು.

17 ಅನಂತರ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟರು. ಬೆಥಾನಿಯಕ್ಕೆ ಬಂದು ರಾತ್ರಿಯನ್ನು ಅಲ್ಲೇ ಕಳೆದರು.


ಫಲನೀಡದ ಬಾಳಿಗೆ ಶಾಪ
( ಮಾರ್ಕ. 11:12-14 , 20-24 )

18 ಮಾರನೆಯ ದಿನ ಬೆಳಿಗ್ಗೆ ಯೇಸುಸ್ವಾಮಿ ಪುನಃ ಪಟ್ಟಣಕ್ಕೆ ಬರುತ್ತಿದ್ದಾಗ ಅವರಿಗೆ ಹಸಿವಾಯಿತು.

19 ದಾರಿಯ ಪಕ್ಕದಲ್ಲಿ ಒಂದು ಅಂಜೂರದ ಮರ ಕಣ್ಣಿಗೆ ಬಿದ್ದಿತು. ಹತ್ತಿರಕ್ಕೆ ಹೋಗಿ ನೋಡುವಾಗ ಅದರಲ್ಲಿ ಬರೀ ಎಲೆಗಳೇ ಹೊರತು ಮತ್ತೇನೂ ಕಾಣಲಿಲ್ಲ. ಯೇಸು ಆ ಮರಕ್ಕೆ, “ಇನ್ನು ಮುಂದೆ ನೀನೆಂದಿಗೂ ಹಣ್ಣುಬಿಡದಂತಾಗಲಿ,” ಎಂದರು. ಅದೇ ಕ್ಷಣದಲ್ಲಿ ಆ ಮರ ಒಣಗಿಹೋಯಿತು.

20 ಇದನ್ನು ನೋಡಿ ಶಿಷ್ಯರು ನಿಬ್ಬೆರಗಾದರು. “ಈ ಅಂಜೂರದ ಮರ ಇಷ್ಟು ಬೇಗನೆ ಹೇಗೆ ಒಣಗಿಹೋಯಿತು?” ಎಂದು ಕೇಳಿದರು.

21 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ: ನೀವು ಸಂಶಯಪಡದೆ ವಿಶ್ವಾಸಿಸಿದರೆ ಈ ಅಂಜೂರದ ಮರಕ್ಕೆ ನಾನು ಏನು ಮಾಡಿದೆನೋ ನೀವೂ ಅಂತೆಯೇ ಮಾಡುವಿರಿ; ಅದು ಮಾತ್ರವಲ್ಲ, ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ನೀವು ಹೇಳಿದರೆ, ಅದು ಹಾಗೆಯೇ ಆಗುವುದು.

22 ವಿಶ್ವಾಸವಿಟ್ಟು, ಏನನ್ನು ಪ್ರಾರ್ಥನೆಯಲ್ಲಿ ನೀವು ಬೇಡಿಕೊಳ್ಳುವಿರೋ, ಅದನ್ನೆಲ್ಲಾ ಪಡೆಯುವಿರಿ,” ಎಂದು ಉತ್ತರಿಸಿದರು.


ಇಷ್ಟೆಲ್ಲಾ ಅಧಿಕಾರ ಎಲ್ಲಿಂದ?
( ಮಾರ್ಕ. 11:27-33 ; ಲೂಕ. 20:1-8 )

23 ತರುವಾಯ ಯೇಸುಸ್ವಾಮಿ ಮಹಾದೇವಾಲಯದ ಒಳಕ್ಕೆ ಹೋಗಿ ಅಲ್ಲಿ ಬೋಧನೆಮಾಡತೊಡಗಿದರು. ಮುಖ್ಯಯಾಜಕರೂ ಪ್ರಜಾಪ್ರಮುಖರೂ ಅವರ ಬಳಿಗೆ ಬಂದು, “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರಾರು?” ಎಂದು ಪ್ರಶ್ನಿಸಿದರು.

24 ಅದಕ್ಕೆ ಯೇಸು, “ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ.

25 'ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ?’ “ ಎಂದು ಕೇಳಿದರು.

26 ಅದಕ್ಕೆ ಅವರು ತಮ್ಮತಮ್ಮೊಳಗೇ ಹೀಗೆಂದು ತರ್ಕಮಾಡಲಾರಂಭಿಸಿದರು: “ದೇವರಿಂದ ಬಂತು ಎಂದು ಉತ್ತರಿಸಿದರೆ, ‘ಹಾಗಾದರೆ ನೀವೇಕೆ ಆತನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂತು’ ಎಂದು ಹೇಳಿದೆವಾದರೆ ಜನಸಮೂಹಕ್ಕೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ಸನ್ಮಾನಿಸುತ್ತಾರೆ,” ಎಂದುಕೊಂಡರು.

27 ಬಳಿಕ ಬಂದು, “ನಮಗೆ ಗೊತ್ತಿಲ್ಲ,” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, “ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.


ಆಡದೆ ಮಾಡುವವನು ಉತ್ತಮ

28 “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸಮಾಡು’ ಎಂದ.

29 ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ.

30 ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’, ಎಂದು ಹೇಳಿದ. ಆದರೆ ಹೋಗಲೇ ಇಲ್ಲ.

31 ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.

32 ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.


ಕ್ರೂರಿಗಳಾದ ಗೇಣಿದಾರರು
( ಮಾರ್ಕ. 12:1-2 ; ಲೂಕ. 20:9-19 )

33 “ಇನ್ನೊಂದು ಸಾಮತಿಗೆ ಕಿವಿಗೊಡಿ: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ.

34 ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ.

35 ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು.

36 ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು.

37 ಕಟ್ಟಕಡೆಗೆ ಯಜಮಾನ, ‘ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ.

38 ಆದರೆ ಗೇಣಿದಾರರು ಮಗನನ್ನು ಕಂಡೊಡನೇ, ‘ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,’ ಎಂದು ತಮ್ಮ ತಮ್ಮಲ್ಲೇ ಒಳಸಂಚು ಮಾಡಿಕೊಂಡರು.

39 ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡುಹೋಗಿ, ಕೊಂದುಹಾಕಿದರು.

40 “ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರಿಗೆ ಏನುಮಾಡುವನು?” ಎಂದು ಯೇಸು ಕೇಳಿದರು.

41 “ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು,” ಎಂದು ಅಲ್ಲಿದ್ದವರು ಉತ್ತರಕೊಟ್ಟರು.

42 ಬಳಿಕ ಯೇಸು ಇಂತೆಂದರು: “ ‘ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!’ ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೆ?

43 ಆದುದರಿಂದ ನಾನು ನಿಮಗೆ ಹೇಳುತ್ತೇನೆ, ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು.

44 ಅಷ್ಟೇ ಅಲ್ಲದೆ, ಆ ಕಲ್ಲಿನ ಮೇಲೆ ಬೀಳುವವನು ಛಿದ್ರಛಿದ್ರನಾಗುವನು. ಯಾವನ ಮೇಲೆ ಆ ಕಲ್ಲು ಬೀಳುವುದೋ ಅವನು ಜಜ್ಜಿಹೋಗುವನು’.”

45 ಮುಖ್ಯಯಾಜಕರೂ ಫರಿಸಾಯರೂ ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, ‘ಇವನು ನಮ್ಮನ್ನು ಕುರಿತೇ ಹೀಗೆ ಮಾತನಾಡುತ್ತಿದ್ದಾನೆ,’ ಎಂದು ಅರ್ಥಮಾಡಿಕೊಂಡರು. ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು.

46 ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ, ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು