ಮತ್ತಾಯ 20 - ಕನ್ನಡ ಸತ್ಯವೇದವು C.L. Bible (BSI)ಉದಾರ ಮನದ ಮಾಲಿಕ 1 “ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. 2 ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. 3 ಸುಮಾರು ಬೆಳಿಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. 4 ನೀವೂ ನನ್ನ ದ್ರಾಕ್ಷಿತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ,’ ಎಂದ. ಅವರೂ ಹೋದರು. 5 ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ, ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. 6 ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ. 7 ಅದಕ್ಕೆ ಅವರು, ‘ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ‘ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿತೋಟಕ್ಕೆ ಹೋಗಿ ಕೆಲಸಮಾಡಿ,’ ಎಂದು ಹೇಳಿ ಅವರನ್ನೂ ಕಳುಹಿಸಿದ. 8 “ಸಂಜೆಯಾಯಿತು, ತೋಟದ ಯಜಮಾನ ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು,’ ಎಂದ. 9 ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10 ಮೊತ್ತಮೊದಲು ಗೊತ್ತುಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿನಾಣ್ಯ ದೊರಕಿತು. 11 ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು. 12 ‘ಕಡೇಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ ಕೆಲಸಮಾಡಿದ್ದಾರೆ, ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮಮಾಡಿದ್ದೀರಲ್ಲಾ!’ ಎಂದರು. 13 ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ‘ಅಯ್ಯಾ, ನಿನಗೆ ನಾನು ಅನ್ಯಾಯಮಾಡಿಲ್ಲ. ದಿನಕ್ಕೊಂದು ಬೆಳ್ಳಿನಾಣ್ಯದಂತೆ ನೀನು ನನ್ನೊಡನೆ ಒಪ್ಪಂದಮಾಡಿಕೊಳ್ಳಲಿಲ್ಲವೆ? 14 ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. 15 ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ. 16 ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು,” ಎಂದು ಯೇಸು ಬೋಧಿಸಿದರು. ಮರಣ - ಪುನರುತ್ಥಾನ ಕುರಿತು ಮೂರನೆಯ ಪ್ರಕಟಣೆ ( ಮಾರ್ಕ. 10:32-34 ; ಲೂಕ. 18:31-34 ) 17 ಯೇಸುಸ್ವಾಮಿ ಜೆರುಸಲೇಮಿನತ್ತ ಹೋಗುವಾಗ ದಾರಿಯಲ್ಲಿ, ತಮ್ಮ ಹನ್ನೆರಡುಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, 18 “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. 19 ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯಮಾಡುವರು, ಕೊರಡೆಗಳಿಂದ ಹೊಡೆಯುವರು, ಮತ್ತು ಶಿಲುಬೆಗೇರಿಸುವರು. ಆತನಾದರೋ ಮೂರನೇ ದಿನ ಪುನರುತ್ಥಾನ ಹೊಂದುವನು,” ಎಂದರು. ಆಳಾಗಬಲ್ಲವ ಅರಸಾಗಬಲ್ಲ ( ಮಾರ್ಕ. 10:35-45 ) 20 ಆಗ ಜೆಬೆದಾಯನ ಮಕ್ಕಳ ತಾಯಿ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. “ತಮ್ಮಿಂದ ನನಗೊಂದು ಉಪಕಾರ ಆಗಬೇಕು,” ಎಂದು ಸ್ವಾಮಿಯ ಪಾದಕ್ಕೆರಗಿದಳು. 21 “ನಿನ್ನ ಕೋರಿಕೆ ಏನು?” ಎಂದರು ಯೇಸು. ಅದಕ್ಕೆ ಅವಳು, “ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು,” ಎಂದು ಕೋರಿದಳು. 22 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು, ಆಗುತ್ತದೆ,” ಎಂದು ಅವರು ಮರುನುಡಿದರು. 23 ಆಗ ಯೇಸು, “ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು," ಎಂದು ನುಡಿದರು. 24 ಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. 25 ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, “ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನಮಾಡುತ್ತಾರೆ. 26 ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. 27 ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ. 28 ಹಾಗೆಯೇ ನರಪುತ್ರನು ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಹೇಳಿದರು. ಕುರುಡರಿಬ್ಬರ ಮೇಲೆ ಕನಿಕರ ( ಮಾರ್ಕ. 10:46-52 ; ಲೂಕ. 18:35-43 ) 29 ಅವರೆಲ್ಲರೂ ಜೆರಿಕೊ ಪಟ್ಟಣವನ್ನು ಬಿಟ್ಟು ಹೊರಟರು. ಜನರ ದೊಡ್ಡ ಗುಂಪು ಯೇಸುಸ್ವಾಮಿಯನ್ನು ಹಿಂಬಾಲಿಸಿತು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆಂದು ಕೇಳಿದೊಡನೆಯೇ, “ಸ್ವಾಮೀ, ದಾವೀದ ಕುಲಪುತ್ರರೇ, ನಮಗೆ ದಯೆತೋರಿ,” ಎಂದು ಆ ಕುರುಡರು ಕೂಗಿಕೊಂಡರು. 31 ಸುಮ್ಮನಿರಬೇಕೆಂದು ಜನರು ಅವರನ್ನು ಗದರಿಸಿದರು. ಅವರಾದರೋ, “ಸ್ವಾಮೀ, ದಾವೀದ ಕುಲಪುತ್ರರೇ, ನಮಗೆ ದಯೆತೋರಿ,” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು. 32 ಯೇಸು ಅಲ್ಲೇ ನಿಂತು, ಅವರನ್ನು ಕರೆದರು. “ನನ್ನಿಂದ ನಿಮಗೇನಾಗಬೇಕು?” ಎಂದು ಕೇಳಿದರು. 33 ಅದಕ್ಕೆ ಅವರು, “ಸ್ವಾಮೀ, ನಮಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದರು. 34 ಯೇಸುವಿಗೆ ಅವರ ಮೇಲೆ ಕನಿಕರವುಂಟಾಯಿತು. ಅವರ ಕಣ್ಣುಗಳನ್ನು ಮುಟ್ಟಿದರು. ಅದೇ ಕ್ಷಣದಲ್ಲಿ ಅವರಿಗೆ ದೃಷ್ಟಿಬಂದಿತು. ಅವರೂ ಯೇಸುವನ್ನು ಹಿಂಬಾಲಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India