Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 16 - ಕನ್ನಡ ಸತ್ಯವೇದವು C.L. Bible (BSI)


ಅದ್ಭುತಕೋರಿದ ಅಧರ್ಮಿಗಳು
( ಮಾರ್ಕ. 8:1-13 ; ಲೂಕ. 12:54-56 )

1 ತರುವಾಯ ಫರಿಸಾಯರು ಮತ್ತು ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು. ಸ್ವಾಮಿಯನ್ನು ಪರೀಕ್ಷಿಸುವ ದುರದ್ದೇಶದಿಂದ, “ನೀನು ದೇವರಿಂದ ಬಂದವನೆಂದು ಸೂಚಿಸಲು ಅದ್ಭುತವೊಂದನ್ನು ನಮಗೆ ಮಾಡಿತೋರಿಸು,” ಎಂದರು.

2 ಅದಕ್ಕೆ ಯೇಸು, “ಸಂಜೆಯಾದಾಗ ನೀವು ‘ಹವಾಮಾನವು ಹಿತಕರವಾಗಿರುತ್ತದೆ, ಏಕೆಂದರೆ ಆಕಾಶ ಕೆಂಪಗಿದೆ ಎನ್ನುತ್ತೀರಿ.’ ಬೆಳಗ್ಗೆ, ‘ಈ ದಿನ ಗಾಳಿಮಳೆ ಇರುತ್ತದೆ. ಏಕೆಂದರೆ ಕೆಂಪಾದ ಆಕಾಶದಲ್ಲಿ ಮೋಡ ಮುಚ್ಚಿದೆ’ ಎನ್ನುತ್ತೀರಿ.

3 ಆಕಾಶದಲ್ಲಿ ಕಾಣುವ ಲಕ್ಷಣಗಳನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ; ಆದರೆ ಈಗಿನ ಕಾಲದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮಿಂದಾಗದು.

4 ಈ ದುಷ್ಟ ಹಾಗೂ ಅಧರ್ಮ ಪೀಳಿಗೆ ಅದ್ಭುತಗಳನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವಲ್ಲದೆ ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು,” ಎಂದು ಹೇಳಿ ಅವರನ್ನು ಬಿಟ್ಟು ಹೋದರು.


ಹುದುಗೆಬ್ಬಿಸುವ ಹುಸಿ ಬೋಧನೆ
( ಮಾರ್ಕ. 8:14-21 )

5 ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳುವುದನ್ನು ಮರೆತು ಸರೋವರದ ಆಚೆ ದಡಕ್ಕೆ ಬಂದರು.

6 ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ!” ಎಂದರು.

7 ತಾವು ರೊಟ್ಟಿ ತಂದಿಲ್ಲವಾದ ಕಾರಣ ಯೇಸು ಹೀಗೆ ಹೇಳುತ್ತಿದ್ದಾರೆಂದು ಶಿಷ್ಯರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳಲಾರಂಭಿಸಿದರು.

8 ಇದನ್ನು ಗಮನಿಸಿದ ಯೇಸು, “ಅಲ್ಪವಿಶ್ವಾಸಿಗಳೇ, ರೊಟ್ಟಿಯನ್ನು ತಂದಿಲ್ಲವೆಂದು ನಿಮ್ಮನಿಮ್ಮಲ್ಲೇ ಚರ್ಚೆ ಏಕೆ?

9 ಏನು, ನಿಮಗಿನ್ನೂ ಅರಿವಿಲ್ಲವೆ? ಐದು ರೊಟ್ಟಿಗಳಿಂದ ನಾನು ಐದು ಸಾವಿರ ಜನರನ್ನು ತೃಪ್ತಿಪಡಿಸಿದ್ದು ನಿಮಗೆ ಜ್ಞಾಪಕವಿಲ್ಲವೆ? ಆಗ ಉಳಿದುದ್ದನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿಸಿಕೊಂಡಿರಿ?

10 ಅಲ್ಲದೆ ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ, ಉಳಿದುದನ್ನು ಎಷ್ಟು ಕುಕ್ಕೆಗಳಲ್ಲಿ ತುಂಬಿಸಿಕೊಂಡಿರಿ?

11 ಹೀಗಿದ್ದೂ ನಾನು ಈಗ ರೊಟ್ಟಿಯನ್ನು ಕುರಿತು ಎಚ್ಚರಿಸಲಿಲ್ಲವೆಂದು ನೀವು ತಿಳಿಯದೆಹೋದಿರಲ್ಲಾ,” ಎಂದರು.

12 ರೊಟ್ಟಿಯ ಹಿಟ್ಟನ್ನು ಹುದುಗೆಬ್ಬಿಸುವ ಹುಳಿಯನ್ನು ಕುರಿತು ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯವಾಗಿ ಜಾಗರೂಕರಾಗಿರಬೇಕೆಂದು ಯೇಸು ಎಚ್ಚರಿಸಿದರೆಂದು ಆಗ ಶಿಷ್ಯರು ಅರ್ಥಮಾಡಿಕೊಂಡರು.


ಪೇತ್ರನ ವಿಶ್ವಾಸ ಪ್ರಕಟನೆ
( ಮಾರ್ಕ. 8:27-30 ; ಲೂಕ. 9:18-21 )

13 ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು.

14 ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು.

15 ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು.

16 ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು.

17 ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ.

18 ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.

19 ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,”

20 ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ‘ಅಭಿಷಿಕ್ತರಾದ ಲೋಕೋದ್ಧಾರಕ’ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು.


ಮರಣ-ಪುನರುತ್ಥಾನ ಕುರಿತು ಮೊದಲನೆಯ ಪ್ರಕಟನೆ
( ಮಾರ್ಕ. 8:31—9:1 ; ಲೂಕ. 9:22-27 )

21 ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾಪ್ರಮುಖರಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು.

22 ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, “ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ,” ಎಂದು ಪ್ರತಿಭಟಿಸಿದನು.

23 ಆದರೆ ಯೇಸು ಪೇತ್ರನತ್ತ ತಿರುಗಿ, “ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,” ಎಂದರು.

24 ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

25 ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.

26 ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?

27 ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.

28 ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು