Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಫಿಲಿಪ್ಪಿಯವರಿಗೆ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ರೋಮ್ ಸಾಮ್ರಾಜ್ಯದ ಮಕೆದೋನ್ಯ ಪ್ರಾಂತ್ಯದಲ್ಲಿ ಪೌಲನು ಶುಭಸಂದೇಶವನ್ನು ಪ್ರಚಾರಮಾಡಿ ಧರ್ಮಸಭೆಯನ್ನು ಸ್ಥಾಪಿಸಿದನು. ಅಲ್ಲಿನ ಫಿಲಿಪ್ಪಿ ಎಂಬ ಪಟ್ಟಣದ ಹೆಸರನ್ನೇ ಆ ಸಭೆಗೆ ಇಡಲಾಯಿತು. ಇದೇ ಯೂರೋಪ್ ಖಂಡದಲ್ಲಿ ಸ್ಥಾಪಿತವಾದ ಪ್ರಪ್ರಥಮ ಕ್ರೈಸ್ತಸಭೆ. ಶುಭಸಂದೇಶಕ್ಕಾಗಿ ಪೌಲನು ಎಷ್ಟೋ ಸಾರಿ ಸೆರೆವಾಸಕ್ಕೆ ಗುರಿಯಾಗಬೇಕಾಗುತ್ತಿತ್ತು. ಸೆರೆಯಿಂದಲೂ ಪತ್ರಗಳನ್ನು ಬರೆದು ಭಕ್ತಾದಿಗಳನ್ನು ಹುರಿದುಂಬಿಸುವುದು ಆತನ ವಾಡಿಕೆಯಾಗಿತ್ತು. ಹೀಗೆ ಪೌಲನು ಬರೆದ ಪತ್ರಗಳಲ್ಲಿ ಫಿಲಿಪ್ಪಿಯರಿಗೆ ಬರೆದ ಪತ್ರವೂ ಒಂದು.
ಈ ಪತ್ರವನ್ನು ಬರೆಯುವಾಗ ಪೌಲನಿಗೆ ಬಹಳ ಮನೋವೇದನೆಯಿತ್ತು. ಒಂದು ಕಡೆ ಸೆರೆವಾಸದ ದುಃಖದುರಿತ಼ಗಳು ಅವನನ್ನು ಕಾಡುತ್ತಿದ್ದರೆ, ಇನ್ನೊಂದು ಕಡೆ ಸುಳ್ಳುಬೋಧಕರ ಅಪಪ್ರಚಾರಗಳೂ ಸಹೋದ್ಯೋಗಿಗಳ ಪ್ರತಿಭಟನೆಗಳೂ ಅವನ ಹೃದಯವನ್ನು ತಿವಿಯುತ್ತಿದ್ದವು. ಹೀಗಿದ್ದರೂ ಅವನು ಬರೆದಿರುವ ಈ ಪತ್ರ ಶಾಂತಿ ಸಹನೆಯ ಮಾತುಗಳಿಂದಲೂ ತಪ್ಪಿತಸ್ಥರು ಸರಿದಾರಿಗೆ ಬರಲೆಂಬ ಹಿತವಚನಗಳಿಂದಲೂ ಕೂಡಿದೆ. ಇದಕ್ಕೆ ಕ್ರಿಸ್ತಯೇಸುವಿನಲ್ಲಿ ಆತನಿಗಿದ್ದ ಆಳವಾದ ವಿಶ್ವಾಸವೇ ಕಾರಣ.
ಫಿಲಿಪ್ಪಿಯ ಸಭೆಯವರು ಕಷ್ಟದಲ್ಲಿದ್ದ ತನಗೆ ಕಳುಹಿಸಿದ್ದ ಆರ್ಥಿಕ ಸಹಾಯಕ್ಕಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದೇ ಈ ಪತ್ರದ ಮುಖ್ಯ ಉದ್ದೇಶ. ಇದನ್ನು ಬರೆಯುವಾಗ ತನ್ನ ಕಷ್ಟಸಂಕಟಗಳನ್ನು ಕೇಳಿಯಾಗಲಿ, ತಾವೇ ಸ್ವತಃ ಅನುಭವಿಸುತ್ತಿರುವ ದುಃಖದುಗುಡದಿಂದಾಗಲಿ, ಫಿಲಿಷ್ಟಿಯರು ಎದೆಗುಂದದೆ ವಿಶ್ವಾಸದಲ್ಲಿ ಸ್ಥಿರವಾಗಿರಬೇಕೆಂದು ಲೇಖಕನು ಅವರನ್ನು ಪ್ರೋತ್ಸಾಹಿಸುತ್ತಾನೆ. ಕ್ರಿಸ್ತಯೇಸುವಿನಂತೆ ದೀನಮನಸ್ಕರಾಗಿರಬೇಕು; ಅಹಂಕಾರ, ಅಹಂಭಾವಗಳನ್ನು ತೊರೆದುಬಿಡಬೇಕು ಎಂದು ಅವರನ್ನು ಒತ್ತಾಯಿಸುತ್ತಾನೆ. ಅವರಿಗೆ ಕ್ರಿಸ್ತಯೇಸುವಿನಲ್ಲಿ ಲಭಿಸಿರುವ ಸಹಬಾಳ್ವೆ, ಸಂತೋಷ ಮುಂತಾದವುಗಳು ಹಳೆಯ ಒಡಂಬಡಿಕೆಯ ವಿಧಿನಿಯಮಗಳ ಅನುಸರಣೆಯಿಂದಲ್ಲ, ಅವು ವಿಶ್ವಾಸದ ಆಧಾರದ ಮೇಲೆ ದೇವರೇ ನೀಡಿರುವ ಉದಾತ್ತ ಕೊಡುಗೆಗಳು ಎಂದು ಒತ್ತಿ ಹೇಳುತ್ತಾನೆ.
ಇದಲ್ಲದೆ ಕ್ರೈಸ್ತಜೀವನದಲ್ಲಿ ಸಂತೋಷ-ಸಮಾಧಾನ, ಧೈರ್ಯ-ಸ್ಥೈರ್ಯ, ಒಗ್ಗಟ್ಟು-ಒಪ್ಪಂದ, ಸ್ಥಿರತೆ-ಸೈರಣೆ ಇವೇ ಮುಂತಾದ ಸದ್ಗುಣಗಳ ಪಾತ್ರ ಗಮನಾರ್ಹ. ಫಿಲಿಪ್ಪಿಯರ ಮೇಲೆ ಪೌಲನಿಗೆ ಅಪಾರ ಪ್ರೀತಿ ಇತ್ತೆಂದು ಈ ಪತ್ರದಿಂದ ವೇದ್ಯವಾಗುತ್ತದೆ.
ಪರಿವಿಡಿ
ಪೀಠಿಕೆ 1:1-11
ಪೌಲನ ಪರಿಸ್ಥಿತಿ 1:12-26
ಕ್ರಿಸ್ತಯೇಸುವಿನಲ್ಲಿ ಹೊಸಜೀವನ 1:27—2:18
ಶತ್ರುಗಳ ಬಗ್ಗೆ ಎಚ್ಚರಿಕೆ 3:1—4:9
ಪೌಲನು ಮತ್ತು ಫಿಲಿಪ್ಪಿಯ ಮಿತ್ರರು 4:10-20
ಸಮಾಪ್ತಿ 4:21-23

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು