ಫಿಲಿಪ್ಪಿಯವರಿಗೆ 4 - ಕನ್ನಡ ಸತ್ಯವೇದವು C.L. Bible (BSI)ಯೇಸುವಿಗಾಗಿ ಜೀವಿಸಿರಿ 1 ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ. 2 ಯುವೋದ್ಯಳು ಮತ್ತು ಸಂತುಕೆ ಇವರಲ್ಲಿ ನನ್ನದೊಂದು ಬಿನ್ನಹ: ನಿಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು ಪ್ರಭುವಿನಲ್ಲಿ ಒಂದಾಗಿ ಬಾಳಿರಿ. 3 ನನ್ನ ಜೊತೆ ಸೇವಕನಾದ ನೀನು ಈ ಮಹಿಳೆಯರಿಗೆ ನೆರವಾಗಬೇಕು. ಇವರು ಸಹ ಕ್ಲೇಮಂತನು ಮತ್ತು ಇತರ ಸಹಸೇವಕರೊಡನೆ ನನ್ನೊಂದಿಗೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸಿರುತ್ತಾರೆ. ಇವರೆಲ್ಲರ ಹೆಸರುಗಳು ನಿತ್ಯಜೀವಬಾಧ್ಯರ ಪಟ್ಟಿಯಲ್ಲಿವೆ. 4 ಪ್ರಭುವಿನಲ್ಲಿ ನೀವು ಸತತವೂ ಆನಂದಿಸಿರಿ. ಆನಂದಿಸಬೇಕೆಂದು ಮತ್ತೆ ಒತ್ತಿ ಹೇಳುತ್ತೇನೆ. 5 ನಿಮ್ಮ ಸಹನೆ, ಸಹಾನುಭೂತಿ ಸರ್ವರಿಗೂ ತಿಳಿದಿರಲಿ. ಪ್ರಭುವಿನ ಪುನರಾಗಮನ ಸಮೀಪಿಸಿದೆ. 6 ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾಭಾವ ಇರಲಿ. 7 ಆಗ ಮನುಷ್ಯಗ್ರಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು. 8 ಕಡೆಯದಾಗಿ ಸಹೋದರರೇ, ಯಾವುದು ಸತ್ಯವು-ಮಾನ್ಯವು, ನ್ಯಾಯವು-ಶುದ್ಧವು, ಪ್ರೀತಿಕರವು-ಮನೋಹರವು ಆಗಿದೆಯೋ ಯಾವುದು ಸದ್ಗುಣವು-ಸ್ತುತ್ಯಾರ್ಹವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ. 9 ನೀವು ನನ್ನಿಂದ ಕಲಿತವು ಹಾಗೂ ಅರಿತವುಗಳನ್ನು, ಕೇಳಿದವು ಹಾಗೂ ಕಂಡವುಗಳನ್ನು ನಿಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ತನ್ನಿರಿ. ಆಗ ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು. ಸಂತೃಪ್ತ ಸಮಜೀವನ 10 ನನ್ನ ಬಗ್ಗೆ ನಿಮಗಿರುವ ಮಮತೆಯು ಇಷ್ಟು ದಿನಗಳಾದ ಮೇಲೆ ಪುನಃ ಅರಳಿದ್ದಕ್ಕೆ ಪ್ರಭುವಿನಲ್ಲಿ ನಾನು ಬಹಳ ಸಂತೋಷಪಡುತ್ತೇನೆ. ಇಂಥ ಮಮತೆ ನಿಮಗೆ ಮೊದಲಿನಿಂದ ಇತ್ತಾದರೂ ಅದನ್ನು ವ್ಯಕ್ತಪಡಿಲು ನಿಮಗೆ ಸೂಕ್ತ ಸಂದರ್ಭ ಒದಗಿರಲಿಲ್ಲ. 11 ನಾನು ಯಾವುದೋ ಕೊರತೆಯಲ್ಲಿರುವೆನೆಂದು ಸೂಚಿಸಲು ಇದನ್ನು ಹೇಳುತ್ತಿಲ್ಲ. ನಾನು ಯಾವ ಸ್ಥಿತಿಯಲ್ಲಿದ್ದರೂ ತೃಪ್ತಿಯಿಂದಿರಲು ಕಲಿತುಕೊಂಡಿದ್ದೇನೆ. 12 ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ. 13 ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮರ್ಥ್ಯ ನನಗಿದೆ. 14 ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯ ಮಾಡಿದುದು ನಿಮ್ಮ ಸೌಜನ್ಯವೇ ಸರಿ. 15 ಫಿಲಿಪ್ಪಿಯ ಸಹೋದರರೇ, ನಾನು ಶುಭಸಂದೇಶವನ್ನು ಸಾರಲು ಹೊರಟ ಪ್ರಾರಂಭದ ದಿನಗಳಲ್ಲಿ ಮಕೆದೋನಿಯವನ್ನು ಬಿಟ್ಟುಹೋದಾಗ ನೀವಲ್ಲದೆ ಬೇರೆ ಯಾವ ಸಭೆಯೂ ನನ್ನ ಆಯ-ವ್ಯಯಗಳಲ್ಲಿ ನೆರವಾಗಿರಲಿಲ್ಲ. ಇದು ನಿಮಗೆ ತಿಳಿದ ವಿಷಯ. 16 ನಾನು ಥೆಸಲೋನಿಕದಲ್ಲಿದ್ದಾಗಲೂ ನನ್ನ ಕೊರತೆಯನ್ನು ನೀಗಿಸಲು ಒಂದೆರಡು ಬಾರಿ ಧನಸಹಾಯವನ್ನು ಕಳುಹಿಸಿದಿರಿ. 17 ನಿಮ್ಮಿಂದ ಸಹಾಯ ಪಡೆಯಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಈ ಸಹಾಯದಿಂದ ನಿಮಗೆ ಮುಂದೆ ದೊರಕುವ ಪ್ರತಿಫಲವು ಸಮೃದ್ಧಿಯಾಗಲೆಂದೇ ನನ್ನ ಇಚ್ಛೆ. 18 ನೀವು ಕಳುಹಿಸಿಕೊಟ್ಟಿದ್ದೆಲ್ಲವೂ ನನಗೆ ಸಂದಾಯವಾಗಿದೆ. ಈಗ ಅಗತ್ಯಕ್ಕಿಂತಲೂ ಅಧಿಕವಾಗಿದೆ, ಯಥೇಚ್ಛವಾಗಿದೆ. ಎಪಫ್ರೋದಿತನ ಮೂಲಕ ನೀವು ಕಳುಹಿಸಿದ್ದೆಲ್ಲವೂ ನನಗೆ ತಲುಪಿದೆ. ನಿಮ್ಮ ಕೊಡುಗೆ ಸುಗಂಧ ಕಾಣಿಕೆಯಾಗಿದೆ, ದೇವರಿಗೆ ಮೆಚ್ಚಿಗೆಯಾದ ಇಷ್ಟಾರ್ಥ ಬಲಿಯಾಗಿದೆ. 19 ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತಯೇಸುವಿನ ಮುಖಾಂತರ ಪೂರೈಸುವರು. 20 ನಮ್ಮ ತಂದೆಯಾದ ದೇವರಿಗೆ ನಿರಂತವೂ ಮಹಿಮೆ ಸಲ್ಲಲಿ! ಅಂತಿಮ ವಂದನೆ 21 ಕ್ರಿಸ್ತಯೇಸುವಿನಲ್ಲಿ ಎಲ್ಲ ದೇವಜನರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನೊಡನೆ ಇರುವ ಸಹೋದರರು ನಿಮಗೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ. 22 ಅಲ್ಲದೆ, ಇಲ್ಲಿರುವ ದೇವಜನರೆಲ್ಲರೂ ವಿಶೇಷವಾಗಿ ಚಕ್ರವರ್ತಿಯ ಅರಮನೆಯಲ್ಲಿರುವ ಕ್ರೈಸ್ತವಿಶ್ವಾಸಿಗಳು ತಮ್ಮ ಪ್ರಣಾಮಗಳನ್ನು ಸಲ್ಲಿಸಿದ್ದಾರೆ. 23 ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೆಲ್ಲರಲ್ಲಿ ಇರಲಿ! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India