ಮುನ್ನುಡಿ
“ಉಪದೇಶಕನ ಗ್ರಂಥ” ತತ್ವಜ್ಞಾನಿಯೊಬ್ಬನ ನಿಗೂಢ ಆಲೋಚನೆಗಳನ್ನು ಒಳಗೊಂಡಿದೆ. ಮಾನವನ ಜೀವನ ಎಷ್ಟು ತಾತ್ಕಾಲಿಕ, ಎಷ್ಟು ತದ್ವಿರುದ್ಧ, ಎಷ್ಟೊಂದು ಅನ್ಯಾಯದಿಂದ, ನಿರಾಶೆಗಳಿಂದ ತುಂಬಿದೆ! ಎಂತಲೇ, ಜೀವನ ಬಹಳ ನಿರರ್ಥಕವಾದುದು ಎಂದು ಉಪದೇಶಕನು ತೀರ್ಮಾನಿಸುತ್ತಾನೆ. ಮಾನವ ಜೀವನದ ಗುರಿಯನ್ನು ಸಂಕಲ್ಪಿಸುವ ದೇವರ ಆಲೋಚನೆಯನ್ನು ಅರ್ಥೈಸಿಕೊಳ್ಳಲು ಅಸಾಧ್ಯ. ಆದರೂ, ಮನುಷ್ಯನು ಕಷ್ಟಪಟ್ಟು ಕೆಲಸಮಾಡಬೇಕು, ದೇವರ ವರದಾನಗಳನ್ನು ಸಾಕಷ್ಟು ಕಾಲ ಅನುಭವಿಸಬೇಕು ಎಂದು ಸಲಹೆ ನೀಡುತ್ತಾನೆ.
ಈ ತತ್ವಜ್ಞಾನಿಯ ಅನೇಕ ಆಲೋಚನೆಗಳು ನಿಷಿದ್ಧರೂಪದಲ್ಲಿದ್ದು, ಜನರ ಆಸೆ ಆಕಾಂಕ್ಷೆಗಳನ್ನು ವಿಫಲಗೊಳಿಸುವಂತೆ ತೋರುತ್ತವೆ. ಇಂಥ ಅಶುಭ ಅಂಶಗಳನ್ನು ಹಾಗೂ ಸಂದೇಹಾಸ್ಪದ ವಿಷಯಗಳನ್ನು ಬೈಬಲ್ ಗಣನೆಗೆ ತೆಗೆದುಕೊಂಡಿದೆ ಎಂಬುದು ಅದರ ವಿಶಾಲ ಮನೋಭಾವನೆಯನ್ನು ವ್ಯಕ್ತಪಡಿಸುತ್ತದೆ. ಅನೇಕರು ಉಪದೇಶಕನ ಗ್ರಂಥವನ್ನು ಓದಿ, ಅದರಲ್ಲಿ ತಮ್ಮ ಅಭಿಪ್ರಾಯಗಳು ಪ್ರತಿಬಿಂಬಿತವಾಗಿರುವುದನ್ನು ಕಂಡು ಉಪಶಮನ ಪಡೆದಿದ್ದಾರೆ; ಜೀವನವನ್ನು ಹೆಚ್ಚು ಸಾರ್ಥಕಗೊಳಿಸಬಲ್ಲ ದೇವರಲ್ಲಿ ನಂಬಿಕೆ, ಮಾನವನ ಬದುಕನ್ನು ಹೆಚ್ಚು ಹೆಚ್ಚಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇವುಗಳತ್ತ ಬೈಬಲ್ ಕರೆದೊಯ್ಯುವುದನ್ನು ಮನಗಂಡಿದ್ದಾರೆ.