Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 8 - ಕನ್ನಡ ಸತ್ಯವೇದವು C.L. Bible (BSI)

1 ಜ್ಞಾನಿಗೆ ಸಮಾನರು ಯಾರು? ಅವನಲ್ಲದೆ ಬಗೆಹರಿಸಬಲ್ಲವರು ಯಾರು? ಜ್ಞಾನವು ಮನುಷ್ಯನ ಮುಖವನ್ನು ವಿಕಾಸಗೊಳಿಸುತ್ತದೆ; ಗಂಟುಮೋರೆಯನ್ನು ಮಾರ್ಪಡಿಸುತ್ತದೆ.


ಅರಸನಿಗೆ ಬಗ್ಗಿ ನಡೆ

2 ದೇವರ ಮೇಲೆ ಇಟ್ಟ ಆಣೆಯ ನಿಮಿತ್ತ ಅರಸನ ಆಜ್ಞೆಯನ್ನು ಕೈಗೊಳ್ಳಬೇಕೆಂಬುದು ನನ್ನ ಬೋಧೆ.

3 ದುಡುಕುತನದಿಂದ ಅರಸನಿಗೆ ಬೆನ್ನು ತೋರಿಸಬೇಡ; ಕೆಟ್ಟ ವಿಷಯದಲ್ಲಿ ಹಟಮಾಡಬೇಡ. ಆತನು ತನಗಿಷ್ಟಬಂದಂತೆ ಮಾಡಬಲ್ಲನು.

4 ಅರಸನ ಮಾತು ಅಧಿಕಾರದಿಂದ ಕೂಡಿದೆ. “ನೀನು ಮಾಡುವುದೇನು?” ಎಂದು ಅವನನ್ನು ಪ್ರಶ್ನಿಸುವವರಾರು?

5 ರಾಜಾಜ್ಞೆಯನ್ನು ಪಾಲಿಸುವವನಿಗೆ ಕೇಡು ಸಂಭವಿಸದು. ಅದನ್ನು ಯಾವಾಗ, ಹೇಗೆ ಪಾಲಿಸಬೇಕೆಂದು ಜ್ಞಾನಿಗೆ ಮನದಟ್ಟಾಗಿರುತ್ತದೆ.

6 ಪ್ರತಿಯೊಂದು ಕಾರ್ಯಕ್ಕೆ ಒಂದು ಕಾಲ, ಒಂದು ಕ್ರಮ ಇರುತ್ತದೆಯಲ್ಲವೆ? ಮನುಷ್ಯನು ಎದುರಿಸಬೇಕಾದ ಕಷ್ಟಕಾರ್ಪಣ್ಯಗಳು ಘನತರವಾದುವು.

7 ಮುಂದೆ ಆಗುವುದೇನು ಎಂಬುದು ಅವನಿಗೆ ಗೊತ್ತಿಲ್ಲ; ಅದು ಹೇಗೆ ಸಂಭವಿಸುವುದು ಎಂದು ಅವನಿಗೆ ತಿಳಿಸಬಲ್ಲವರು ಯಾರೂ ಇಲ್ಲ.

8 ಆತ್ಮವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಾಗೆಯೇ ತಮ್ಮ ಮರಣ ದಿನವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಸಾವೆಂಬ ಸಮರಕ್ಕೆ ವಿರಾಮವಿಲ್ಲ; ಅಂತೆಯೇ ದುಷ್ಟತನದ ಮೂಲಕ ಅದರಿಂದ ತಪ್ಪಿಸಿಕೊಳ್ಳಲಾಗದು.


ಸಜ್ಜನರು ಮತ್ತು ದುರ್ಜನರು

9 ಈ ಲೋಕದಲ್ಲಿ ನಡೆಯುವ ಆಗುಹೋಗುಗಳನ್ನೆಲ್ಲ ಚಿಂತಿಸಿ ನೋಡಿದಾಗ ಈ ವಿಷಯಗಳು ಕಂಡುಬಂದವು: ಈಗ ಒಬ್ಬನು ಮತ್ತೊಬ್ಬನ ಮೇಲೆ ದಬ್ಬಾಳಿಕೆ ನಡೆಸುತ್ತಾನೆ; ಹಾನಿಯನ್ನು ಉಂಟುಮಾಡುತ್ತಾನೆ.

10 ಇದಲ್ಲದೆ ದುರ್ಜನರು ಸತ್ತು ಸಮಾಧಿಯಾಗುವುದನ್ನು ನೋಡಿದ್ದೇನೆ. ಸಜ್ಜನರು ಆ ಪವಿತ್ರ ಸ್ಥಾನದಿಂದ ಹೊರಟುಬಂದು ಆ ದುರ್ಜನರ ನಡತೆಯನ್ನು ಅವರಿದ್ದ ಪಟ್ಟಣದಲ್ಲೇ ಹೊಗಳುತ್ತಾರೆ! ಇದು ನಿರರ್ಥಕ.

11 ಕೆಟ್ಟದ್ದನ್ನು ಮಾಡಲು ನರಮಾನವರು ತುಂಬ ಆಸಕ್ತಿ ಉಳ್ಳವರಾಗಿದ್ದಾರೆ. ಕೇಡಿಗೆ ತಕ್ಕ ದಂಡನೆಯನ್ನು ಕೂಡಲೆ ವಿಧಿಸದಿರುವುದೇ ಇದಕ್ಕೆ ಕಾರಣ.

12 ಪಾಪಾತ್ಮನು ನೂರು ಸಾರಿ ಕೆಟ್ಟದ್ದನ್ನು ಮಾಡಿ ದೀರ್ಘಕಾಲ ಬದುಕಿದರೂ ದೇವರಿಗೆ ಹೆದರಿ ಭಯಭಕ್ತಿಯುಳ್ಳವರಿಗೆ ಒಳ್ಳೆಯದೇ ಆಗುವುದೆಂದು ಬಲ್ಲೆನು.

13 ದೇವರಿಗೆ ಹೆದರದ ದುರ್ಜನನಿಗೆ ಒಳ್ಳೆಯದಾಗದೆಂಬುದು ನಿಶ್ಚಯ. ನೆರಳಿನಂತಿರುವ ಅವನ ಬಾಳಿನ ದಿನಗಳು ಹೆಚ್ಚುವುದಿಲ್ಲ.

14 ಲೋಕದಲ್ಲಿ ನಡೆಯುವ ನಿರರ್ಥಕ ಕಾರ್ಯ ಒಂದುಂಟು; ದುರ್ಜನರ ನಡತೆಗೆ ಆಗಬೇಕಾದ ತಕ್ಕ ಶಿಕ್ಷೆ ಸಜ್ಜನರಿಗೆ ಆಗುತ್ತದೆ. ಸಜ್ಜನರಿಗೆ ಸಿಗಬೇಕಾದ ಸಂಭಾವನೆ ದುರ್ಜನರಿಗೆ ಸಿಗುತ್ತದೆ. ಇದು ನಿರರ್ಥಕವೆಂದೇ ಹೇಳುತ್ತೇನೆ.

15 ಆದುದರಿಂದಲೇ ಸಂತೋಷವನ್ನು ಶ್ಲಾಘಿಸುತ್ತೇನೆ. ಮನುಷ್ಯನು ಅನ್ನಪಾನಗಳನ್ನು ಸೇವಿಸಿ ಸಂತೋಷಪಡುವುದಕ್ಕಿಂತ ಮೇಲಾದುದು ಅವನಿಗೆ ಈ ಲೋಕದಲ್ಲಿ ಇನ್ನಾವುದೂ ಇಲ್ಲ. ದೇವರು ಅವನಿಗೆ ಇಹದಲ್ಲಿ ಅನುಗ್ರಹಿಸುವ ಜೀವಾವಧಿಯಲ್ಲಿ ಅವನು ಪಡುವ ಪ್ರಯಾಸಕ್ಕೆ ಸುಖಾನುಭವ ಸೇರಿರುತ್ತದೆ.

16 ನಾನು ಜ್ಞಾನವನ್ನು ಪಡೆಯಲು, ಜಗದಲ್ಲಿ ನಡೆಯುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿದಾಗ ಇದು ನನಗೆ ಮನದಟ್ಟಾಯಿತು: ಒಬ್ಬನು ರಾತ್ರಿ ಹಗಲು, ಕಣ್ಣುಗಳಿಗೆ ನಿದ್ರೆ ಹಚ್ಚಗೊಡದೆ ಪರಿಶೀಲಿಸಿದರೂ ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಲು ಆಗದು.

17 ಎಷ್ಟು ಪ್ರಯಾಸಪಟ್ಟು ವಿಚಾರಿಸಿದರೂ ಅವನಿಂದ ಸಾಧ್ಯವಾಗದು. ಹೌದು, ಜ್ಞಾನಿ ತನ್ನಿಂದಾಗುತ್ತದೆ ಎಂದು ಹೇಳಿಕೊಳ್ಳಬಹುದು; ಆದರೆ ಅವನಿಂದಲೂ ಅದು ಸಾಧ್ಯವಾಗದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು