Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 6 - ಕನ್ನಡ ಸತ್ಯವೇದವು C.L. Bible (BSI)

1 ಧರೆಯಲ್ಲಿ ಮಾನವರಿಗೆ ಬಂದೊದಗುವ ದೊಡ್ಡ ದುರವಸ್ಥೆ ಒಂದನ್ನು ಕಂಡೆ.

2 ಅದೇನು ಎಂದರೆ, ದೇವರು ಒಬ್ಬನಿಗೆ ಧನಸಂಪತ್ತನ್ನೂ ಘನತೆಗೌರವವನ್ನೂ ಅನುಗ್ರಹಿಸುತ್ತಾರೆ. ಅವನ ಇಷ್ಟಾರ್ಥಕ್ಕೆ ಯಾವ ಕೊರತೆಯೂ ಇಲ್ಲದಂತೆ ಮಾಡುತ್ತಾರೆ. ಆದರೆ ಅವನ್ನು ಅನುಭವಿಸುವುದಕ್ಕೆ‍ ಶಕ್ತಿಯನ್ನು ದೇವರು ಅವನಿಗೆ ಕೊಡುವುದಿಲ್ಲ. ಅವುಗಳನ್ನು ಮತ್ತೊಬ್ಬನು ಅನುಭವಿಸುತ್ತಾನೆ. ಇದೂ ಸಹ ನಿರರ್ಥಕ; ದೊಡ್ಡ ಪಿಡುಗು.

3 ಒಬ್ಬನು ನೂರಾರು ಮಕ್ಕಳನ್ನು ಪಡೆಯಬಹುದು, ಹಣ್ಣುಹಣ್ಣು ಮುದುಕನಾಗುವ ತನಕ ಬದುಕಬಹುದು. ಆದರೆ ಜೀವನದಲ್ಲಿ ಸುಖಾನುಭವ ಇಲ್ಲದೆ, ಉತ್ತರಕ್ರಿಯೆಯೂ ಇಲ್ಲದೆಹೋದರೆ ಏನು ಪ್ರಯೋಜನ? ಅವನಿಗಿಂತ ಗರ್ಭಸ್ರಾವದ ಪಿಂಡವೇ ಮೇಲು ಎಂದುಕೊಂಡೆ.

4 ಅದು ವ್ಯರ್ಥವಾಗಿ ಬರುತ್ತದೆ. ಕತ್ತಲಲ್ಲೇ ಮರೆಯಾಗುತ್ತದೆ. ಅದರ ಹೆಸರು ಕಾರಿರುಳು.

5 ಅದು ಸೂರ್ಯನನ್ನು ಕಂಡಿಲ್ಲ. ತಿಳುವಳಿಕೆಯೆಂಬುದು ಅದಕ್ಕೆ ಇಲ್ಲವೇ ಇಲ್ಲ. ಆದರೂ ಅದರ ನೆಮ್ಮದಿ ಸುಖಾನುಭವ ಇಲ್ಲದವನ ಪರಿಸ್ಥಿತಿಗಿಂತ ಮಿಗಿಲಾದುದು.

6 ಸಾವಿರ ವರ್ಷದ ಮೇಲೆ ಸಾವಿರ ವರ್ಷ ಬದುಕಿಯೂ ಸುಖವನ್ನು ಅನುಭವಿಸದಿದ್ದರೆ ಏನು ಪ್ರಯೋಜನ? ಇವೆರಡೂ ಒಂದೇ ಸ್ಥಳಕ್ಕೆ ಹೋಗುತ್ತವೆ, ಅಲ್ಲವೇ?

7 ಮಾನವನು ಪಡುವ ಪ್ರಯಾಸವೆಲ್ಲ ಅವನ ಹೊಟ್ಟೆಪಾಡಿಗಾಗಿಯೇ. ಆದರೂ ಅವನಿಗೆ ತೃಪ್ತಿಯಿಲ್ಲ.

8 ಜ್ಞಾನಿಯಾಗಲಿ, ಜನರ ಮುಂದೆ ಸಜ್ಜನನಾಗಿ ನಡೆಯಬಲ್ಲ ಬಡವನಾಗಲಿ, ಮೂಢನಿಗಿಂತ ಹೇಗೆ ಶ್ರೇಷ್ಠ?

9 ಬಗೆಬಗೆಯಾಗಿ ಬಯಸುವುದಕ್ಕಿಂತ ಕಣ್ಣೆದುರಿಗೆ ಇರುವುದನ್ನು ಅನುಭವಿಸುವುದೇ ಲೇಸು. ಆದರೆ ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ನಿರರ್ಥಕ.

10 ಈಗ ಇರುವ ಪ್ರತಿಯೊಂದು ಹಿಂದಿನಿಂದಲೇ ಹೆಸರುವಾಸಿಯಾಗಿದೆ. ಮನುಷ್ಯನು ಯಾರೆಂದು ಗೊತ್ತಿದೆ. ತನಗಿಂತ ಬಲಿಷ್ಠನ ಸಂಗಡ ವಾದಿಸಲು ಅವನಿಂದಾಗದು.

11 ಮಾತು ಹೆಚ್ಚಿದಷ್ಟೂ ಪರಿಣಾಮ ಕಡಿಮೆ. ಅದರಿಂದ ಮನುಷ್ಯನಿಗಾಗುವ ಪ್ರಯೋಜನವಾದರೂ ಏನು?

12 ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮಾನವನ ಜೀವಮಾನ ದಿನಗಳಲ್ಲೆಲ್ಲಾ ಅವನಿಗೆ ಯಾವುದು ಹಿತವೆಂದು ಯಾರಿಗೆ ಗೊತ್ತು? ತಾನು ಕಾಲವಾದ ಮೇಲೆ ಇಹಲೋಕದಲ್ಲಿ ಏನಾಗುವುದೆಂದು ಅವನು ಯಾರಿಂದ ತಿಳಿದುಕೊಳ್ಳಲು ಸಾಧ್ಯ?

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು