ಪ್ರಸಂಗಿ 5 - ಕನ್ನಡ ಸತ್ಯವೇದವು C.L. Bible (BSI)ವಾಗ್ದಾನ ಮಾಡಲು ದುಡುಕಬೇಡ 1 ನೀನು ದೇವಾಲಯವನ್ನು ಪ್ರವೇಶಿಸುವಾಗ ಎಚ್ಚರಿಕೆವಹಿಸು. ಮೂಢರು ಅರ್ಪಿಸುವ ಬಲಿಗಿಂತ ದೇವರ ಸಾನ್ನಿಧ್ಯ ಸೇರಿ ಕಿವಿಗೊಟ್ಟು ಆಲಿಸುವುದು ಲೇಸು. ತಾವು ಮಾಡುವುದು ಸರಿಯಲ್ಲ ಎಂದು ಆ ಮೂಢರಿಗೆ ತಿಳಿಯದು. 2 ದುಡುಕಿ ಮಾತನಾಡಬೇಡ. ದೇವರ ಸನ್ನಿಧಿಯಲ್ಲಿ ಮಾತುಕೊಡಲು ಆತುರಪಡಬೇಡ. ದೇವರು ಇರುವುದು ಪರಲೋಕದಲ್ಲಿ, ನೀನಿರುವುದಾದರೋ ಭೂಲೋಕದಲ್ಲಿ. ಆದುದರಿಂದ ನಿನ್ನ ಮಾತುಗಳಿಗೆ ಮಿತಿಯಿರಲಿ. 3 ಚಿಂತೆ ಹೆಚ್ಚಾದರೆ ಕನಸು ಕಾಣಿಸಿಕೊಳ್ಳುತ್ತದೆ. ಮಾತು ಹೆಚ್ಚಾದರೆ ಹುಚ್ಚುತನ ಹೊರಬರುತ್ತದೆ. 4 ದೇವರಿಗೆ ನೀನು ಹರಕೆಯನ್ನು ಹೊತ್ತರೆ ತೀರಿಸಲು ತಡಮಾಡಬೇಡ. ದೇವರು ಮೂಢರಿಗೆ ಒಲಿಯುವುದಿಲ್ಲ. ನಿನ್ನ ಹರಕೆಯನ್ನು ತಪ್ಪದೆ ತೀರಿಸು. 5 ಹರಕೆಮಾಡಿ ತೀರಿಸದೆ ಇರುವುದಕ್ಕಿಂತ ಹರಕೆ ಮಾಡಿಕೊಳ್ಳದಿರುವುದೇ ಲೇಸು. 6 ನಿನ್ನ ಬಾಯಿ ಪಾಪಕ್ಕೆ ಕಾರಣ ಆಗದಂತೆ ನೋಡಿಕೊ. ಅದು ಅಜಾಗ್ರತೆಯಿಂದ ಆಯಿತೆಂದು ದೇವದೂತನ ಮುಂದೆ ನೆಪ ಹೇಳಬೇಡ. ದೇವರು ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೆಲಸವನ್ನು ಹಾಳುಮಾಡಿಯಾರು. 7 ಕನಸುಗಳು ಎಷ್ಟೋ ಬೀಳಬಹುದು. ಮಾತುಕತೆಗಳು ಎಷ್ಟೋ ನಡೆಯಬಹುದು. ನೀನಾದರೋ ದೇವರಲ್ಲಿ ಭಯಭಕ್ತಿಯುಳ್ಳವನಾಗಿರು. ಜೀವನ ನಿರರ್ಥಕ 8 ನಾಡಿನಲ್ಲಿ ಬಡವರ ಶೋಷಣೆಯನ್ನೂ ನ್ಯಾಯನೀತಿಯ ಉಲ್ಲಂಘನೆಯನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ. ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬ ಅಧಿಕಾರಿ ಉಸ್ತುವಾರಿ ನಡೆಸುತ್ತಾನೆ. ಆ ಇಬ್ಬರು ಅಧಿಕಾರಿಗಳ ಮೇಲೆ ಇನ್ನೂ ಉನ್ನತ ಅಧಿಕಾರಿಗಳು ಇದ್ದಾರೆ. 9 :ಸಾರ್ವಜನಿಕ ಒಳಿತು,” “ಅಧಿಪತಿಗಳ ಸೇವೆ” ಎಂದೆಲ್ಲ ಹೇಳುವರು. 10 ಹಣದಾಸೆಯುಳ್ಳವನಿಗೆ ಎಷ್ಟು ಹಣ ಇದ್ದರೂ ತೃಪ್ತಿಯಿಲ್ಲ. ಆಸ್ತಿ ಬಯಸುವವನಿಗೆ ಎಷ್ಟು ಆದಾಯವಿದ್ದರೂ ನೆಮ್ಮದಿಯಿಲ್ಲ. ಇದೂ ಸಹ ವ್ಯರ್ಥವೇ. 11 ಸಿರಿಸಂಪತ್ತು ಹೆಚ್ಚಿದಂತೆ ಅನುಭವಿಸುವವರ ಸಂಖ್ಯೆಯೂ ಹೆಚ್ಚುತ್ತದೆ. ಯಜಮಾನನಿಗೆ ತಾನು ಐಶ್ವರ್ಯವಂತನೆಂಬ ಭಾವನೆಯ ಹೊರತು ಮತ್ತಾವ ಲಾಭವು ಇಲ್ಲ. 12 ದುಡಿಯುವವನು ಸ್ವಲ್ಪ ತಿಂದರೂ ಸರಿ, ಹೆಚ್ಚು ತಿಂದರೂ ಸರಿ, ಹಾಯಾಗಿ ನಿದ್ರಿಸುತ್ತಾನೆ. ಐಶ್ವರ್ಯವಂತನ ಸಂಪತ್ತಾದರೋ ಅವನಿಗೆ ನಿದ್ರೆ ಬರಲು ಬಿಡುವುದಿಲ್ಲ. 13 ಲೋಕದಲ್ಲಿ ನಾನು ಮತ್ತೊಂದು ಕೇಡನ್ನು ಕಂಡೆ. ಅದೇನೆಂದರೆ, ಆಸ್ತಿವಂತನು ತನ್ನ ಆಸ್ತಿಯನ್ನು ಕಾಪಾಡುವುದರಲ್ಲೇ ಕೊರಗುತ್ತಿರುತ್ತಾನೆ. 14 ಆ ಆಸ್ತಿ ನಿರರ್ಥಕ ಪ್ರಯತ್ನದಿಂದ ನಷ್ಟವಾಗುತ್ತದೆ. ಅವನಿಗೆ ಮಗನಿದ್ದರೆ, ಅವನಿಗೆ ಏನೂ ಇರುವುದಿಲ್ಲ. 15 ತಾಯಿಯ ಗರ್ಭದಿಂದ ಹೇಗೆ ಬರಿಗೈಯಲ್ಲಿ ಬಂದನೋ ಹಾಗೇ ಬರಿಗೈಯಲ್ಲಿ ಗತಿಸಿಹೋಗುತ್ತಾನೆ. ಅವನು ಪಟ್ಟ ಎಲ್ಲ ಪ್ರಯಾಸಕ್ಕಾಗಿ ತನ್ನ ಕೈಯಲ್ಲಿ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. 16 ಬಂದಂತೆಯೇ ಹಿಂದಿರುಗಿ ಹೋಗುವನು. ಅವನು ಪಟ್ಟ ಪ್ರಯಾಸವೆಲ್ಲ ಗಾಳಿಗೆ ತೂರಿದಂತೆ ನಿರರ್ಥಕ, ಇದು ದುರದೃಷ್ಟಕರ. 17 ಅವನ ಜೀವಮಾನವೆಲ್ಲ ಅಂಧಕಾರಮಯ, ಅದರಲ್ಲಿ ದುಃಖದುಗುಡ, ರೋಗರುಜಿನ, ಕೋಪತಾಪ ಇದ್ದೇ ಇರುತ್ತವೆ. 18 ಇಗೋ, ನನಗೆ ಕಂಡುಬಂದ ಇನ್ನೊಂದು ವಿಷಯ: ದೇವರು ಮನುಷ್ಯನಿಗೆ ದಯಪಾಲಿಸಿರುವ ಅಲ್ಪಕಾಲಾವಧಿಯಲ್ಲಿ ಅವನು ತಿಂದು ಕುಡಿಯಬೇಕು. ಲೋಕದಲ್ಲಿ ಪಡಬೇಕಾದ ದುಡಿಮೆಯಲ್ಲೂ ಸುಖವನ್ನು ಅನುಭವಿಸಬೇಕು. ಇದು ಅವನಿಗೆ ಉಚಿತವಾದುದು. ಉತ್ತಮವಾದುದು. ಇದೇ ಅವನಿಗೆ ಬಂದಿರುವ ಪಾಲು. 19 ದೇವರು ಯಾರಿಗಾದರು ಆಸ್ತಿಪಾಸ್ತಿಯನ್ನು ದಯಪಾಲಿಸಿ, ಅದನ್ನು ಅನುಭವಿಸುವ, ಪಾಲಿಗೆ ಬಂದದ್ದನ್ನು ಸವಿಯುವ, ಶ್ರಮದಲ್ಲೂ ಸಂತೋಷಪಡುವ ಶಕ್ತಿಯನ್ನು ಕೊಟ್ಟಿದ್ದರೆ ಅದು ಅವನ ಭಾಗ್ಯ; ಅದು ದೇವರ ಅನುಗ್ರಹವೇ ಸರಿ. 20 ಇಂಥವನು ತನ್ನ ಜೀವನಾವಧಿಯನ್ನು ಗಣನೆಗೆ ತಂದುಕೊಳ್ಳನು. ಕಾರಣ, ಅವನು ತನ್ನ ಹೃದಯಾನಂದದಲ್ಲೇ ಮಗ್ನನಾಗಿರುವಂತೆ ದೇವರು ಮಾಡಿದ್ದಾರೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India