ಪ್ರಸಂಗಿ 4 - ಕನ್ನಡ ಸತ್ಯವೇದವು C.L. Bible (BSI)1 ಇದಾದ ಮೇಲೆ ಈ ಜಗದಲ್ಲಿ ಎಲ್ಲಾ ತರದ ಚಿತ್ರಹಿಂಸೆಗಳನ್ನು ಕುರಿತು ಯೋಚಿಸಿದೆ. ಅಯ್ಯೋ, ಹಿಂಸೆಗೆ ಈಡಾದವರ ಕಣ್ಣೀರನ್ನು ಕುರಿತು ಏನೆಂದು ಹೇಳಲಿ? ಅವರನ್ನು ಸಂತೈಸುವವರು ಯಾರೂ ಇಲ್ಲ. ಹಿಂಸಾಚಾರಿಗಳು ಶಕ್ತಿಸಾಮರ್ಥ್ಯ ಉಳ್ಳವರು. ಸಂತೈಸುವವರಾದರೋ ಒಬ್ಬರೂ ಇರಲಿಲ್ಲ. 2 ಇದನ್ನು ನೋಡಿ ಜೀವದಿಂದ ಇರುವವರಿಗಿಂತ ಸತ್ತವರೇ ಧನ್ಯರೆಂದು ಹೊಗಳಿದೆ. 3 ಹೌದು, ಉಭಯರಿಗಿಂತಲೂ ಇನ್ನೂ ಹುಟ್ಟದೆ, ಜಗದಲ್ಲಿನ ಅಧರ್ಮವನ್ನು ಕಾಣದೆ ಇರುವವನು ಮತ್ತಷ್ಟು ಭಾಗ್ಯವಂತನೆಂದು ತಿಳಿದುಕೊಂಡೆ. 4 ಮಾನವನು ಪಡುವ ಸಮಸ್ತ ಪರಿಶ್ರಮವನ್ನು ಹಾಗೂ ಸಾಧಿಸುವ ಸಕಲ ಕಾರ್ಯಗಳನ್ನು ಅವಲೋಕಿಸಿದೆ. ಇವಕ್ಕೆಲ್ಲ ಪರರ ಬಗ್ಗೆ ಅವನಿಗಿರುವ ಮತ್ಸರವೇ ಕಾರಣವೆಂದು ತೋರಿಬಂತು. ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ. 5 ಕೈಕಟ್ಟಿಕೊಂಡು ಕುಳಿತುಕೊಳ್ಳುವ ಮೈಗಳ್ಳನಾದ ಮೂಢನಿಗೆ ಅವನ ಒಡಲೇ ಊಟ. 6 ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಎರಡು ಕೈಹಿಡಿ ವ್ಯರ್ಥ ಪರಿಶ್ರಮಕ್ಕಿಂತ ಒಂದೇ ಕೈಹಿಡಿಯಷ್ಟು ಸಂಪಾದನೆ ಪಡೆದು ನೆಮ್ಮದಿಯಿಂದಿರುವುದು ಲೇಸು. 7 ಲೋಕದಲ್ಲಿ ಮತ್ತೊಂದು ವ್ಯರ್ಥ ವಿಷಯವನ್ನು ಕಂಡೆ. ಒಬ್ಬಂಟಿಗನಾದ ಮನುಷ್ಯನೊಬ್ಬ ಇದ್ದ. ಅವನಿಗೆ ಅಣ್ಣತಮ್ಮಂದಿರು ಇರಲಿಲ್ಲ. ಮಕ್ಕಳುಮರಿ ಇರಲಿಲ್ಲ. ಆದರೂ ಅವನ ದುಡಿಮೆಗೆ ಎಲ್ಲೆ ಇರಲಿಲ್ಲ. ಆಸ್ತಿಪಾಸ್ತಿಯಿಂದ ಅವನ ಕಣ್ಣಿಗೆ ತೃಪ್ತಿ ಇರಲಿಲ್ಲ. 8 “ನಾನು ಸುಖಾನುಭವವನ್ನು ತೊರೆದು ಯಾರಿಗೋಸ್ಕರ ಒಂದೇ ಸಮನೆ ದುಡಿಯುತ್ತಾ ಇದ್ದೇನೆ?” ಎಂದುಕೊಂಡ. ಇದೂ ಕೂಡ ವ್ಯರ್ಥ, ಕೇವಲ ಪ್ರಯಾಸವೇ ಸರಿ. 9 ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಹೆಚ್ಚಿನ ಲಾಭ. 10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುತ್ತಾನೆ; ಬಿದ್ದಾಗ ಎತ್ತುವವನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ ಸರಿ. 11 ಇದಲ್ಲದೆ, ಒಬ್ಬನ ಮಗ್ಗುಲಲ್ಲಿ ಇನ್ನೊಬ್ಬನು ಮಲಗಿಕೊಂಡರೆ ಇಬ್ಬರಿಗೂ ಬೆಚ್ಚಗಾದೀತು! 12 ಒಬ್ಬಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಕೂಡ ಎದುರಾಗಿ ನಿಲ್ಲಬಹುದು. ಮೂರು ಹುರಿಗಳಿಂದ ಹೆಣೆದ ಹಗ್ಗ ಸುಲಭವಾಗಿ ಕಿತ್ತುಹೋಗುವುದಿಲ್ಲ. 13 ಬುದ್ಧಿಮಾತಿಗೆ ಕಿವಿಗೊಡದ ಮೂರ್ಖನಾದ ಮುದಿಯರಸನಿಗಿಂತ ಜ್ಞಾನಿಯಾದ ಬಡ ಯುವಕನೇ ಮೇಲು. 14 ಇಂಥ ಯುವಕನೊಬ್ಬನನ್ನು ರಾಜನನ್ನಾಗಿಸಲು ಸೆರೆಮನೆಯಿಂದ ಕರೆ ತರಲಾಯಿತು. ರಾಜ್ಯದಲ್ಲಿ ಒಬ್ಬ ಬಡ ಪ್ರಜೆಯಾಗಿ ಹುಟ್ಟಿದವನು ಆತ. 15 ಜಗತ್ತಿನಲ್ಲಿ ಬದುಕಿದ್ದ ಜೀವಂತರೆಲ್ಲರು ರಾಜನಿಗೆ ಪ್ರತಿಯಾಗಿ ನಿಂತ ಆ ಯುವಕನ ಪಕ್ಷ ವಹಿಸುವುದನ್ನು ಕಂಡೆ. 16 ಇವನ ಅಧಿಪತ್ಯಕ್ಕೆ ಒಳಪಟ್ಟ ಜನಜಂಗುಳಿಯ ಸಂಖ್ಯೆ ಅಪಾರವಾಗಿತ್ತು. ಇವನ ನಂತರ ಬಂದವರಾದರೋ ಇವನ ಬಗ್ಗೆ ಅಭಿಮಾನ ತೋರಲಿಲ್ಲ. ಇದು ಸಹ ವ್ಯರ್ಥ, ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India