ಪ್ರಸಂಗಿ 3 - ಕನ್ನಡ ಸತ್ಯವೇದವು C.L. Bible (BSI)ಒಂದೊಂದಕ್ಕೆ ಸೂಕ್ತ ಸಮಯವುಂಟು 1 ಪ್ರತಿಯೊಂದು ಕಾಲಕ್ಕೂ ನಿಗದಿಯಾದ ಕಾಲವಿದೆ. ಜಗತ್ತಿನಲ್ಲಿ ನಡೆಯುವ ಒಂದೊಂದು ಕೆಲಸಕ್ಕೂ ಸೂಕ್ತ ಸಮಯವಿದೆ: 2 ಹುಟ್ಟುವ ಸಮಯ, ಸಾಯುವ ಸಮಯ ನೆಡುವ ಸಮಯ, ನೆಟ್ಟದ್ದನ್ನು ಕೀಳುವ ಸಮಯ. 3 ಕೊಲ್ಲುವ ಸಮಯ, ಗುಣಪಡಿಸುವ ಸಮಯ ಕೆಡವಿಬಿಡುವ ಸಮಯ, ಕಟ್ಟಿ ಎಬ್ಬಿಸುವ ಸಮಯ. 4 ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ. 5 ಕಲ್ಲುಗಳನ್ನು ಬಿಸಾಡುವ ಸಮಯ, ಕಲ್ಲುಗಳನ್ನು ಕೂಡಿಸಿಡುವ ಸಮಯ ಆಲಿಂಗನ ಮಾಡುವ ಸಮಯ, ಆಲಿಂಗನ ಮಾಡದ ಸಮಯ. 6 ಗಳಿಸುವ ಸಮಯ, ಕಳೆದುಕೊಳ್ಳುವ ಸಮಯ ಕಾಪಾಡುವ ಸಮಯ, ಬಿಸಾಡುವ ಸಮಯ. 7 ಹರಿಯುವ ಸಮಯ, ಹೊಲಿಯುವ ಸಮಯ ಸುಮ್ಮನಿರುವ ಸಮಯ, ಮಾತಾಡುವ ಸಮಯ. 8 ಪ್ರೀತಿಸುವ ಸಮಯ, ದ್ವೇಷಿಸುವ ಸಮಯ ಯುದ್ಧಮಾಡುವ ಸಮಯ, ಸಮಾಧಾನಮಾಡುವ ಸಮಯ. ಹೀಗೆ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. 9 ಕಷ್ಟಪಟ್ಟು ಮಾಡುವ ದುಡಿಮೆಯಿಂದ ಒಬ್ಬನಿಗೆ ಸಿಗುವ ಲಾಭವಾದರೂ ಏನು? 10 ನರಮಾನವರ ಕರ್ತವ್ಯವೆಂದು ದೇವರು ವಿಧಿಸಿರುವ ದುಡಿಮೆಯನ್ನು ನಾನು ಗಮನಿಸಿದ್ದೇನೆ. 11 ಒಂದೊಂದು ವಸ್ತುವನ್ನೂ ಸಮಯಕ್ಕೆ ತಕ್ಕಂತೆ ಸುಂದರವಾಗಿ ನಿರ್ಮಿಸಿದ್ದಾರೆ ದೇವರು. ಇದಲ್ಲದೆ, ಮನುಷ್ಯನ ಹೃದಯದಲ್ಲಿ ಅಮರತ್ವದ ಪ್ರತಿಯನ್ನು ಮೂಡಿಸಿದ್ದಾರೆ. 12 ಮನುಷ್ಯರು ತಮ್ಮ ಇಡೀ ಜೀವಮಾನದಲ್ಲಿ ಸುಖಸಂತೋಷವನ್ನು ಅನುಭವಿಸುವುದಕ್ಕಿಂತ ಮೇಲಾದುದು ಅವರಿಗೆ ಯಾವುದೂ ಇಲ್ಲ ಎಂಬುದನ್ನು ನಾನು ಗ್ರಹಿಸಿದ್ದೇನೆ. 13 ಅಲ್ಲದೆ, ಪ್ರತಿಯೊಬ್ಬನು ಅನ್ನಪಾನಗಳನ್ನು ಸೇವಿಸಿ, ತನ್ನ ನಾನಾತರದ ದುಡಿಮೆಗಳಲ್ಲೂ ಸುಖವನ್ನು ಅನುಭವಿಸುವುದು ದೇವರ ಅನುಗ್ರಹವೇ ಎಂದು ನನಗೆ ತಿಳಿದಿದೆ. 14 ದೇವರ ಕಾರ್ಯವೆಲ್ಲವು ಶಾಶ್ವತವಾದುದು ಎಂದು ಬಲ್ಲೆ. ಅದಕ್ಕೆ ಯಾವುದನ್ನೂ ಸೇರಿಸಲಾಗದು. ಅದರಿಂದ ಯಾವುದನ್ನೂ ಕಳೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮಾನವರು ಭಯಭಕ್ತಿಯಿಂದ ಇರಬೇಕೆಂಬ ಕಾರಣದಿಂದಲೇ ದೇವರು ಹೀಗೆ ಮಾಡಿದ್ದಾರೆ. 15 ಈಗಿನದು ಹಿಂದೆ ಇತ್ತು; ಮುಂದಿನದು ಈಗಲೂ ಇದೆ; ಗತಿಸಿಹೋದದ್ದನ್ನು ದೇವರು ಮರಳಿ ಬರಮಾಡುವರು. ವಿಶ್ವದಲ್ಲಿ ಅಧರ್ಮ 16 ಇದಲ್ಲದೆ, ನಾನು ಲೋಕವನ್ನು ದೃಷ್ಟಿಸಿನೋಡಿ ನ್ಯಾಯಸ್ಥಾನದಲ್ಲೂ ಧರ್ಮಸ್ಥಾನದಲ್ಲೂ ಅಧರ್ಮ ಇರುವುದನ್ನು ಗಮನಿಸಿದೆ. 17 ಆಗ ನಾನು ಮನಸ್ಸಿನಲ್ಲೇ, “ದೇವರು ಸಜ್ಜನರಿಗೂ ದುರ್ಜನರಿಗೂ ನ್ಯಾಯತೀರಿಸುವರು. ಅವರ ನ್ಯಾಯಕ್ರಮದಲ್ಲಿ ಎಲ್ಲ ಕೆಲಸಕಾರ್ಯಗಳಿಗೂ ತಕ್ಕ ಸಮಯ ಉಂಟಲ್ಲವೆ?” ಎಂದುಕೊಂಡೆ. 18 ಮತ್ತೆ ಮನಸ್ಸಿನಲ್ಲೇ ಮಾನವರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿದೆ; ಮನುಷ್ಯರು ಪಶುಗಳಿಗೆ ಸಮಾನರೆಂದು ತಾವೇ ಗ್ರಹಿಸಿಕೊಳ್ಳುವುದಕ್ಕೆ ಆಸ್ಪದವಾಗುವಂತೆ ದೇವರು ಮನುಷ್ಯರನ್ನು ಪರೀಕ್ಷಿಸುತ್ತಾರೆ. 19 ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ; ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುತ್ತದೆ. ಎಲ್ಲಕ್ಕೂ ಇರುವ ಪ್ರಾಣ ಒಂದೇ. ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ. ಎಲ್ಲವೂ ವ್ಯರ್ಥವೇ. 20 ಎಲ್ಲ ಪ್ರಾಣಿಗಳೂ ಒಂದೇ ಸ್ಥಳಕ್ಕೆ ಹೋಗುತ್ತವೆ. ಎಲ್ಲವೂ ಮಣ್ಣಿನಿಂದ ಆದವು, ಎಲ್ಲವೂ ಮರಳಿ ಮಣ್ಣಿಗೆ ಸೇರುತ್ತವೆ. 21 ಮನುಷ್ಯನ ಆತ್ಮ ಮೇಲಕ್ಕೆ ಏರುತ್ತದೋ? ಪಶುವಿನ ಆತ್ಮ ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ? ಯಾರಿಗೆ ಗೊತ್ತು?” 22 ಈ ಪ್ರಕಾರ ನಾನು ಆಲೋಚಿಸಿ ಮನುಷ್ಯನು ತನ್ನ ಕೆಲಸಕಾರ್ಯಗಳಲ್ಲಿ ಉಲ್ಲಾಸಗೊಳ್ಳುವುದಕ್ಕಿಂತ ಅವನಿಗೆ ಮೇಲಾದುದು ಯಾವುದೂ ಇಲ್ಲ. ಇದೇ ಅವನ ಪಾಲಿಗೆ ಬಂದುದು ಎಂದು ಗ್ರಹಿಸಿಕೊಂಡೆ. ಜೀವಮಾನದ ನಂತರ ಸಂಭವಿಸುವುದನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು? |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India