Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 12 - ಕನ್ನಡ ಸತ್ಯವೇದವು C.L. Bible (BSI)

1 ಆದುದರಿಂದ ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸಿಕೊ. ಕಷ್ಟಕರವಾದ ದಿನಗಳು ಬರುವುದಕ್ಕೆ ಮುನ್ನ, ಜೀವನ ಬೇಸರವಾಗಿದೆ ಎಂದು ನೀನು ಹೇಳುವುದಕ್ಕೆ ಮುಂಚೆ ಆತನನ್ನು ಸ್ಮರಿಸು.

2 ಆ ಕಷ್ಟಕರವಾದ ದಿನಗಳಲ್ಲಿ ಸೂರ್ಯಚಂದ್ರನಕ್ಷತ್ರಗಳೂ ನಿನಗೆ ಮೊಬ್ಬಾಗುವುವು. ಮಳೆಯಾದ ಮೇಲೂ ಮೋಡಗಳು ಮತ್ತೆ ಬರುವುವು;

3 ಬಲಿಷ್ಠವಾಗಿದ್ದ ನಿನ್ನ ಕಾಲುಗಳು ಬಗ್ಗುವುವು; ಹಲ್ಲುಗಳು ಉದುರಿ ಅಗಿಯುವ ಕೆಲಸ ನಿಲ್ಲುವುದು; ಕಿಟಕಿಗಳಂಥ ಕಣ್ಣುಗಳು ಮಂಕಾಗುವುವು.

4 ಕಿವಿಗಳು ಮಂದವಾಗಿ ಹಾದಿಬೀದಿಗಳ ಶಬ್ದವು ಕೇಳಿಸವು. ಬೀಸುವ ಶಬ್ದವು ತಗ್ಗಿ ಹಕ್ಕಿಯ ಶಬ್ದಗಳಷ್ಟು ಕಿರಿದಾಗುವುದು; ಬೀಸುವವರ ಹಾಡೆಲ್ಲಾ ಕುಗ್ಗಿಹೋಗುವುದು;

5 ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು.

6 ಬೆಳ್ಳಿಯ ಸರ ಕಿತ್ತುಹೋಗುವುದು, ಚಿನ್ನದಬಟ್ಟಲು ಜಜ್ಜಿಹೋಗುವುದು; ಮಡಕೆ ಬುಗ್ಗೆಯ ಹತ್ತಿರವೆ ಒಡೆಯುವುದು, ಬಾವಿಯ ರಾಟೆ ಮುರಿಯುವುದು.

7 ಮಣ್ಣಿನ ದೇಹ ತನ್ನ ಭೂಮಿಗೆ ಸೇರಿಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು. (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ).

8 “ವ್ಯರ್ಥವೇ ವ್ಯರ್ಥ! ಸಮಸ್ತವೂ ವ್ಯರ್ಥ!!” ಎನ್ನುತ್ತಾನೆ ಉಪದೇಶಕ.


ಹಿನ್ನುಡಿ

9 ಉಪದೇಶಕನು ಜ್ಞಾನಿಯಾಗಿದ್ದ; ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದ. ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ, ಕ್ರಮಪಡಿಸಿದ.

10 ಹಿತಕರವಾದ ವಚನಗಳನ್ನು ಅವನು ಹುಡುಕಿ ಆರಿಸಿದ; ಅವನಿಂದ ರಚಿತವಾದವು ಸರಿಯಾದುವು, ಸತ್ಯವಾದುವು.

11 ಜ್ಞಾನಿಗಳ ನುಡಿಗಳು ಮೊನೆಗೋಲುಗಳು, ಅವರು ಸಂಗ್ರಹಿಸಿದ ವಚನಗಳು ಬಿಗಿಯಾಗಿ ಜಡಿದ ಮೊಳೆಗಳು. ಅವುಗಳ ಮೂಲಕರ್ತನು ಎಲ್ಲರ ಏಕೈಕ ಮೇಷಪಾಲ.

12 ಕುಮಾರಾ, ಇವುಗಳಲ್ಲದೆ ನೀನು ಎಚ್ಚರಿಕೆಯಿಂದಿರಬೇಕಾದುವು ಇನ್ನೂ ಇವೆ. ಗ್ರಂಥಗಳ ರಚನೆಗೆ ಮಿತಿಯಿಲ್ಲ. ಅತಿಯಾದ ವ್ಯಾಸಂಗದಿಂದ ದೇಹಕ್ಕೆ ಆಯಾಸ.

13 ವಿಷಯ ಮುಗಿಯಿತು; ಎಲ್ಲವನ್ನು ಕೇಳಿ ಆಯಿತು. ದೇವರಿಗೆ ಭಯಪಟ್ಟು ಅವರ ಆಜ್ಞೆಗಳನ್ನು ಕೈಗೊಳ್ಳು. ಇದೇ ಪ್ರತಿಯೊಬ್ಬ ಮಾನವನ ಕರ್ತವ್ಯ.

14 ದೇವರು ಎಲ್ಲ ಕಾರ್ಯಗಳನ್ನು, ರಹಸ್ಯವಾದುವುಗಳನ್ನು ಕೂಡ, ಅವು ಒಳ್ಳೆಯದಾಗಿರಲಿ, ಕೆಟ್ಟದಾಗಿರಲಿ, ನ್ಯಾಯವಿಚಾರಣೆಗೆ ಗುರಿಮಾಡುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು