Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 11 - ಕನ್ನಡ ಸತ್ಯವೇದವು C.L. Bible (BSI)


ಜ್ಞಾನಿಯ ನಡವಳಿಕೆ

1 ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಹಾಕು. ಬಹುದಿನದ ಮೇಲೆ ಅದು ಬಡ್ಡಿ ಸಮೇತ ನಿನಗೆ ಸಿಕ್ಕುವುದು.

2 ನಿನ್ನ ಹಣವನ್ನು ವಿಭಾಗಿಸಿ ಏಳೆಂಟು ಸ್ಥಳಗಳಲ್ಲಿ ಇಡು. ಏಕೆಂದರೆ ಎಲ್ಲಿ, ಎಂಥ ಕೇಡು ಸಂಭವಿಸಬಹುದೆಂದು ನಿನಗೆ ತಿಳಿಯದು.

3 ಮಳೆ ತುಂಬಿದ ಮೋಡಗಳು ನೆಲದ ಮೇಲೆ ಸುರಿದುಬಿಡುತ್ತವೆ. ಮರವು ದಕ್ಷಿಣದ ಕಡೆಗಾಗಲಿ, ಉತ್ತರದ ಕಡೆಗಾಗಲಿ ಉರುಳಿದರೆ ಬಿದ್ದ ಕಡೆಯಲ್ಲೆ ಬಿದ್ದಿರುತ್ತದೆ.

4 ಗಾಳಿಗಾಗಿಯೇ ಕಾದಿರುವವನು, ಮೋಡಕ್ಕಾಗಿಯೇ ಎದುರು ನೋಡುತ್ತಿರುವವನು ಎಂದಿಗೂ ಬೀಜಬಿತ್ತಲಾರನು; ಎಂದಿಗೂ ಪೈರು ಕೊಯ್ಯಲಾರನು.

5 ಗಾಳಿಯ ಚಲನೆಯನ್ನಾಗಲಿ ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನಿನ್ನಿಂದ ತಿಳಿಯಲಾಗದು. ಅಂತೆಯೇ ಸರ್ವೇಶ್ವರನಾದ ದೇವರ ಕಾರ್ಯವನ್ನು ನಿನ್ನಿಂದ ಗ್ರಹಿಸಲಾಗದು.

6 ಮುಂಜಾನೆಯಲ್ಲೇ ಬೀಜಬಿತ್ತು; ಸಂಜೆಯಲ್ಲೂ ನಿನ್ನ ಕೈಗೆ ಬಿಡುವುಕೊಡಬೇಡ; ಇದು ಸಫಲವೋ ಅದು ಸಫಲವೋ ನಿನ್ನಿಂದ ಹೇಳಲಾಗದು. ಒಂದು ವೇಳೆ ಎರಡೂ ಒಳ್ಳೆಯ ಬೆಳೆಯನ್ನು ಕೊಡಬಹುದು.

7 ಬೆಳಕು ಬಹಳ ಇಂಪು; ಸೂರ್ಯನ ಕಾಂತಿ ಕಣ್ಣುಗಳಿಗೆ ಸೊಂಪು. ಮಾನವನು ಎಷ್ಟೇ ಧೀರ್ಘಕಾಲ ಬದುಕಿರಲಿ ತನ್ನ ಬಾಳಿನ ದಿನಗಳಲ್ಲೆಲ್ಲಾ ಆನಂದಿಸಲಿ; ಆದರೆ ಅಂಧಕಾರದ ದಿನಗಳು ಸಹ ಬಹಳ ಇವೆ ಎಂಬುದನ್ನು ನೆನಪಿಗೆ ತಂದುಕೊಳ್ಳಲಿ. ಆ ಬಳಿಕ ಬರುವುದೆಲ್ಲಾ ನಿರರ್ಥಕ.


ಯುವಜನರಿಗೆ ಹಿತವಚನ

8-9 ಯುವಕನೇ, ಯೌವನದಲ್ಲಿ ಆನಂದಿಸು. ಯೌವನ ದಿನಗಳಲ್ಲಿ ಹೃತ್ಪೂರ್ವಕವಾಗಿ ಸಂತೋಷಿಸು. ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೊ. ಆದರೆ ಈ ಎಲ್ಲ ವಿಷಯಗಳಲ್ಲಿ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವರೆಂಬುದನ್ನು ಮನದಲ್ಲಿಡು.

10 ನಿನ್ನ ಹೃದಯದಿಂದ ವ್ಯಥೆಯನ್ನೂ ನಿನ್ನ ದೇಹದಿಂದ ಯಾತನೆಯನ್ನೂ ದೂರಮಾಡು. ಯೌವನವೂ ಪ್ರಾಯವೂ ಬೇಗ ಮಾಯವಾಗುವುವು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು