Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 10 - ಕನ್ನಡ ಸತ್ಯವೇದವು C.L. Bible (BSI)


ಹುಚ್ಚುತನದ ಚಿಹ್ನೆಗಳು

1 ಸತ್ತ ನೊಣಗಳಿಂದ ಗಂದಿಗನ ತೈಲ ಕೂಡ ನಾರುತ್ತದೆ. ಅಂತೆಯೇ ಹುಚ್ಚುತನ ಕೊಂಚವಾದರೂ ಜ್ಞಾನಮಾನಗಳನ್ನು ಕೆಡಿಸಿಬಿಡುತ್ತದೆ.

2 ಜ್ಞಾನಿಯ ಬುದ್ಧಿ ಬಲಗೈಯಾದರೆ ಅಜ್ಞಾನಿಯ ಬುದ್ಧಿ ಎಡಗೈ.

3 ಬುದ್ಧಿತಪ್ಪಿ ತಿರುಗಾಡುವ ಹುಚ್ಚನು ದಾರಿಯಲ್ಲೆಲ್ಲಾ ತನ್ನ ಹುಚ್ಚುತನವನ್ನು ಪ್ರಕಟಮಾಡುತ್ತಾನೆ.

4 ರಾಜನು ಸಿಟ್ಟುಗೊಂಡನೆಂದು ಉದ್ಯೋಗಕ್ಕೇ ರಾಜೀನಾಮೆ ಕೊಟ್ಟುಬಿಡಬೇಡ; ತಾಳ್ಮೆಯಿಂದ ಘನದೋಷಗಳನ್ನೂ ಅಳಿಸಬಹುದು.

5 ಲೋಕದಲ್ಲಿ ನಾನು ಮತ್ತೊಂದು ಅನ್ಯಾಯವನ್ನು ಕಂಡೆ. ಅದು ಅಧಿಪತಿಗಳ ತಪ್ಪಿನಿಂದಾದುದು.

6 ಅದು ಯಾವುದೆಂದರೆ, ಮೂಢರನ್ನು ಮಹಾಪದವಿಗೆ ಏರಿಸುತ್ತಾರೆ; ಘನವಂತರನ್ನು ಹೀನಸ್ಥಿತಿಯಲ್ಲಿ ಇರಿಸುತ್ತಾರೆ.

7 ಗುಲಾಮನು ಕುದುರೆಸವಾರಿ ಮಾಡುವುದನ್ನೂ ಯಜಮಾನನು ಮನೆಯಾಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ.

8 ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ಗೋಡೆ ಒಡೆಯುವವನನ್ನು ಹಾವು ಕಡಿಯುವುದು.

9 ಬಂಡೆ ಸೀಳುವವನು ಬಂಡೆಯಿಂದಲೇ ಗಾಯಗೊಳ್ಳುವನು; ಮರಕಡಿಯುವವನು ಅದರಿಂದಲೇ ಅಪಾಯಕ್ಕೆ ಗುರಿಯಾಗುವನು.

10 ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ ಹೆಚ್ಚು ಬಲಪ್ರಯೋಗ ಮಾಡಬೇಕಾಗುವುದು. ಕಾರ್ಯಸಿಧ್ಧಿಗೆ ಜ್ಞಾನವೇ ಸಾಧನ.

11 ಹಾವಾಡಿಗ ಹಾವಾಡಿಸುವುದಕ್ಕೆ ಮುಂಚೆಯೇ ಹಾವಿನಿಂದ ಕಡಿಸಿಕೊಂಡರೆ ಏನು ಪ್ರಯೋಜನ?

12-13 ಜ್ಞಾನಿಯ ಮಾತು ಹಿತಕರ; ಅಜ್ಞಾನಿಯ ಮಾತು ಅವನಿಗೆ ವಿನಾಶಕರ. ಅದು ಬುದ್ಧಿಹೀನತೆಯಿಂದ ಆರಂಭವಾಗುತ್ತದೆ. ಮೋಸ, ಮರುಳುತನದಲ್ಲಿ ಮುಕ್ತಾಯಗೊಳ್ಳುತ್ತದೆ.

14 ಅಜ್ಞಾನಿ ಮಾತಿನ ಮಲ್ಲ. ಭವಿಷ್ಯತ್ತನ್ನು ಮಾನವ ತಿಳಿಯನು; ತಾನು ಕಾಲವಾದ ಮೇಲೆ ಏನಾಗುವುದೆಂದು ಅವನು ಯಾರಿಂದ ತಿಳಿಯಬಲ್ಲನು?

15 ಪಟ್ಟಣಕ್ಕೆ ದಾರಿತಿಳಿಯದವನಿಗೆ ಮೂಢರು ತಿಳಿಸಲು ಪಡುವ ಪ್ರಯಾಸ ಕೇವಲ ಆಯಾಸ.

16 ಓ ನಾಡೇ, ನಿನ್ನ ಒಡೆಯ ಬಾಲಕನಾಗಿದ್ದು ನಿನ್ನ ನಾಯಕರೆಲ್ಲರು ಹೊತ್ತಾರೆಯೇ ಔತಣಕ್ಕೆ ಕುಳಿತುಕೊಳ್ಳುವಂಥವರಾಗಿದ್ದಾರೆ, ಅದು ನಿನ್ನ ದೌರ್ಭಾಗ್ಯವೇ ಸರಿ.

17 ನಾಡೇ, ನಿನ್ನ ಒಡೆಯ ಕುಲೀನನಾಗಿದ್ದು, ನಿನ್ನ ನಾಯಕರೆಲ್ಲ ಸಕಾಲದಲ್ಲಿ ಊಟಮಾಡಿ, ಕುಡುಕರಾಗುವುದರ ಬದಲು ಶಕ್ತಿಯುತರಾದರೆ, ಅದು ನಿನ್ನ ಸೌಭಾಗ್ಯವೇ ಸರಿ.

18 ಮೈಗಳ್ಳನ ಮನೆ ಅಂಕುಡೊಂಕಾಗಿರುತ್ತದೆ; ಸೋಮಾರಿಯ ಸೂರು ಸೋರುತ್ತಿರುತ್ತದೆ.

19 ವಿನೋದಕ್ಕಾಗಿ ಔತಣ, ಆನಂದಕ್ಕಾಗಿ ಮದ್ಯಪಾನ; ಎಲ್ಲವನ್ನು ಒದಗಿಸಿಕೊಡುವುದಕ್ಕಾಗಿ ಹಣ.

20 ಅರಸನನ್ನು ಮನಸ್ಸಿನಲ್ಲಿಯೂ ನಿಂದಿಸಬೇಡ; ಧನಿಕನನ್ನು ಮಲಗುವ ಕೋಣೆಯಲ್ಲೂ ದೂಷಿಸಬೇಡ; ಆಕಾಶದ ಹಕ್ಕಿ ಆ ಸುದ್ದಿಯನ್ನು ಮುಟ್ಟಿಸೀತು; ಹಾರುವ ಪಕ್ಷಿ ಆ ಸಮಾಚಾರವನ್ನು ತಿಳಿಸೀತು!

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು