Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 1 - ಕನ್ನಡ ಸತ್ಯವೇದವು C.L. Bible (BSI)


ಎಲ್ಲವೂ ಲೊಳಲೊಟ್ಟೆ!

1 ದಾವೀದನ ಮಗನೂ ಜೆರುಸಲೇಮನ್ನು ಆಳುವ ಅರಸನೂ ಆದ ಉಪದೇಶಕನ ಪ್ರವಚನಗಳು:

2 ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ!

3 ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ದೊರಕುವ ಲಾಭವಾದರೂ ಏನು?

4 ಒಂದು ಸಂತತಿ ಗತಿಸುತ್ತದೆ, ಮತ್ತೊಂದು ಸಂತತಿ ಬರುತ್ತದೆ, ಭೂಮಿಯಾದರೋ ಶಾಶ್ವತವಾಗಿ ನಿಲ್ಲುತ್ತದೆ.

5 ಸೂರ್ಯನು ಮೂಡುತ್ತಾನೆ, ಸೂರ್ಯನು ಮುಳುಗುತ್ತಾನೆ, ತಾನು ಹೊರಟ ಸ್ಥಳಕ್ಕೆ ಮರಳಿ ಓಡುತ್ತಾನೆ.

6 ಗಾಳಿ ದಕ್ಷಿಣಕ್ಕೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ, ಸುತ್ತುತ್ತಾ ಸುತ್ತುತ್ತಾ ಹೋಗಿ ಹಿಂತಿರುಗಿ ಬರುತ್ತದೆ.

7 ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ, ಆದರೂ ಸಮುದ್ರವು ತುಂಬುವುದಿಲ್ಲ. ಅವು ಎಲ್ಲಿಂದ ಹರಿದು ಬರುತ್ತವೋ ಅಲ್ಲಿಗೆ ಹಿಂತಿರುಗಿ ಹೋಗುತ್ತವೆ.

8 ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ.

9 ಇದ್ದದ್ದೇ ಇರುತ್ತದೆ, ನಡೆದದ್ದೇ ನಡೆಯುತ್ತದೆ. ಲೋಕದಲ್ಲಿ ಹೊಸದೇನೂ ಇಲ್ಲ.

10 ಇಗೋ, ಹೊಸದು ಎನಿಸುಕೊಳ್ಳುವ ವಸ್ತು ಇದ್ದರೂ ಅದು ನಮಗಿಂತ ಮುಂಚೆಯೇ ಪುರಾತನ ಕಾಲದಲ್ಲೇ ಇದ್ದುದು.

11 ಹಿಂದಿನ ಕಾಲದವರ ಜ್ಞಾಪಕವು ಇಂದಿನವರಿಗಿಲ್ಲ. ಮುಂದಿನ ಕಾಲದವರ ಜ್ಞಾಪಕವು ಅವರಿಗಿಂತ ಮುಂದೆ ಬರುವವರಿಗೆ ಇರುವುದಿಲ್ಲ.


ತತ್ವಜ್ಞಾನಿಯ ಅನಿಸಿಕೆ

12 ಉಪದೇಶಕನಾದ ನಾನು ಜೆರುಸಲೇಮಿನಲ್ಲಿ ಇಸ್ರಯೇಲರಿಗೆ ಅರಸನಾಗಿದ್ದೆ.

13 ಆಕಾಶದ ಕೆಳಗೆ ನಡೆಯುವ ಎಲ್ಲಾ ಕಾರ್ಯಗಳನ್ನು ಜ್ಞಾನದಿಂದ ವಿಚಾರಿಸಿದೆ; ವಿಮರ್ಶಿಸಲು ಮನಸ್ಸು ಮಾಡಿದೆ. ನರಮಾನವರ ಕರ್ತವ್ಯ ಎಂದು ದೇವರು ವಿಧಿಸಿರುವ ಕೆಲಸಕಾರ್ಯಗಳೆಲ್ಲ ಕಷ್ಟಕರವಾದುವೇ.

14 ಲೋಕದಲ್ಲಿ ನಡೆಯುವ ಎಲ್ಲ ಕಾರ್ಯಕಲಾಪಗಳನ್ನು ಗಮನಿಸಿದ್ದೇನೆ. ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಎಲ್ಲವೂ ವ್ಯರ್ಥ.

15 ಸೊಟ್ಟವಾದುದನ್ನು ನೆಟ್ಟಗೆ ಮಾಡುವುದು ಅಸಾಧ್ಯ, ಇಲ್ಲವಾದುದನ್ನು ಲೆಕ್ಕ ಹಾಕುವುದು ಅಶಕ್ಯ.

16 ನನ್ನಷ್ಟಕ್ಕೆ ನಾನೇ ಹೀಗೆಂದುಕೊಂಡೆ: “ನನಗಿಂತ ಮೊದಲು ಜೆರುಸಲೇಮನ್ನು ಆಳಿದ ಎಲ್ಲಾ ಅರಸರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ. ಜ್ಞಾನ ಹಾಗೂ ತಿಳುವಳಿಕೆಯ ವಿಶೇಷ ಅನುಭವ ನನಗಿದೆ".

17 ಜ್ಞಾನ ಎಂದರೇನು? ಮೂಢತನವೆಂದರೇನು? ಬುದ್ಧಿಹೀನತೆ ಎಂದರೇನು? ಇವುಗಳನ್ನು ಅರಿತುಕೊಳ್ಳಲು ಮನಸ್ಸು ಮಾಡಿದೆ. ಆದರೆ ಇದೂ ಸಹ ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ವ್ಯರ್ಥ ಎಂದು ಅರಿತುಕೊಂಡೆ.

18 ಅಧಿಕ ಜ್ಞಾನವುಳ್ಳವನಿಗೆ ಅಧಿಕ ವ್ಯಥೆ, ಹೆಚ್ಚು ತಿಳುವಳಿಕೆಯುಳ್ಳವನಿಗೆ ಹೆಚ್ಚು ಸಂಕಟ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು