ಪ್ರಲಾಪಗಳು 4 - ಕನ್ನಡ ಸತ್ಯವೇದವು C.L. Bible (BSI)ನಾಲ್ಕನೆಯ ಶೋಕಗೀತೆ ಪತನವಾದ ಜೆರುಸಲೇಮಿನ ಪರಿಸ್ಥಿತಿ 1 ಅಕಟಕಟಾ! ಎಷ್ಟು ಮಸುಕಾಗಿದೆ ಬಂಗಾರ ಎಷ್ಟು ಕಾಂತಿಹೀನವಾಗಿಬಿಟ್ಟಿವೆ ಅಪ್ಪಟ ಚಿನ್ನ! ಪವಿತ್ರಾಲಯದ ಕಲ್ಲುಗಳೂ ಬಿದ್ದಿವೆ ಚೆಲ್ಲಾಪಿಲ್ಲಿಯಾಗಿ ಬೀದಿಬೀದಿಗಳ ಬದಿಯಲ್ಲಿ ರಾಶಿರಾಶಿಯಾಗಿ! 2 ಅಯ್ಯೋ, ಅಪರಂಜಿಯಂತೆ ಅಮೂಲ್ಯವಾಗಿದ್ದ ಸಿಯೋನ್ ಪ್ರಜೆ ಇಂದು ಬೇಡವೆಂದು ಬಿಸಾಡಿದ ಕುಂಬಾರನ ಮಣ್ಣುಮಡಕೆ! ಅಮೂಲ್ಯವಾಗಿದ್ದರು ಸಿಯೋನಿನ ಪ್ರಜೆಗಳು ಅಪರಂಜಿಯಂತೆ ಅಯ್ಯೋ ಈಗ ಅವರಾಗಿಹರು ಕುಂಬಾರನೆ ಬಿಸಾಡಿದ ಮಡಕೆಯಂತೆ. 3 ಮರಿಗಳಿಗೆ ಮೊಲೆಕೊಟ್ಟು ಹಾಲುಣಿಸುತ್ತವೆ ನರಿಗಳು ನನ್ನ ಜನರು ಆಗಿಹರು ಕಾಡಿನ ಉಷ್ಟ್ರಪಕ್ಷಿಯಂತೆ ಕ್ರೂರಿಗಳು. 4 ದಾಹದಿಂದ ಸೇದುಹೋಗಿದೆ ಮೊಲೆಕೂಸಿನ ನಾಲಿಗೆ ಅನ್ನವಿಕ್ಕುವರಾರೂ ಇಲ್ಲ, ಹಂಬಲಿಸುವ ಆ ಹಸುಳೆಗಳಿಗೆ. 5 ಮೃಷ್ಟಾನ್ನ ಉಣ್ಣುತ್ತಿದ್ದವರು ದಿಕ್ಕೆಟ್ಟು ಅಲೆಯುತ್ತಿರುವರು ಚಿಕ್ಕಂದಿನಿಂದಲೆ ನಾರುಮಡಿಯನ್ನು ತೊಡುತ್ತಿದ್ದವರು ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿಗೆ ಇಳಿದಿರುವರು. 6 ‘ಸೊದೋಮ್’ ಊರು ಹಾಳಾಯಿತು ಕ್ಷಣಮಾತ್ರದಲ್ಲೆ ಅದರ ಮೇಲೆ ಯಾರೂ ಕೈಮಾಡದೆಯೇ. ಅದಕ್ಕಿಂತಲೂ ಹೆಚ್ಚಾಯಿತಲ್ಲಾ ನನ್ನ ಜನರ ಅಧರ್ಮ! 7 ನನ್ನ ಜನತೆಯ ಮಹನೀಯರು ಹಿಮಕ್ಕಿಂತ ಶುಭ್ರ, ಹಾಲಿಗಿಂತ ಬಿಳುಪು. ಅವರ ದೇಹದ ಬಣ್ಣ ಹವಳವನ್ನು ಮೀರಿತ್ತು ಅವರ ರೂಪ ಇಂದ್ರನೀಲ ಮಣಿಯಂತೆ ಅಂದವಾಗಿತ್ತು. 8 ಈಗ ಅವರ ಮುಖ ಕಾರ್ಮೋಡಕ್ಕಿಂತ ಕಪ್ಪು ಬೀದಿಗಳಲ್ಲಿ ನೋಡುತ್ತಿದ್ದವರಿಗೆ ಅವರ ಗುರುತೂ ಸಿಗದು. ಅವರ ಚರ್ಮ ಎಲುಬುಗಳಿಗೆ ಅಂಟಿಕೊಂಡಿದೆ ಅದಕ್ಕೆ ಸುಕ್ಕು ಹಿಡಿದಿದೆ; ಒಣಗಿ ಕಟ್ಟಿಗೆಯಾಗಿದೆ. 9 ಹಸಿವೆಯಿಂದ ಹತರಾದವರಿಗಿಂತ ಖಡ್ಗದಿಂದ ಹತರಾದವರು ಲೇಸು. ತುತ್ತಾದರು ಅವರು ಕ್ಷಾಮಕ್ಕೆ ಕ್ಷಯಿಸಿಹೋದರು ನೆಲದ ಗೆಡ್ಡೆಗೆಣಸೂ ಸಿಗದೆ. 10 ಕರುಣಾಮಯಿಗಳಾದ ಹೆಂಗಳೆಯರು ತಮ್ಮ ಕಂದಮ್ಮಗಳನ್ನು ಸ್ವಂತ ಕೈಯಿಂದ ಬೇಯಿಸಿದರು. ನನ್ನ ಜನರ ಪರಿವಿನಾಶದ ಕಾಲದೊಳು ತಮ್ಮ ತಾಯಿಗಳಿಗೆ ತಿಂಡಿಯಾದರು ಆ ಹಸುಳೆಗಳು. 11 ಸುರಿಸಿದ್ದಾನೆ ಸರ್ವೇಶ್ವರ ತನ್ನ ರೋಷಾಗ್ನಿಯನ್ನು ತೀರಿಸಿಕೊಂಡಿದ್ದಾನೆ ತನ್ನ ಉಗ್ರಕೋಪವನ್ನು. ಆತ ಹೊತ್ತಿಸಿದ ಬೆಂಕಿಗೆ ಸಿಯೋನಿನ ಅಸ್ತಿವಾರ ಆಹುತಿಯಾಗಿದೆ. 12 ವೈರಿಗಳೂ ವಿರೋಧಿಗಳೂ ಜೆರುಸಲೇಮಿನ ಬಾಗಿಲೊಳಗೆ ಕಾಲಿಡುವರೆಂದು ವಿಶ್ವದ ರಾಜರಾಗಲಿ, ನಿವಾಸಿಗಳಾಗಲಿ ನಂಬಿರಲಿಲ್ಲ ಯಾರೂ. 13 ನಗರದ ನಡುವೆಯೇ ಆದ ನೀತಿವಂತರ ರಕ್ತಪಾತದಿಂದ ಯಾಜಕರು, ಪ್ರವಾದಿಗಳು ಎಸಗಿದ ಈ ಪಾಪದೋಷಗಳಿಂದ ಬಂದೊದಗಿತು ಈ ಪರಿತಾಪವೆಲ್ಲ. 14 ಕುರುಡರಂತೆ ಬೀದಿಗಳಲ್ಲಿ ಅಲೆಯುತ್ತಿಹರು ಆ ಯಾಜಕರು ಮತ್ತು ಪ್ರವಾದಿಗಳು. ಅವರ ಬಟ್ಟೆಯನ್ನೂ ಯಾರೂ ಮುಟ್ಟರು ಏಕೆಂದರೆ ರಕ್ತದಿಂದ ಅವರು ಕಳಂಕಿತರಾಗಿಹರು. 15 ಅವರನ್ನು ನೋಡುವವರೂ “ತೊಲಗಿರಿ, ನೀವು ಅಶುದ್ಧರು ನಡೆಯಿರಿ, ನಡೆಯಿರಿ, ಮುಟ್ಟಬೇಡಿ” ಎಂದು ಕೂಗುತ್ತಿರುವರು. ಅವರು ಓಡಿ ಅನ್ಯನಾಡುಗಳಲ್ಲಿ ಅಲೆಯುತ್ತಿರಲು “ಇವರು ಇನ್ನು ಇಲ್ಲಿ ತಂಗಕೂಡದು” ಎನ್ನುತಿಹರು ಅಲ್ಲಿನ ನಾಡಿಗರು. 16 ಸರ್ವೇಶ್ವರನ ದೃಷ್ಟಿ ಅವರನ್ನು ಚದರಿಸಿದೆ ಇನ್ನು ಆತ ತೋರನು ಅವರಿಗೆ ಕರುಣೆ. ಯಾಜಕರಾದರೂ ಅವರಿಗೆ ಮರ್ಯಾದೆ ತಪ್ಪಿಹೋಗಿದೆ ಹಿರಿಯರಾದರೂ ಅವರಿಗೆ ಆದರಣೆ ಇಲ್ಲದಿದೆ. 17 ಮಬ್ಬಾಯಿತು ಕಣ್ಣು ವ್ಯರ್ಥವಾಗಿ ನೆರವನ್ನು ನಿರೀಕ್ಷಿಸುತ ರಕ್ಷಿಸಲಾಗದ ರಾಷ್ಟ್ರಕ್ಕಾಗಿ ಕೋವರದಲ್ಲಿ ಕಾದು ನೋಡುತ. 18 ಶತ್ರು ನಮ್ಮನ್ನು ಹೆಜ್ಜೆಹೆಜ್ಜೆಗೂ ಹುಡುಕುತ್ತಿದ್ದುದರಿಂದ ಹಾದಿಬೀದಿಗಳಲ್ಲಿ ಸಂಚಾರಮಾಡಲೂ ಆಗುತ್ತಿರಲಿಲ್ಲ. ನಮಗೆ ಕಾಲವು ತೀರಿತು, ಅಂತ್ಯವು ಸಮೀಪಿಸಿತು; ಹೌದು, ನಮ್ಮ ಅಂತ್ಯವು ಬಂದೇಬಿಟ್ಟಿತು! 19 ಹದ್ದುಗಳ ವೇಗದಿಂದ ಹಿಂದಟ್ಟಿಬಂದರು ನಮ್ಮನ್ನು ಬೆನ್ನಟ್ಟಿ ಬೆಟ್ಟಗಳನ್ನೇರಿದರು ಅರಣ್ಯಗಳಲ್ಲಿ ನಮಗಾಗಿ ಹೊಂಚುಹಾಕಿದರು. 20 ಯಾವನನ್ನು ಕುರಿತು ನಾವು: “ನಮ್ಮ ಬಾಳಿನ ಉಸಿರು, ದೇವರಿಂದ ಅಭಿಷಿಕ್ತನು, ಇವನ ಆಶ್ರಯದಿಂದಲೆ ರಾಷ್ಟ್ರಗಳ ನಡುವೆ ನಮಗೆ ಉಳಿವು” ಎಂದುಕೊಂಡೆವೋ ಅಂಥವನೇ ಸಿಕ್ಕಿಬಿದ್ದಿದ್ದಾನೆ ಹಗೆಗಳು ತೋಡಿದ ಗುಳಿಯೊಳಗೆ! 21 ‘ಊಚ’ ಮತ್ತು ‘ಎದೋಮ್’ ನಾರೀಮಣಿಗಳೇ, ಸಂತೋಷಿಸಿ ಉಲ್ಲಾಸಿಸುತ್ತಿರುವಿರಿ ಅಲ್ಲವೇ? ಆದರೆ ಖಂಡಿತ ಬರುವುದು ಕಹಿಪಾನದ ಪಾತ್ರೆ ನಿಮ್ಮ ಪಾಲಿಗೆ ಅಮಲೇರಿ ಬೆತ್ತಲೆಯಾಗುವ ಗತಿ ಬಂದೇಬರುವುದು ನಿಮಗೆ! 22 ‘ಸಿಯೋನ್’ ನಾರಿಮಣಿಯೇ, ನಿನ್ನ ದೋಷದ ಫಲವನ್ನು ಅನುಭವಿಸಿ ಆಗಿದೆ. ಸರ್ವೇಶ್ವರನು ಮತ್ತೆ ಒಯ್ಯನು ನಿನ್ನನ್ನು ಸೆರೆಗೆ. ‘ಎದೋಮ್’ ನಾರಿಮಣಿಯೇ, ನಿನ್ನ ದೋಷದ ನಿಮಿತ್ತ ಸರ್ವೇಶ್ವರನು ನಿನ್ನನ್ನು ದಂಡಿಸುವನು ನಿನ್ನ ಪಾಪಾಕ್ರಮಗಳನ್ನು ಬಯಲಿಗೆ ಎಳೆಯುವನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India