ಮುನ್ನುಡಿ
ಧರ್ಮಸಭೆಯ ಪ್ರಾರಂಭದಲ್ಲಿ ಕ್ರೈಸ್ತಭಕ್ತರು ನಾನಾತರದ ಚಿತ್ರಹಿಂಸೆಗಳನ್ನು ಅನುಭವಿಸಬೇಕಾಗಿತ್ತು. ಯೇಸುಕ್ರಿಸ್ತರೇ “ತಮ್ಮ ಪ್ರಭು, ತಮ್ಮ ಜೀವೋದ್ಧಾರಕ” ಎಂದು ವಿಶ್ವಾಸವಿಟ್ಟುದರ ಕಾರಣ, ಅನೇಕರು ಪ್ರಾಣತ್ಯಾಗ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಯೇಸುಸ್ವಾಮಿ ಯೊವಾನ್ನನಿಗೆ ಕೆಲವು ಸಂಗತಿಗಳನ್ನು ದಿವ್ಯದರ್ಶನಗಳ ಮೂಲಕ ಶ್ರುತಿಸುತ್ತಾರೆ. ಅವುಗಳನ್ನು ಈ ಪುಸ್ತಕದಲ್ಲಿ ಯೊವಾನ್ನನು ಬರೆದಿದ್ದಾನೆ. ಕ್ರೈಸ್ತಭಕ್ತರಲ್ಲಿ ನಂಬಿಕೆ - ನಿರೀಕ್ಷೆಗಳನ್ನು ಮೂಡಿಸಿ, ಅವರಲ್ಲಿ ಧೈರ್ಯಸ್ಥೈರ್ಯವನ್ನು ತುಂಬಿ, ಬಂದೊದಗಿರುವ ಹಿಂಸೆಬಾಧೆಗಳನ್ನು ಸಹನೆಯಿಂದ ತಾಳಿಕೊಂಡು ಪ್ರಾಮಾಣಿಕ ವಿಶ್ವಾಸಿಗಳಾಗಿ ಬಾಳುವಂತೆ ಪ್ರೋತ್ಸಾಹಿಸುವುದೇ ಈ ಪುಸ್ತಕದ ಉದ್ದೇಶ.
ಯೊವಾನ್ನನು ಕಂಡ ಹಲವಾರು ದರ್ಶನಗಳೂ ಆತನಿಗೆ ಶ್ರುತಿಸಲಾದ ಭೀಕರ, ವಿಸ್ಮಯಕರ ಹಾಗೂ ಸುಂದರವಾದ ವಿಷಯಗಳೂ ಈ ಹೊತ್ತಿಗೆಯಲ್ಲಿ ಅಡಗಿವೆ. ಇವೆಲ್ಲವೂ ಸಂಕೇತ ಹಾಗೂ ಅಲಂಕಾರ ರೂಪದಲ್ಲಿವೆ. ಯೊವಾನ್ನನ ಸಮಕಾಲೀನ ಕ್ರೈಸ್ತಭಕ್ತರಿಗೆ ಇವು ಅರ್ಥವಾಗುತ್ತಿದ್ದರೂ, ಇತರರಿಗೆ ನಿಗೂಢ ರಹಸ್ಯವಾಗಿಯೇ ಇದ್ದವು. ಈಗಲೂ ರಹಸ್ಯವಾಗಿಯೇ ಉಳಿದಿವೆ. ಸಂಗೀತದ ಪಲ್ಲವಿಯಂತೆ ಮುಖ್ಯವಿಷಯಗಳನ್ನು ಪದೇಪದೇ ಹಲವಾರು ದರ್ಶನಗಳಲ್ಲಿ ಪುನರಾವರ್ತಿಸಲಾಗಿದೆ.
ದರ್ಶನಗಳ ಅರ್ಥವಿವರಣೆಯ ಬಗ್ಗೆ ಗ್ರಂಥವಿಮರ್ಶಕರಲ್ಲಿ ಭಿನ್ನಾಭಿಪ್ರಾಯವಿದೆ. ಆದರೂ ಅವುಗಳ ಮೂಲ ಸೂತ್ರ ಮಾತ್ರ ಸುಸ್ಪಷ್ಟವಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅಂತಿಮವಾಗಿ, ದೇವರು ಪ್ರಭು ಯೇಸುಕ್ರಿಸ್ತರ ಮುಖಾಂತರ ಸೈತಾನನನ್ನೂ ಸಕಲ ಶತ್ರುಗಳನ್ನೂ ಸಂಪೂರ್ಣವಾಗಿ ವಿನಾಶಗೊಳಿಸುತ್ತಾರೆ. ಹೀಗೆ ವಿಜಯವು ಪ್ರಾಪ್ತವಾದಾಗ ತಮಗೆ ಪ್ರಾಮಾಣಿಕರಾಗಿದ್ದ ಸಜ್ಜನರಿಗಾಗಿ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಸೃಷ್ಟಿಸಿ, ಅವರಿಗೆ ಶಾಶ್ವತ ಸೌಭಾಗ್ಯವನ್ನು ದಯಪಾಲಿಸುತ್ತಾರೆ.
ಪರಿವಿಡಿ
ಪೀಠಿಕೆ 1:1-8
ಪ್ರಾರಂಭ ದರ್ಶನ, ಏಳು ಸಭೆಗಳಿಗೆ ಸಂದೇಶ 1:9—3:22
ಏಳು ಮುದ್ರೆಗಳುಳ್ಳ ಸುರುಳಿ 4:1—8:1
ಏಳು ತುತೂರಿಗಳು 8:2—11:19
ಘಟಸರ್ಪವೂ ಎರಡು ಪ್ರಾಣಿಗಳೂ 12:1—13:18
ಹಲವಾರು ದರ್ಶನಗಳು 14:1—15:8
ದೈವ ರೌದ್ರತುಂಬಿದ ಏಳು ಪಾತ್ರೆಗಳು 16:1-21
ಬಾಬಿಲೋನಿನ ವಿನಾಶ, ಮೃಗ, ಸುಳ್ಳುಪ್ರವಾದಿ ಮತ್ತು ಸೈತಾನ ಇವರ ಸೋಲು 17:1—20:10
ಅಂತಿಮ ತೀರ್ಪು 20:11-15
ನೂತನ ಆಕಾಶ, ನೂತನ ಭೂಮಿ, ನೂತನ ಜೆರುಸಲೇಮ್ 21:1—22:5
ಸಮಾಪ್ತಿ 22:6-21