ಪ್ರಕಟನೆ 9 - ಕನ್ನಡ ಸತ್ಯವೇದವು C.L. Bible (BSI)ದೈವಮುದ್ರೆಯಿಲ್ಲದವರಿಗೆ ಚಿತ್ರಹಿಂಸೆ 1 ಐದನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಆಕಾಶದಿಂದ ಭೂಮಿಗೆ ಬಿದ್ದಿದ್ದ ಒಂದು ನಕ್ಷತ್ರವನ್ನು ಕಂಡೆ. ಪಾತಾಳಕೂಪದ ಬೀಗದ ಕೈಯನ್ನು ಅವನಿಗೆ ಕೊಡಲಾಗಿತ್ತು. 2 ಅವನು ಆ ಕೂಪದ ಮುಚ್ಚಳವನ್ನು ತೆರೆದನು. ಅದರೊಳಗಿಂದ ದಟ್ಟಹೊಗೆ ದೊಡ್ಡ ಕುಲುಮೆ ಒಂದರಿಂದ ಬರುತ್ತಿರುವಂತೆ ಮೇಲೇರಿತು. ಇದರಿಂದಾಗಿ ಸೂರ್ಯನೂ ವಾಯುಮಂಡಲವೂ ಕಪ್ಪಾದವು. 3 ಆ ಹೊಗೆಯೊಳಗಿಂದ ಮಿಡತೆಗಳು ಹೊರಟು ಭೂಮಿಗೆ ಬಂದವು. ಭೂಮಿಯಲ್ಲಿ ಇರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಗಿತ್ತು. 4 ಭೂಮಿಯ ಮೇಲಣ ಹುಲ್ಲಿಗಾಗಲಿ, ಯಾವುದೇ ಹಸಿರು ಇಲ್ಲವೇ ಮರಗಳಿಗಾಗಲಿ ಕೇಡನ್ನುಂಟುಮಾಡಬಾರದು ಎಂದೂ ಮಾನವರಲ್ಲಿ ಯಾರ ಹಣೆಯ ಮೇಲೆ ದೇವರ ಮುದ್ರೆಯಿಲ್ಲವೋ ಅಂಥವರಿಗೆ ಮಾತ್ರ ಕೇಡು ಮಾಡಬಹುದೆಂದೂ ಅಪ್ಪಣೆಯಾಗಿತ್ತು. 5 ಅಲ್ಲದೆ, ಅವರನ್ನು ಕೊಲ್ಲದೆಯೇ ಐದು ತಿಂಗಳಕಾಲ ಬಾಧಿಸಬೇಕೆಂದು ಆಜ್ಞಾಪಿಸಲಾಗಿತ್ತು. ಆ ಬಾಧೆ, ಚೇಳು ಕುಟುಕಿದರೆ ಉಂಟಾಗುವ ಬಾಧೆಯಂಥದ್ದು. 6 ಆಂಥ ದಿನಗಳಲ್ಲಿ ಮನುಷ್ಯರು ಮರಣವನ್ನು ಅಪೇಕ್ಷಿಸುವರು. ಆದರೆ ಅದು ಅವರಿಗೆ ಪ್ರಾಪ್ತವಾಗುವುದಿಲ್ಲ. ಸತ್ತರೆ ಸಾಕೆಂದು ಬಯಸುವರು; ಪ್ರಯತ್ನಿಸುವರು. ಆದರೆ ಮೃತ್ಯು ಅವರಿಂದ ದೂರ ಸರಿಯುವುದು. 7 ಆ ಮಿಡತೆಗಳು ನೋಡುವುದಕ್ಕೆ ಸಮರಕ್ಕೆ ಸನ್ನದ್ಧರಾಗಿರುವ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟವಿದ್ದಂತೆ ಕಾಣಿಸುತ್ತಿತ್ತು. ಮುಖಗಳು ಮನುಷ್ಯರ ಮುಖಗಳಂತೆ ಇದ್ದವು. 8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು. 9 ಅವುಗಳ ಮೈಚಿಪ್ಪು ಕವಚದಂತಿತ್ತು. ರೆಕ್ಕೆ ಬಡಿಯುವ ಶಬ್ದವು ಸಮರಕ್ಕೆ ಧಾವಿಸುವ ಹಲವಾರು ರಥಾಶ್ವಗಳ ಶಬ್ದವನ್ನು ಹೋಲುತ್ತಿತ್ತು. 10 ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಅವುಗಳಿಗಿದ್ದವು. ಐದು ತಿಂಗಳವರೆಗೆ ಮಾನವರನ್ನು ಬಾಧಿಸುವ ಶಕ್ತಿ ಆ ಬಾಲಗಳಿಗಿತ್ತು. 11 ಪಾತಾಳಕೂಪದ ದೂತನೇ ಅವುಗಳನ್ನು ಆಳುವ ಅರಸು. ಅವನಿಗೆ ಹಿಬ್ರಿಯ ಭಾಷೆಯಲ್ಲಿ, ‘ಅಬದ್ದೋನ್’ ಎಂದೂ ಗ್ರೀಕ್ ಭಾಷೆಯಲ್ಲಿ, ‘ಅಪೊಲ್ಲುವೋನ್’ ಎಂದೂ ಹೆಸರು. 12 ಹೀಗೆ ಮೊದಲನೆಯ ವಿಪತ್ತು ಮುಗಿಯಿತು. ಇಗೋ, ಇನ್ನೆರಡು ವಿಪತ್ತುಗಳು ಬಂದೆರಗಲಿವೆ : 13 ಆರನೆಯ ದೇವದೂತನು ತುತೂರಿಯನ್ನು ಊದಿದನು. ದೇವರ ಸಾನ್ನಿಧ್ಯದಲ್ಲಿ ಇರುವ ಚಿನ್ನದ ಬಲಿಪೀಠದ ನಾಲ್ಕು ಮೂಲೆಗಳಿಂದ ಹೊರಟ ಒಂದು ಶಬ್ದ ನನಗೆ ಕೇಳಿಸಿತು. 14 ತುತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ ಅದು, “ಯೂಫ್ರೆಟಿಸ್ ಮಹಾನದಿಯ ಬಳಿ ಕಟ್ಟಲಾಗಿರುವ ನಾಲ್ಕು ದೇವದೂತರನ್ನು ಬಿಚ್ಚಿಬಿಡು,” ಎಂದು ಆಜ್ಞಾಪಿಸಿತು. 15 ಮಾನವ ಜನಾಂಗದ ಮೂರನೆಯ ಒಂದು ಭಾಗವನ್ನು ಸಂಹರಿಸುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಾಗಿ ನಿಂತಿದ್ದ ಆ ನಾಲ್ಕು ದೇವದೂತರನ್ನು ಬಂಧಮುಕ್ತರನ್ನಾಗಿ ಮಾಡಲಾಯಿತು. 16 ಕುದುರೆ ಸೈನ್ಯದ ಸಂಖ್ಯೆ ಇಪ್ಪತ್ತು ಕೋಟಿ ಎಂದು ಹೇಳಿದುದು ನನಗೆ ಕೇಳಿಸಿತು. 17 ಹೀಗೆ ಕುದುರೆಗಳನ್ನೂ ಅವುಗಳ ಮೇಲೆ ಕುಳಿತ ಸವಾರರನ್ನೂ ನಾನು ದರ್ಶನದಲ್ಲಿ ಕಂಡೆ. ಆ ಸವಾರರು ಬೆಂಕಿಯ, ನೀಲಮಣಿಯ ಹಾಗೂ ಗಂಧಕ ವರ್ಣಗಳ ಕವಚಗಳನ್ನು ಧರಿಸಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಇದ್ದವು. ಅವುಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬರುತ್ತಿದ್ದವು. 18 ಅವುಗಳ ಬಾಯಿಂದ ಬರುತ್ತಿದ್ದ ಇವುಗಳು ಮೂರು ವಿಪತ್ತುಗಳಾಗಿದ್ದವು. ಇವುಗಳಿಂದ ಮಾನವಜನಾಂಗದ ಮೂರನೆಯ ಒಂದು ಭಾಗ ಹತವಾಯಿತು. 19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲೂ ಬಾಲಗಳಲ್ಲೂ ಅಡಗಿತ್ತು. ಆ ಬಾಲಗಳು ಸರ್ಪಗಳ ತಲೆಯಂತೆ ಇದ್ದವು ಮತ್ತು ಗಾಯಗೊಳಿಸುವ ಶಕ್ತಿ ಅವಕ್ಕಿತ್ತು. 20 ಆ ವಿಪತ್ತುಗಳಿಂದ ಸಾಯದೆ ಬದುಕಿದ್ದ ಜನರು ತಮ್ಮ ದುಷ್ಕೃತ್ಯಗಳನ್ನು ಬಿಟ್ಟು ದೇವರಿಗೆ ಅಭಿಮುಖರಾಗಲೇ ಇಲ್ಲ; ದೆವ್ವಾರಾಧನೆಯನ್ನು ತ್ಯಜಿಸಲಿಲ್ಲ; ನೋಡಲಾರದ, ಕೇಳಿಸಿಕೊಳ್ಳಲಾರದ ಮತ್ತು ನಡೆಯಲಾರದ ವಿಗ್ರಹಗಳನ್ನು ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಲ್ಲಿ ಮಾಡಿ ಪೂಜಿಸುವುದನ್ನು ಕೈಬಿಡಲಿಲ್ಲ. 21 ಇಷ್ಟೇ ಅಲ್ಲದೆ ತಮ್ಮ ಕೊಲೆಗಡುಕತನ, ಮಾಟಮಂತ್ರ, ಹಾದರ ಮತ್ತು ಕಳ್ಳತನಗಳನ್ನು ತೊರೆದು ಮನಸ್ಸಾಂತರಗೊಳ್ಳಲಿಲ್ಲ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India