Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 8 - ಕನ್ನಡ ಸತ್ಯವೇದವು C.L. Bible (BSI)


ದೇವಸನ್ನಿಧಿಯಲ್ಲಿ ದೇವಜನರ ಪ್ರಾರ್ಥನೆ

1 ಆ ಯಜ್ಞದ ಕುರಿಮರಿ ಏಳನೆಯ ಮುದ್ರೆಯನ್ನು ಒಡೆದಾಗ ಸ್ವರ್ಗದಲ್ಲಿ ಅರ್ಧ ಗಂಟೆಯವರೆಗೆ ಮೌನವುಂಟಾಯಿತು.

2 ಬಳಿಕ ನಾನು, ದೇವರ ಸಾನ್ನಿಧ್ಯದಲ್ಲಿ ನಿಂತಿದ್ದ ಏಳು ದೇವದೂತರನ್ನು ಕಂಡೆ. ಅವರಿಗೆ ಏಳು ತುತೂರಿಗಳನ್ನು ಕೊಡಲಾಗಿತ್ತು.

3 ಅನಂತರ ಮತ್ತೊಬ್ಬ ದೇವದೂತನು ಬಂದು ಬಲಿಪೀಠದ ಬಳಿ ನಿಂತನು. ಅವನ ಕೈಯಲ್ಲಿ ಚಿನ್ನದ ಧೂಪಾರತಿ ಇತ್ತು. ಸಿಂಹಾಸನದ ಸಮ್ಮುಖದಲ್ಲಿರುವ ಚಿನ್ನದ ಬಲಿಪೀಠದ ಮೇಲೆ ದೇವಜನರೆಲ್ಲರ ಪ್ರಾರ್ಥನೆಯೊಡನೆ ಸಮರ್ಪಿಸಲು ಅವನಿಗೆ ಬಹಳಷ್ಟು ಧೂಪವನ್ನು ಕೊಡಲಾಗಿತ್ತು.

4 ಧೂಪದ ಸುವಾಸನೆ ದೇವಜನರ ಪ್ರಾರ್ಥನೆಯೊಂದಿಗೆ ಆ ದೂತನ ಕೈಯಿಂದ ದೇವರ ಸನ್ನಿಧಿಗೆ ಏರಿಹೋಯಿತು.

5 ಅನಂತರ ಆ ದೇವದೂತನು ಧೂಪಾರತಿಯನ್ನು ಎತ್ತಿಕೊಂಡು, ಅದನ್ನು ಬಲಿಪೀಠದ ಮೇಲಿದ್ದ ಕೆಂಡಗಳಿಂದ ತುಂಬಿಸಿ, ಭೂಮಿಗೆ ಎಸೆದನು. ಆಗ ಮಿಂಚು, ಗುಡುಗು, ಗರ್ಜನೆಗಳು ಮತ್ತು ಭೂಕಂಪವು ಉಂಟಾದವು.


ತುತೂರಿಗಳ ನಾದ

6 ಏಳು ತುತೂರಿಗಳನ್ನು ಹಿಡಿದಿದ್ದ ಏಳುಮಂದಿ ದೇವದೂತರು ತಮ್ಮ ತಮ್ಮ ತುತೂರಿಗಳನ್ನು ಊದಲು ಸಿದ್ಧರಾದರು.

7 ಮೊದಲನೆಯ ದೇವದೂತನು ತುತೂರಿಯನ್ನು ಊದಿದನು. ಭೂಮಿಯ ಮೇಲೆ ರಕ್ತಮಿಶ್ರಿತವಾದ ಆಲಿಕಲ್ಲಿನ ಮತ್ತು ಬೆಂಕಿಯ ಸುರಿಮಳೆಯಾಯಿತು. ಪರಿಣಾಮವಾಗಿ, ಭೂಮಿಯ ಮೂರನೆಯ ಒಂದು ಭಾಗ ಸುಟ್ಟುಹೋಯಿತು. ಮರಗಳಲ್ಲಿ ಮೂರನೆಯ ಒಂದು ಭಾಗ ಭಸ್ಮವಾಯಿತು. ಹಸಿರು ಹುಲ್ಲೆಲ್ಲಾ ಉರಿದುಹೋಯಿತು.

8 ಎರಡನೆಯ ದೇವದೂತನು ತುತೂರಿಯನ್ನು ಊದಿದನು. ಬೆಂಕಿ ಹತ್ತಿ ಉರಿಯುತ್ತಿರುವ ಪರ್ವತವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರಕ್ಕೆ ಎಸೆಯಲಾಯಿತು. ಸಮುದ್ರದಲ್ಲಿ ಮೂರನೆಯ ಒಂದು ಭಾಗ ರಕ್ತವಾಗಿ ಮಾರ್ಪಟ್ಟಿತು.

9 ಸಮುದ್ರದಲ್ಲಿದ್ದ ಜಲಜಂತುಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋಯಿತು. ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾಯಿತು.

10 ಮೂರನೆಯ ದೇವದೂತನು ತುತೂರಿಯನ್ನು ಊದಿದನು. ಪಂಜಿನಂತೆ ಉರಿಯುತ್ತಿದ್ದ ದೊಡ್ಡ ನಕ್ಷತ್ರವೊಂದು ಆಕಾಶದಿಂದ ಕೆಳಕ್ಕೆ ಬಿತ್ತು. ಅದು ನದಿಗಳಲ್ಲಿ ಮೂರನೆಯ ಒಂದು ಭಾಗದ ಮೇಲೂ ನೀರಿನ ಒರತೆಗಳ ಮೇಲೂ ಬಿತ್ತು.

11 ಆ ನಕ್ಷತ್ರದ ಹೆಸರು ‘ವಿಷಕನ್ಯೆ'. ನೀರಿನಲ್ಲಿ ಮೂರನೆಯ ಒಂದು ಭಾಗ ವಿಷವಾಯಿತು; ಇದರಿಂದಾಗಿ ಅನೇಕರು ನೀರನ್ನು ಕುಡಿದು ಸತ್ತರು.

12 ನಾಲ್ಕನೆಯ ದೇವದೂತನು ತುತೂರಿಯನ್ನು ಊದಿದನು. ಸೂರ್ಯಚಂದ್ರ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗಕ್ಕೆ ಧಕ್ಕೆ ಉಂಟಾಯಿತು. ಅವುಗಳ ಮೂರನೆಯ ಒಂದು ಭಾಗ ಕಾಂತಿಹೀನವಾಯಿತು. ಇದರಿಂದಾಗಿ ಹಗಲಿನಲ್ಲೂ ರಾತ್ರಿಯಲ್ಲೂ ಮೂರನೆಯ ಒಂದು ಭಾಗದಷ್ಟು ಬೆಳಕು ಕಡಿಮೆಯಾಯಿತು.

13 ಅನಂತರ ಆಕಾಶಮಧ್ಯದಲ್ಲಿ ಒಂದು ಗರುಡ ಪಕ್ಷಿ ಹಾರಾಡುತ್ತಿರುವುದನ್ನು ನಾನು ಕಂಡೆ. ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು,” ಎಂದು ಗಟ್ಟಿಯಾಗಿ ಕೂಗುತ್ತಿತ್ತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು