ಪ್ರಕಟನೆ 7 - ಕನ್ನಡ ಸತ್ಯವೇದವು C.L. Bible (BSI)ಮುದ್ರೆಯೊತ್ತಿಸಿಕೊಂಡ ಮಹಾನುಭಾವರು 1 ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ; ನಾಲ್ಕುಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿದ್ದರು. ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ, ಮರಗಳ ಮೇಲಾಗಲಿ ಗಾಳಿಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ಅವರು ತಡೆಹಿಡಿದಿದ್ದರು. 2 ಆಗ ಪೂರ್ವದಿಕ್ಕಿನಿಂದ ಮತ್ತೊಬ್ಬ ದೇವದೂತನು ಏರಿಬಂದನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ: 3 “ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ನಾವು ಮುದ್ರೆಯೊತ್ತುವ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಇಲ್ಲವೇ ಮರಗಳಿಗಾಗಲಿ ಕೇಡನ್ನು ಮಾಡಬೇಡಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದನು. 4 ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಇಸ್ರಯೇಲರು ಪ್ರತಿಯೊಂದು ಕುಲದಲ್ಲಿ ಮುದ್ರೆಯೊತ್ತಿಸಿಕೊಂಡವರು ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಮಂದಿ. ಅವರ ಬಿಡಿ ಸಂಖ್ಯೆ ಹೀಗಿತ್ತು : 5 ಯೂದನ ಕುಲದಿಂದ ಹನ್ನೆರಡು ಸಾವಿರ ರೂಬೇನನ ಕುಲದಿಂದ ಹನ್ನೆರಡು ಸಾವಿರ ಗಾದನ ಕುಲದಿಂದ ಹನ್ನೆರಡು ಸಾವಿರ 6 ಅಷೇರನ ಕುಲದಿಂದ ಹನ್ನೆರಡು ಸಾವಿರ ನೆಫ್ತಲೀಮನ ಕುಲದಿಂದ ಹನ್ನೆರಡು ಸಾವಿರ ಮನಸ್ಸೆಯ ಕುಲದಿಂದ ಹನ್ನೆರಡು ಸಾವಿರ 7 ಸಿಮೆಯೋನನ ಕುಲದಿಂದ ಹನ್ನೆರಡು ಸಾವಿರ ಲೇವಿಯ ಕುಲದಿಂದ ಹನ್ನೆರಡು ಸಾವಿರ ಇಸ್ಸಾಕರನ ಕುಲದಿಂದ ಹನ್ನೆರಡು ಸಾವಿರ 8 ಜೆಬುಲೋನನ ಕುಲದಿಂದ ಹನ್ನೆರಡು ಸಾವಿರ ಜೋಸೆಫನ ಕುಲದಿಂದ ಹನ್ನೆರಡು ಸಾವಿರ ಬೆನ್ಯಮೀನನ ಕುಲದಿಂದ ಹನ್ನೆರಡು ಸಾವಿರ. ಸ್ವರ್ಗೀಯ ಸೌಭಾಗ್ಯ 9 ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ; ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು. 10 ಅವರು ಗಟ್ಟಿಯಾದ ಧ್ವನಿಯಿಂದ : “ಸಿಂಹಾಸನಾರೂಢರಾದ ದೇವರಿಂದ, ಬಲಿಯರ್ಪಿತರಾದ ಯಜ್ಞದ ಕುರಿಮರಿಯಿಂದ ಲಭಿಸುತ್ತದೆಮಗೆ ಜೀವೋದ್ಧಾರ,” ಎಂದು ಹಾಡಿದರು. 11 ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಿಂಹಾಸನದ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರಮಾಡಿ, 12 “ಆಮೆನ್, ಸ್ತುತಿಸ್ತೋತ್ರವೂ ಘನಮಾನವೂ ಜ್ಞಾನವೂ ಧನ್ಯವಾದವೂ ಶಕ್ತಿಯೂ ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ, ಆಮೆನ್,” ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು. 13 ಸಭಾಪ್ರಮುಖರಲ್ಲಿ ಒಬ್ಬನು, “ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?” ಎಂದು ನನ್ನನ್ನು ಪ್ರಶ್ನಿಸಿದನು. 14 ಅದಕ್ಕೆ ನಾನು, “ಸ್ವಾಮೀ ನೀವೇ ಬಲ್ಲಿರಿ,” ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು : “ಇವರು ಆ ಭೀಕರ ಹಿಂಸೆಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ. 15 ‘ಇರುವರು ದೇವರ ಸಿಂಹಾಸನದ ಸಮ್ಮುಖದಲ್ಲೇ ಆರಾಧಿಪರಾತನನು ಹಗಲಿರುಳು ದೇವಾಲಯದಲ್ಲೇ ಸಂರಕ್ಷಿಪನಾತನು ಅವರನ್ನು ಗುಡಾರದಂತೆ. 16 ಇನ್ನಿರದು ಅವರಿಗೆ ಹಸಿವು ಬಾಯಾರಿಕೆ ತಟ್ಟದವರನು ಬಿಸಿಲಿನ ತಾಪ, ಸೂರ್ಯನ ಕೋಪ. 17 ನಿಂತಿಹನು ಕುರಿಮರಿಯಾದಾತನು ಸಿಂಹಾಸನದ ನಡುವೆ ಕಾಯುವನು ಅವರುಗಳನು ಕುರುಬನಂತೆ ನಡೆಸುವನು ಅವರನು ಜೀವಜಲದ ಒರತೆಗಳ ಬಳಿಗೆ ದೇವನೊರಸುವನು ಅವರ ಕಂಬನಿಗಳನು ಬಿಡದೆ', “ ಎಂದು ನನಗೆ ತಿಳಿಸಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India